

1. ಒಳ್ಳೆಯ ಕೊಬ್ಬು: ನಾಟಿ ಹಸುವಿನ ಹಾಲು, ತುಪ್ಪ, ಬೆಣ್ಣೆ ಇವೆಲ್ಲ ಸುಖ ನಿದ್ದೆಯನ್ನು ಕೊಡಬಲ್ಲಂಥವು. ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಮಿದುಳಿನ ಶಕ್ತಿ ಹೆಚ್ಚಿ ನಿದ್ರೆಯ ಗುಣಮಟ್ಟ ಹೆಚ್ಚುತ್ತದೆ. ಸೂರ್ಯಾಸ್ತಕ್ಕಿಂತ ಮೊದಲು ಒಂದು ಲೋಟ ಬಿಸಿ ಹಾಲಿಗೆ ಅರ್ಧ ಚಮಚ ತುಪ್ಪ ಹಾಕಿ ಸೇವಿಸುವುದರಿಂದ ತುಂಬಾ ಅನುಕೂಲವಾಗುತ್ತದೆ.
2. ಅಭ್ಯಂಗ: ನಿತ್ಯವೂ ಅಭ್ಯಂಗ ಮಾಡಿಕೊಳ್ಳಬೇಕು ಎಂದು ಆಯುರ್ವೆದ ಹೇಳುತ್ತದೆ. ಅಭ್ಯಂಗದಿಂದ ವಾತದೋಷ ಹತೋಟಿಗೆ ಬಂದು ಚೆನ್ನಾಗಿ ನಿದ್ರೆ ಬರಲು ಮತ್ತು ನಿದ್ರೆಯ ಗುಣಮಟ್ಟ ಹೆಚ್ಚಲು ಸಹಾಯವಾಗುತ್ತದೆ. ವಿಶೇಷವಾಗಿ ರಾತ್ರಿ ಮಲಗುವ ಮೊದಲು ನೆತ್ತಿಗೆ ಮತ್ತು ಪಾದಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡಿಕೊಳ್ಳುವುದರಿಂದ ಮೂರು ತಿಂಗಳ ಒಳಗೆ ಫಲಿತಾಂಶ ಸಿಕ್ಕೇ ಸಿಗುತ್ತದೆ. ಆದರೆ ಇದನ್ನು ತಪ್ಪದೇ ನಿತ್ಯವೂ ಪಾಲಿಸಬೇಕು. ಸುಖ ನಿದ್ರೆಯ ಜೊತೆ ಇನ್ನೂ ಹಲವು ಲಾಭಗಳು ಇದರಿಂದ ಆಗುತ್ತವೆ.
3. ವ್ಯಾಯಾಮ: ಕನಿಷ್ಠ ಅರ್ಧ ಗಂಟೆ ನಿತ್ಯ ವ್ಯಾಯಾಮ ಮಾಡುವುದರಿಂದ ಚೆನ್ನಾಗಿ ನಿದ್ದೆ ಬರಲು ಸಹಾಯವಾಗುತ್ತದೆ. ಎಷ್ಟು ಚೆನ್ನಾಗಿ ವ್ಯಾಯಾಮ ಮಾಡುತ್ತೇವೆಯೋ, ಅಷ್ಟು ರಾತ್ರಿಯ ನಿದ್ದೆ ಚೆನ್ನಾಗಿರುತ್ತದೆ. ಹಾಗಾಗಿ ಸೂರ್ಯ ನಮಸ್ಕಾರ, ಕೆಲವು ಆಸನಗಳು, ನಡಿಗೆ, ಜಿಮ್ ನಲ್ಲಿ ಅಭ್ಯಾಸ ಮಾಡುವುದು, ಆಟಗಳನ್ನು ಆಡುವುದು ಹೀಗೆ ಹಲವು ವಿಧಾನಗಳ ಮೂಲಕ ನಮ್ಮ ದೇಹವನ್ನು ಚಟುವಟಿಕೆಯಿಂದ ಇರುವಂತೆ ನೋಡಿಕೊಂಡರೆ ರಾತ್ರಿಯ ನಿದ್ದೆ ಚೆನ್ನಾಗಿರುತ್ತದೆ.
4. ಚಿನ್ಮುದ್ರೆ: ಹೆಬ್ಬೆರಳು ಮತ್ತು ತೋರು ಬೆರಳುಗಳ ತುದಿಗಳನ್ನು ತಾಗಿಸಿದಾಗ ಚಿನ್ಮುದ್ರೆ ಆಗುತ್ತದೆ. ರಾತ್ರಿ ಮಲಗುವ ಮೊದಲು ಎರಡೂ ಕೈಗಳಲ್ಲಿ ಈ ಮುದ್ರೆಯನ್ನು ಹಾಕಿ ಕುಳಿತುಕೊಳ್ಳಬೇಕು. ಸಾಧ್ಯವಾದರೆ ಮುಕ್ಕಾಲು ತಾಸು; ಸಮಯದ ಕೊರತೆ ಇದ್ದರೆ ಕನಿಷ್ಠ 10 ನಿಮಿಷ ಕುಳಿತುಕೊಳ್ಳುವುದರಿಂದ ದಿನದಿಂದ ದಿನಕ್ಕೆ ನಿಧಾನವಾಗಿ ನಿದ್ರೆಯ ಗುಣಮಟ್ಟ ಹೆಚ್ಚಾಗುತ್ತದೆ. ನಿದ್ರಾಹೀನತೆ ಸಮಸ್ಯೆ ಇರುವವರಿಗೆ ಇದು ವರದಾನದಂತೆ ಕೆಲಸ ಮಾಡುತ್ತದೆ.
5. ಕತ್ತಲು: ಕತ್ತಲೆ ಇರುವಾಗ ನಮ್ಮ ದೇಹದಲ್ಲಿ ಮೆಲೆಟೋನಿನ್ ಎಂಬ ಹಾರ್ವೇನ್ ಬಿಡುಗಡೆಯಾಗುತ್ತದೆ. ಇದು ನಿದ್ರೆಯನ್ನು ತರಿಸುತ್ತದೆ. ಹಾಗಾಗಿ ರಾತ್ರಿ ನಿದ್ದೆಗೆ ಹೋಗುವ ಕನಿಷ್ಠ ಒಂದೂವರೆ ಘಂಟೆ ಮೊದಲು ಮೊಬೈಲ್, ಕಂಪ್ಯೂಟರ್ ಅಥವಾ ಟಿವಿಗಳನ್ನು ನೋಡುವುದನ್ನು ಬಿಡಬೇಕು. ಸಾಧ್ಯವಾದರೆ ಮಂದ ಬೆಳಕಿನಲ್ಲಿ ಇರುವುದು ಒಳ್ಳೆಯದು. ಸಮಯವಿದ್ದರೆ ನಿದ್ದೆಗೆ ಹೋಗುವ ಮೊದಲು ಅರ್ಧ ಗಂಟೆ ಕಣ್ಣು ಮುಚ್ಚಿ ಕುಳಿತು ಹಿತವಾದ ಸಂಗೀತವನ್ನು ಕೇಳಬಹುದು.
6. ಶಾಂತವಾದ ಮನಸ್ಥಿತಿ: ರಾತ್ರಿ ಮಲಗುವ ಮೊದಲು ದೇವರ ಪ್ರಾರ್ಥನೆ ಮಾಡಿ ಎಲ್ಲಾ ಚಿಂತೆಗಳನ್ನು ದೇವರಿಗೆ ಬಿಟ್ಟು ಕೃತಜ್ಞತಾ ಭಾವನೆಯಿಂದ ಮಲಗಿದರೆ ಚೆನ್ನಾಗಿ ನಿದ್ದೆ ಬರಲು ಸಹಾಯವಾಗುತ್ತದೆ ಮತ್ತು ಮರುದಿನ ಚೈತನ್ಯದಿಂದ ಏಳಲು ಸಹಾಯವಾಗುತ್ತದೆ. ಏಕೆಂದರೆ ರಾತ್ರಿ ಯಾವ ಭಾವನೆಯಿಂದ ನಾವು ಮಲಗುತ್ತೇವೆಯೋ ಆ ಭಾವನೆ ಇಡೀ ರಾತ್ರಿ ನಮ್ಮಲ್ಲಿ ಇರುತ್ತದೆ ಎಂದು ಸಾಧಕರು ಹೇಳುತ್ತಾರೆ. ಹಾಗಾಗಿ ಯಾವುದೇ ಋಣಾತ್ಮಕ ಯೋಚನೆಗಳಿಲ್ಲದೇ ಶಾಂತ ಮನಸ್ಥಿತಿಯಲ್ಲಿ ನಿದ್ದೆಗೆ ಹೋಗುವುದು ಅತ್ಯಂತ ಮುಖ್ಯವಾದದ್ದು.
(ಪ್ರತಿಕ್ರಿಯಿಸಿ: vvsudina@gmail.com)