Spicy Food: ಅತಿಯಾಗಿ ಮಸಾಲೆಯುಕ್ತ ಆಹಾರ ಸೇವಿಸುತ್ತೀರಾ? ಈ ವಿಚಾರ ನಿಮಗೆ ಗೊತ್ತಿರಲಿ

Spicy Food
Published on

ಅಪರೂಪಕ್ಕೆ ಒಮ್ಮೆ ಮಸಾಲೆಯುಕ್ತ ಆಹಾರ ( Spicy Food ) ವನ್ನು ಸೇವಿಸುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಆದರೆ, ಆಗಾಗ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಆರೋಗ್ಯ ( Health ) ದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ( Health Experts ) ಹೇಳುತ್ತಾರೆ.

ಮಸಾಲೆಯುಕ್ತ ಆಹಾರಗಳಲ್ಲಿ ಕ್ಯಾಪ್ಸೈಸಿನ್ ಎಂಬ ಜೈವಿಕ ಸಕ್ರಿಯ ಸಂಯುಕ್ತವನ್ನು ಹೊಂದಿರುತ್ತವೆ. ಈ ಸಂಯುಕ್ತವು ನಿಮ್ಮ ಬಾಯಿ, ಅನ್ನನಾಳ ಮತ್ತು ಹೊಟ್ಟೆಯಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಅದೇ ಸಮಯದಲ್ಲಿ ಅಧಿಕ ಮಸಾಲೆಯು ಅನೇಕ ಅಡ್ಡಪರಿಣಾಮಗಳನ್ನು ಸಹ ಉಂಟು ಮಾಡುತ್ತದೆ.

ಜೀರ್ಣಕಾರಿ ಸಮಸ್ಯೆ

ಮಸಾಲೆಯುಕ್ತ ಆಹಾರವನ್ನು ಪದೇಪದೆ ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಅಲ್ಲದೆ, ಹೊಟ್ಟೆ ನೋವು, ಅತಿಸಾರ, ವಾಂತಿ, ಎದೆಯುರಿ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳು ಎದುರಾಗಬಹುದು. ಮಸಾಲೆಯುಕ್ತ ಆಹಾರಗಳು ನೇರವಾಗಿ ಹೊಟ್ಟೆಯ ಹುಣ್ಣುಗಳಿಗೆ ಕಾರಣವಾಗುವುದಿಲ್ಲ. ಆದರೆ, ಒಬ್ಬ ವ್ಯಕ್ತಿಯು ಈಗಾಗಲೇ ಹೊಟ್ಟೆಯ ಹುಣ್ಣಿನಿಂದ ಬಳಲುತ್ತಿದ್ದರೆ, ಅವರು ಮಸಾಲೆಯುಕ್ತ ಆಹಾರವನ್ನು ತಪ್ಪಿಸಲೇಬೇಕು. ಇಲ್ಲವಾದಲ್ಲಿ ಅಲ್ಸರ್​ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ.

ತೂಕ ಹೆಚ್ಚಳ

ಅತಿಯಾಗಿ ಮಸಾಲೆಯುಕ್ತ ಆಹಾರಗಳನ್ನು ಸೇವಿಸಿದರೆ ನಿಮ್ಮ ದೇಹದ ತೂಕ ನಿಯಂತ್ರಣ ಕಳೆದುಕೊಳ್ಳುತ್ತದೆ. ಖಾರವಾದ ಆಹಾರವನ್ನು ಸೇವಿಸಿದ ನಂತರ ಏನಾದರೂ ಸಿಹಿ ತಿನ್ನಬೇಕು ಎಂಬ ಭಾವನೆ ಮೂಡುತ್ತದೆ. ಇದರಿಂದ ತೂಕ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ಆಗಾಗ ಮಸಾಲೆಯುಕ್ತ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ.

Spicy Food

ತಲೆನೋವು

ಇನ್ನು ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸುವ ಜನರು ಆಗಾಗ ತೀವ್ರ ತಲೆನೋವಿನಿಂದ ಬಳಲುತ್ತಿರುತ್ತಾರೆ. ಈ ರೀತಿಯ ತಲೆನೋವು ದಿಢೀರನೆ ಬರುತ್ತದೆ. ಮಸಾಲೆಯುಕ್ತ ಆಹಾರದಲ್ಲಿರುವ ಕ್ಯಾಪ್ಸೈಸಿನ್ ನಿಮ್ಮ ಚರ್ಮದಲ್ಲಿ ಶಾಖ ಗ್ರಾಹಕಗಳನ್ನು ಉತ್ತೇಜಿಸುತ್ತದೆ. ಇದು ಅತಿಯಾದ ಬೆವರುವಿಕೆಗೆ ಕಾರಣವಾಗುತ್ತದೆ. ಮಸಾಲೆಯುಕ್ತ ಆಹಾರವು ನಿಮ್ಮ ಗಂಟಲಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ.

ಇತರೆ ಸಮಸ್ಯೆಗಳು

ಇದಿಷ್ಟೇ ಅಲ್ಲದೆ, ವಾಕರಿಕೆ, ವಾಂತಿ, ಅತಿಸಾರ, ಗೊರಕೆ, ಉಸಿರಾಟದ ತೊಂದರೆ ಮತ್ತು ಎದೆ ನೋವು ಮುಂತಾದ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಆದ್ದರಿಂದ, ನೀವು ಹೆಚ್ಚು ಮಸಾಲೆಯುಕ್ತ ಆಹಾರ ಸೇವಿಸುವುದನ್ನು ತಪ್ಪಿಸಿ. ಮಿತವಾಗಿ ಸೇವಿಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net