ಧನ್ವಂತರಿ: ಬೇಸಿಗೆಯಲ್ಲಿ ಆರೋಗ್ಯ ನಿರ್ವಹಣೆ ಹೇಗೆ?

City 1 Water
Published on
ಬೇಸಿಗೆ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಆರೋಗ್ಯದ ಸಲುವಾಗಿ ಅನೇಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಿದೆ. ಈ ಸಮಯದಲ್ಲಿ ದಮ್ಮು, ಕೆಮ್ಮು, ಕಫ, ಅಸ್ತಮಾದಂತಹ ತೊಂದರೆಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ. ಬೇಸಿಗೆಯಲ್ಲಿ ದೇಹ ತಂಪಾಗಿರಬೇಕೆಂದು ಅನೇಕರು ಫ್ರಿಡ್ಜ್​ನಲ್ಲಿ ನೀರಿಟ್ಟುಕೊಂಡು ಕುಡಿಯುವುದು, ಜ್ಯೂಸ್​ಗೆ ಮಂಜುಗಡ್ಡೆ ಹಾಕಿ ಕುಡಿಯುವುದು, ಫ್ಯಾನ್ ಜೋರಾಗಿ ಹಾಕಿಕೊಳ್ಳುವುದು, ಎ.ಸಿ. ಹಾಕಿಕೊಳ್ಳುವುದು ಇತ್ಯಾದಿ ಮಾಡುತ್ತಾರೆ. ಇದು ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.

ವಾರಕ್ಕೊಮ್ಮೆ ಮನೆಯಲ್ಲಿಯೇ ವಮನಧೌತಿ ಮಾಡುವುದರಿಂದ ಬೇಸಿಗೆಯಲ್ಲಿ ಕಾಡುವ ಅನೇಕ ಸಮಸ್ಯೆಗಳು ಹತೋಟಿಯಲ್ಲಿರುತ್ತವೆ. ಶುದ್ಧ ಆಕಳ ಹಾಲಿಗೆ (ಈ ಸಮಯದಲ್ಲಿ ಎಮ್ಮೆಯ ಹಾಲು ಆದರೂ ಆಗಬಹುದು) ಗುಲಾಬಿಯ ಎಲೆಗಳನ್ನು ಹಾಕಿ ದಿನಕ್ಕೊಮ್ಮೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದರಿಂದ ದೇಹ ತಂಪಾಗಿರುತ್ತದೆ. ಈ ಸಮಯದಲ್ಲಿ ಕಬ್ಬಿನ ಹಾಲು, ಖರ್ಜೂರ, ಒಣದ್ರಾಕ್ಷಿ, ಚಿಕ್ಕುಹಣ್ಣು (ಸಪೋಟ) ಸೇವಿಸುವುದು ಉತ್ತಮವಾದುದು.

ಈ ಸಮಯದಲ್ಲಿ ಖರ್ಜೂರಕ್ಕೆ ಮಣ್ಣಿನ ಪಾತ್ರೆಯಲ್ಲಿಟ್ಟ ನೀರನ್ನು ಹಾಕಿ ಜ್ಯೂಸ್ ಮಾಡಿ ದಾಲ್ಚಿನ್ನಿ (ಚಕ್ಕೆ) ಪುಡಿ ಸೇರಿಸಿ ದಿನನಿತ್ಯ ಆಗಾಗ ತೆಗೆದುಕೊಳ್ಳುವುದು ಹಿತಕಾರಿ. ಒಣದ್ರಾಕ್ಷಿ, ಖರ್ಜೂರ, ಅಂಜೂರವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ನೀರಿನಲ್ಲಿ ನೆನೆಸಿಟ್ಟುಕೊಂಡು ಅದಕ್ಕೆ ದಾಲ್ಚಿನ್ನಿ ಪುಡಿ, ಏಲಕ್ಕಿ ಪುಡಿ ಸೇರಿಸಿ ಜ್ಯೂಸ್ ಮಾಡಿ ಕುಡಿಯುವುದರಿಂದ ಬಾಯಿ ಒಣಗುವ ಸಮಸ್ಯೆ ಕಡಿಮೆ ಆಗುತ್ತದೆ.

ಗಂಟಲಿಗೆ ತಂಪು ಬೇಕೆನಿಸಿದಾಗ ಇದನ್ನು ಕುಡಿಯುವುದೂ ಉತ್ತಮ. ಲಾವಂಚವನ್ನು ಹಾಕಿ ನೀರನ್ನು ಚೆನ್ನಾಗಿ ಕುದಿಸಿಕೊಂಡು ನಂತರ ಒಲೆಯಿಂದ ಇಳಿಸಿದ ತಕ್ಷಣ ಸೊಗದೆಬೇರಿನ ಪುಡಿ ಮತ್ತು ಶುದ್ಧ ಚಂದನವನ್ನು ಹಾಕಿ ಕುಡಿಯುವುದರಿಂದ ದೇಹ ತಂಪಾಗಿರುತ್ತದೆ. ಜೀರ್ಣಶಕ್ತಿ ಚೆನ್ನಾಗಿಲ್ಲ ಎಂದಾದರೆ ಭದ್ರಮುಷ್ಟಿ, ಲಾವಂಚ, ಚಂದನ ಮತ್ತು ಒಣಶುಂಠಿಯನ್ನು ಸಣ್ಣ ಸಣ್ಣ ಚೂರು ಮಾಡಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ನೀರು ಅರ್ಧ ಬತ್ತಿದ ನಂತರ ಉರಿಯನ್ನು ಆರಿಸಿ ನೀರನ್ನು ಸೋಸಿ ಇರಿಸಿಕೊಳ್ಳಬೇಕು. ಇದನ್ನು ಇಡೀ ದಿನ ಕುಡಿಯುವುದರಿಂದ ದೇಹ ತಂಪಾಗಿರುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಜೀರ್ಣಶಕ್ತಿ ಸಹ ಹೆಚ್ಚಾಗುತ್ತದೆ. ಹಸಿಮೆಣಸಿನ ಕಾಯಿ, ಹಾಗಲಕಾಯಿ, ಒಗರು ರುಚಿ ಹೊಂದಿರುವ ಆಹಾರಪದಾರ್ಥಗಳ ಬಳಕೆಯನ್ನು ಕಡಿಮೆ ಮಾಡಿದರೆ ಒಳ್ಳೆಯದು. ಕುಂಬಳಕಾಯಿ, ಹಾಲುಗುಂಬಳಕಾಯಿ, ಬೂದುಗುಂಬಳಕಾಯಿ, ಪಡವಲಕಾಯಿ, ಕಲ್ಲಂಗಡಿ, ಮಾವಿನಹಣ್ಣು, ಅಂಜೂರದ ಹಣ್ಣು, ಕರಬೂಜ, ಬೆಣ್ಣೆ, ತುಪ್ಪ, ಕೋಕಂ, ಮಜ್ಜಿಗೆ, ನೆಲ್ಲಿಕಾಯಿಯ ಬಳಕೆ ಒಳ್ಳೆಯದು. ಸಿಹಿ ಪ್ರಧಾನ ಆಹಾರಸೇವನೆ ಕೂಡ ಸಹಕಾರಿ.

ಮದ್ಯಸೇವನೆ, ಅತಿ ವ್ಯಾಯಾಮ, ಅತಿ ಕಾಫಿ, ಚಹಾ ಸೇವನೆಯನ್ನು ಬೇಸಿಗೆಯಲ್ಲಿ ಕಡಿಮೆ ಮಾಡಬೇಕು. ಕಡಿಮೆ ಪ್ರಮಾಣದಲ್ಲಿ ವ್ಯಾಯಾಮ ಮಾಡುವುದು ಉತ್ತಮ. ಆದಷ್ಟು ತಾಜಾ ಆಹಾರ ಸೇವನೆ ಒಳ್ಳೆಯದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net