ಧನ್ವಂತರಿ: ಕರೊನಾದ ಅವಗುಣಗಳಲ್ಲಿ ಒಂದಿಷ್ಟು ಗುಣ...ಜಗತ್ತಿಗೇ ಶಿಸ್ತಿನ ಪಾಠ ಕಲಿಸಿದ ಕ್ಷಣ

Giridhar Kaje
Published on
ಕಳೆದ ಕೆಲವು ತಿಂಗಳುಗಳು ಜಗತ್ತನ್ನೇ ಬದಲಿಸಿದೆ. ಹೆಚ್ಚೇಕೆ ಬದುಕಿನ ಅರ್ಥವನ್ನೇ ಬದಲಿಸಿದೆ! ಜಗತ್ತಿನಲ್ಲಿ ಆರ್ಥಿಕ ತಲ್ಲಣ, ವೃತ್ತಿಗೆ ಕುತ್ತು, ಜೀವನಶೈಲಿಯಲ್ಲಿ ಮಾರ್ಪಾಡು, ಮನಸ್ಸಿನ ಸ್ಥಿತಿಗತಿಯಲ್ಲಿ ಏರುಪೇರು ಚಿಂತನಾವಿಧಾನದಲ್ಲಿ ಬದಲಾವಣೆ, ಮಾನವನ ಸ್ವಾತಂತ್ರ್ಯಕ್ಕೆ ಹೊಸ ಅರ್ಥ, ಓಡಾಡುವುದಕ್ಕೆ ಕಡಿವಾಣ ಹೀಗೆ ಎಲ್ಲವನ್ನೂ ಕಂಡಿದ್ದೇವೆ. ಕರೊನಾ ವೈರಾಣು ವಿಶ್ವವ್ಯಾಪಿಯಾಗಿ ಮಾಡಿದ ಅವಾಂತರಗಳು ಒಂದಲ್ಲ ಎರಡಲ್ಲ. ಇವೆಲ್ಲವೂ ಅವಗುಣಗಳೇ. ಹಾಗೆಂದು ಕೇವಲ ಋಣಾತ್ಮಕ ಅಂಶಗಳು ಮಾತ್ರವೇ ಈ ಕಾಲದಲ್ಲಿ ಸಂಭವಿಸಿದ್ದಲ್ಲ. ‘ಅವಗುಣದಲ್ಲಿ ಗುಣ’ ಎಂಬ ವಿಶೇಷವಾದ ಮಾತೊಂದಿದೆ. ಅನೇಕ ತೊಂದರೆಗಳು ಘಟಿಸಿದ್ದರೂ ಅದರಲ್ಲಿ ಕೆಲವೊಂದು ಒಳ್ಳೆಯ ಅಂಶಗಳಿವೆ ಎಂಬುದೇ ಈ ಮಾತಿನ ತಾತ್ಪರ್ಯ.

ಹೌದು, ಕರೊನಾ ಕಲಿಸಿದ ಪಾಠಗಳು ಅನೇಕ. ಜಗತ್ತು ಅದೆತ್ತಲೋ ಸಾಗುತ್ತಿತ್ತು. ‘ದುಡ್ಡಿದ್ದವನೇ ದೊಡ್ಡಪ್ಪ’ ಎನ್ನುವ ರೀತಿಯಲ್ಲಿ ಜನರ ನಡೆನುಡಿಯಿತ್ತು. ಎಲ್ಲದರಲ್ಲೂ ಜನರು ತಪ್ಪನ್ನು ಹುಡುಕುತ್ತಿದ್ದರು. ದೂರುವುದೇ ಹಲವರ ದೈನಂದಿನ ಚಟುವಟಿಕೆಯಾಗಿತ್ತು. ವೃತ್ತಿ ಸರಿಯಿಲ್ಲ, ಮನೆ ಸ್ವಂತದ್ದಿಲ್ಲ, ರಸ್ತೆ ಹಾಳಾಗಿದೆ, ವಿದ್ಯುತ್ ವ್ಯವಸ್ಥೆ ಕಳಪೆ, ವಾಹನ ಸೌಕರ್ಯ ಕೆಟ್ಟದಾಗಿದೆ, ಸಂಬಳ ಸಾಕಾಗುವುದಿಲ್ಲ - ಹೀಗೆ ಪ್ರತಿನಿತ್ಯ ನೂರಾರು ಚಿಂತೆಗಳು. ಈಗ ಅವೆಲ್ಲವನ್ನೂ ಬಿಟ್ಟು, ‘ಬದುಕಿದರೆ ಸಾಕಪ್ಪ’ ಎನ್ನುವ ಮನಃಸ್ಥಿತಿ. ‘ಇವ್ಯಾವುದೂ ಬೇಡ, ಕುಟುಂಬದ ಜೊತೆಯಿದ್ದರೆ ಸಾಕು. ಬಂಧುಗಳು ಬೇಕು, ಹಿರಿಯರು ನಮ್ಮೊಡನಿರಬೇಕು, ಮಕ್ಕಳೊಡನೆ ಕಾಲ ಕಳೆಯಬೇಕು’ ಎಂಬೆಲ್ಲ ಇಂಗಿತಗಳಿಗೆ ಜೀವ ಕೊಟ್ಟ ಕಾಲವಿದು. ಬಿಡುವು, ವಿಶ್ರಾಂತಿಗಳಿಗೆ ಮೆರುಗು ನೀಡಿದ ಸನ್ನಿವೇಶವಿದು. ಬದುಕಿನಲ್ಲಿ ನಿಜವಾಗಿ ಮುಖ್ಯವಾದುದು ಯಾವುದು ಎಂಬುದನ್ನು ಎಲ್ಲರೂ ಚೆನ್ನಾಗಿ ಅರ್ಥೈಸಿಕೊಂಡ ಸಮಯವಿದು. ಕೌಟಂಬಿಕ ಸಂಬಂಧಗಳಿಗೆ ಅತುಲ್ಯವಾದ ಮೌಲ್ಯವಿದೆ. ಮನುಜರ ನಡುವಿನ ಬಾಂಧವ್ಯ, ಪರಸ್ಪರ ಪ್ರೀತಿ ವಿಶ್ವಾಸಗಳಿಗೆ ಬೆಲೆ ಕಟ್ಟಲಾಗದು ಎಂಬುದು ದಟ್ಟವಾಗಿ ಮನದಟ್ಟಾದ ಮುಹೂರ್ತವಿದು. ಜೀವನದಲ್ಲಿ ಗ್ಯಾಜೆಟ್​ಗಳೇ ಮುಖ್ಯವಲ್ಲ, ಪರಸ್ಪರ ಸಂಬಂಧಗಳೇ ಮನಸ್ಸಿಗೆ ನೆಮ್ಮದಿಯನ್ನು ನೀಡುವುದು ಎಂಬುದು ಅನುಭವವಾದ ಅವಧಿಯಿದು. ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ಕಾಲಕ್ಷೇಪ ಮಾಡುವಂತಾಗಿ ಮಾನವ ಸಂಬಂಧಗಳಿಗೆ ಹೊಸ ಭಾಷ್ಯ ಬರೆದ ಮನ್ವಂತರವಿದು. ವೃತ್ತಿ ಬದುಕಿನ ಮೌಲ್ಯವರ್ಧನೆಗೆ ಚಿಂತನ-ಮಂಥನ ನಡೆಸಲು ಅವಕಾಶ ನೀಡಿದ ವಿರಾಮವಿದು. ಇದನ್ನೂ ಓದಿ: ಧನ್ವಂತರಿ: ಆತ್ಮಬಲವೊಂದಿದ್ದರೆ ಸಾಕು ನೋಡಿ..

ಜೀವನದಲ್ಲಿ ಬರಿಯ ಕೆಲಸ ಮಾತ್ರ ಇರುವುದಲ್ಲ; ಸಂಗೀತ, ಕಲೆಗಳೂ ಬೇಕೆಂಬುದು ಮನದಟ್ಟಾದ ಕಾಲಘಟ್ಟವಿದು. ಬೇರೆ ದಾರಿಯಿಲ್ಲದೆ ಮನೆಯಲ್ಲಿ ಧೂಳು ಹಿಡಿಯುತ್ತಿದ್ದ ಸಂಗೀತ ಹಾಗೂ ಕಸೂತಿಯ ಉಪಕರಣಗಳು, ಗುಡಿಕೈಗಾರಿಕೆಯ ವಸ್ತುಗಳು ಹೊಳಪು ಕಂಡ ಹೊತ್ತಿದು. ಮಾರುಕಟ್ಟೆಯ ಸಿದ್ಧ ಹಾಳುಪಾಳು ಆಹಾರಕ್ಕೆ ಜೊಲ್ಲು ಸುರಿಸುವುದನ್ನು ನಿಲ್ಲಿಸಿ ಪರಂಪರಾಗತ ಆಹಾರದ ರುಚಿಯನ್ನು ಪುನಃ ಕಂಡುಕೊಂಡು ನಾಲಿಗೆಗಳು ಶುದ್ಧವಾದ ಜೀವನ ಸಂಧ್ಯೆಯಿದು. ನೈರ್ಮಲ್ಯ ಎಂಬುದರ ಅರ್ಥವ್ಯಾಪ್ತಿ ಪೂರ್ಣ ಪ್ರಮಾಣದಲ್ಲಿ ಗ್ರಹಿಕೆಯಾಗಿ ಶುದ್ಧ ಕೈಗಳು, ಸ್ವಚ್ಛ ದೇಹ, ಪರಿಶುದ್ಧ ಆತ್ಮ, ಮನಸ್ಸು, ಪರಿಸರ, ಪ್ರಕೃತಿಗಳು ಬೇಕೆಂಬ ತುಡಿತ ಅನುರಣಿಸಿ ಸಹಜ ಬದುಕಿನ ಮೂಲ ಸೆಲೆಯತ್ತ ನಮ್ಮೆಲ್ಲರನ್ನೂ ಕೊಂಡೊಯ್ದ ಸಂಕ್ರಮಣ ಘಟ್ಟವಿದು. ಸ್ವಾತಂತ್ರ್ಯವೆಂದರೆ ಸ್ವೇಚ್ಛೆಯಲ್ಲ, ಜೀವನಕ್ಕಿರಬೇಕಾದ ನೀತಿನಿಯಮಗಳು, ರೂಪುರೇಷೆಗಳು, ಅನುಸರಿಸಬೇಕಾದ ಪದ್ಧತಿಗಳು ಎಲ್ಲವನ್ನೂ ಹೇಳಿಕೊಟ್ಟ ಅಪೂರ್ವ ಕ್ಷಣಗಳಿವು. ಯಾರು ಹೇಳಿದರೂ ಕೇಳದಿದ್ದ ಇಡೀ ಜಗತ್ತಿಗೆ ಶಿಸ್ತಿನ ಪಾಠ ಹೇಳಿಕೊಟ್ಟ, ಚಟಗಳನ್ನು ಬಿಟ್ಟು ಒಳ್ಳೆಯ ಹವ್ಯಾಸಗಳನ್ನು ಕಲಿಸಿದ ಇತಿಹಾಸದ ಘಟನೆಯಾಗಿ ಸಾಕ್ಷೀಕರಿಸಿದೆ. ಇವೆಲ್ಲ ಪಾಠಗಳು ಮಾನವರನ್ನು ಔನ್ನತ್ಯದೆಡೆಗೆ ಒಯ್ಯಲಿದೆ. ಪಾಠ ಕಲಿತರೆ ಜಗತ್ತಿನ ಭವಿಷ್ಯ ಉಜ್ವಲವಾಗಲಿದೆ.

ಪಂಚಸೂತ್ರಗಳು
  • ಹಸಿಶುಂಠಿ: ಜ್ವರವಿದ್ದಾಗ ಉಪಕಾರಿ.
  • ಒಣಶುಂಠಿ: ದೇಹದ ನೋವು ನಿವಾರಕ.
  • ಎಲಚಿ ಹಣ್ಣು: ದೇಹವನ್ನು ತಂಪಾಗಿಸುತ್ತದೆ.
  • ಮೆಕ್ಕೆಜೋಳ: ತ್ವಚೆಯನ್ನು ಕೋಮಲವಾಗಿಸುತ್ತದೆ.
  • ನೆಕ್ಕಿಗಿಡದ ಎಲೆ: ಕೀಲುಗಳ ಉರಿಯೂತ ಗುಣಕಾರಿ.
ಕೊನೇಹನಿ: ಅಶ್ವಗಂಧದ ಎಲೆಗಳನ್ನು ಅರೆದು ಲೇಪ ಹಚ್ಚಿದರೆ ಕುರ ಬೇಗನೆ ಗುಣವಾಗುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net