

ಪ್ರಕೃತಿ ಯಾವ ರೀತಿಯಾಗಿ ನಮಗೆ ಅದನ್ನು ನೀಡಿರುತ್ತದೆಯೋ ಅದೇ ರೂಪದಲ್ಲಿಯೇ ತೆಂಗನ್ನು ಬಳಕೆ ಮಾಡುವುದು ಆರೋಗ್ಯಕ್ಕೆ ಹೆಚ್ಚು ಯುಕ್ತವಾದುದು. ತೆಂಗಿನಕಾಯಿಯನ್ನು ಹಸಿಯಾಗಿಯೇ ಉಪಯೋಗಿಸುವುದು ಉತ್ತಮ. ಹುರಿದು, ಕರಿದು, ಬೇಯಿಸುವುದರಿಂದ ಪೋಷಕಾಂಶಗಳು ನಷ್ಟವಾಗುತ್ತದೆ. ಹಸಿಯಾಗಿಯೇ ತೆಂಗಿನ ತುರಿ, ತೆಂಗಿನಕಾಯಿ ಹಾಲು, ಎಳನೀರು ಬಳಕೆ ಮಾಡುವುದರಿಂದ ಅನೇಕ ತೊಂದರೆಗಳನ್ನು ಗುಣಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ಇದರ ಸೇವನೆಯು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ನ್ನು ಹೆಚ್ಚಿಸುತ್ತದೆ. ಉತ್ತಮ ಕೊಬ್ಬು ದೇಹಕ್ಕೆ ಅವಶ್ಯ. ನಮ್ಮ ದೇಹದ ಅನೇಕಾನೇಕ ಕಾರ್ಯಗಳಿಗೆ ಕೊಬ್ಬು ಬೇಕೇ ಬೇಕು. ಆದರೆ ಯಾವ ರೀತಿಯಾದ ಕೊಬ್ಬನ್ನು ನಾವು ಸೇವಿಸುತ್ತಿದ್ದೇವೆ ಅಥವಾ ಯಾವ ರೀತಿಯ ಕೊಬ್ಬನ್ನು ಉತ್ಪತ್ತಿ ಮಾಡುವ ಆಹಾರಪದಾರ್ಥವನ್ನು ಸೇವಿಸುತ್ತಿದ್ದೇವೆ ಎಂಬುದು ಬಹಳ ಮುಖ್ಯವಾದುದು.
ಹೃದಯದ ಸಮಸ್ಯೆ ಇರುವವರು, ಮಧುಮೇಹ ಇರುವವರು ತೆಂಗಿನಕಾಯಿ ಸೇವನೆ ಮಾಡಬಾರದೆಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ ಬೊಜ್ಜನ್ನು ಕರಗಿಸಲು, ಹೃದಯದ ಉತ್ತಮ ಕಾರ್ಯಕ್ಕಾಗಿ, ಮಿದುಳಿನ ಕಾರ್ಯಕ್ಷಮತೆಯ ಹೆಚ್ಚಳಕ್ಕಾಗಿ, ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಉರಿಯೂತವನ್ನು ಕಡಿಮೆ ಮಾಡಲು ತೆಂಗು ಸಹಕಾರಿ. ತೆಂಗಿನಕಾಯಿ ಹಾಲನ್ನು ಸೇವನೆಯು ದೇಹದಲ್ಲಿ ಕೂಡಲೇ ಶಕ್ತಿಯನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡುತ್ತದೆ. ಹೆಚ್ಚು ಕಾಲ ಹೊಟ್ಟೆ ತುಂಬಿದಂತಹ ಅನುಭವವನ್ನು ಮತ್ತು ಸೇವಿಸಿದ ನಂತರ ಸಂತೃಪ್ತ ಭಾವನೆಯನ್ನು ಮೂಡಿಸುತ್ತದೆ.
ಇದರಲ್ಲಿರುವ ಎಣ್ಣೆಯ ಅಂಶ ಬಹಳ ಒಳ್ಳೆಯದು. ಚರ್ಮದ ಆರೋಗ್ಯವನ್ನೂ ಹೆಚ್ಚಿಸುತ್ತದೆ. ಇದರ ಕುದಿಬಿಂದು ಹೆಚ್ಚು ಇರುವುದರಿಂದ ಇದನ್ನು ಅಡುಗೆಗೆ ಬಳಸಲು ಅನುಕೂಲಕರವಾಗಿದೆ. ಶೀತದಿಂದ ಕುಗ್ಗಿಸುವಂತಹ ವಿಧಾನದಿಂದ ವಿಶಿಷ್ಟವಾಗಿ ಸಿದ್ಧಪಡಿಸುವಂತಹ ಎಕ್ಸಾ್ಟ್ರ ವರ್ಜಿನ್ ಕೋಕೋನಟ್ ಆಯಿಲ್ ಇತ್ತೀಚೆಗೆ ಪ್ರಚಲಿತಗೊಳ್ಳುತ್ತಿದೆ. ಆರೋಗ್ಯದ ಹಿತದೃಷ್ಟಿಯಿಂದ ಇದು ಅತ್ಯುತ್ತಮವಾಗಿದ್ದು; ಇದು ಯಾವುದೇ ರೀತಿಯ ಹೈಡ್ರೋಜನೀಕರಣ, ಸಂಸ್ಕರಣ, ಕೃತಕ ಪರಿಮಳ ವಿಧಾನಕ್ಕೆ ಒಳಪಡುವುದಿಲ್ಲ.
ತನ್ನ ಸ್ವತಂತ್ರ ಪರಿಮಳ ಮತ್ತು ತಾಜಾತನವನ್ನು ಉಳಿಸಿಕೊಂಡೇ ತಯಾರಾಗಿರುತ್ತದೆ. ಕೂದಲಿನ ಆರೋಗ್ಯವೃದ್ಧಿಗೆ ಇದು ಉಪಯುಕ್ತವಾದುದು. ಒಣ ತ್ವಚೆ ಮತ್ತು ಒಣ ಕೂದಲು ಸಮಸ್ಯೆಯಿಂದ ಪಾರು ಮಾಡಬಲ್ಲದು. ಗಾಯಗಳನ್ನು ವೇಗವಾಗಿ ಗುಣಪಡಿಸಬಲ್ಲದು. ಮೊಡವೆ ಸಮಸ್ಯೆ ಇದ್ದಲ್ಲಿ ಪ್ರತಿನಿತ್ಯ ತ್ವಚೆಗೆ ಎಕ್ಸಾ್ಟ್ರ ವರ್ಜಿನ್ ಕೋಕೋನಟ್ ಆಯಿಲ್ನಿಂದ ಮಸಾಜ್ ಮಾಡಿಕೊಳ್ಳುವುದರಿಂದ ಮೊಡವೆ ನಿವಾರಣೆಯಾಗುತ್ತದೆ. ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. ಸೋರಿಯಾಸಿಸ್ ಸಮಸ್ಯೆ ಇರುವವರು ಇದನ್ನು ಪ್ರತಿನಿತ್ಯ ಬಳಸುವುದು ಸಮಸ್ಯೆಯ ನಿವಾರಣೆಗೆ ಹೆಚ್ಚು ಅನುಕೂಲವಾಗುತ್ತದೆ.
ತುಟಿಯ ಸೌಂದರ್ಯವೃದ್ಧಿಗೆ, ಒಡೆದ ತುಟಿಯನ್ನು ಸರಿ ಮಾಡಲು, ಉಗುರಿನ ಸೌಂದರ್ಯಕ್ಕೆ, ಕಾಂತಿಯ ಹೆಚ್ಚಳಕ್ಕೆ ಎಕ್ಸಾ್ಟ್ರ ವರ್ಜಿನ್ ಕೋಕೋನಟ್ ಆಯಿಲ್ ಸಹಕಾರಿ. ಇದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲ. ಎಲ್ಲ ರೀತಿಯ ದೇಹಪ್ರಕೃತಿಯನ್ನು ಹೊಂದಿದವರೂ ಯಾವುದೇ ಅಂಜಿಕೆ ಇಲ್ಲದೆ ಉಪಯೋಗಿಸಬಹುದಾದ ಉತ್ತಮ ಪದಾರ್ಥ ಇದು. ಹೀಗೆ ತೆಂಗಿನ ಬಳಕೆಯು ನಮ್ಮ ಆರೋಗ್ಯದ ಹೆಚ್ಚಳಕ್ಕೆ ಅನುಕೂಲಕರವಾಗಿದೆ.
ನೀವೂ ಪ್ರಶ್ನೆ ಕೇಳಿ
ನಿಮ್ಮ ಆರೋಗ್ಯದ ಸಮಸ್ಯೆಗಳನ್ನು ಸಂಕ್ಷಿಪ್ತವಾಗಿ ಬರೆದು ಈ ವಿಳಾಸಕ್ಕೆ ಕಳಿಸಬಹುದು: ಸಂಪಾದಕರು, ಧನ್ವಂತರಿ ಪ್ರಶ್ನೋತ್ತರ ವಿಭಾಗ, ವಿಜಯವಾಣಿ, ನಂ. 24, ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು - 18