

Meat : ಮಾಂಸಾಹಾರ ಬಹುತೇಕರ ಪ್ರಿಯವಾದ ಆಹಾರ. ಬೇರೆ ಯಾವುದನ್ನು ಬೇಕಾದರೂ ಬಿಡುತ್ತೇನೆ ಆದರೆ, ಒಂದು ತುಂಡು ಮಾಂಸವಿಲ್ಲದೆ ಇರಲಾಗದು ಎಂದು ಅನೇಕರು ಹೇಳಿರುವುದನ್ನು ಕೇಳಿದ್ದೇವೆ. ಅದರಲ್ಲೂ ಭಾನುವಾರ ಬಂತೆಂದರೆ ಮಾಂಸಾಹಾರ ತಿನ್ನಲೇಬೇಕು. ಒಂದು ಕಾಲದಲ್ಲಿ ಜನರು ಭಾನುವಾರ ಮಾತ್ರ ತಿನ್ನುತ್ತಿದ್ದರು. ಆದರೀಗ ದಿನ ಯಾವುದೇ ಇರಲಿ, ಕೋಳಿ, ಮಟನ್, ಮೀನು ಮತ್ತು ಸೀಗಡಿಯಂತಹ ಮಾಂಸಾಹಾರಿ ಆಹಾರವನ್ನು ಸೇವಿಸುತ್ತಿದ್ದಾರೆ. ಕೆಲವರಿಗಂತೂ ಒಂದು ಪೀಸ್ ಮಾಂಸ ತಿನ್ನದೇ ಇದ್ದರೆ ಆ ದಿನ ಪೂರ್ಣ ಅನಿಸುವುದೇ ಇಲ್ಲ.
ಅಂದಹಾಗೆ ಇಂದಿನ ಆಧುನಿಕ ಜೀವನಶೈಲಿಯಲ್ಲಿ, ಆಹಾರ ಪದ್ಧತಿ ಆರೋಗ್ಯಕ್ಕೆ ಬಹಳ ಮುಖ್ಯ. ಹೆಚ್ಚು ಮಾಂಸ ತಿನ್ನುವುದರಿಂದ ಜೀವಿತಾವಧಿ ಕಡಿಮೆಯಾಗುತ್ತದೆಯೇ ಎಂಬ ಪ್ರಶ್ನೆ ಅನೇಕ ಜನರಲ್ಲಿದೆ. ಇದರ ನಡುವೆ ಕೆಲವು ತಜ್ಞರು ಮಾಂಸ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಹೇಳಿದರೆ, ಇನ್ನು ಕೆಲವರು ಮಾಂಸಾಹಾರದ ಪ್ರಯೋಜನಗಳನ್ನು ವಿವರಿಸುತ್ತಾರೆ. ಆದರೆ, ಮಾಂಸವನ್ನು (ವಿಶೇಷವಾಗಿ ಕೆಂಪು ಮಾಂಸ ಮತ್ತು ಸಂಸ್ಕರಿಸಿದ ಮಾಂಸ) ಹೆಚ್ಚಾಗಿ ಸೇವಿಸುವುದರಿಂದ ಜೀವಿತಾವಧಿಯ ಮೇಲೆ ಪರಿಣಾಮ ಬೀರಬಹುದು ಎಂಬುದಕ್ಕೆ ಕೆಲವು ಸಂಶೋಧನೆಗಳು ಸಾಕ್ಷಿಯನ್ನು ಒದಗಿಸಿವೆ.
2019 ರಲ್ಲಿ The Lancet ನಲ್ಲಿ ಪ್ರಕಟವಾದ ಒಂದು ಅಧ್ಯಯನವು, ಕೆಂಪು ಮಾಂಸ ಮತ್ತು ಸಂಸ್ಕರಿಸಿದ ಮಾಂಸವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಹೃದಯರೋಗ, ಕ್ಯಾನ್ಸರ್ (ವಿಶೇಷವಾಗಿ ಕೊಲೊರೆಕ್ಟಲ್ ಕ್ಯಾನ್ಸರ್) ಮತ್ತು ಒಟ್ಟಾರೆ ಮರಣದ ಅಪಾಯವನ್ನು ಹೆಚ್ಚಿಸಬಹುದು ಎಂದು ಕಂಡುಕೊಂಡಿದೆ. ಇದಕ್ಕೆ ಕಾರಣ, ಈ ಆಹಾರಗಳಲ್ಲಿರುವ ಸ್ಯಾಚುರೇಟೆಡ್ ಫ್ಯಾಟ್, ಕೊಲೆಸ್ಟ್ರಾಲ್, ಸೋಡಿಯಂ ಮತ್ತು ಕೆಲವು ರಾಸಾಯನಿಕ ಸಂಯುಕ್ತಗಳು (ನೈಟ್ರೇಟ್‌ಗಳು, ಹೆಮ್ ಐರನ್) ದೀರ್ಘಕಾಲೀನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿದುಬಂದಿದೆ.
ಇನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಧ್ಯಯನದಿಂದಲೂ ಇದು ಬಹಿರಂಗವಾಗಿದೆ. 4,75,000 ಜನರ ಮೇಲೆ ನಡೆಸಿದ ಅಧ್ಯಯನವು ಮಾಂಸ ತಿನ್ನುವುದರಿಂದ ಕ್ಯಾನ್ಸರ್, ಹೃದ್ರೋಗ ಮತ್ತು ಮಧುಮೇಹದಂತಹ 25 ರೀತಿಯ ಆರೋಗ್ಯ ಸಮಸ್ಯೆಗಳ ಅಪಾಯವಿದೆ ಎಂದು ಕಂಡುಹಿಡಿದಿದೆ. ದಿನಕ್ಕೆ ಅಥವಾ ವಾರಕ್ಕೆ ಮೂರು ಬಾರಿ ಹೆಚ್ಚು ಮಾಂಸ ತಿನ್ನುವವರು ಅಂತಹ ಅಪಾಯಗಳಿಗೆ ಒಳಗಾಗುವ ಅಪಾಯವಿದೆ ಎಂದು ಹೇಳಿದೆ. ಕೆಂಪು ಮಾಂಸದಲ್ಲಿ ಕೊಬ್ಬಿನಂಶ ಹೆಚ್ಚಿದ್ದು, ಇದು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಮತ್ತು ಹೃದಯ ಕಾಯಿಲೆಗೆ ಕಾರಣವಾಗುತ್ತದೆ. ಸಂಸ್ಕರಿಸಿದ ಮಾಂಸದಲ್ಲಿ ಉಪ್ಪು, ನೈಟ್ರೇಟ್ ಮತ್ತು ಇತರ ರಾಸಾಯನಿಕಗಳು ಅಧಿಕವಾಗಿರುತ್ತವೆ. ಇವುಗಳನ್ನು ಅತಿಯಾಗಿ ತಿನ್ನುವುದರಿಂದ ಕೊಲೊನ್ ಕ್ಯಾನ್ಸರ್‌ನಂತಹ ಕೆಲವು ರೀತಿಯ ಕ್ಯಾನ್ಸರ್‌ಗಳ ಅಪಾಯ ಹೆಚ್ಚಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಸಿದೆ.
ಆದಾಗ್ಯೂ, ಆರೋಗ್ಯಕರ ಮಾಂಸ, ವಿಶೇಷವಾಗಿ ಮೀನು ಮತ್ತು ಕೋಳಿ ಮಾಂಸವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಮಾಂಸವು ಪ್ರೋಟೀನ್ ಮತ್ತು ವಿಟಮಿನ್‌ಗಳಿಂದ ಸಮೃದ್ಧವಾಗಿದೆ. ಮೀನಿನಲ್ಲಿ ಕಂಡುಬರುವ ಒಮೆಗಾ 3 ಕೊಬ್ಬಿನಾಮ್ಲಗಳು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ವಾರಕ್ಕೆ 500 ಗ್ರಾಂಗಿಂತ ಕಡಿಮೆ ಕೆಂಪು ಮಾಂಸ ಸೇವಿಸುವುದು ಆರೋಗ್ಯಕ್ಕೆ ಸುರಕ್ಷಿತವೆಂದು ಪರಿಗಣಿಸಲಾಗಿದೆ.
ಆರೋಗ್ಯಕರ ಆಹಾರ ಪದ್ಧತಿಗಳು ಜೀವಿತಾವಧಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಾಂಸವನ್ನು ಸೇವಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಮುಖ್ಯ. ಮಾಂಸವನ್ನು ಮಿತವಾಗಿ ಸೇವಿಸಬೇಕು. ಪ್ರತಿದಿನ ಬದಲಾಗಿ ವಾರಕ್ಕೆ ಎರಡು ಬಾರಿ ಮಾತ್ರ ಮಾಂಸವನ್ನು ಸೇವಿಸುವುದು ಉತ್ತಮ. ಕೆಂಪು ಮಾಂಸದ ಬದಲಿಗೆ, ಮೀನು ಮತ್ತು ಕೋಳಿಮಾಂಸದಂತಹ ಆರೋಗ್ಯಕರ ಮಾಂಸಕ್ಕೆ ಆದ್ಯತೆ ನೀಡಬೇಕು. ಮಾಂಸದ ಜೊತೆಗೆ, ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಇವು ಹೃದಯ ಕಾಯಿಲೆಯಿಂದ ರಕ್ಷಿಸುತ್ತವೆ. ಇದಲ್ಲದೆ, ಮಾಂಸವನ್ನು ಬೇಯಿಸುವುದು, ಕುದಿಸುವುದು ಅಥವಾ ಆವಿಯಲ್ಲಿ ಬೇಯಿಸುವುದು ಮುಂತಾದ ವಿಧಾನಗಳು ಮಾಂಸವನ್ನು ಹುರಿಯುವುದಕ್ಕಿಂತ ಆರೋಗ್ಯಕರವಾಗಿವೆ.
ಒಟ್ಟಾರೆಯಾಗಿ, ಮಾಂಸವನ್ನು ತಿನ್ನುವುದರಿಂದ ಜೀವಿತಾವಧಿಯಲ್ಲಿನ ಕಡಿತವು ಸೇವಿಸುವ ಪ್ರಮಾಣವನ್ನು ಅವಲಂಬಿಸಿರುತ್ತದೆ. ಒಟ್ಟಾರೆ ಆರೋಗ್ಯಕ್ಕಾಗಿ, ಮಾಂಸವನ್ನು ಮಿತವಾಗಿ ಮತ್ತು ಆರೋಗ್ಯಕರ ರೀತಿಯಲ್ಲಿ ಸೇವಿಸುವುದು ಅವಶ್ಯಕ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.