

ಧ್ಯಾನಮುದ್ರೆಯಲ್ಲಿ ಧ್ಯಾನ ಮಾಡುವ ವಿಧಾನ ಹಾಗೂ ಪ್ರಯೋಜನಗಳನ್ನು ತಿಳಿಸಿ.
| ರಾಮಚಂದ್ರ ಬೆಂಗಳೂರು (20 ವರ್ಷ)
ಧ್ಯಾನವು ಪ್ರಾಚೀನ ಭಾರತೀಯ ವಿಧಾನವಾಗಿದ್ದು, ಬಹಳ ಹಿಂದಿನಿಂದಲೂ ಬಳಕೆಯಲ್ಲಿದೆ. ಧ್ಯಾನಮುದ್ರೆಯನ್ನು ಸಮಾಧಿಮುದ್ರೆ ಎಂದೂ ಕರೆಯುತ್ತಾರೆ. ಧ್ಯಾನವು ಯೋಗದ ಪ್ರಮುಖ ಭಾಗವಾಗಿದೆ. ಇದಕ್ಕೆ ಆಳವಾದ ಮಾನಸಿಕ ಏಕಾಗ್ರತೆಯ ಅಗತ್ಯವಿರುತ್ತದೆ. ಮನಸ್ಸನ್ನು ಆಲೋಚನೆಗಳಿಂದ ತೆಗೆದುಹಾಕಬೇಕು.
ವಿಧಾನ: ‘ಸಮಂ ಕಾಯ ಶಿರೋಗ್ರೀವಂ’ ಎಂದರೆ ಶಿರಸ್ಸು, ಬೆನ್ನು, ಕುತ್ತಿಗೆ, ನೇರ. ಪದ್ಮಾಸನ / ವಜ್ರಾಸನ / ಸ್ವಸ್ತಕಾಸನ / ಸುಖಾಸನ / ವೀರಾಸನ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಜಮಖಾನದ ಮೇಲೆ ಎರಡೂ ಕಾಲುಗಳನ್ನು ಹಿಂದಕ್ಕೆ ನಿಧಾನವಾಗಿ ಮಡಚಿ ಕುಳಿತುಕೊಳ್ಳಿ. ಕಾಲಿನ ಹೆಬ್ಬೆರಳು ಒಟ್ಟಿಗಿರಲಿ. ಎಡಗೈ ಮೇಲೆ ಬಲಗೈಯನ್ನು ಇರಿಸಿ ಧ್ಯಾನಮುದ್ರೆ ಮಾಡಿ ಕಣ್ಣು ಮುಚ್ಚಿರಿ. ಈ ಸ್ಥಿತಿಯಲ್ಲಿ ಆಂತರಿಕ ವಿಷಯಗಳಾದ ಶ್ವಾಸೋಚ್ಛಾ್ವಸವನ್ನು ಗಮನಿಸುತ್ತಾ ಸುಮಾರು 5ರಿಂದ 10 ನಿಮಿಷಗಳ ಕಾಲ ಧ್ಯಾನದ ಸ್ಥಿತಿಯಲ್ಲಿರಿ. ಆಮೇಲೆ ವಿಶ್ರಮಿಸಿ. ಆಮೇಲೆ ಓಂಕಾರ / ಇಷ್ಟದೇವರ ಚಿತ್ರ / ಪ್ರತಿಮೆ ಭ್ರೂಮಧ್ಯ ಅಥವಾ ನಾಸಾಗ್ರದಲ್ಲಿ ದೃಷ್ಟಿಯಿರಿಸಿ ಧ್ಯಾನ ಮಾಡಬಹುದು.
ಈ ಧ್ಯಾನವನ್ನು ಗುರುಮುಖದಲ್ಲೇ ಅಭ್ಯಸಿಸಬೇಕೆಂಬ ನಿಯಮವಿದೆ.
ಪ್ರಯೋಜನ: ಮನಸ್ಸಿನ ಆಂತರಿಕ ಸ್ವರೂಪವನ್ನು ಸಂಪೂರ್ಣವಾಗಿ ಶುದ್ಧೀಕರಿಸುತ್ತದೆ ಮತ್ತು ಅದನ್ನು ಸಕಾರಾತ್ಮಕತೆಗೆ ಕರೆದೊಯ್ಯುತ್ತದೆ. ಮನಸ್ಸಿಗೆ ಆಳ ವಿಶ್ರಾಂತಿ ಮತ್ತು ನೆಮ್ಮದಿ ದೊರಕುತ್ತದೆ. ಹಾಗೂ ಮನಸ್ಸು ಅರಳುತ್ತದೆ. ಸಹಜಸ್ಥಿತಿಯಾದ ಆನಂದಸ್ವರೂಪವನ್ನು ಪಡೆಯಲು ಧ್ಯಾನದಿಂದ ಸಾಧ್ಯವಾಗುತ್ತದೆ. ಈ ಮುದ್ರೆಯ ಮಹತ್ವವು ಏಕಾಗ್ರತೆಗೆ ತರುವುದು.
ಗಮನಿಸಿ. ಧ್ಯಾನದ ವೇಳೆ ಮನಸ್ಸು ಪೂರ್ಣ ಎಚ್ಚರದ ಸ್ಥಿತಿಯಲ್ಲಿರಬೇಕು. ನಿದ್ರಿಸಬಾರದು. ಬೇರೆ ಬೇರೆ ವಿಷಯಗಳ ಆಲೋಚನೆ, ಚಿಂತೆ ಸಲ್ಲದು.
ನಾನು ಪದವಿ ವಿದ್ಯಾರ್ಥಿ. ಪರೀಕ್ಷಾಕಾಲದಲ್ಲಿ ತೀರ ಅಗತ್ಯದ ಯಾವ ಯೋಗ ಮತ್ತು ಮುದ್ರೆಗಳನ್ನು ಮಾಡಬಹುದು?
| ಅರ್ಪಿತಾ ಹಾಸನ (18 ವರ್ಷ)
ವಿದ್ಯಾರ್ಥಿಗಳು ಪರೀಕ್ಷೆ ಬರುವ ಸಂದರ್ಭದಲ್ಲಿ ಕೊನೆಪಕ್ಷ 10ರಿಂದ 20 ನಿಮಿಷಗಳಾದರೂ ಸೂಕ್ತವಾದ ವ್ಯಾಯಾಮ ಯೋಗಾಸನಗಳಾದ ಅರ್ಧಚಕ್ರಾಸನ, ಪಾದಹಸ್ತಾಸನ, ಶಶಾಂಕಾಸನ, ಉಷ್ಟ್ರಾಸನ, ಸರ್ವಾಂಗಾಸನ, ಮಕರಾಸನ, ಅಧೋಮುಖ ಶ್ವಾನಾಸನ, ಶವಾಸನ, ಪ್ರಾಣಾಯಾಮ, ಧ್ಯಾನ ಅಭ್ಯಾಸ ಮಾಡಿ ಹಾಗೂ ಪ್ರಾಣಶಕ್ತಿ ಹಾಗೂ ಚೈತನ್ಯಶಕ್ತಿ ಹೆಚ್ಚಿಸುವ ಪ್ರಾಣಮುದ್ರೆ (10 ನಿಮಿಷ), ಏಕಾಗ್ರತೆಗೆ ಇರುವ ಜ್ಞಾನಮುದ್ರೆ (10 ನಿಮಿಷ) ಹಾಗೂ ಜ್ಞಾಪಕಶಕ್ತಿ ವೃದ್ಧಿಸುವ ಹಾಕಿನೀ ಮುದ್ರೆ (10 ನಿಮಿಷ) ಅಭ್ಯಾಸ ಮಾಡಿ. ಮುದ್ರೆಗಳನ್ನು ಯಾವಾಗ ಬೇಕಾದರೂ ಯಾವ ಹೊತ್ತಿನಲ್ಲಿ ಅಭ್ಯಾಸ ಮಾಡಬಹುದು. ಓದಿನ ಸಂದರ್ಭದಲ್ಲಿ ಆಯಾಸವಾದಾಗ, ಸಣ್ಣ ಶವಾಸನ ಅಭ್ಯಾಸ ಮಾಡಿ. ಓದುವ ಮುಂಚೆ ಕುರ್ಚಿಯಲ್ಲಿ ಕುಳಿತು ಉಸಿರನ್ನು ಗಮನಿಸುವ ಚಿಕ್ಕ ಧ್ಯಾನ (ಮೂರು ನಿಮಿಷ) ಅಭ್ಯಾಸ ಮಾಡಿ. ವಿದ್ಯಾರ್ಥಿಗಳು ಯಾವಾಗಲೂ ದೇಹಕ್ಕೆ ಯಾವ ರೀತಿ ಉತ್ತಮ ಆಹಾರ ನೀಡುತ್ತಾರೆ ಅದೇ ರೀತಿ ಮನಸ್ಸಿಗೂ ಒಳ್ಳೆಯ ಆಹಾರ ನೀಡಿ. ನಿರಂತರ ಯೋಗ-ಧ್ಯಾನ-ಪ್ರಾಣಾಯಾಮಗಳಿಂದ ಸಂಪೂರ್ಣ ಯಶಸ್ಸು ಸಾಧ್ಯ.