

Tea : ಜಗತ್ತಿನ ಬಹುತೇಕ ಜನರ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ. ದಿನಕ್ಕೆ ಒಂದು ಕಪ್ ಕಾಫಿ-ಟೀ ಕುಡಿಯಲಿಲ್ಲ ಅಂದ್ರೆ ಆ ದಿನ ಏನೋ ಮಿಸ್ ಮಾಡಿಕೊಂಡಂತೆ ಜನರು ಚಡಪಡಿಸುತ್ತಾರೆ. ಒಂದು ಹೊತ್ತು ಊಟ ಬೇಕಾದರೂ ಬಿಡುತ್ತೇನೆ ಆದರೆ, ಟೀ-ಕಾಫಿ ಬಿಡುವುದಿಲ್ಲ ಎಂದು ಹೇಳುವ ಜನರು ಕೂಡ ನಮ್ಮ ನಡುವೆ ಇದ್ದಾರೆ. ದಿನಕ್ಕೊಂದು ಟೀ ಕುಡಿಯದಿದ್ದರೂ ಸುಸ್ತು, ಚಡಪಡಿಕೆ ಹಾಗೂ ತಲೆ ನೋವು ಅನುಭವಿಸುವವರೂ ಇದ್ದಾರೆ. ಅಷ್ಟೊಂದು ಜನಪ್ರಿಯವಾಗಿದೆ ಈ ಪಾನೀಯ.
ಕೆಲವರು ಊಟ ಮಾಡಿದ ತಕ್ಷಣ ಟೀ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಇನ್ನು ಕೆಲವರು ಊಟದ ನಡುವೆಯೂ ಕುಡಿಯುತ್ತಾರೆ. ಕೆಲ ಜನರಲ್ಲಿ ಒಂದು ಸಾಮಾನ್ಯ ನಂಬಿಕೆ ಇದೆ. ಅದೇನೆಂದರೆ, ಟೀ ಕುಡಿಯದಿದ್ದರೆ ತಾವು ಮಾಡಿದ ಊಟ ಕಂಪ್ಲೀಟ್ ಆಗುವುದಿಲ್ಲ ಎಂಬುದು. ಅಷ್ಟಕ್ಕೂ ಊಟ ಮಾಡಿದ ಬಳಿಕ ಟೀ ಅಥವಾ ಕಾಫಿ ಕುಡಿಯುವುದು ಎಷ್ಟು ಸರಿ? ಆರೋಗ್ಯಕ್ಕೆ ಪ್ರಯೋಜನವಿದೆಯೇ? ಅಥವಾ ಆರೋಗ್ಯಕ್ಕೆ ಏನಾದರೂ ತೊಂದರೆಯಾಗುತ್ತಾ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಕೂಡ ತುಂಬಾನೇ ಮುಖ್ಯವಾಗಿದೆ.
ಅಂದಹಾಗೆ, ಊಟದ ನಂತರ ಟೀ ಕುಡಿಯುವ ಅಭ್ಯಾಸವು ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ಹೌದು, ಚಹಾದಲ್ಲಿರುವ ಕೆಲವು ಸಂಯುಕ್ತಗಳು ಜೀರ್ಣಕ್ರಿಯೆಗೆ ಅಡ್ಡಿಪಡಿಸುತ್ತವೆ ಅಥವಾ ಪ್ರಮುಖ ಖನಿಜಗಳ ಹೀರಿಕೊಳ್ಳುವಿಕೆಯನ್ನು ತಡೆಯುತ್ತವೆ ಎಂದು ತಜ್ಞರು ಹೇಳುತ್ತಾರೆ. ಊಟದ ನಂತರ ತಕ್ಷಣ ಚಹಾ ಕುಡಿಯುವುದರಿಂದ ಕೆಲವು ಪೋಷಕಾಂಶಗಳು, ವಿಶೇಷವಾಗಿ ಕಬ್ಬಿಣದ ಹೀರಿಕೊಳ್ಳುವಿಕೆಗೆ ಅಡ್ಡಿಯಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಚಹಾವು ಟ್ಯಾನಿನ್ಗಳು ಮತ್ತು ಪಾಲಿಫಿನಾಲ್ಗಳು ಎಂಬ ಸಂಯುಕ್ತಗಳನ್ನು ಹೊಂದಿರುತ್ತದೆ. ಇವು ದೇಹವು ಹೀರಿಕೊಳ್ಳುವ ಕಬ್ಬಿಣದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಕಬ್ಬಿಣಾಂಶ ಕೊರತೆಯಾದರೆ ದೇಹದಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಅದರಲ್ಲೂ ಗರ್ಭಿಣಿಯರು ಹಾಗೂ ಹದಿಹರೆಯದವರು ಊಟದ ನಂತರ ಟೀ ಕುಡಿದರೆ ಹಾನಿಕಾರಕವಾಗಬಹುದು.
ಇನ್ನು ಮಸಾಲಾ ಚಹಾದಲ್ಲಿರುವ ಮಸಾಲೆಗಳು ಕೆಲವು ಜೀರ್ಣಕಾರಿ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂದು ತಜ್ಞರು ಹೇಳುತ್ತಾರೆ. ಆದಾಗ್ಯೂ, ನೀವು ನಿಯಮಿತವಾಗಿ ಊಟದ ನಂತರ ಚಹಾ ಕುಡಿಯಬಾರದು. ಊಟ ಮಾಡಿದ ಕನಿಷ್ಠ 30 ರಿಂದ 60 ನಿಮಿಷಗಳ ನಂತರ ಚಹಾ ಕುಡಿಯುವುದು ಉತ್ತಮ ಎಂದು ವೈದ್ಯರು ಹೇಳುತ್ತಾರೆ.
ಗಮನಿಸಿ: ಈ ಮಾಹಿತಿಯು ಜಾಗೃತಿ ಉದ್ದೇಶಕ್ಕಾಗಿ ಮಾತ್ರ. ನೀವು ಯಾವುದೇ ಮಾನಸಿಕ ಅಥವಾ ದೈಹಿಕ ಸಮಸ್ಯೆಗಳನ್ನು ಅನುಭವಿಸಿದರೆ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ.