

ಜೀವನದಲ್ಲಿ ಸುಖ ಸಂತೋಷವನ್ನು ಹೆಚ್ಚಿಸುವ ಹಲವಾರು ವಿಷಯಗಳಿವೆ. ಅನುಭವ ಹೆಚ್ಚಿದಂತೆ ಬದುಕು ಸುಗಮವಾಗುತ್ತದೆ. ಜ್ಞಾನವೃದ್ಧಿಯಾದರೆ ಸಂತಸವಾಗುತ್ತದೆ. ಅಧಿಕಾರ ಹೆಚ್ಚಿದಂತೆ ಹೆಮ್ಮೆಯಿಂದ ಬೀಗುತ್ತೇವೆ. ಸಂಪತ್ತು ಸಂಚಯವಾದರಂತೂ ಖುಷಿಯಲ್ಲಿ ಮಿಂದೇಳುತ್ತೇವೆ. ಇದಕ್ಕೆ ಅಪವಾದವೆಂದರೆ ವಯಸ್ಸು.
ರಸಾಯನ ಔಷಧಗಳು ದೇಹಧಾತುಗಳ ಸವಕಳಿಯನ್ನು ನಿಧಾನಗೊಳಿಸುವಂಥವುಗಳು. ಜೀವನೀಯವೆಂದರೆ ಚೈತನ್ಯಕಾರಕಗಳು. ‘ಜೀವನೀಯಮಿತಿ ಜೀವನಾಯ ಹಿತಮ್ ಎಂಬ ವ್ಯಾಖ್ಯೆ ಚರಕಸಂಹಿತೆಯಲ್ಲಿದೆ. ಶರೀರ, ಇಂದ್ರಿಯ, ಸತ್ವ, ಆತ್ಮಗಳಿಂದ ಕೂಡಿದ ನಮ್ಮ ಜೀವಿತಾವಧಿಯ ಗುಣಮಟ್ಟದ ಹಿತವಾದ ಏರಿಕೆಯೇ ಜೀವನೀಯವೆನ್ನಬಹುದು. ಜೀವನಕ್ಕೆ ಹೊಸ ಚೈತನ್ಯ ತುಂಬುವ ಜೀವನೀಯ ಗುಣದ ಅನೇಕ ದ್ರವ್ಯಗಳಲ್ಲಿ ಇಪ್ಪೆಗಿಡ, ಕಾಡುಉದ್ದು, ಕಾಡುಹೆಸರು, ಸಿಹಿಹಾಲೆಗಳು ಸೇರಿವೆ. ವಯಃಸ್ಥಾಪನವೆಂದರೆ ಯೌವನದ ಸ್ಥಾಪನೆ. ಅಮೃತಬಳ್ಳಿ, ಅಳಲೆಕಾಯಿ, ನೆಲ್ಲಿಕಾಯಿ, ಒಂದೆಲಗ, ಕೊಮ್ಮೆಗಿಡಗಳಿಗೆಲ್ಲ ವಯಃಸ್ಥಾಪನ ಗುಣಧರ್ಮಗಳಿವೆ. ಶರೀರದಲ್ಲಿರುವ ಧಾತುಗಳ ಪ್ರಮಾಣವನ್ನು ಹೆಚ್ಚಿಸಿ ದೇಹಪೋಷಣೆಗೈಯುವವು ಬೃಂಹಣದ್ರವ್ಯಗಳು. ಅಶ್ವಗಂಧ, ಬಲಾ, ಅತಿಬಲಾ, ನಾಗಬಲಾ ಮೊದಲಾದ ಸಸ್ಯಗಳು ಬೃಂಹಣೀಯ ಗುಣಹೊಂದಿವೆ. ಟಾನಿಕ್ಗಳೆಂದರೆ ಕುಡಿಯುವ ದ್ರವ ಔಷಧಗಳೆಂದು ನಾವೆಲ್ಲ ಭ್ರಮಿಸುತ್ತೇವೆ. ನಿಜಾರ್ಥದಲ್ಲಿ ಬಲ್ಯವೆಂಬ ಗುಣವಿರುವವು ಟಾನಿಕ್ಗಳು. ಬಲ್ಯವೆಂದರೆ ಬಲವರ್ಧಕಗಳು. ಶತಾವರಿ, ನೆಗ್ಗಿನಮುಳ್ಳು, ಭೃಂಗರಾಜ, ದರ್ಭೆ, ವಿದಾರಿಗಡ್ಡೆ, ಬಾದಾಮಿ, ಅಕ್ರೋಟ್, ಮಾವಿನಹಣ್ಣುಗಳೆಲ್ಲ ಬಲಕಾರಕಗಳೇ. ವಾಜೀಕರಣ ದ್ರವ್ಯಗಳು ಶರೀರದಲ್ಲಿರುವ ಧಾತುಗಳಿಗೆ ಬಲ ತುಂಬಿ ಅದರಲ್ಲೂ ಮುಖ್ಯವಾಗಿ ಶುಕ್ರಧಾತುವನ್ನು ಉತ್ತೇಜಿಸಿ ಲೈಂಗಿಕಬಲ ವರ್ಧಿಸುವ ಉಪಾಯಗಳು.
ಬದುಕಿನಲ್ಲಿ ಹೊಸತನಕ್ಕೆ ವಿಶೇಷವಾದ ಸ್ಥಾನವಿದೆ. ಜೀವನೋತ್ಸಾಹ ನೀಡುವ ಶಕ್ತಿ ಹೊಸತನಕ್ಕಿದೆ. ಲವಲವಿಕೆ, ನಲಿವುಗಳು ಬದುಕಿನುದ್ದಕ್ಕೂ ವ್ಯಾಪಿಸಬೇಕಾದರೆ ನವೀನತೆ ಇರುವಂತೆ ನೋಡಿಕೊಳ್ಳಬೇಕು. ಮನೆಯನ್ನು ನಾಲ್ಕಾರು ವರ್ಷಗಳಿಗೊಮ್ಮೆ ಸುಣ್ಣಬಣ್ಣ ಬಳಿದು ಹೊಸತಾಗಿಸುತ್ತೇವೆ. ಪೀಠೋಪಕರಣಗಳನ್ನು ಹೊಸತಾಗಿಸಿ ತಾರುಣ್ಯ ತುಂಬುತ್ತೇವೆ. ವಾಹನವು ಹಳತಾಗುತ್ತಿದ್ದಂತೆ ಸರ್ವಿಸಿಂಗ್ ಮಾಡಿ ಚಂದಗೊಳಿಸುತ್ತೇವೆ. ಬಟ್ಟೆಬರೆಗಳು ಹಳೆಯದಾದಾಗ ಹೊಸದನ್ನು ತಂದು ಮನಸ್ಸನ್ನು ಉಲ್ಲಸಿತಗೊಳಿಸುತ್ತೇವೆ. ಬದುಕಿನಲ್ಲಿ ಯಾವುದನ್ನು ಕಿತ್ತೆಸೆಯಲು ಸಾಧ್ಯವಾಗುವುದಿಲ್ಲವೋ ಅದಕ್ಕೆ ಜೀವತುಂಬಿ ಸದೃಢವಾಗಿಸುವುದು ಅನಿವಾರ್ಯವಾಗುತ್ತದೆ. ಶರೀರಕ್ಕೆ ನವೀನತೆ ತುಂಬಿ ಶೃಂಗಾರಗೊಳಿಸುವ ಮಾಗೋಪಾಯಗಳನ್ನು ಸೂಚಿಸಿದ ಹೊಸತನದ ಹರಿಕಾರ ಆಯುರ್ವೆದಕ್ಕೆ ನಮಿಸಲೇಬೇಕು.