ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಡೆಸಿದ 'ಇಂಡಿಯಾಬ್' ಅಧ್ಯಯನದ ಪ್ರಕಾರ, ವಿಶ್ವದಲ್ಲೇ ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಭಾರತದಲ್ಲಿ ಪ್ರಸ್ತುತ 10.1 ಕೋಟಿಗೂ ಹೆಚ್ಚು ವಯಸ್ಕರು ಮಧುಮೇಹದಿಂದ ಬಳಲುತ್ತಿದ್ದಾರೆ. ಇದಕ್ಕಿಂತ ಆತಂಕಕಾರಿ ವಿಚಾರವೆಂದರೆ, ಸುಮಾರು 13.6 ಕೋಟಿ ಜನರು ಮಧುಮೇಹದ ಅಂಚಿನಲ್ಲಿದ್ದಾರೆ ಅಂದರೆ ಪ್ರೀ-ಡಯಾಬಿಟಿಕ್ ಆಗಿದ್ದಾರೆ. ಜೊತೆಗೆ, ಶೇ. 40ರಷ್ಟು ವಯಸ್ಕರು ಹೊಟ್ಟೆಯ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದು, ಇವರಿಗೂ ಮಧುಮೇಹ ಬರುವ ಅಪಾಯ ಹೆಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ಮಧುಮೇಹವನ್ನು ನಿಯಂತ್ರಿಸುವುದು ವೈದ್ಯಕೀಯ ಲೋಕಕ್ಕೆ ದೊಡ್ಡ ಸವಾಲಾಗಿದೆ.