

ಅದೊಂದು ದಿನ ಬೆಳಗ್ಗೆ ಸಹನಾ ಎದ್ದವಳೇ, ‘ಅದೇಕೋ ನನ್ನ ಬಲಗೈಯಲ್ಲಿ ಶಕ್ತಿ ಇಲ್ಲದಂತಾಗುತ್ತಿದೆ. ಕೈ ನಡುಗುತ್ತಿದೆ. ಬರೆಯಲು ಆಗುತ್ತಿಲ್ಲ’ ಎಂದಳು. ಅವಳ ಈ ಮಾತು ಕೇಳಿ ಪಾಲಕರಿಗೂ ಒಂದು ತರಹದ ಆತಂಕ ಎದುರಾಯಿತು. ಪಾಲಕರು ಅವಳನ್ನು ಮಕ್ಕಳ ತಜ್ಞರ ಬಳಿ ಕರೆದುಕೊಂಡು ಹೋದರು. ಪರೀಕ್ಷೆ, ತಪಾಸಣೆ ನಂತರ ಇದು ಬಿಟ್ಟುಬಿಟ್ಟು ಬರುವ ಕೈ ನಡುಕ - ಊಟ್ಚಚ್ಝ ಖಛಿಜ್ಢಿuಛಿಠ ಇರಬಹುದು ಎಂದು ಚಿಕಿತ್ಸೆ ಪ್ರಾರಂಭಿಸಲಾಯಿತು. ತಿಂಗಳ ನಂತರವೂ ಅವಳ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಇದು ಪಾಲಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿತು. ಇದಾದ ಕೆಲವು ದಿನಗಳ ನಂತರ ಒಮ್ಮೆ ಅವಳ ತಂದೆ ವಾಕಿಂಗ್ಗೆ ಹೋದಾಗ ಮಗಳ ವಿಷಯ ತಿಳಿಸಿದರು. ಬಹಳ ಬೇಸರದಲ್ಲಿದ್ದ ಅವರಿಗೆ ಸಾಯಂಕಾಲ ಬಂದು ಭೇಟಿಯಾಗಲು ತಿಳಿಸಿದೆ. ಅದರ ಪ್ರಕಾರ ಅವರು ಸಹನಾ ಜತೆ ಬಂದರು. ಅವಳನ್ನು ನೋಡುತ್ತಿದ್ದಂತೆಯೇ ಮುಖದ ಮೇಲೆ ಮನೋಒತ್ತಡದ ಛಾಯೆ ಸ್ಪಷ್ಟವಾಗಿತ್ತು. ಅವಳನ್ನು ಮನೋವಿಶ್ಲೇಷಣೆಗೆ ಒಳಪಡಿಸಿದಾಗ ಅವಳ ಮಾನಸಿಕ ಆತಂಕ ಏನೆಂಬುದು ತಿಳಿಯಿತು. ಅವಳು ಎಲ್ಲರ ನಿರೀಕ್ಷೆ, ಅಪೇಕ್ಷೆಯಿಂದ ಅತಿಯಾದ ಒತ್ತಡಕ್ಕೆ ಸಿಲುಕಿದ್ದಳು. ಒಂದುವೇಳೆ ಪರೀಕ್ಷೆಯಲ್ಲಿ ಚೆನ್ನಾಗಿ ಅಂಕ ಗಳಿಸದಿದ್ದರೆ ಪಾಲಕರು, ಶಿಕ್ಷಕರು, ಬಂಧುಗಳು, ಹಿತೈಷಿಗಳು, ಸ್ನೇಹಿತರು ಮತ್ತು ಸಮಾಜಕ್ಕೆ ಉತ್ತರಿಸುವುದು ಹೇಗೆ? ಅವರಿಗೆಲ್ಲ ಹೇಗೆ ಮುಖ ತೋರಿಸುವುದು ಎನ್ನುವ ಮನೋಒತ್ತಡ ಅವಳಲ್ಲಿ ಅಗಾಧವಾಗಿತ್ತು. ಇದಕ್ಕೆ ಪಲಾಯನ ಒಂದೇ ದಾರಿ ಎನ್ನುವ ನಿರ್ಧಾರಕ್ಕೆ ಅವಳು ಬಂದುಬಿಟ್ಟಿದ್ದಳು. ಪಲಾಯನ ಎಂದರೆ ಪರೀಕ್ಷೆಯಿಂದಲೇ ತಪ್ಪಿಸಿಕೊಂಡು ಬಿಟ್ಟರೆ ಉತ್ತರಿಸುವ ಪ್ರಶ್ನೆಯೇ ಉದ್ಭವಿಸದು ಎನ್ನುವ ಆಲೋಚನೆ ಅವಳದ್ದಾಗಿತ್ತು. ಇದಕ್ಕೆ ಅವಳು ಕಂಡುಕೊಂಡ ಮಾರ್ಗ ಎಂದರೆ ಅನಾರೋಗ್ಯ ಎಂದು ಹೇಳುವುದು. ಈ ಎಲ್ಲ ಹಿನ್ನೆಲೆ - ಕಾರಣಗಳನ್ನು ವಿಶ್ಲೇಷಿಸಿಕೊಂಡು ಅವಳ ಅಂತರಾಳ ಅರಿತು ಅವಳ ಪಾಲಕರಿಗೆ ಆಪ್ತ ಸಲಹೆ ನೀಡಿ ಧೈರ್ಯ ತುಂಬಲಾಯಿತು. ಅದನ್ನು ಅವರೂ ಅಷ್ಟೇ ಸರಿಯಾಗಿ ಸ್ವೀಕರಿಸಿದರು. ಪರಿಣಾಮ ಅದೇ ಸಹನಾ ಇಂದು ಎಸ್ಎಸ್ಎಲ್ಸಿಯಲ್ಲಿ ರ್ಯಾಂಕ್ ಪಡೆದು ಪಿಯುಸಿ ಓದುತ್ತಿದ್ದಾಳೆ. ಸಹನಾ ಎದುರಿಸಿದ ಸಮಸ್ಯೆಗೆ ಮನೋವಿಜ್ಞಾನದಲ್ಲಿ ‘ರೈಟರ್ಸ್ ಕ್ರಾಂಪ್’ ಎಂದು ಕರೆಯಲಾಗುತ್ತದೆ.
ಈ ಪ್ರಕರಣದ ಮೂಲಕ ಹೇಳಬಯಸುವುದು ಏನೆಂದರೆ ತಿಳಿದೋ ತಿಳಿಯದೆಯೋ ನಾವು ನೀವೆಲ್ಲ ಮಕ್ಕಳ ಮನಸ್ಸಿನ ಮೇಲೆ ಒತ್ತಡ ಹೇರುತ್ತೇವೆ. ಅದು ನಮ್ಮ ದೃಷ್ಟಿಯಲ್ಲಿ ಸರಿಯಾಗಿದ್ದರೂ ಅದರ ಭಾರ ಅವರ ಮೇಲಿರುತ್ತದೆ. ಅದನ್ನು ಅವರು ಸ್ವೀಕರಿಸಿ, ತಡೆದುಕೊಳ್ಳಬಹುದೋ ಇಲ್ಲವೋ ಎನ್ನುವ ಆಲೋಚನೆ ಮಾಡಿರುವುದಿಲ್ಲ. ನಮ್ಮ ಪ್ರತಿಷ್ಠೆ ಅಥವಾ ಹೆಮ್ಮೆಯಿಂದ ಬೀಗಲು ಅ ರೀತಿಯ ಫಲಿತಾಂಶ ನಿರೀಕ್ಷಿಸುತ್ತೇವೆ. ರ್ಯಾಂಕ್ ಪಡೆಯುವುದು, ಹೆಚ್ಚು ಅಂಕ ಗಳಿಕೆ, ಗುರಿ ಸಾಧನೆಗಳ ಮಧ್ಯೆ ಮನಸ್ಸಿನ ಮೇಲೆ ಉಂಟಾಗುವ ಕ್ಷೋಭೆಯ ಅರಿವು ಅತ್ಯಗತ್ಯ. ಈ ತರಹದ ಒತ್ತಡಗಳನ್ನು ಹೇರುವ ಬದಲು ಉತ್ತಮ ಸಾಧನೆಗೆ ಪ್ರೋತ್ಸಾಹಿಸಿ. ಹೀಗೆಯೇ ಆಗಬೇಕು ಎನ್ನುವ ನಿರ್ದಿಷ್ಟ ಗುರಿ ನಿಗದಿಪಡಿಸಬೇಡಿ. ಮನಸ್ಸು ತುಂಬ ಸೂಕ್ಷ್ಮ. ದೈಹಿಕ ಗಾಯಕ್ಕಿಂತ ಮಾನಸಿಕ ಗಾಯ ಗುಣಪಡಿಸುವುದು ಕಷ್ಟದ ಮಾತು.