ಸಂತಾನಪ್ರಾಪ್ತಿಗೆ ಹಾಗೂ ದೈಹಿಕವಾಗಿ ಶಕ್ತಿ ಕುಂದಿದಾಗ ಅದರ ಮರುಗಳಿಕೆಗಾಗಿ ಆಯುರ್ವೆದ ಬೋಧಿಸಿದ ಸೂತ್ರವೇ ವಾಜೀಕರಣ ಚಿಕಿತ್ಸೆ

reproduction
Published on

ದುಕು ಹಿತಕರವಾಗಿದ್ದರಷ್ಟೇ ಸಾಲದು, ಸುಖಮಯವೂ ಆಗಬೇಕೆಂಬುದು ಮಾನವರೆಲ್ಲರ ಆಶಯ ಹಾಗೂ ಅಪೇಕ್ಷೆ. ಸಾಮಾನ್ಯವಾದ ಊಟ ಮಾಡಿದರೆ ನಾವು ಜೀವಂತವಾಗಿರಲು ಸಾಕು. ಆದರೆ ಖುಷಿ ಬೇಕೆಂದರೆ ಭೋಜನದಲ್ಲಿ ವಿಶೇಷತೆಯಿರಬೇಕು. ತರಕಾರಿ ಹಾಕದೆ ಮಾಡಿದ ಸಾಂಬಾರಿನಿಂದ ಜೀವನ ಸಾಗಿಸಬಹುದು. ಆದರೆ ಎಲ್ಲಿಯ ಖುಷಿ ತಾನೇ ದೊರಕೀತು? ಸುಖದ ವಿಚಾರವನ್ನು ಸ್ಥೂಲವಾಗಿ ಪರಿಗಣಿಸಿದರೆ ಇಹಲೋಕ ಸುಖ, ಪರಲೋಕ ಸುಖಗಳೆಂದು ಎರಡಾಗಿ ಕಾಣಿಸುತ್ತದೆ.

ಇಹಲೋಕದಲ್ಲಿ ಸಂತಾನಪ್ರಾಪ್ತಿಗೆ ಹಾಗೂ ದೈಹಿಕವಾಗಿ ಶಕ್ತಿ ಕುಂದಿದಾಗ ಅದರ ಮರುಗಳಿಕೆಗಾಗಿ ಆಯುರ್ವೆದ ಬೋಧಿಸಿದ ಸೂತ್ರವೇ ವಾಜೀಕರಣ ಚಿಕಿತ್ಸೆ. ‘ವಾಜ’ ಎಂದರೆ ಲೈಂಗಿಕ ಆಸಕ್ತಿ ಅಥವಾ ಶುಕ್ರ ಎಂಬ ಅರ್ಥ ಬರುತ್ತದೆ. ‘ವಾಜಿ’ ಎಂದರೆ ಸಾಮರ್ಥ್ಯ. ಅವಾಜಿಯನ್ನು ವಾಜಿಯನ್ನಾಗಿ ಮಾಡುವುದೇ ‘ವಾಜೀಕರಣ’. ಪುಂಸತ್ವ, ಶರೀರಬಲ, ಸಂತಾನಶಕ್ತಿ, ವೀರ್ಯಬಲ ಎಲ್ಲವನ್ನೂ ನೀಡುವ ವೈದ್ಯಲೋಕದ ಈ ಅಂಗಕ್ಕೆ ಆಯುರ್ವೆದವು ‘ವೃಷಾ’ ಎಂದು ಹೆಸರಿಸಿದೆ. ‘ಶರೀರ ಕ್ಷಯ ರಕ್ಷಾರ್ಥ ವಾಜೀಕರಣಮುಚ್ಯತೇ’ ಅರ್ಥಾತ್ ವಯಸ್ಸಾದಂತೆ ಶರೀರದಲ್ಲಾಗುವ ಹಾನಿಯ ರಕ್ಷಣೆಗಾಗಿ ಇರುವ ಚಿಕಿತ್ಸಾ ವಿಶೇಷವೇ ವಾಜೀಕರಣವೆಂದು ಅಷ್ಟಾಂಗಹೃದಯವೆಂಬ ಗ್ರಂಥದಲ್ಲಿ ವಿವರಿಸಲಾಗಿದೆ.

ಜಗತ್ತಿನಲ್ಲಿ ಶಕ್ತಿಯ ಮಾಪನಕ್ಕಾಗಿ ಪ್ರಾಣಿಗಳಲ್ಲಿ ಕುದುರೆಯನ್ನು ಮುಂದಿಡಲಾಗುತ್ತದೆ. ಆದರಿಂದಲೇ ‘ಅಶ್ವಶಕ್ತಿ’ಯೆಂಬ ಪದವೂ ರೂಢಿಯಲ್ಲಿ ಬಂದಿದೆ. ಇಂಥ ಶಕ್ತಿಯ ಪ್ರತೀಕವಾಗಿರುವ ಕುದುರೆಯ ಬಲವನ್ನು ನೀಡುವಂಥ ಚಿಕಿತ್ಸಾವಿಧಾನ ಎಂಬರ್ಥವೂ ವಾಜೀಕರಣ ಪದಕ್ಕಿದೆ. ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಬೇಕುಗಳೆಂಬ ಕಾಮನೆಗಳ ಪೂರೈಸುವಿಕೆಯೂ ಒಂದು. ಸ್ವಾಸ್ಥ್ಯ ದೃಷ್ಟಿಯಿಂದ ನೋಡಿದರೆ ಮುಂದಿನ ಪೀಳಿಗೆಯ ಪ್ರಾಪ್ತಿಗೆ, ಕುಲದ ಮುಂದುವರಿಕೆಗೆ ಇದು ಅವಶ್ಯಕವಾಗಿ ಬೇಕು. ಇದಕ್ಕಾಗಿ ಮನಸ್ಸಿನ ಸಂತೋಷಮಯವಾದ ಸ್ಥಿತಿಯ ಅಗತ್ಯ ಇದೆ ಎಂಬುದನ್ನು ಆಗಲೇ ಆಯುರ್ವೆದ ಹೇಳಿದೆ. ಮಧುರವಾದ ಅಥವಾ ವಿಶೇಷತೆಯಿಂದ ಕೂಡಿದ ಆಹಾರ, ಸುಮಧುರ ಧ್ವನಿ, ಮೃದುವಾದ ಚರ್ಮ, ಹಿತವಾದ ಬಟ್ಟೆ, ಆಭರಣಗಳು, ತಾಂಬೂಲ ಸೇವನೆ, ಸುಗಂಧ ಮಾಲೆಗಳಧಾರಣೆ, ಸುಗಂದಿತ ಪುಷ್ಪಗಳಿಂದ ಕೂಡಿದ ನಯನ ಮನೋಹರ ಉದ್ಯಾನವನ, ಪರಿಶುದ್ಧ ಪರಿಸರ, ಮನಸ್ಸಿಗೆ ಯಾವುದೆಲ್ಲ ಹಿತವನ್ನು ಉಂಟುಮಾಡುವುದೋ ಅವೆಲ್ಲವೂ ಕಾಮೋದ್ದೀಪಕ ವಾಜೀಕರಣ ವಿಧಾನಗಳೇ ಆಗಿವೆ ಎಂದು ಬಣ್ಣಿಸಿದೆ. ಅಭ್ಯಂಜನ, ಉದ್ವರ್ತನಗಳೆಂಬ ಶರೀರವನ್ನು ಮೆದುವಾಗಿ ನೀಯುವ ಪ್ರಕ್ರಿಯೆಗಳು, ಸಂತಸದ ಲೋಕಕ್ಕೊಯ್ಯುವ ಗಂಧರ್ವ ಕಾವ್ಯ, ಈಜುವುದು, ಮನೆಯನ್ನು ಚಂದವಾಗಿ ಅಲಂಕರಿಸುವುದು, ಸುಂದರ ಪ್ರಕೃತಿ, ಮರಗಳಿಂದ ಆವೃತವಾದ ಸ್ಥಳ, ಮನಸ್ಸಿಗೆ ತಂಪೆರೆಯುವ ಋತುಮಾನ, ಪ್ರೀತಿಪಾತ್ರ ಜನರೊಂದಿಗೆ ಕಾಲಕಳೆಯುವುದು - ಹೀಗೆ ಮನಸ್ಸನ್ನು ದೃಢಗೊಳಿಸಿ ಸಿದ್ಧಗೊಳಿಸುವ ಅಂಶಗಳನ್ನು ತಿಳಿಹೇಳಿದ ರೀತಿಯೇ ಮನಸ್ಸಿಗೆ ಮುದನೀಡುತ್ತದೆ. ಹಾಲು, ತುಪ್ಪ, ತೈಲ, ಸಾವಯವ ಸಕ್ಕರೆಗಳ ನಿತ್ಯ ಬಳಕೆಯನ್ನೂ ಇಲ್ಲಿ ಪ್ರಶಂಸಿಸಲಾಗಿದೆ. ಈ ನಾಲ್ಕರಿಂದ ಇತ್ತೀಚೆಗಿನ ತಲೆಮಾರು ದೂರ ಸರಿದದ್ದೇ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ಹಾಗೂ ಸ್ತ್ರೀಯರಲ್ಲಿ ಅಂಡಾಣುಗಳ ಸಾಮರ್ಥ್ಯ ಕುಗ್ಗಲು ಕಾರಣವಾಯಿತೇ ಎಂಬುದು ಜಿಜ್ಞಾಸೆಯ ವಿಷಯ. ಪ್ರತ್ಯೇಕ ವೈದ್ಯಕೀಯ ಅಂಗವಾಗಿ ಪರಿಗಣಿಸಿ 55 ಔಷಧ ಯೋಗಗಳು, 49 ರಸಯೋಗಗಳು, 101 ಔಷಧೀಯ ಸಸ್ಯಗಳು, 33 ಭಸ್ಮಗಳು, 35 ಸಸ್ಯೇತರ ದ್ರವ್ಯಗಳನ್ನು ಚಿಕಿತ್ಸೆಗಾಗಿ ಆಯುರ್ವೆದ ಬಳಸಿ ಬೆಳೆದರೀತಿಗೆ ಹುಬ್ಬೇರಿಸಲೇಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net