ಬೆಳಗಿನ, ಸಂಜೆಯ ಸೂರ್ಯ ಕಿರಣಗಳಲ್ಲಿವೆ ಚರ್ಮರೋಗ ನಿವಾರಕ ಶಕ್ತಿ

Antaranga vvani
Published on

‘ಸರ್ವೆ ಭವಂತು ಸುಖಿನಃ ಸರ್ವೆ ಸಂತು ನಿರಾಮಯಾಃ | ಸರ್ವೆ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖ ಭಾಗ್ಭವೇತ್’ || (ಸಮಸ್ತರೂ ಸುಖ-ಸಂತೋಷದಿಂದಿರಲಿ, ಸಮಸ್ತ ಜನರೂ ಆರೋಗ್ಯದಿಂದಿರಲಿ, ಸಮಸ್ತ ಜನರಿಗೆ ಸನ್ಮಂಗಲಕರವಾಗಿರುವುದರ ಅರಿವುಂಟಾಗಲಿ, ಯಾರೂ ಸಹ ದುಃಖಗಳಿಗೆ ಸಿಲುಕದಿರಲಿ.), ‘ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಂ |’ (ಪರೋಪಕಾರವೇ ಪುಣ್ಯ, ಪರಪೀಡನೆಯೇ ಪಾಪ.) ಇತ್ಯಾದಿ ಉದಾತ್ತ ಆದರ್ಶಗಳನ್ನು ಜಗತ್ತಿಗೆ ಸಾರಿ ಹೇಳಿದ ಭಾರತೀಯರು ಅದನ್ನು ತಮ್ಮ ಬದುಕಿನ ರೀತಿಯಾಗಿಯೂ ಮಾಡಿಕೊಂಡವರು. ಇದನ್ನು ಅನುಷ್ಠಾನಗೊಳಿಸಲು ಶರೀರ ಸದೃಢವಾಗಿಯೂ, ಮನಸ್ಸು ಸ್ವಸ್ಥವಾಗಿಯೂ ಇರುವುದು ಅತ್ಯಗತ್ಯ. ‘ಆರೋಗ್ಯಂ ಭಾಸ್ಕರಾತ್ ಇಚ್ಛೇತ್’ ಎಂಬಂತೆ ಆರೋಗ್ಯರಕ್ಷಣೆ ಮತ್ತು ಸ್ವಾಸ್ಥ್ಯ ಸಂವರ್ಧನೆಗೆ ಸೂರ್ಯನ ಅನುಗ್ರಹ ಆವಶ್ಯಕ. ಇದನ್ನು ಪಡೆಯಲು ನಮ್ಮ ಹಿರಿಯರು ಕಂಡುಕೊಂಡ ಸರಳ ಸಾಧನಾಮಾರ್ಗವೇ ಸೂರ್ಯನಮಸ್ಕಾರ, ಸೂರ್ಯೋಪಾಸನೆ, ಸೂರ್ಯಸ್ನಾನ, ಸೂರ್ಯಯಜ್ಞ ಮುಂತಾದವು. ವಿಷ್ಣು ಅಲಂಕಾರಪ್ರಿಯ, ಶಿವ ಅಭಿಷೇಕಪ್ರಿಯ. ಹಾಗೆಯೇ ಸೂರ್ಯನು ನಮಸ್ಕಾರಪ್ರಿಯ.

‘ಇನ್ನೊಂದರೊಡನೆ ಸೇರುವಿಕೆ’ ಎಂಬರ್ಥದ ‘ಯೋಗ’ ಪದವು, ತನ್ನನ್ನು ತಾನು ಅರಿತುಕೊಳ್ಳುವ ಒಂದು ವಿಧಾನವಾಗಿದೆ. ತಾನು ಬೇರೆ - ಇತರ ವ್ಯಕ್ತಿ, ವಸ್ತು, ಪ್ರಾಣಿ, ಪರಿಸರ ಎಲ್ಲವೂ ಬೇರೆ ಬೇರೆ ಎಂಬುದೇ ನಮ್ಮ ಸಾಮಾನ್ಯ ಅನುಭವಗಳಿಂದ ರೂಪಿತವಾದ ತಿಳಿವಳಿಕೆ. ದೇಹ-ಮನಸ್ಸುಗಳು ಬೇರೆ ಬೇರೆ ಎಂಬುದು ಮತ್ತೆ ಮತ್ತೆ ಅನುಭವಕ್ಕೆ ಬರುವ ವಿಷಯ. ಇದು ವ್ಯಕ್ತಿತ್ವವನ್ನು ಛಿದ್ರಗೊಳಿಸುವ, ತನ್ನತನವನ್ನು ಜಾಗೃತಗೊಳಿಸುವ ಹಾಗೂ ಆ ಮೂಲಕವಾಗಿ ವ್ಯಕ್ತಿಗೆ ಐಹಿಕ ಐಷಾರಾಮಗಳ ಆಕರ್ಷಣೆಯನ್ನು ಒಡ್ಡುತ್ತ ಸ್ವಾರ್ಥವನ್ನು ಬೆಳೆಸುವಂತಹ ತಿಳಿವಳಿಕೆ. ಅಖಂಡವಾದ, ಸರ್ವಶಕ್ತವಾದ ಚೇತನವನ್ನು ಕಾಣುವ ಒಳತುಡಿತ ಕೆಲವರಲ್ಲಿಯಾದರೂ ತೀವ್ರವಾಗಿ ಕಾಣಿಸಿಕೊಳ್ಳುತ್ತದೆ. ಪರಮಚೇತನವನ್ನು ಕಂಡುಕೊಳ್ಳಲು ಯೋಗ ಅವರಿಗೊಂದು ಒಳದಾರಿ; ಅನುಭವಕ್ಕೆ ನೇರ ಮಾರ್ಗ. ದೇಹ-ಮನಸ್ಸುಗಳ ಮೇಲೆ ಸಂಪೂರ್ಣ ಹತೋಟಿಯನ್ನು ಸಾಧಿಸುವುದು ಇದರ ಮುಖ್ಯ ಅಂಶ. ಈ ಸಾಧನೆಗೆ ಸಹಾಯಕವಾಗಿ ಯೋಗಾಸನಗಳ ಅಭ್ಯಾಸ ಆವಶ್ಯಕವಾಗಿದೆ. ಯೋಗಮಗ್ನರಾಗಿ ಅಲೌಕಿಕ ಅನುಭವವನ್ನು ಪಡೆಯುವುದು ಜನಸಾಮಾನ್ಯರಿಗೆ ಅಸಾಧ್ಯವಾದರೂ ದೈಹಿಕ-ಮಾನಸಿಕ ಆರೋಗ್ಯಗಳು ಸುಲಭವಾಗಿ ದೊರೆಯುವ ಪ್ರಯೋಜನಗಳಾಗಿವೆ. ಅಂತಮುಖಿಯಾಗಲು ಪ್ರೇರೇಪಿಸುವ ಯೋಗಾಸನಗಳು; ಕೇವಲ ಬಹಿರಂಗಕ್ರಿಯೆಗಳ ಕಡೆಗೆ ಗಮನವೀಯುವ ಶಾರೀರಿಕ ವ್ಯಾಯಾಮಗಳಿಗಿಂತ ಭಿನ್ನ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕಾದದ್ದು ಅವಶ್ಯ.

ಸೂರ್ಯನಮಸ್ಕಾರ: ಸೃಷ್ಟಿಯ ಎಲ್ಲ ಚಟುವಟಿಕೆಗಳಿಗೆ ಕಾರಣನಾದ ಸೂರ್ಯನಿಗೆ ಕೃತಜ್ಞತಾಪೂರ್ವಕವಾಗಿ ಅರ್ಪಿಸುವ ಆಸನಗಳ ಗುಚ್ಛವೇ ಸೂರ್ಯನಮಸ್ಕಾರ. ಎಲೆಗಳು ಸೂರ್ಯನ ಕಿರಣಗಳನ್ನು ಬಳಸಿಕೊಂಡು ಆಹಾರವನ್ನು ಉತ್ಪಾದಿಸುತ್ತವೆ. ಅಂತೆಯೇ ಬೆಳಗಿನ ಅಥವಾ ಸಂಜೆಯ ಸೂರ್ಯನ ಕಿರಣಗಳು ನಮ್ಮ ಶರೀರದ ಮೇಲೆ ಪರಿಣಾಮ ಬೀರಿ ಚರ್ಮರೋಗ ನಿವಾರಣೆ ಆಗುವುದರ ಜತೆಗೆ ‘ಡಿ’ ಜೀವಸತ್ವದ ಉತ್ಪಾದನೆಗೆ ಸಹಾಯಕವಾಗುತ್ತದೆ. ಸೂರ್ಯನಮಸ್ಕಾರವು ಯೋಗಾಸನ, ಪ್ರಾಣಾಯಾಮ, ಬಂಧ, ಮುದ್ರೆ, ಮಂತ್ರಯೋಗ, ಧಾರಣದ ಕ್ರಮಬದ್ಧ ಜೋಡಣೆಯಾಗಿದೆ. ಯೋಗಿಕ ಶಿಥಿಲೀಕರಣ ವ್ಯಾಯಾಮ ಮತ್ತು ಆಸನಗಳ ನಡುವಣ ಸಂಪರ್ಕಸೇತುವಾಗಿ ಸೂರ್ಯನಮಸ್ಕಾರವನ್ನು ಅಭ್ಯಸಿಸುತ್ತೇವೆ.

ಲಾಭಗಳು: ‘ಆದಿತ್ಯಸ್ಯ ನಮಸ್ಕಾರಾನ್ ಯೇ ಕುರ್ವಂತಿ ದಿನೇ ದಿನೇ | ಆಯುಃ ಪ್ರಜ್ಞಾಂ ಬಲಂ ವೀರ್ಯಂ ತೇಜಸ್ತೇಷಾಂ ಚ ಜಾಯತೇ ||’ ಎಂಬ ಉಕ್ತಿಯಂತೆ ದಿನನಿತ್ಯ ಸೂರ್ಯನಮಸ್ಕಾರದ ಅಭ್ಯಾಸದಿಂದ ದೀರ್ಘ ಆಯುಷ್ಯ, ಬಲ, ವೀರ್ಯ, ತೇಜಸ್ಸು ವೃದ್ಧಿಯಾಗುತ್ತದೆ. ಸ್ಮರಣಶಕ್ತಿ, ಗ್ರಹಣಶಕ್ತಿ, ಏಕಾಗ್ರತೆಯ ವರ್ಧನೆಗೆ ಸಹಕಾರಿ. ಉಸಿರಾಟ, ರಕ್ತಚಲನೆ, ಜೀರ್ಣಶಕ್ತಿಯ ವೃದ್ಧಿ, ನರಗಳ ಶಕ್ತಿಯ ವರ್ಧನೆಗಳಿಗೆ ಇದು ಪರಿಣಾಮಕಾರಿ. ಅಸ್ತಮಾ, ಮಧುಮೇಹ ನಿಯಂತ್ರಣ, ಋತುಚಕ್ರದ ತೊಂದರೆಗಳ ನಿವಾರಣೆಗೆ ಸಹಾಯಕ. ಬೀಜಮಂತ್ರಗಳ ಉಚ್ಚಾರದಿಂದ ಮಿದುಳಿನ ನರಗಳು ಕ್ರಿಯಾಶೀಲಗೊಳ್ಳುವುವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net