

ಹೊಸ ಕಾರ್ ಖರೀದಿಸುವಾಗ ಇನ್ಶೂರೆನ್ಸ್ ಕಾರ್ ಡೀಲರ್ನಿಂದಲೇ ಖರೀದಿಸಬೇಕೆಂಬ ನಿಯಮವಿದೆಯೇ? ಇನ್ಶೂರೆನ್ಸ್ ಡೀಲರ್ನಿಂದ ಖರೀದಿ ಮಾಡದಿದ್ದರೆ ಕ್ಲೇಮ್ ಸಂದರ್ಭದಲ್ಲಿ ಸರಿಯಾಗಿ ಸೇವೆ ಸಿಗುವುದಿಲ್ಲ ಎಂದು ಕೆಲ ಸೇಲ್ಸ್ ಎಕ್ಸಿಕ್ಯೂಟಿವ್ಗಳು ಹೇಳುತ್ತಾರೆ. ವಾಸ್ತವಾಂಶ ಏನು?
| ಮನೋಜ್ ಭದ್ರಾವತಿ
ಹೊಸ ಕಾರ್ ಖರೀದಿ ಮಾಡುವಾಗ ಡೀಲರ್ ನಿಂದಲೇ ಇನ್ಶೂರೆನ್ಸ್ ಖರೀದಿ ಮಾಡಬೇಕೆಂಬ ಯಾವುದೇ ನಿಯಮವಿಲ್ಲ. ಆದರೆ ಕೆಲ ಕಾರ್ ಡೀಲರ್ಗಳು ಕಾರ್ ಇನ್ಶೂರೆನ್ಸ್ ಅನ್ನು ತಮ್ಮ ಬಳಿಯೇ ಖರೀದಿ ಮಾಡುವಂತೆ ಒತ್ತಾಯಿಸುತ್ತಾರೆ. ನಮ್ಮ ಬಳಿ ಕಾರ್ ಇನ್ಶೂರೆನ್ಸ್ ತೆಗೆದುಕೊಂಡರೆ ಮಾತ್ರ ಸರಿಯಾದ ಸೇವೆ ಸಿಗುತ್ತದೆ. ನೇರವಾಗಿ ಇನ್ಶೂರೆನ್ಸ್ ಕಂಪನಿ ಬಳಿ ಹೋಗಿ ಖರೀದಿ ಮಾಡಿದರೆ ಕ್ಲೇಮ್ ಸಂದರ್ಭದಲ್ಲಿ ಸರಿಯಾದ ಸರ್ವೀಸ್ ಸಿಗುವುದಿಲ್ಲ ಎಂದೆಲ್ಲಾ ವಾದಿಸುತ್ತಾರೆ. ಕಾರ್ ಖರೀದಿಸುವ ಬಹುಪಾಲು ಜನರ ಗಮನಕ್ಕೆ ಈ ರೀತಿ ಸೇಲ್ಸ್ ಎಕ್ಸಿಕ್ಯೂಟಿವ್ಗಳು ಬಲವಂತ ಮಾಡುವುದು ಕಂಡುಬಂದಿರುತ್ತದೆ. ಆದರೆ ಇವೆಲ್ಲಾ ಬರೀ ಮಾರ್ಕೆಟಿಂಗ್ ಗಿಮಿಕ್ ಎನ್ನುವುದು ನೆನಪಿರಲಿ. ಕಾರ್ ಡೀಲರ್ ಮೂಲಕ ಇನ್ಶೂರೆನ್ಸ್ ಖರೀದಿಸಬೇಕೋ ಅಥವಾ ನೀವೇ ನೇರವಾಗಿ ಇನ್ಶೂರೆನ್ಸ್ ಕಂಪನಿ ಮೂಲಕ ಇನ್ಶೂರೆನ್ಸ್ ಖರೀದಿಸಬೇಕೋ ಎನ್ನುವುದು ನಿಮ್ಮ ಆಯ್ಕೆ ಸ್ವಾತಂತ್ರ್ಯ. ಯಾವ ಕಂಪನಿ ನಿಮಗೆ ಕಡಿಮೆ ಪ್ರೀಮಿಯಂಗೆ ಹೆಚ್ಚು ಕವರೇಜ್ ಕೊಡುವುದೋ ಮತ್ತು ಸೇವಾ ಖಾತ್ರಿ ನೀಡುವುದೋ ಆ ಇನ್ಶೂರೆನ್ಸ್ ಕಂಪನಿಯಿಂದ ವಿಮೆ ಪಡೆಯುವ ಹಕ್ಕು ನಿಮಗಿದೆ. ಈಗಂತೂ ಆನ್ ಲೈನ್ ಮೂಲಕವೇ ಇನ್ಸೂರೆನ್ಸ್ ಪಡೆಯುವ ಅವಕಾಶ ಇರುವುದರಿಂದ ಕಡಿಮೆ ಪ್ರೀಮಿಯಂ, ಒಳ್ಳೆಯ ಕಂಪನಿ ಮತ್ತು ಉತ್ತಮ ಸೇವೆ ಪಡೆಯಲು ನಿಮಗೆ ಹೆಚ್ಚು ಅಯ್ಕೆಗಳಿವೆ. ನೀವು ಒಂದೊಮ್ಮೆ ಕಾರ್ ಡೀಲರ್ನಿಂದಲೇ ಇನ್ಶೂರೆನ್ಸ್ ಪಡೆಯಲು ಇಚ್ಛಿಸಿದರೆ ಪ್ರೀಮಿಯಂ, ಕವರೇಜ್ ಮತ್ತಿತರ ಅಂಶಗಳನ್ನು ಪರಿಗಣಿಸಿದ ನಂತರದಲ್ಲಿ ಮುನ್ನಡೆಯುವುದು ಒಳಿತು. ಇಷ್ಟೇ ಅಲ್ಲ, ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (ಐಡಿವಿ) ಅಂದರೆ, ನಿಮ್ಮ ಕಾರು ನಿರ್ದಿಷ್ಟ ವರ್ಷದಲ್ಲಿ ಹೊಂದಿರುವ ಗರಿಷ್ಠ ವಿಮಾ ಮೊತ್ತ ಎಷ್ಟು ಎನ್ನುವುದನ್ನು ತಿಳಿದುಕೊಳ್ಳಿ. ಗರಿಷ್ಠ ವಿಮಾ ಮೊತ್ತ ಇದ್ದರೆ ಪ್ರೀಮಿಯಂ ಜಾಸ್ತಿ ಇರುತ್ತದೆ. ಅಗ್ನಿ ಅವಘಡ, ಕಳ್ಳತನದಂತಹ ಸಂದರ್ಭಗಳಲ್ಲಿ ಐಡಿವಿ ಹೆಚ್ಚಿದ್ದರೆ ನಿಮಗೆ ಪರಿಹಾರ ಹೆಚ್ಚಿಗೆ ಸಿಗುತ್ತದೆ. ಇನ್ನು ವಾಲೆಂಟರಿ ಡಿಡಕ್ಷನ್, ಅಂದರೆ ಇನ್ಶೂರೆನ್ಸ್ ಕ್ಲೇಮ್ ಸಂದರ್ಭದಲ್ಲಿ ಸ್ವಯಂ ಪ್ರೇರಿತರಾಗಿ ಹೆಚ್ಚುವರಿ ನಷ್ಟ ಭರಿಸಲು ಒಪ್ಪಿ ಪ್ರೀಮಿಯಂನಲ್ಲಿ ರಿಯಾಯ್ತಿ ಪಡೆಯುವ ಪ್ರಕ್ರಿಯೆ. ಈ ರೀತಿ ಮಾಡುವುದು ಒಳಿತಲ್ಲ. ಇನ್ಶೂರೆನ್ಸ್ ಖರೀದಿಸುವಾಗ ವಾಲೆಂಟರಿ ಡಿಡಕ್ಷನ್ ಆಯ್ಕೆ ಬೇಡ.
ಆದಾಯ ತೆರಿಗೆಯ ಜತೆೆ ಹೆಲ್ತ್ ಮತ್ತು ಎಜುಕೇಷನ್ ಸೆಸ್ ಏಕೆ ಪಾವತಿಸಬೇಕು. ಸರ್ಕಾರ ಈ ರೀತಿಯ ನಿಯಮ ಮಾಡಿರುವ ಉದ್ದೇಶವೇನು?
| ಸುಮಿತ್ ಬೆಂಗಳೂರು
ನಿರ್ದಿಷ್ಟ ವಲಯದ ಬೆಳವಣಿಗೆಗೆ, ಸುಧಾರಣೆಗೆ, ಅಭಿವೃದ್ಧಿಗೆ ಸರ್ಕಾರ ಸಂಗ್ರಹಿಸುವ ಅಥವಾ ಹೇರುವ ಒಂದು ರೀತಿಯ ತೆರಿಗೆಯೇ ಸೆಸ್. ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆಯ ಜತೆಗೆ ಹೆಚ್ಚುವರಿಯಾಗಿ ಸೆಸ್ ಸಂಗ್ರಹಿಸಲಾಗುತ್ತದೆ. ಸದ್ಯದ ಸ್ಥಿತಿಯಲ್ಲಿ ಸರ್ಕಾರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಸುಧಾರಣೆಗೆ ತೆರಿಗೆ ಪಾವತಿಸುವವರಿಂದ ಶೇ. 4 ರಷ್ಟು ಸೆಸ್ ಸಂಗ್ರಹಿಸುತ್ತಿದೆ. 2018ರ ಕೇಂದ್ರ ಬಜೆಟ್ನಲ್ಲಿ ಅಂದಿನ ವಿತ್ತ ಸಚಿವ ಅರುಣ್ ಜೇಟ್ಲಿ ಸೆಸ್ ಅನ್ನು ಜಾರಿಗೆ ತಂದರು. ಇದಕ್ಕೂ ಮೊದಲು ಶಿಕ್ಷಣದ ಉದ್ದೇಶಕ್ಕೆ ಶೇ. 3ರಷ್ಟು ಸೆಸ್ ಸಂಗ್ರಹಿಸಲಾಗುತ್ತಿತ್ತು. ಹೆಸರೇ ಸೂಚಿಸುವಂತೆ ಹೆಲ್ತ್ ಮತ್ತು ಎಜುಕೇಷನ್ ಸೆಸ್ ಗ್ರಾಮೀಣ ಬಡ ಜನರ ಅಗತ್ಯಗಳಿಗೆ ಬಳಸಲಾಗುತ್ತದೆ. ನಿರ್ದಿಷ್ಟ ಉದ್ದೇಶಕ್ಕೆ ಸಂಗ್ರಹಿಸುವ ಸೆಸ್ ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಸಾಕಷ್ಟ ಹಣ ಸಂಗ್ರಹವಾಗುವವರೆಗೂ ಸರ್ಕಾರ ಸೆಸ್ ಅನ್ನು ಜಾರಿಯಲ್ಲಿಡುತ್ತದೆ.
ನಿಮ್ಮ ಮನಿ ಮಾತು ಅಂಕಣದಿಂದ ಹಣಕಾಸು ಮತ್ತು ಹೂಡಿಕೆ ಕುರಿತು ಸಾಕಷ್ಟು ಮಾಹಿತಿ ಸಿಗುತ್ತಿದೆ. ವಯಸ್ಸು 49 ವರ್ಷ. ನಾನು ಈಗ ಲೈಫ್ ಇನ್ಶೂರೆನ್ಸ್ ನಲ್ಲಿ ಹೂಡಿಕೆ ಮಾಡಬೇಕೆಂದು ತೀರ್ವನಿಸಿದ್ದು, ನನಗೆ 65 ವರ್ಷ ತುಂಬುವ ವೇಳೆಗೆ ರೂ. 10 ಲಕ್ಷ ಮೆಚ್ಯೂರಿಟಿ ಹಣ ಸಿಗಬೇಕು ಎಂದಾದಲ್ಲಿ ಎಷ್ಟು ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ ತಿಳಿಸಿ.
| ದೀಪಶ್ರೀ ಕುಲಕರ್ಣಿ
ನಿಮ್ಮ ಅಭಿಮಾನಕ್ಕೆ ಧನ್ಯವಾದ. ಇನ್ಶೂರೆನ್ಸ್, ತೆರಿಗೆ ಉಳಿತಾಯ ಅಥವಾ ಹೂಡಿಕೆಗೆ ಎಂಡೋಮೆಂಟ್, ಮನಿ ಬ್ಯಾಕ್, ಯುಲಿಪ್ ಪಾಲಿಸಿಗಳು ಸೂಕ್ತವಲ್ಲ. ಈ ಪಾಲಿಸಿಗಳಲ್ಲಿ ಹೆಚ್ಚು ಲಾಭವೂ ಇಲ್ಲ ಹೆಚ್ಚು ಇನ್ಶೂರೆನ್ಸ್ ಕವರೇಜ್ ಸಹ ಸಿಗುವುದಿಲ್ಲ. ಉದಾಹರಣೆಗೆ ವಾರ್ಷಿಕ ರೂ. 1 ಲಕ್ಷ ಪ್ರೀಮಿಯಂ ಇರುವ ಪಾಲಿಸಿಯನ್ನು ನೀವು ಮಾಡಿಸಿಕೊಂಡಿದ್ದೀರಿ ಎಂದು ಭಾವಿಸೋಣ. ಈ ಪಾಲಿಸಿ ನಿಮಗೆ ರೂ. 10 ಲಕ್ಷ ಕವರೇಜ್ ಅನ್ನು ಮಾತ್ರ ಖಾತರಿಪಡಿಸುತ್ತದೆ. ಇಂತಹ ಸಾಂಪ್ರದಾಯಿಕ ಪಾಲಿಸಿಗಳಲ್ಲಿ ಹೂಡಿಕೆ ಮಾಡಿದಾಗ ಹೆಚ್ಚೆಂದರೆ ಶೇ. 3 ರಿಂದ ಶೇ. 5 ರಷ್ಟು ಮಾತ್ರ ಲಾಭಾಂಶ ಸಿಗುತ್ತದೆ. ಹಾಗಾಗಿ ಕೇವಲ ತೆರಿಗೆ ಉಳಿಸಲು ಈ ಹೂಡಿಕೆ ಮಾಡುವ ಬದಲು ತೆರಿಗೆ ಲಾಭದ ಜತೆಗೆ ಹೆಚ್ಚಿನ ಬಡ್ಡಿದರ ನೀಡುವ ಪಿಪಿಎಫ್, ಎನ್ ಪಿಎಸ್ ಗಳಲ್ಲಿ ನೀವು ಹಣ ತೊಡಗಿಸಬಹುದು. ನೆನಪಿನಲ್ಲಿಡಿ, ಜೀವನದ ಆರ್ಥಿಕ ಭದ್ರತೆಗೆ ಇನ್ಸೂರೆನ್ಸ್ ಬಹಳ ಮುಖ್ಯ. ಆದರೆ ಹೂಡಿಕೆ ಮಾಡಿ ಹಣಗಳಿಸಬೇಕು ಎಂದರೆ ಇನ್ಶೂರೆನ್ಸ್ ಅಷ್ಟು ಸೂಕ್ತ ಆಯ್ಕೆಯಲ್ಲ. ನಿರ್ಧಾರ ತೆಗೆದುಕೊಳ್ಳಲು ಗೊಂದಲಗಳಿದ್ದಲ್ಲಿ ಹಣಕಾಸು ತಜ್ಞರ ನೆರವು ಪಡೆಯಿರಿ.
ವೆಹಿಕಲ್ ಇನ್ಶೂರೆನ್ಸ್ ನಲ್ಲಿ ನೋ ಕ್ಲೇಮ್ ಬೋನಸ್ ಎಂದರೇನು? ಯಾರಿಗೆ ಇದರ ಲಾಭ ಸಿಗುತ್ತದೆ? | ಗೋಪಾಲ್ ಕುಲಕರ್ಣಿ ಕಲಬುರ್ಗಿ
ಸಾಮಾನ್ಯವಾಗಿ ವೆಹಿಕಲ್ ಇನ್ಶೂರೆನ್ಸ್ ವರ್ಷದ ಅವಧಿಗೆ ನೀಡಲಾಗುತ್ತದೆ. ಒಂದು ವರ್ಷದ ಅವಧಿಯಲ್ಲಿ ವಿಮೆ ಖರೀದಿಸಿರುವ ಗ್ರಾಹಕ ಯಾವುದೇ ಕ್ಲೇಮುಗಳನ್ನು ಪಡೆಯದಿದ್ದಾಗ ವಿಮಾ ಕಂಪನಿಗಳು ನೀಡುವ ರಿಯಾಯಿತಿಯೇ ನೋ ಕ್ಲೇಮ್ ಬೋನಸ್. ವಿಮಾ ಕಂಪನಿಗಳು ಅನುಸರಿಸುವ ನೋ ಕ್ಲೇಮ್ ಬೋನಸ್ ಪದ್ಧತಿಯು ಪರೋಕ್ಷವಾಗಿ ಸುರಕ್ಷಿತ ವಾಹನ ಚಾಲನೆಯನ್ನು ಪೋ›ತ್ಸಾಹಿಸುತ್ತದೆ. ಕ್ಲೇಮುರಹಿತ ಬೋನಸ್ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುತ್ತದೆ. ಉದಾಹರಣೆಗೆ, 2ನೇ ವರ್ಷದಲ್ಲಿ ಶೇ.20, 3ನೇ ವರ್ಷದಲ್ಲಿ ಶೇ.25, 4ನೇ ವರ್ಷದಲ್ಲಿ ಶೇ.30 ಮತ್ತು 5ನೇ ವರ್ಷದಲ್ಲಿ ಶೇ.35 ಇತ್ಯಾದಿ.
ತೀರ್ಥಹಳ್ಳಿಯಲ್ಲಿ ಕಾರ್ಯಾಗಾರ
ಇಂಡಿಯನ್ ಮನಿ ಡಾಟ್ ಕಾಂ ಸಿಇಒ ಸಿ ಎಸ್ ಸುಧೀರ್ ಸಾರಥ್ಯದಲ್ಲಿ ಒಂದು ದಿನದ ಫೈನಾನ್ಶಿಯಲ್ ಫ್ರೀಡಂಕಾರ್ಯಾಗಾರ ಫೆಬ್ರವರಿ 23ರಂದು ತೀರ್ಥಹಳ್ಳಿಯಲ್ಲಿ ನಡೆಯಲಿದೆ. ಕಾರ್ಯಾಗಾರದಲ್ಲಿ ಹಣಕಾಸು ನಿರ್ವಹಣೆ, ಉಳಿತಾಯ, ಹೂಡಿಕೆ, ತೆರಿಗೆ ನಿರ್ವಹಣೆ ಬಗ್ಗೆ ವಿಸõತವಾಗಿ ತಿಳಿಸಿಕೊಡಲಾಗುತ್ತದೆ. ಪಾಲ್ಗೊಳ್ಳಲು ಇಚ್ಛಿಸುವವರು 8655097256 ಸಂಖ್ಯೆಗೆ ಮಿಸ್ಡ್ ಕಾಲ್ ಕೊಡಿ.