

ಒಂದು ವಿಚಾರವನ್ನು ನಾವು ಸ್ಪಷ್ಟವಾಗಿ ತಿಳಿಯಲೇಬೇಕು. ಸಮಸ್ಯೆ ವೃದ್ಧರಲ್ಲ, ವೃದ್ಧಾಪ್ಯ! ವೃದ್ಧರನ್ನು ಕಿರಿಯರು ಪ್ರೀತಿಸುತ್ತಾರೆ. ಆದರೆ ವೃದ್ಧಾಪ್ಯದ ಯಾತನೆಗಳು ಅವರಿಗೆ ಸಹ್ಯವಾಗುವುದಿಲ್ಲ. ನೂರು ವರ್ಷ ಬದುಕಿ ಎಂದಾಗ ಇಷ್ಟಪಡುವ ಬದುಕು ನೂರುವರ್ಷಗಳದ್ದಾಗಿರಲಿ ಎಂಬ ಅರ್ಥವಿದೆಯೇ ಹೊರತು ನರಳಾಡಿಕೊಂಡು ಕಷ್ಟಪಟ್ಟು ನೂರುವರ್ಷ ತಳ್ಳಿ ಎಂಬರ್ಥವಿಲ್ಲ. ವೃದ್ಧಾಪ್ಯದಲ್ಲಿ ಇರುವ ತೊಂದರೆಯೆಂದರೆ ಪರಾವಲಂಬನೆ. ಆರೋಗ್ಯ ಚೆನ್ನಾಗಿದ್ದರೆ, ಗಟ್ಟಿಮುಟ್ಟಾಗಿ ಓಡಾಡುತ್ತಿದ್ದರೆ ವೃದ್ಧಾಪ್ಯವು ಬಾಧಿಸುವುದಿಲ್ಲ, ಎಲ್ಲರಿಗೂ ಅಪ್ಯಾಯಮಾನವಾಗುತ್ತದೆ. ಬದುಕಿನಲ್ಲೂ ನರ್ವಸ್ ನೈಂಟಿಯನ್ನು ರೋಚಕವಾಗಿ ಮಾರ್ಪಡಿಸುವುದು ಸಾಧ್ಯವಿದೆ.
ವೃದ್ಧರಾಗಿದ್ದಾರೆಂದು ಯಾರನ್ನೂ ವೃದ್ಧಾಶ್ರಮಕ್ಕೆ ನೂಕಿಬಿಡುವುದಿಲ್ಲ. ವೃದ್ಧಾಶ್ರಮಗಳಲ್ಲಿ ಎಷ್ಟೇ ಸೌಕರ್ಯಗಳಿದ್ದರೂ ಅದೇನೂ ಅಭಿವೃದ್ಧಿಯ ಸಂಕೇತವಲ್ಲ. ವೃದ್ಧಾಪ್ಯದಲ್ಲಿ ಆರೋಗ್ಯ ಕೈಕೊಟ್ಟು ಇನ್ನೊಬ್ಬರನ್ನು ಅವಲಂಬಿಸಬೇಕಾಗಿ ಬಂದಾಗ ಕಷ್ಟಕಾರ್ಪಣ್ಯಗಳು ಇಮ್ಮಡಿಗೊಳ್ಳುತ್ತವೆ. ವೃದ್ಧರ ಬಗ್ಗೆ ಎಷ್ಟೇ ಗೌರವ ಪ್ರೀತಿಯಿದ್ದರೂ ‘ಅನಿವಾರ್ಯ ಕಾರಣಗಳಿಂದಾಗಿ’ ಎಂಬ ಹಣೆಪಟ್ಟಿಯೊಂದಿಗೆ ವೃದ್ಧಾಶ್ರಮಕ್ಕೆ ಸೇರಿಸಿಬಿಡುತ್ತಾರೆ. ವೃದ್ಧಾಪ್ಯವನ್ನು ಸ್ವಾಸ್ಥ್ಯುಯವಾಗಿ ಪರಿವರ್ತಿಸಿದರೆ ಬಹುತೇಕ ಸಂದರ್ಭಗಳಲ್ಲಿ ಈ ಹಾದಿಯನ್ನು ತಪ್ಪಿಸಬಹುದು. ಸಂಬಂಧಗಳಿಗೆ ಬೆಲೆ ಕೊಡದ ಮಕ್ಕಳು ಮೊಮ್ಮಕ್ಕಳಿದ್ದರೆ ಕನಿಷ್ಠಪಕ್ಷ ಒಂಟಿ ಸಲಗಗಳಂತೆ ಸ್ವಾಭಿಮಾನದಿಂದ ಬದುಕಬಹುದು. ಜೀವನದ ಪೂರ್ವಾರ್ಧದಲ್ಲಿ ಆಯುರ್ವೆದ ಹೇಳಿದಂತೆ ಬಾಳಿದರೆ ವೃದ್ಧಾಪ್ಯ ಸಮಸ್ಯೆಯಾಗುವುದಿಲ್ಲ.