ಪಿತ್ತಗಂಧೆ ಸಮಸ್ಯೆಯನ್ನು ನಿವಾರಿಸುವುದು ಹೇಗೆ?

Rashes 12
Published on
ಮಳೆಗಾಲ ಮುಗಿದ ನಂತರದ ಮತ್ತು ಚಳಿಗಾಲ ಪ್ರಾರಂಭವಾಗುವುದರ ನಡುವಿನ ಕಾಲದಲ್ಲಿ ನಮ್ಮ ದೇಹದಲ್ಲಿ ಪಿತ್ತದೋಷ ಹೆಚ್ಚಾಗುತ್ತದೆ’ ಎಂದು ಆಯುರ್ವೆದ ಹೇಳುತ್ತದೆ. ಹಾಗಾಗಿ ಸಹಜವಾಗಿ ಎಷ್ಟೋ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಅಥವಾ ಆಗಲೇ ಇರುವ ಪಿತ್ತಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತವೆ. ಅವುಗಳಲ್ಲಿ ಪಿತ್ತಗಂಧೆ ಕೂಡ ಒಂದು.

ಮೈಮೇಲೆ ಕೆಂಪಗಿನ ಚಿಕ್ಕ ಚಿಕ್ಕ ಗುಳ್ಳೆಗಳಾಗುವುದು; ತುರಿಕೆ ಇರುವುದು; ತುರಿಸಿದಲ್ಲೆಲ್ಲ ಚರ್ಮ ದಪ್ಪವಾಗುವುದು; ಕೆಲವೊಮ್ಮೆ ಗುಳ್ಳೆಗಳಿರುವ ಜಾಗದಲ್ಲಿ ತುರಿಸಿದಾಗ ನೀರಿನಂತೆ ಸ್ರಾವವಾಗುವುದು ಇವೆಲ್ಲ ಇದರ ಲಕ್ಷಣಗಳು. ಈ ಕಾಲದಲ್ಲಿ ಪಿತ್ತ ಹೆಚ್ಚಾಗುವಂತಹ ಆಹಾರ ಮತ್ತು ಕ್ರಿಯೆಗಳನ್ನು ಮಾಡಿದಾಗ ಬಹುತೇಕ ಈ ಸಮಸ್ಯೆ ಶುರುವಾಗುತ್ತದೆ. ಮಾತ್ರೆಗಳನ್ನು ತೆಗೆದುಕೊಂಡಾಗ ಮಾತ್ರ ಶಮನವಾಗಿ ಮಾತ್ರೆ ಬಿಟ್ಟ ಕೂಡಲೇ ಮತ್ತೆ ಅದೇ ಸಮಸ್ಯೆ ಕಾಡುತ್ತದೆ. ಇದಕ್ಕೆ ಸಮಸ್ಯೆಯ ಮೂಲ ಹಾಗೆಯೇ ಉಳಿದುಕೊಳ್ಳುವುದೇ ಕಾರಣ. ಪ್ರಾರಂಭಿಕ ಹಂತದಲ್ಲಿರುವ ಸಮಸ್ಯೆಗೆ ಕೇವಲ ಮನೆಮದ್ದುಗಳು, ಆಹಾರದಲ್ಲಿ ಸ್ವಲ್ಪ ಮಟ್ಟಿಗಿನ ಪಥ್ಯ ಸಾಕಾಗುತ್ತವೆ.

ದೇಹದಲ್ಲಿ ಪಿತ್ತದೋಷ ಹೆಚ್ಚಾಗದಂತೆ ನೋಡಿಕೊಳ್ಳುತ್ತಿರುವುದು ಪಿತ್ತಗಂಧೆಯಲ್ಲಿ ಅತ್ಯಂತ ಮುಖ್ಯವಾದದ್ದು. ಹಾಗಾಗಿ ಹದಿನೈದು ದಿನಗಳಿಗೆ ಒಮ್ಮೆಯಾದರೂ ದೇಹಪ್ರಕೃತಿಗೆ ಅನುಸಾರವಾಗಿ ಮೂರರಿಂದ ನಾಲ್ಕು ಬಾರಿ ಭೇದಿಯಾಗುವಂತೆ ಹರಳೆಣ್ಣೆಯನ್ನು ಕುಡಿಯುವುದು ತುಂಬ ಅನುಕೂಲಕರ. ಅಂದರೆ ಅವರವರ ಪ್ರಕೃತಿಗನುಸಾರವಾಗಿ 15ರಿಂದ 30 ಮಿ.ಲೀ. ಹರಳೆಣ್ಣೆಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದು ಬಿಸಿನೀರು ಕುಡಿಯುತ್ತಿರಬೇಕು. ಭೇದಿಯಾಗಿ ಚೆನ್ನಾಗಿ ಹಸಿವಾದ ನಂತರ ಗಂಜಿ ಕುಡಿಯಬೇಕು. ಬಿಪಿ, ಡಯಾಬಿಟೀಸ್ ನಂತಹ ಯಾವುದೇ ಕಾಯಿಲೆ ಇದ್ದರೆ ವೈದ್ಯರ ಸಲಹೆ ಪಡೆದೇ ಇದನ್ನು ಮಾಡಿಕೊಳ್ಳಬೇಕು.

ಪಿತ್ತಗಂಧೆಯ ಸಮಸ್ಯೆಗೆ ಒಗರು ಮತ್ತು ಕಹಿ ಇರುವ ಆಹಾರ ಅಥವಾ ಔಷಧಗಳು ಚೆನ್ನಾಗಿ ಕೆಲಸ ಮಾಡುತ್ತವೆ. ಹಾಗಾಗಿ ನೆಲ್ಲಿಕಾಯಿ ಮತ್ತು ಅರಿಶಿಣದ ಪುಡಿಗಳನ್ನು ಸಮಪ್ರಮಾಣದಲ್ಲಿ ಸೇರಿಸಿಕೊಂಡು ಖಾಲಿ ಹೊಟ್ಟೆಯಲ್ಲಿ ದಿನಕ್ಕೆ ಮೂರು ಬಾರಿ ಅರ್ಧ ಚಮಚದಂತೆ ತೆಗೆದುಕೊಂಡರೆ ಅನುಕೂಲವಾಗುತ್ತದೆ. ಪೇರಲ ಮರದ (ಸೀಬೆ) ಎಳೆಯ ಚಿಗುರನ್ನು ದಿನಕ್ಕೆ ಎರಡು ಬಾರಿ ಜಗಿದು ರಸ ನುಂಗುತ್ತ ಬಂದರೆ ಪಿತ್ತಗಂಧೆ ಕಡಿಮೆಯಾಗುತ್ತದೆ. ತುರಿಕೆಯ ಜೊತೆಗೆ ಉರಿಯೂ ಇದ್ದರೆ (ಅಕ್ಟೋಬರ್-ನವೆಂಬರ್ ತಿಂಗಳಲ್ಲಿ) 45 ದಿನಗಳ ಕಾಲ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

ಜ್ಯೂಸ್​ನಲ್ಲಿ ಅರ್ಧ ಚಮಚ ತೇಯ್ದ ಶ್ರೀಗಂಧವನ್ನು ಹಾಕಿಕೊಂಡರೆ ಇನ್ನೂ ಅನುಕೂಲವಾಗುತ್ತದೆ. ಕಜ್ಜಿಗಳಂತೆ ಆಗಿ ನೀರು ಬರುತ್ತಿದ್ದರೆ ಬೇವಿನ ಎಲೆಗಳನ್ನು ಗೋಮೂತ್ರದಲ್ಲಿ ಜಜ್ಜಿ ಪೇಸ್ಟ್ ಮಾಡಿ ಹಚ್ಚಿಕೊಂಡು ಇಪ್ಪತ್ತು ನಿಮಿಷ ಬಿಟ್ಟು ಸ್ನಾನ ಮಾಡಬೇಕು. ಉರಿ, ಬಿಸಿಯಾದಂತೆ ಆಗುತ್ತಿದ್ದರೆ ಶ್ರೀಗಂಧವನ್ನು ತೇಯ್ದು ಮೈಗೆಲ್ಲ ಲೇಪಿಸಿಕೊಳ್ಳಬೇಕು. ಜೊತೆಗೆ ತುರಿಕೆಯೂ ಇದ್ದರೆ ಇದರ ಜೊತೆಗೆ ಬೇವಿನ ಎಣ್ಣೆಯನ್ನು ಸೇರಿಸಿಕೊಳ್ಳಬೇಕು.

ಶೀತಲೀ, ಶೀತ್ಕಾರಿ ಪ್ರಾಣಾಯಮಗಳು ಪಿತ್ತಗಂಧೆಯಲ್ಲಿ ತುಂಬ ಅನುಕೂಲಕರ. ಹೆಬ್ಬೆರಳು ಮತ್ತು ಕಿರುಬೆರಳ ತುದಿಗಳನ್ನು ತಾಗಿಸಿ ಮಾಡುವ ವರುಣ ಮುದ್ರೆಯನ್ನು ದಿನದಲ್ಲಿ 20 ನಿಮಿಷ ಮಾಡುವುದು ದೊಡ್ಡ ಪ್ರಮಾಣದ ವ್ಯತ್ಯಾಸಕ್ಕೆ ಕಾರಣವಾಗುತ್ತದೆ. ವಿರೇಚನ ಎಂಬ ಪಂಚಕರ್ಮ ಚಿಕಿತ್ಸೆಯನ್ನು ಪಡೆದುಕೊಳ್ಳಲು ಇದು ಸೂಕ್ತವಾದ ಸಮಯ ಮತ್ತು ಈ ಚಿಕಿತ್ಸೆಯಿಂದ ಪಿತ್ತಗಂಧೆ ಸಮಸ್ಯೆಯ ಮೂಲಕ್ಕೇ ಆಘಾತ ಕೊಟ್ಟಂತಾಗುತ್ತದೆ. ಯಾವುದೇ ರೀತಿಯ ಚಿಕಿತ್ಸೆಯಿಂದಲೂ ಇದು ಗುಣವಾಗದೆ ಇದ್ದಾಗ ವಿರೇಚನ ಚಿಕಿತ್ಸೆ ಪಡೆಯುವುದು ಅವಶ್ಯವಾಗುತ್ತದೆ.

ಪಿತ್ತಗಂಧೆಯನ್ನು ತಡೆಯಲು ಆದಷ್ಟು ಸಿಹಿ, ಕಹಿ ಮತ್ತು ಒಗರು ಗುಣಗಳನ್ನು ಹೊಂದಿರುವ ಆಹಾರಗಳನ್ನು ಸೇವಿಸಬೇಕು. ಉದಾಹರಣೆಗೆ ಬೂದುಗುಂಬಳ, ಹಾಗಲಕಾಯಿ, ಬಾಳೆದಿಂಡು, ಪಡವಲಕಾಯಿ, ಮಂಗಳೂರು ಸೌತೆ, ನೆಲ್ಲಿಕಾಯಿ, ದಾಳಿಂಬೆ, ತುಪ್ಪ, ಬೆಣ್ಣೆ, ಮೆಂತ್ಯ, ಎಳನೀರು ಇಂಥವು ರಕ್ತದಲ್ಲಿ ಪಿತ್ತವನ್ನು ಶಮನಗೊಳಿಸಿ ಪಿತ್ತದಿಂದಾಗುವ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಬಲ್ಲವು. ಉಪ್ಪು, ಹುಳಿ, ಖಾರಗಳನ್ನು ಆದಷ್ಟೂ ಕಡಿಮೆ ಮಾಡಬೇಕು. ಹುಳಿಯಿದ್ದರೂ ದಾಳಿಂಬೆ ಮತ್ತು ನೆಲ್ಲಿಕಾಯಿ ಪಿತ್ತವನ್ನು ಕಡಿಮೆ ಮಾಡುತ್ತವೆ. ಪಿತ್ತಗಂಧೆ ಇರುವವರು ಪ್ರತಿದಿನ ಬಳಸುವ ಉಪ್ಪಿಗಿಂತ ಸೈಂಧವಲವಣವನ್ನು ಬಳಕೆ ಮಾಡುವುದು ಸೂಕ್ತ. ಕೆಲವು ದಿನಗಳ ಮಟ್ಟಿಗೆ ಹಸಿ ಮೆಣಸಿನಕಾಯಿಯ ಬಳಕೆಯನ್ನು ಕೂಡ ನಿಲ್ಲಿಸುವುದು ಒಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net