

ಭಾರತೀಯರ ಜೀವನಶೈಲಿಯಲ್ಲೇ ವೈರಸ್, ಬ್ಯಾಕ್ಟೀರಿಯಾಗಳನ್ನು ನಿವಾರಿಸುವಂತಹ ಆದೆಷ್ಟೋ ಅಂಶಗಳಿವೆ. ಬ್ರಿಟಿಷರು ಬಂದ ನಂತರವಷ್ಟೇ ನಾವೆಲ್ಲ ಟೀ ಕುಡಿಯಲು ಪ್ರಾರಂಭಿಸಿದ್ದು. ಅದಕ್ಕೂ ಮೊದಲು ನಾವೆಲ್ಲ ಸೇವಿಸುತ್ತಿದ್ದುದು ಕಷಾಯವನ್ನು. ಕೊತ್ತಂಬರಿ, ಜೀರಿಗೆ, ಶುಂಠಿ, ಕಾಳುಮೆಣಸು, ಅರಿಶಿಣ, ಜ್ಯೇಷ್ಠಮಧು ಮುಂತಾದ ಸಾಂಬಾರಪದಾರ್ಥಗಳನ್ನು ಹಾಕಿ ಮಾಡುತ್ತಿದ್ದ ಕಷಾಯವು ವೈರಸ್ ನಿರೋಧಿಸುವುದಕ್ಕೆ ತುಂಬ ಒಳ್ಳೆಯದು. ನಿತ್ಯ ಇವುಗಳ ಸೇವನೆ ಮಾಡುವವರಿಗೆ ಸುಲಭದಲ್ಲಿ ಹಾನಿ ಮಾಡಲು ವೈರಸ್ಗೆ ಅಸಾಧ್ಯ. ಇಂದಿಗೂ ಎಷ್ಟೋ ಹಳ್ಳಿಗಳಲ್ಲಿ ಇಂಥ ಕಷಾಯವೇ ನಿತ್ಯ ಪೇಯ ಮತ್ತು ಬಹಳಷ್ಟು ವೈರಸ್ ಸಂಬಂಧಿತ ಸಮಸ್ಯೆಗಳಲ್ಲಿ ಇದೇ ಪ್ರಾಥಮಿಕ ಚಿಕಿತ್ಸೆ.
ಜ್ವರ, ನೆಗಡಿ, ವಾಂತಿ, ಅಜೀರ್ಣದ ಸಮಸ್ಯೆಗಳು ವೈರಸ್ ಕಾರಣದಿಂದ ಆಗುತ್ತಿದ್ದರೆ, ಕಿರಾತ ಕಡ್ಡಿ(ಚಿರಾಯತ) ಕಷಾಯ ಮಾಡಿ ಕುಡಿಯುವುದರಿಂದ ತುಂಬ ಅನುಕೂಲವಾಗುತ್ತದೆ. ನೂರು ಮಿ.ಲೀ. ನೀರಿಗೆ ನಾಲ್ಕೈದು ತುಳಸಿ ಎಲೆಗಳನ್ನು ಹಾಕಿ ಕುದಿಸಿ 25 ಮಿ.ಲೀ.ಗೆ ಇಳಿಸಿ ಸೋಸಿ ಬೆಲ್ಲ ಹಾಕಿ ಕುಡಿಯುವುದರಿಂದ ನೆಗಡಿ, ದಮ್ಮು, ಕಫ, ಕೆಮ್ಮುಗಳಿಗೆ ಕಾರಣವಾಗುವ ವೈರಸ್ಗಳ ನಾಶಕ್ಕೆ ಅನುಕೂಲವಾಗುತ್ತದೆ. ಸೋಂಪು ಕೇವಲ ಊಟದ ನಂತರ ಬಾಯಿ ವಾಸನೆ ಕಡಿಮೆ ಮಾಡಿಕೊಳ್ಳಲು ಬಳಸುವುದಲ್ಲ. ಅದು ಶ್ವಾಸಾಂಗವ್ಯೂಹದ ಮೇಲೆ ಆಕ್ರಮಣ ಮಾಡುವ ವೈರಸ್ಗಳನ್ನು ಕೊಲ್ಲುತ್ತದೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಬೆಳ್ಳುಳ್ಳಿ ಕೂಡ ಒಂದು ಒಳ್ಳೆಯ ಬಹುವೈರಸ್ ನಿರೋಧಕ. ಹಸಿ ಬೆಳ್ಳುಳ್ಳಿಯನ್ನು ಜಗಿಯುವುದರಿಂದ ಉಂಟಾಗುವ ಔಷಧೀಯ ಅಂಶವು ಹಲವು ವೈರಸ್ಗಳ ವಿರುದ್ಧ ಹೋರಾಡಲು ಅತ್ಯಂತ ಸಹಾಯಕ. ಹಸಿ ಬೆಳ್ಳುಳ್ಳಿಯನ್ನು ತಿನ್ನಲು ಸಾಧ್ಯವಾಗದೆ ಹೋದರೆ ಬೆಳ್ಳುಳ್ಳಿಯ ಚಟ್ನಿಯಾದರೂ ಆದೀತು. ಮೇಲೆ ಹೇಳಿದ ಬಹುತೇಕ ಔಷಧಗಳು ಉಷ್ಣ ಗುಣವನ್ನು ಹೊಂದಿರುವಂಥವು. ಈ ಬೇಸಿಗೆಯಲ್ಲಿ ಅವು ಔಷ್ಣ್ಯನ್ನು ಉಂಟುಮಾಡಬಹುದಾಗಿರುವುದರಿಂದ ಕಷಾಯ ಮಾಡುವಾಗ ಲಾವಂಚ ಮತ್ತು ಸೊಗದೆಬೇರನ್ನು ಬಳಸಬಹುದು. ಇವಕ್ಕೆ ಸ್ವಲ್ಪ ಮಟ್ಟಿಗೆ ವೈರಸ್ ನಿರೋಧಕ ಗುಣ ಕೂಡ ಇದೆ. ಜತೆಗೆ ದೇಹಕ್ಕೆ ತಂಪು ನೀಡುತ್ತವೆ ಮತ್ತು ಜ್ವರ, ತಲೆನೋವುಗಳನ್ನು ಗುಣಪಡಿಸುವ ಶಕ್ತಿ ಕೂಡ ಇದೆ. ಜ್ಯೇಷ್ಠಮಧು ಸಾರ್ಸ್ ಕರೊನಾ ವೈರಸ್ ವಿರುದ್ಧ ಅತ್ಯಂತ ಶಕ್ತಿಶಾಲಿ ನಿರೋಧಕ ಎಂಬುದು ಸಂಶೋಧನೆಗಳಲ್ಲಿ ದೃಢಪಟ್ಟಿದೆ. ಇದು ಕೂಡ ತಂಪು ಗುಣವನ್ನೇ ಹೊಂದಿದ್ದು ಇಡೀ ಶ್ವಾಸಾಂಗವ್ಯೂಹದ ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾಗಿದೆ.