ಒತ್ತಡ ನಿವಾರಣೆಗೆ ಅಧೋಮುಖ ಶ್ವಾನಾಸನ

ವಿಜಯವಾಣಿ (4)
Published on
ಇತ್ತೀಚಿನ ದಿನಗಳಲ್ಲಿ ಒತ್ತಡಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತಿದೆ. ಆಧುನಿಕ ಜೀವನ ಶೈಲಿಯಲ್ಲಿ ಬಾಳಲು ಕೆಲವೊಮ್ಮೆ ಕಷ್ಟವಾಗುತ್ತದೆ. ವೇಗದ ಜೀವನಕ್ಕೆ ಹೊಂದಿಕೊಳ್ಳಲು ಹಾಗೂ ಒತ್ತಡ ನಿಭಾಯಿಸಲು ತುಂಬಾ ಕಷ್ಟವಾಗುತ್ತದೆ. ಇದರಿಂದ ಆರೋಗ್ಯಕ್ಕೆ ದಕ್ಕೆಯಾಗುತ್ತದೆ. ಇಂಥ ಒತ್ತಡ ನಿಭಾಯಿಸಲು ಹಲವಾರು ವಿಧಾನಗಳಿವೆ. ವಿಶೇಷವಾಗಿ ಯೋಗಾಸನಗಳು, ಧ್ಯಾನ ಪ್ರಾಣಾಯಾಮ, ಮುದ್ರೆ, ಮಂತ್ರಗಳು ಇತ್ಯಾದಿ ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುತ್ತವೆ.

ಯೋಗಾಸನಗಳಲ್ಲಿ ಪ್ರಮುಖವಾಗಿ ಮನಸ್ಸಿನ ಒತ್ತಡ ನಿಯಂತ್ರಣಕ್ಕೆ ಅಧೋಮುಖ ಶ್ವಾನಾಸನ ತುಂಬ ಸಹಕಾರಿಯಾಗುತ್ತದೆ. ಇಲ್ಲಿ ಅಧೊ ಎಂದರೆ ಮುಂದಕ್ಕೆ, ಮುಖ ಎಂದರೆ ಮುಖದ ಬಗ್ಗೆ ಹಾಗೂ ಶ್ವಾನ ಎಂದರೆ ನಾಯಿ ಎಂದು ಅರ್ಥೈಸಿಕೊಳ್ಳಬೇಕು. ಆ ಆಸನಕ್ಕೆ ಡಾಗ್ ಪೋಸ್ ಎಂಬ ಹೆಸರಿದೆ. ನಾಯಿ ತನ್ನ ಮೈ ಮುರಿಯುವ ರೀತಿಯನ್ನು ಈ ಭಂಗಿಯಲ್ಲಿ ಕಾಣಬಹುದಾಗಿದೆ. ಈ ಆಸನದಿಂದ ಶಿರಸ್ಸಿಗೆ ರಕ್ತ ಸಂಚಲನೆಯಾಗಿ ನರಮಂಡಲ ಸಚೇತನಗೊಳ್ಳುತ್ತದೆ. ಇದು ಸೂರ್ಯ ನಮಸ್ಕಾರ ಅಥವಾ ಸೂರ್ಯನ ಆರಾಧನೆಯಿಂದ ಬರುವ ಯೋಗಾಭ್ಯಾಸವಾಗಿದೆ. ಇದು ಹನ್ನೆರಡು ಆಸನಗಳ ಸರಣಿಯನ್ನು ಒಳಗೊಂಡಿದೆ. ಯೋಗ ಸಾಹಿತ್ಯದ ಪ್ರಕಾರ, ಸೂರ್ಯ ನಮಸ್ಕಾರ ಮಾಡುವಾಗ ದೇಹದ ಎಲ್ಲಾ ಸ್ನಾಯುಗಳು ಹಿಗ್ಗುವಿಕೆ ಮತ್ತು ಒತ್ತಡವನ್ನು ಅನುಭವಿಸುತ್ತವೆ. ಹನ್ನೆರಡು ಆಸನಗಳಲ್ಲಿ, ಎಂಟನೆಯ ಸ್ಥಾನದ ಯೋಗವು ಅಧೋಮುಖ ಶ್ವಾನಾಸನವಾಗಿದೆ.

ವಿಧಾನ

ಜಮಖಾನ ಹಾಸಿದ ನೆಲದ ಮೇಲೆ ಮಕರಾಸನದಲ್ಲಿ ವಿರಮಿಸಿ. ಆಮೇಲೆ ಅಂಗೈಗಳನ್ನು ಭುಜದ ಕೆಳಗಡೆ ಎದೆಯ ಪಕ್ಕದಲ್ಲಿ ಇರಿಸಿ. ನಂತರ ಪಾದಗಳ ಮಧ್ಯ ಒಂದು ಅಡಿ ಅಗಲ ಅಂತರವಿರಬೇಕು. ನಂತರ ಉಸಿರನ್ನು ಬಿಡುತ್ತಾ ತಲೆಯನ್ನು ನೆಲದಿಂದ ಮೇಲೆ ಎತ್ತುವಾಗ ಕೈಗಳನ್ನು ನೇರವಾಗಿಸಿ. ಆಮೇಲೆ ತಲೆಯನ್ನು ಕಾಲುಗಳ ದಿಕ್ಕಿಗೆ ಸರಿಸಿ ನಡು ನೆತ್ತಿಯನ್ನು ನೆಲಕ್ಕೆ ಊರಿ ಕಾಲುಗಳ ಹಿಮ್ಮಡಿಯನ್ನು ನೆಲಕ್ಕೆ ತಾಗಿಸಿ. ಕಣ್ಣುಗಳನ್ನು ಮುಚ್ಚಿ ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಮ ಉಸಿರಾಟದಲ್ಲಿ ನೆಲೆಸಿ ವಿರಮಿಸಿ. ಆಸನಾನಂತರ ವಿಶ್ರಾಂತಿ (ಶವಾಸನ).

ಪ್ರಯೋಜನ

ಈ ಯೋಗಾಸನವು ಮಿದುಳು ಸೇರಿದಂತೆ ಇಡೀ ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಹೃದಯ ಬಡಿತವನ್ನು ನಿಧಾನಗೊಳಿಸುವ ದೀರ್ಘಕಾಲದ ಬೆನ್ನು ನೋವಿಗೆ ಚಿಕಿತ್ಸೆ ನೀಡಲು ಅಧೋಮುಖ ಶ್ವಾನಾಸನ ಸೂಕ್ತವಾಗಿದೆ. ಕಳಪೆ ದೇಹದ ಭಂಗಿ ಮತ್ತು ದುರ್ಬಲ ಸ್ನಾಯುಗಳ ಕಾರಣದಿಂದಾಗಿ ದೀರ್ಘಕಾಲದ ಕೆಳ ಬೆನ್ನುನೋವು ಸಂಭವಿಸುತ್ತದೆ. ಆಸನವು ಕೆಳಗಿನ ದೇಹ, ತೋಳುಗಳು ಮತ್ತು ಕಾಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದು ಪಾದಗಳು, ಎದೆ ಮತ್ತು ಬೆನ್ನನ್ನು ವಿಸ್ತರಿಸುತ್ತದೆ. ಈ ಭಂಗಿಯನ್ನು ಅಭ್ಯಾಸ ಮಾಡುವುದರಿಂದ ನೀವು ಬೆನ್ನು ನೋವಿನಿಂದ ಪರಿಹಾರವನ್ನು ಪಡೆಯುತ್ತೀರಿ. ಇದಲ್ಲದೆ, ಇದು ದೇಹದ ನಮ್ಯತೆ ಮತ್ತು ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ತೋಳು ಹಾಗೂ ತೊಡೆಗಳಿಗೆ ಉತ್ತಮವಾದ ವ್ಯಾಯಾಮ ದೊರೆಯುತ್ತದೆ. ಕಿಬ್ಬೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ.

ಈ ಆಸನದಲ್ಲಿ ತಲೆಯು ನೆಲಕ್ಕೆ ಊರಿರುವುದರಿಂದ ಎದೆಯ ಮೇಲೆ ಯಾವ ಒತ್ತಡ ಇಲ್ಲದೆ ಶುದ್ಧ ರಕ್ತವು ಧಾರಾಳವಾಗಿ ಮಿದುಳಿಗೆ ಹರಿದು ಮಿದುಳಿನ ಜೀವಕೋಶಗಳು ಪುನಶ್ಚೇತನಗೊಳ್ಳುವುವು ಹಾಗೂ ಮನಸ್ಸಿನ ಆಯಾಸವು ಬೇಗನೆ ನಿವಾರಣೆಯಾಗುತ್ತದೆ. ಸಹಜವಾಗಿ ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ. ಹೊಟ್ಟೆಯ ಮಾಂಸ ಖಂಡಗಳು ಬಲಿಷ್ಟವಾಗುತ್ತದೆ. ರಕ್ತ ಸಂಚಲನೆ ಸುಗಮವಾಗುತ್ತದೆ. ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಕೈರಟ್ಟೆ, ಕಾಲುಗಳು ಬಲಗೊಳ್ಳುತ್ತದೆ. ಅನಾಹತ ಚಕ್ರ, ಆಜ್ಞಾ ಚಕ್ರ, ಸಹಸ್ರಾರ ಚಕ್ರದ ಸುಸ್ಥಿತಿಗೆ ಈ ಆಸನ ಸಹಕಾರಿಯಾಗಿದೆ.

ವಿಶೇಷ ಸೂಚನೆ

ಈ ಆಸನ ಅಭ್ಯಾಸ ಮಾಡುವಾಗ ದೇಹವು (ಭಂಗಿ) ಇಂಗ್ಲಿಷ್ ‘ವಿ’ ಆಕಾರದಲ್ಲಿ ಇರಬೇಕು. ಕಣ್ಣಿನ ರೆಟಿನಾದ ಸಮಸ್ಯೆ ಇದ್ದವರು, ಹೆಚ್ಚಿನ ರಕ್ತದ ಒತ್ತಡದ ಸಮಸ್ಯೆ, ಭುಜಗಳ, ಕೀಲುಗಳ ಸಮಸ್ಯೆ, ಡಯೇರಿಯಾ ಸಮಸ್ಯೆ ಇರುವವರು ಈ ಆಸನ ಅಭ್ಯಾಸ ಮಾಡಬಾರದು. ಈ ಯೋಗಾಸನವನ್ನು ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net