

ಇಂದು ಸಾಮಾನ್ಯವಾಗಿ ಕಂಡುಬರುತ್ತಿರುವ ತೊಂದರೆ ಬೊಜ್ಜು. ಕೇವಲ ಒಂದೇ ಒಂದು ಚಪಾತಿ ತಿಂದರೂ ಅದು 5-6 ಕಿ.ಮಿ ನಡೆಯುವಷ್ಟು ಕ್ಯಾಲೋರಿಯನ್ನು ನೀಡುತ್ತದೆ. ಒಂದನೇ ಚಪಾತಿ/ರೊಟ್ಟಿ ನಮ್ಮ ದೇಹದಲ್ಲಿ ಶಕ್ತಿಯಾಗಿ ಮಾರ್ಪಾಡಾಗುತ್ತದೆ. ಇದು ಆವಶ್ಯಕ. ಆದರೆ ನಾಳೆ ಉಪವಾಸವಿದ್ದರೆ ಬೇಕು ಎಂದು ದೇಹ ಭಾವಿಸಿಕೊಂಡು ಎರಡನೇ ಚಪಾತಿ/ರೊಟ್ಟಿಯನ್ನು ಕೊಬ್ಬಾಗಿ ಮಾರ್ಪಡಿಸುತ್ತದೆ. ಇದು ಶೇಖರಣೆಯಾಗುತ್ತ ಮುಂದೊಂದು ದಿನ ಬೊಜ್ಜು ಬರುತ್ತದೆ. ನಾವು ಹೆಚ್ಚು ಸೇವಿಸುತ್ತಿರುವ ಕಾಬೋಹೈಡ್ರೇಟ್ಗಳು ಪ್ರಮುಖವಾಗಿ ಬೊಜ್ಜಿಗೆ ಕಾರಣ. ಹೆಚ್ಚಾದ ಕಾಬೋಹೈಡ್ರೇಟ್ಗಳು ದೇಹದಲ್ಲಿ ಕೆಟ್ಟ ಕೊಬ್ಬಾಗಿ ಪರಿವರ್ತನೆಗೊಂಡು ಬೊಜ್ಜು ಬರುತ್ತಿದೆ.
ಇಂದು ಆರೋಗ್ಯಕ್ಷೇತ್ರದಲ್ಲಿ ಆಪಲ್ ಸಿಡರ್ ವಿನೆಗರ್ ಜನಪ್ರಿಯ. ಇದು ಕರುಳಿನಲ್ಲಿ ಉತ್ತಮ ಸೂಕ್ಷ್ಮಾಣುಜೀವಿಗಳ ವರ್ಧನೆಗೆ ಉಪಯುಕ್ತ ವಾತಾವರಣ ನಿರ್ವಿುಸುತ್ತದೆ. ಪ್ರತಿನಿತ್ಯ ಆಹಾರಕ್ಕಿಂತ ಮೊದಲು ಒಂದು ಗ್ಲಾಸ್ ನೀರಿಗೆ 1-2 ಚಮಚ ಆಪಲ್ ಸಿಡರ್ ವಿನೆಗರ್ ಸೇರಿಸಿ ಕುಡಿಯುತ್ತ ಬಂದಲ್ಲಿ ತೂಕ ಹಾಗೂ ಹೈಪರ್ ಅಸಿಡಿಟಿ ನಿಯಂತ್ರಣಕ್ಕೆ ಬರಲು ಸಹಾಯವಾಗುತ್ತದೆ. ನಟ್ಸ್ ಸೇವನೆ ಒಳ್ಳೆಯದು. ಇದರಿಂದ ತಿಂಗಳಿಗೆ ಮೂರು ಕೆ.ಜಿ. ತೂಕ ಕಡಿಮೆ ಮಾಡಿಕೊಳ್ಳಬಹುದು. ವ್ಯವಸ್ಥಿತ ವ್ಯಾಯಾಮ, ಪ್ರತಿನಿತ್ಯ ವೇಗವಾಗಿ 21 ಸೂರ್ಯನಮಸ್ಕಾರ ಮಾಡುವುದು ಸಹಕಾರಿ. ರಾತ್ರಿ ಊಟದ ಬದಲಾಗಿ ಹಣ್ಣುಗಳು, ಸೊಪ್ಪು, ತರಕಾರಿಗಳು, ನಟ್ಸ್, ಸಲಾಡ್, ಬೇಯಿಸಿದ ತರಕಾರಿಗಳು, ಮೊಳಕೆಕಾಳುಗಳನ್ನು ಸೇವಿಸುವುದು ಉತ್ತಮ. ಅಂತೆಯೇ ಮಾಂಸಾಹಾರಿಗಳು ಬೇಯಿಸಿದ ಚಿಕನ್, ಮೊಟ್ಟೆ, ಮೀನನ್ನು ತೆಗೆದುಕೊಳ್ಳಬಹುದು. ಆದರೆ ಕರಿದ ಮಾಂಸಾಹಾರ ಒಳ್ಳೆಯದಲ್ಲ. ಹೀಗೆ ತೂಕ ನಿರ್ವಹಣೆಗೆ ವ್ಯವಸ್ಥಿತ ಆಹಾರಪದ್ಧತಿ ಅಡಿಪಾಯ. ಸರಿಯಾದ ವ್ಯಾಯಾಮ ಕಂಬದಂತೆ ಹಾಗೂ ಆಹಾರೌಷಧಗಳು ಮೇಲ್ಚಾವಣಿಯಂತೆ ಕೆಲಸ ಮಾಡಿ ಆರೋಗ್ಯಕರ ತೂಕದ ಆರೋಗ್ಯಸೌಧ ಹೊಂದಲು ದೇಹಕ್ಕೆ ಅನುವು ಮಾಡಿಕೊಡುತ್ತವೆ.