ಡೆಂಟಲ್​ ಕೇರ್​: ನಿದ್ರೆಯಲ್ಲಿ ಹಲ್ಲು ಕಡಿಯುವಿರಾ?

dental care edited
Published on

ನೀವು ರಾತ್ರಿ ವೇಳೆ ಹಲ್ಲುಗಳನ್ನು ಕಚ್ಚುತ್ತೀರಾ? ಇದನ್ನು bruxism / night grinding ಎಂದು ಕರೆಯುತ್ತಾರೆ. ಕೆಲವರು ರಾತ್ರಿ ನಿದ್ರೆಯಲ್ಲಿ ಅರಿವಿಲ್ಲದೆ ಹಲ್ಲುಗಳನ್ನು ಕಡಿದರೆ (night bruxism), ಮತ್ತೆ ಕೆಲವರು ದಿನದ ಸಮಯದಲ್ಲಿ (awake bruxism) ಹಲ್ಲು ಕಡಿಯುತ್ತಾರೆ. ಇದಕ್ಕೆ ಹಲವಾರು ಕಾರಣಗಳಿವೆ. ಸಾಮಾನ್ಯವಾಗಿ ಮಾನಸಿಕ ಒತ್ತಡ, ಆತಂಕ, ಭಯ, ಕೋಪ, ಒತ್ತಡದಿಂದ ಕೂಡಿದ ಜೀವನಶೈಲಿ ಇವುಗಳಿಂದ ಇರಬಹುದು. ಕೆಲವು ಔಷಧಗಳ ಅಡ್ಡ ಪರಿಣಾಮದಿಂದಲೂ ಉಂಟಾಗಬಹುದು. ಇದು ಅನುವಂಶಿಯ ಕೂಡ. ಮಕ್ಕಳಲ್ಲಿ ಜಂತುಹುಳುಗಳಿಂದ ಕೂಡ ಹಲ್ಲು ಕಚ್ಚುವ ಸಾಧ್ಯತೆ ಇರುತ್ತದೆ (intestinal parasitic infection).

ಹಲವು ಬಾರಿ bruxismನಿಂದ ಯಾವುದೇ ತೊಂದರೆಗಳಿರುವುದಿಲ್ಲ. ಈ ತೊಂದರೆಯಿಂದ ಬಳಲುತ್ತಿರುವ ಹೆಚ್ಚಿನ ಜನರಿಗೆ ಇದರ ಅರಿವೇ ಇರುವುದಿಲ್ಲ ಅಥವಾ ಆಗುತ್ತಿರುವ ತೊಂದರೆ ಇದರಿಂದ ಎಂದು ತಿಳಿದಿರುವುದಿಲ್ಲ. ಹೀಗೆ ನಿದ್ರೆಯಲ್ಲಿ ಹಲ್ಲುಗಳನ್ನು ಕಡಿಯುವುದರಿಂದ ಹಲ್ಲುಗಳ ಮೇಲ್ಮೈ ಸವೆಯುತ್ತದೆ. ಇದರಿಂದ ಹಲ್ಲುಗಳಲ್ಲಿ ಅತಿಸೂಕ್ಷ್ಮತೆ (hypersensitivity) ಉಂಟಾಗುತ್ತದೆ ಮತ್ತು ಹಲ್ಲುಗಳು ಸುಲಭವಾಗಿ ಮುರಿದುಹೋಗುತ್ತವೆ. ಇಂಥವರಲ್ಲಿ ಹಲ್ಲು ಹುಳುಕಾಗುವ ಸಾಧ್ಯತೆ ಕೂಡ ಹೆಚ್ಚು. ದೀರ್ಘಕಾಲದಿಂದ ಈ ತೊಂದರೆಯನ್ನು ಅನುಭವಿಸುತ್ತಿರುವವರಲ್ಲಿ ಹಲ್ಲಿನ ಸುತ್ತಲಿನ ವಸಡಿನಲ್ಲಿ ಉರಿಯೂತ ಉಂಟಾಗಿ ಹಲ್ಲನ್ನು ಕಚ್ಚಿದಾಗ ನೋವು ಕಾಣಿಸಿಕೊಳ್ಳುತ್ತದೆ. ದವಡೆಯ ಸ್ನಾಯುಗಳ ಮೇಲೆ ಅಧಿಕ ಒತ್ತಡ ಬೀಳುವುದರಿಂದ ಆ ಸ್ನಾಯುಗಳ ಗಾತ್ರ ಹೆಚ್ಚಾಗಿ ಮುಖವು ಚೌಕಾಕಾರವಾಗಿ ಕಾಣುತ್ತದೆ. ಶಸ್ತ್ರಚಿಕಿತ್ಸೆಯ ಮೂಲಕ ಇದನ್ನು ಸರಿಪಡಿಸಬಹುದು. ಈ ತೊಂದರೆಯಿಂದಾಗಿ ದವಡೆಯ ಸಂದು ಕೂಡ ಹಾನಿಗೊಳಗಾಗಬಹುದು. ಇದರಿಂದ TMJ ದವಡೆ ಮತ್ತು ಸ್ನಾಯುಗಳ ನೋವು ಉಂಟಾಗುತ್ತದೆ ಮತ್ತು ಬಾಯಿಯನ್ನು ತೆಗೆಯುವಾಗ ಕ್ಲಿಕ್ ಎಂಬ ಶಬ್ದ ಉಂಟಾಗುತ್ತದೆ. ಈ ತೊಂದರೆ ಮುಂದುವರಿದರೆ ಬಾಯಿಯನ್ನು ಪೂರ್ತಿಯಾಗಿ ತೆರೆಯಲು ಸಹ ಕಷ್ಟವಾಗುತ್ತದೆ. ಕೆಲವರಲ್ಲಿ ಕಿವಿ ಮತ್ತು ತಲೆನೋವು ಉಂಟಾಗಬಹುದು.

ಇದರ ಚಿಕಿತ್ಸಾಕ್ರಮಗಳನ್ನು ನೋಡೋಣ. ಈಗಾಗಲೇ ಹಾನಿಗೊಳಗಾಗಿರುವ ಹಲ್ಲುಗಳನ್ನು ಸರಿಪಡಿಸುವುದು ಮತ್ತು ಮತ್ತಷ್ಟು ಹಾನಿಗೊಳಗಾಗದಂತೆ ಮುಂದಿನ ಚಿಕಿತ್ಸಾಕ್ರಮಗಳನ್ನು ಯೋಜಿಸುವುದು ಮುಖ್ಯ. ಮೊದಲಿಗೆ ಈ ಸಮಸ್ಯೆಯ ಮೂಲ ಕಾರಣಗಳನ್ನು ಅರಿತುಕೊಳ್ಳಬೇಕು. ಒತ್ತಡದಿಂದ ಕೂಡಿದ ಜೀವನಶೈಲಿ, ಆತಂಕದಿಂದ ಉಂಟಾಗಿದೆ ಎಂದಾದರೆ ಅದನ್ನು ನಿಯಂತ್ರಿಸಲು ಪ್ರಯತ್ನಿಸಬೇಕು. ಯೋಗ, ಧ್ಯಾನ, ವಾಕಿಂಗ್, ಸಾಕಷ್ಟು ನಿದ್ರೆ ಮುಂತಾದ ಒತ್ತಡ ನಿವಾರಣಾ ತಂತ್ರಗಳನ್ನು ಅಭ್ಯಾಸ ಮಾಡುವುದು ಇದರ ನಿವಾರಣೆಗೆ ಸಹಾಯ ಮಾಡುತ್ತದೆ. ದಂತವೈದ್ಯರು ಹಲ್ಲುಗಳಿಗೆ night guard ಅಥವಾ splintಗಳನ್ನು ಬಳಸಲು ಸೂಚಿಸುತ್ತಾರೆ. ಇದರಿಂದ ಮುಂದಾಗುವ ಹಾನಿಯನ್ನು ನಿಯಂತ್ರಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net