ಸಾಂಕ್ರಾಮಿಕದ ಕಾಲದಲ್ಲಿ ದಂತಚಿಕಿತ್ಸೆ: ಹೀಗಿರಲಿ ಮುನ್ನೆಚ್ಚರಿಕೆ

Health
Published on
ಸಾಂಕ್ರಾಮಿಕದ ಸಮಯದಲ್ಲಿ ದಂತಚಿಕಿತ್ಸೆ ಪಡೆಯುವುದು ಸುರಕ್ಷಿತವೆ? ಹೇಗೆ? ಇಂಥ ಸಂದರ್ಭದಲ್ಲಿ ಹಲ್ಲಿನ ಸಮಸ್ಯೆ ಬಂದರೆ ಏನು ಮಾಡುವುದು? ಯಾವಾಗ ತುರ್ತು ಎಂದು ಪರಿಗಣಿಸಬೇಕು? ದಂತವೈದ್ಯರನ್ನು ಭೇಟಿ ಮಾಡುವುದು ಸೂಕ್ತವೇ? ಭೇಟಿಗೂ ಮುನ್ನ ಯಾವೆಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು? ಹೀಗೆ ಹಲವು ಪ್ರಶ್ನೆಗಳು ಹಾಗೂ ಅನುಮಾನಗಳು ನಿಮ್ಮನ್ನು ಕಾಡುತ್ತಿರಬಹುದು. ಅವುಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಹಲ್ಲುನೋವು ಅಥವಾ ಹಲ್ಲಿಗೆ ಸಂಬಂಧಿಸಿದ ಸಮಸ್ಯೆ ಬಂದಾಗ ಮೊದಲು ಫೋನ್ ಮೂಲಕ ವೈದ್ಯರನ್ನು ಸಂರ್ಪಸಿ ಸಲಹೆ ಪಡೆದು ನಂತರ ಚಿಕಿತ್ಸಾಲಯಕ್ಕೆ ಹೋಗುವುದು ಸೂಕ್ತ. ತುರ್ತಲ್ಲದ ಅಂದರೆ ನಿಯಮಿತವಾಗಿ ಮಾಡಿಸಿಕೊಳ್ಳುವ ದಂತ ತಪಾಸಣೆ, ಸೌಂದರ್ಯವರ್ಧಕ ಚಿಕಿತ್ಸೆಗಳು, ಹಲ್ಲುಗಳನ್ನು ಶುಚಿಗೊಳಿಸುವುದು, ದಂತಪಂಕ್ತಿಗಳ ಬದಲಾವಣೆ ಇದ್ದಲ್ಲಿ ಮುಂದೂಡುವುದೇ ಸೂಕ್ತ.

ವೈದ್ಯರು ಸೂಚಿಸಿದ ಔಷಧವನ್ನು ತೆಗೆದುಕೊಂಡ ನಂತರವೂ ರೋಗಲಕ್ಷಣಗಳು ಕಡಿಮೆಯಾಗದಿದ್ದಲ್ಲಿ; ಅಪಘಾತದಿಂದಾಗಿ ಹಲ್ಲುಗಳು / ದವಡೆ ಮುರಿತಕ್ಕೊಳಗಾಗಿ ಹಲ್ಲುನೋವು / ಬಾವು ಬಂದಲ್ಲಿ; ಯಾವುದೇ ಥರದ ಶಸ್ತ್ರಚಿಕಿತ್ಸೆ ಪಡೆದುಕೊಂಡಿದ್ದು ಅದರಿಂದ ಅನಿಯಂತ್ರಿತವಾಗಿ ರಕ್ತಸ್ರಾವವಾಗುತ್ತಿದ್ದರೆ; ಆಳವಾದ ಹಲ್ಲು ಹುಳುಕಿನಿಂದಾಗಿ ಹಲ್ಲುನೋವು / ಉರಿಯೂತ ಉಂಟಾದಲ್ಲಿ; ಬುದ್ಧಿಯ ಹಲ್ಲು (ಮೂರನೇ ದವಡೆಹಲ್ಲು) ಸರಿಯಾಗಿ ಹುಟ್ಟದೆ ಪಕ್ಕದ ಹಲ್ಲಿಗೆ ತೊಂದರೆ ಕೊಡುತ್ತ ನೋವು / ಉರಿಯೂತವಿದ್ದಲ್ಲಿ ಅದನ್ನು ತೆಗೆಯಬೇಕಾಗುತ್ತದೆ. ಇಂಥ ಸಂದರ್ಭಗಳನ್ನು ತುರ್ತು ಎಂದು ಪರಿಗಣಿಸಿ ಎಲ್ಲ ಬಗೆಯ ಮುಂಜಾಗ್ರತಾ ಕ್ರಮಗಳೊಡನೆ ದಂತವೈದ್ಯರ ಭೇಟಿ ಮಾಡಬಹುದು. ದಂತಚಿಕಿತ್ಸಾಲಯಕ್ಕೆ ಹೇಗೆ, ಯಾವ ಮುಂಜಾಗ್ರತಾ ಕ್ರಮಗಳೊಂದಿಗೆ ಹೋಗಬೇಕೆಂದು ನೋಡೋಣ. ಇದನ್ನೂ ಓದಿ: ಧನ್ವಂತರಿ: ವಯಸ್ಸಿನ ದರ್ಪಣ ಚರ್ಮ

  • ವೈದ್ಯರ ಭೇಟಿಗೂ ಮೊದಲೇ ಅವರ ಬಳಿ ನಿಮ್ಮ ಸಮಯವನ್ನು ಕಾಯ್ದಿರಿಸಿಕೊಳ್ಳಲು ಮರೆಯದಿರಿ.
  • ಮನೆಯಿಂದ ತೆರಳುವ ಮುನ್ನ ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಿ ಮತ್ತು ನಿಮ್ಮ ಬಳಿ ಸದಾ ಒಂದು ಸ್ಯಾನಿಟೈಸರ್ ಬಾಟಲಿ ಇರಲಿ.
  • ಅನಿವಾರ್ಯ ಅಥವಾ ಅತೀ ಅವಶ್ಯವಿದ್ದಾಗ ಮಾತ್ರ ಆಸ್ಪತ್ರೆ / ಚಿಕಿತ್ಸಾಲಯದಲ್ಲಿನ ಶೌಚಗೃಹದ ಬಳಕೆ ಮಾಡಿ.
  • ಕೆಮ್ಮು ಅಥವಾ ಸೀನು ಬಂದಲ್ಲಿ ಮೊಣಕೈ ಅಡ್ಡವಿರಿಸಿ ಹಾಗೂ ಬಳಸಿ ಬಿಸಾಡುವಂತಹ ಟಿಶ್ಯೂ ಪೇಪರ್ ಉಪಯೋಗಿಸಿ. ್ಝ ಕಣ್ಣು, ಮೂಗು, ಬಾಯಿಯನ್ನು ಆಗಾಗ ಮುಟ್ಟುತ್ತಿರಬೇಡಿ.
  • ಚಿಕಿತ್ಸಾಲಯ ತಲುಪಿದ ಕೂಡಲೇ ಕೈಗಳನ್ನು ತೊಳೆದುಕೊಳ್ಳಿ ಅಥವಾ ಸ್ಯಾನಿಟೈಸರ್​ನಿಂದ ಶುಚಿಗೊಳಿಸಿಕೊಳ್ಳಿ
  • ಅನಗತ್ಯ ವಸ್ತುಗಳನ್ನು (ಹ್ಯಾಂಡ್ ಬ್ಯಾಗ್, ರಿಸ್ಟ್ ಬ್ಯಾಂಡ್, ರಿಸ್ಟ್ ವಾಚ್, ಹೆಚ್ಚುವರಿ ಮೊಬೈಲ್ ಫೋನ್) ಕೊಂಡೊಯ್ಯಬೇಡಿ.
  • ಸ್ವಾಗತ ಕೊಠಡಿಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಮರೆಯದಿರಿ.
  • ಚಿಕಿತ್ಸಾಲಯದಲ್ಲಿನ ವಸ್ತುಗಳನ್ನು ಅನಗತ್ಯವಾಗಿ ಮುಟ್ಟಬೇಡಿ.
  • ನಿಮ್ಮದೇ ಪೆನ್ ತೆಗೆದುಕೊಂಡು ಹೋಗಿ.
  • ಚಿಕಿತ್ಸಾಲಯದ ಒಳಗೆ ಹೋಗುತ್ತಿದ್ದಂತೆ ದೇಹದ ಉಷ್ಣಾಂಶವನ್ನು ಪರೀಕ್ಷಿಸಿ ಆರೋಗ್ಯದ ಮತ್ತು ಇತ್ತೀಚಿನ ಪ್ರವಾಸದ ಕುರಿತು ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಯಾವುದೇ ಸಂದರ್ಭದಲ್ಲಿ ಈ ಕುರಿತು ತಪ್ಪು ಮಾಹಿತಿ ನೀಡದೆ ಸರಿಯಾಗಿ ಉತ್ತರಿಸಿ.
  • ನೀವು ಕೋವಿಡ್-19 ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿ ಬಂದಿದ್ದರೆ, ತಾತ್ಕಾಲಿಕವಾಗಿ ಚಿಕಿತ್ಸೆಯನ್ನು ಮುಂದೂಡುವುದು ಸೂಕ್ತ ಮತ್ತು ವೈದ್ಯರಿಗೂ ಇದರ ಮಾಹಿತಿಯನ್ನು ತಪ್ಪದೆ ತಿಳಿಸಿ.
  • ಚಿಕಿತ್ಸೆಗೂ ಮುನ್ನ ವೈದ್ಯರು ಔಷಧಯುಕ್ತ ದ್ರಾವಣದ ಮೂಲಕ ಬಾಯಿ ಮುಕ್ಕಳಿಸಲು ಸೂಚಿಸುತ್ತಾರೆ. ಅದನ್ನೂ ತಪ್ಪದೆ ಪಾಲಿಸಿ.
  • ಚಿಕಿತ್ಸೆಯ ನಂತರ ಮನೆಗೆ ತೆರಳುವ ಮುನ್ನ ಯಾವುದೇ ಅನುಮಾನ ಇದ್ದಲ್ಲಿ, ಮಾಹಿತಿ / ಸಲಹೆ ಬೇಕಾದಲ್ಲಿ ತಪ್ಪದೆ ಕೇಳಿ ತಿಳಿದುಕೊಳ್ಳಿ ಮತ್ತು ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಿ.
  • ಮನೆಯನ್ನು ತಲುಪಿದ ನಂತರ ಕೈ ತೊಳೆಯದೆ ಯಾವುದೇ ವಸ್ತುಗಳನ್ನೂ ಮುಟ್ಟಬೇಡಿ.ಬಟ್ಟೆಗಳನ್ನು ಒಗೆಯಲು ಹಾಕಿ ಬಿಸಿನೀರಿನ ಸ್ನಾನ ಮಾಡಿ.
  • ಮೊಬೈಲ್ ಫೋನ್ ಮತ್ತು ಕನ್ನಡಕವನ್ನು ಸ್ಯಾನಿಟೈಸ್ ಮಾಡಿ.

ಈ ಸಮಯದಲ್ಲಿ ತುರ್ತು ದಂತವೈದ್ಯಕೀಯ ಚಿಕಿತ್ಸೆ ಮಾತ್ರ ನೀಡಲಾಗುತ್ತಿದೆ. ವೈದ್ಯರೂ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡೇ ಚಿಕಿತ್ಸೆ ನೀಡುತ್ತಿದ್ದಾರೆ. ಹೀಗಾಗಿ ಯಾವುದೇ ರೀತಿಯ ಭಯ ಅಥವಾ ಆತಂಕಪಡದೆ ವೈದ್ಯರ ಸಲಹೆ ಸೂಚನೆಗಳನ್ನು ಸರಿಯಾಗಿ ಪಾಲಿಸಿದರೆ ಸಾಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net