

ಕಾಲಾಂತರಗಳಲ್ಲೂ ಯಾವುದೇ ಬದಲಾವಣೆ ಇಲ್ಲದೆಯೇ ಸ್ವಸ್ಥ ಬದುಕಿಗಾಗಿ ಜನರೆಲ್ಲ ಅನುಸರಿಸಲೇಬೇಕಾದ ಸದ್ವೃತ್ತವನ್ನು ಆಯುರ್ವೆದ ವಿವರಿಸಿದ ಪರಿ ಅನನ್ಯವಾದುದು. ತಿಳಿದೋ ತಿಳಿಯದೆಯೋ ಅಪಕಾರ ಮಾಡಿದವರಿಗೂ ಉಪಕಾರವನ್ನೇ ಮಾಡಬೇಕು. ಅದರಲ್ಲಡಗಿದೆ ಮನುಷ್ಯತ್ವದ ಅಂತರಾಳ. ಎಲ್ಲ ಮನುಜರನ್ನು ತನ್ನದೇ ಮಕ್ಕಳೆಂಬಂತೆ ಅಕ್ಕರೆಯಿಂದ ಇದ್ದು ವಿರೋಧಿಗಳಿಂದ ಸದಾ ದೂರವಿರಬೇಕು. ವೈರಿಗಳ ಸನಿಹದಲ್ಲಿ ಇದ್ದರೆ ‘ದುರ್ಜನರ ಸಂಗ, ಅಭಿಮಾನ ಭಂಗ’ ಎಂಬಂತಾಗುತ್ತದೆ ಎನ್ನುವುದರ ಅರಿವಿರಬೇಕು. ವಿನಯವಂತರು, ಬುದ್ಧಿವಂತರು, ವಿದ್ಯಾವಂತರು, ಆದರ್ಶ ಕುಟುಂಬದಲ್ಲಿ ಜನಿಸಿರುವವರು, ಹಿರಿಯರು, ಸಿದ್ಧಿ ಪಡೆದವರು ಮತ್ತು ಗುರುಗಳ ಉಪಾಸನೆ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರಬೇಕು.
ಆಯುರ್ವೆದ ಹೇಳಿದ ಗುಪ್ತಾಚಾರಗಳು ಇಲ್ಲಿಗೇ ನಿಲ್ಲುವುದಿಲ್ಲ. ತನಗೆ ಯಾರಲ್ಲೆಲ್ಲ ಹಗೆತನ ಇದೆಯೆಂಬುದನ್ನು ಬೇರೆಯವರಲ್ಲಿ ಹೇಳಿಕೊಳ್ಳಬಾರದು. ಒಬ್ಬ ವ್ಯಕ್ತಿಗಿರುವ ಶತ್ರುಗಳನ್ನು ಇತರರ ಬಳಿ ರ್ಚಚಿಸಲೂಬಾರದು. ತನಗಾದ ಅವಮಾನವನ್ನು ಹಾಗೂ ತನ್ನೊಡನೆ ಸ್ನೇಹ ತೋರದ ರಾಜನ ನಡವಳಿಕೆಯನ್ನು ಊರೆಲ್ಲ ಹೇಳಿಕೊಂಡು ತಿರುಗಬಾರದು. ಅನಗತ್ಯವಾಗಿ ಇತರರಿಗೆ ಸಾಕ್ಷಿಯಾಗಿ, ಜಾಮೀನುದಾರರಾಗಿ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆಯಕೂಡದು. ತಪ್ಪೆಸಗಿದವರಿಗೆ ಅಪ್ರಾಮಾಣಿಕ ಖಾತರಿದಾರರಾಗಿ ಬಿಡುಗಡೆಗೆ ನೆರವಾಗಬಾರದು. ಜೂಜಾಟದ ವ್ಯಸನದಿಂದ ದೂರವಿರಬೇಕು ಎಂದಿದೆ ಭಾವಪ್ರಕಾಶವೆಂಬ ಗ್ರಂಥ. ತನ್ನದೇ ರಹಸ್ಯವನ್ನು ಹೊರಗೆಡಹುವ ನಾಲಿಗೆ ಚಾಪಲ್ಯಕ್ಕೆ ನಿಯಂತ್ರಣ ಹೇರಬೇಕು, ಇನ್ನೊಬ್ಬರನ್ನು ಹೀಯಾಳಿಸಿ ಅವಮಾನಿಸುವ ಬುದ್ಧಿಯೂ ಇರಕೂಡದು, ತನ್ನನ್ನು ಇತರರೆದುರು ಹೊಗಳಿಕೊಳ್ಳುತ್ತ ದಕ್ಷತೆಯಿಲ್ಲದೆ ಅನಾಗರಿಕ ವರ್ತನೆಯೊಂದಿಗೆ ಇತರರ ಬಗ್ಗೆ ಅಸೂಯೆಪಡಕೂಡದು ಎಂದು ಚರಕಸಂಹಿತೆ ಹೇಳಿದ್ದೂ ಅದೆಷ್ಟು ಮಾರ್ವಿುಕವಾಗಿದೆ.