ಸ್ವಲ್ಪ ಗ್ಯಾಸ್ಟ್ರಿಕ್ ಆದ್ರೂ ಮಾತ್ರೆ ಬೇಕಾ? ನಿಮ್ಮ ಜೀವವನ್ನೇ ಹಿಂಡುವ ಆ ಸೈಡ್ ಎಫೆಕ್ಟ್ಸ್ ಬಗ್ಗೆ ಇಂದೇ ತಿಳಿದುಕೊಳ್ಳಿ! Gas Medication Danger

Gas Medication Danger ಸಾಂದರ್ಭಿಕ ಚಿತ್ರ
Gas Medication Danger ಸಾಂದರ್ಭಿಕ ಚಿತ್ರ
Published on
Gas Medication Danger: ಇತ್ತೀಚಿನ ದಿನಗಳಲ್ಲಿ ಹೊಟ್ಟೆಯಲ್ಲಿ ಸ್ವಲ್ಪ ಗ್ಯಾಸ್ ಆದ ತಕ್ಷಣ, ಅಥವಾ ಎದೆಯುರಿ ಕಾಣಿಸಿಕೊಂಡ ತಕ್ಷಣ ಮೆಡಿಕಲ್ ಶಾಪ್‌ಗೆ ಹೋಗಿ ಆಂಟಾಸಿಡ್ ಅಥವಾ ಗ್ಯಾಸ್ ಮಾತ್ರೆಗಳನ್ನು ತಂದು ನುಂಗುವುದು ಹೆಚ್ಚಿನವರ ಅಭ್ಯಾಸವಾಗಿದೆ. ಇನ್ನು ಕೆಲವರಂತೂ ಈ ಮಾತ್ರೆಗಳನ್ನು ಸದಾ ತಮ್ಮ ಜೇಬಿನಲ್ಲಿ, ಬ್ಯಾಗುಗಳಲ್ಲಿ ಇಟ್ಟುಕೊಂಡು, ಚಾಕೊಲೇಟ್‌ಗಳಂತೆ ತಿನ್ನುತ್ತಾರೆ. ಆದರೆ, ವೈದ್ಯರ ಸಲಹೆಯಿಲ್ಲದೆ ಹೀಗೆ ಸ್ವಯಂ ಚಿಕಿತ್ಸೆ  ಮಾಡಿಕೊಳ್ಳುವುದು ನಿಮ್ಮ ಜೀವಕ್ಕೆ ಕುತ್ತು ತರಬಹುದು ಎಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತಜ್ಞರು ಗಂಭೀರ ಎಚ್ಚರಿಕೆ ನೀಡಿದ್ದಾರೆ.
ದೆಹಲಿ ಏಮ್ಸ್ ವೈದ್ಯರ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಸಣ್ಣಪುಟ್ಟ ಅಸ್ವಸ್ಥತೆಗಳಿಗೂ ವೈದ್ಯರನ್ನು ಸಂಪರ್ಕಿಸದೆ ಗ್ಯಾಸ್ ಮಾತ್ರೆಗಳನ್ನು ತೆಗೆದುಕೊಳ್ಳುವವರ ಸಂಖ್ಯೆ ಹಲವು ಪಟ್ಟು ಹೆಚ್ಚಾಗಿದೆ. ಈ ನಿರುಪದ್ರವದಂತೆ ಕಾಣುವ ಅಭ್ಯಾಸವು ಒಟ್ಟಾರೆ ಆರೋಗ್ಯದ ಮೇಲೆ ಅತ್ಯಂತ ಭೀಕರ ಪರಿಣಾಮಗಳನ್ನು ಬೀರುತ್ತಿದೆ. ಹಾಗಿದ್ದರೆ, ಈ ಮಾತ್ರೆಗಳನ್ನು ಹೆಚ್ಚಾಗಿ ತಿನ್ನುವುದರಿಂದ ಆಗುವ ಹಾನಿಗಳೇನು ಎಂದು ನೋಡೋಣ ಬನ್ನಿ...

ಮೂಳೆ ದುರ್ಬಲತೆಯ ಅಪಾಯ

ದೀರ್ಘಕಾಲದವರೆಗೆ ಆಂಟಾಸಿಡ್‌ಗಳನ್ನು ತೆಗೆದುಕೊಳ್ಳುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಮತ್ತು ಇತರ ಅಗತ್ಯ ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಅಡ್ಡಿಯಾಗುತ್ತದೆ ಎಂದು ವೈದ್ಯಕೀಯ ವಿಜ್ಞಾನ ಹೇಳುತ್ತದೆ. ಇದರ ಪರಿಣಾಮವಾಗಿ ಮೂಳೆಗಳು ಕ್ರಮೇಣ ದುರ್ಬಲವಾಗಲು ಪ್ರಾರಂಭಿಸುತ್ತವೆ. ಆದಾಗ್ಯೂ, ಸಣ್ಣಪುಟ್ಟ ಗಾಯದಿಂದ ಮೂಳೆಗಳು ಮುರಿಯುವ ಅಪಾಯ ಹೆಚ್ಚಾಗುತ್ತದೆ. ಈಗಾಗಲೇ ಮೂಳೆ ಸಮಸ್ಯೆಗಳನ್ನು ಯಾರಾದರೂ ಹೊಂದಿದ್ದರೆ ಅವರಲ್ಲಿ ಅಪಾಯ ಇನ್ನಷ್ಟು ಹೆಚ್ಚಾಗುತ್ತದೆ. 

ನ್ಯುಮೋನಿಯಾ ಭೀತಿ

ದೀರ್ಘಕಾಲದವರೆಗೆ ಮತ್ತು ನಿಯಮಿತವಾಗಿ ಆಂಟಾಸಿಡ್‌ಗಳನ್ನು ತೆಗೆದುಕೊಳ್ಳುವುದು ಕೇವಲ ಜೀರ್ಣಾಂಗವ್ಯೂಹ ಮಾತ್ರವಲ್ಲದೆ, ಶ್ವಾಸಕೋಶದ ಮೇಲೂ ಅತ್ಯಂತ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಹೊಟ್ಟೆಯಲ್ಲಿ ಆಸಿಡ್ ಪ್ರಮಾಣ ಕಡಿಮೆಯಾದಾಗ, ಅಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಸುಲಭವಾಗಿ ವೃದ್ಧಿಯಾಗುತ್ತವೆ. ಇವು ಅನ್ನನಾಳದ ಮೂಲಕ ಉಸಿರಾಟದ ವ್ಯವಸ್ಥೆಯನ್ನು ಸೇರಿ ನ್ಯುಮೋನಿಯಾದಂತಹ ಉಸಿರಾಟದ ತೀವ್ರ ಸೋಂಕುಗಳನ್ನು ಉಂಟುಮಾಡುವ ಅಪಾಯವನ್ನು ಬಹುವಾಗಿ ಹೆಚ್ಚಿಸುತ್ತವೆ.
ನ್ಯುಮೋನಿಯಾವು ರೋಗಿಯ ದೈಹಿಕ ಸ್ಥಿತಿಯನ್ನು ತಕ್ಷಣವೇ ತೀವ್ರವಾಗಿ ಕ್ಷೀಣಿಸುವಂತೆ ಮಾಡುವ ಮತ್ತು ಜೀವಕ್ಕೆ ಕುತ್ತು ತರಬಲ್ಲ ಗಂಭೀರ ಶ್ವಾಸಕೋಶದ ಕಾಯಿಲೆಯಾಗಿದೆ. ಆದ್ದರಿಂದ, ಗ್ಯಾಸ್ಟ್ರಿಕ್ ಸಮಸ್ಯೆಯೆಂದು ನಿರ್ಲಕ್ಷಿಸಿ ವೈದ್ಯರ ಸಲಹೆಯಿಲ್ಲದೆ ಸ್ವಯಂಪ್ರೇರಿತವಾಗಿ ಇಂತಹ ಔಷಧಿಗಳನ್ನು ತೆಗೆದುಕೊಳ್ಳುವುದು ಸಂಪೂರ್ಣವಾಗಿ ಸೂಕ್ತವಲ್ಲ.

ಗ್ಯಾಸ್ ಮತ್ತು ಆಮ್ಲೀಯತೆಯನ್ನು ತಪ್ಪಿಸಲು ಏನು ಮಾಡಬೇಕು?

ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಗ್ಯಾಸ್​ , ಅಸಿಡಿಟಿಯಂತಹ ಸಮಸ್ಯೆಯನ್ನು ದೂರ ತಳ್ಳಬಹುದು. 
* ಹೆಚ್ಚು ಹೊತ್ತು ಖಾಲಿ ಹೊಟ್ಟೆಯಲ್ಲಿ ಇರಬೇಡಿ. ಬದಲಾಹಿ ಆಗ್ಗಾಗೆ ಊಟ ಮಾಡುತ್ತಿರಿ.
*  ಮದ್ಯಪಾನದಿಂದ ಸಂಪೂರ್ಣವಾಗಿ ದೂರವಿರಿ
*  ತ್ವರಿತ ಆಹಾರ, ಅತಿಯಾಗಿ ಹುರಿದ ಮತ್ತು ಮಸಾಲೆಯುಕ್ತ ಆಹಾರವನ್ನು ತಪ್ಪಿಸಿ
*  ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ 
*  ಸಾಕಷ್ಟು ನೀರು ಕುಡಿಯಿರಿ
*  ಪ್ರತಿ ರಾತ್ರಿ ಕನಿಷ್ಠ 7-8 ಗಂಟೆಗಳ ಕಾಲ ಸಾಕಷ್ಟು ನಿದ್ರೆ ಮಾಡಿ

ವೈದ್ಯರ ಸಲಹೆಯೇ ಅಂತಿಮ

ನಿಮಗೆ ಗ್ಯಾಸ್, ಅಸಿಡಿಟಿ ಅಥವಾ ಎದೆಯುರಿ ಸಮಸ್ಯೆಗಳು ಉಂಟಾಗುತ್ತಿದ್ದರೆ ಮತ್ತು ಅದು ದೀರ್ಘಕಾಲದವರೆಗೆ ಮುಂದುವರಿದರೆ, ಆ ವಿಷಯವನ್ನು ಹಗುರವಾಗಿ ಪರಿಗಣಿಸಬಾರದು ಬದಲಾಗಿ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸುವುದು ಉತ್ತಮ. ಇದು ರೋಗದ ನಿಖರವಾದ ಕಾರಣವನ್ನು ತಿಳಿಯಲು ಮತ್ತು ಅದಕ್ಕೆ ಬೇಕಾದ ಚಿಕಿತ್ಸೆಯನ್ನು ಕೊಡಲು ಸಹಾಯ ಮಾಡುತ್ತದೆ (ಏಜೆನ್ಸೀಸ್​). 
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net