

ಆಯಸ್ಸಿನ ಬಗ್ಗೆ ಇರುವ ಸುಭಾಷಿತವೊಂದು ಬಲು ಮಾರ್ವಿುಕವಾಗಿದೆ. ನೃಣರ ಆಯುಷ್ಯ ಶತವರ್ಷಕ್ಕೆ ಪರಿಮಿತವಾಗಿದೆ. ಅದರಲ್ಲಿಯೂ ಅರ್ಧಭಾಗ ರಾತ್ರಿಯಾಗಿ ಕಳೆದುಹೋಗುತ್ತದೆ. ಉಳಿದ ಐವತ್ತು ವರ್ಷದಲ್ಲಿ ಇಪ್ಪತೆôದು ವರ್ಷಗಳು ಬಾಲತ್ವ ಹಾಗೂ ವೃದ್ಧತ್ವದಲ್ಲಿ ಕರಗಿಹೋಗುತ್ತದೆ. ಉಳಿದಿರುವುದು ಕೇವಲ ಇಪ್ಪತೆôದೇ ವರ್ಷಗಳು. ಆ ಸಮಯದಲ್ಲಿ ವ್ಯಾಧಿಗಳು, ಬೇರ್ಪಡುವಿಕೆಯ ಬಾಧೆ, ದುಃಖಮಯ ವಿಚಾರಗಳು, ಅನ್ಯರ ಸೇವಾದಿ ಕಾರ್ಯಗಳಲ್ಲೇ ಹೋಗಿಬಿಡುತ್ತದೆ. ನೀರಿನ ಅಲೆಗಳಲ್ಲಿ ಹುಟ್ಟಿಕೊಂಡು ಕ್ಷಣಕಾಲದಲ್ಲಿ ಮತ್ತದೇ ನೀರಿನಲ್ಲಿ ಲೀನವಾಗುವ ಗುಳ್ಳೆಯಂತಿರುವ ಅಲ್ಪಕಾಲದ ಬದುಕಿನಲ್ಲಿ ಸುಖವೆಂಬುದು ಮನುಷ್ಯರಿಗೆ ಎಲ್ಲಿದೆ ಎಂದು ಪ್ರಶ್ನಿಸುವ ಸುಭಾಷಿತವು ಮಾನವನಿಗೆ ಆಯಸ್ಸಿನ ಅಲ್ಪತೆಯನ್ನು ಎಚ್ಚರಿಕೆಯ ಮೂಲಕ ತಿಳಿಹೇಳುತ್ತದೆ. ನೂರು ವಸಂತಗಳನ್ನು ಕಂಡವರ ಕಥೆಯೇ ಹೀಗೆಂದ ಮೇಲೆ ಪ್ರಾಯ ಎಪ್ಪತ್ತರ ಸುಮಾರಿಗೇ ಬದುಕು ಮುಗಿಸುವ ಇಂದಿನ ಜನಾಂಗದ ಪಾಡೇನು ಎಂಬುದು ಚಿಂತಿಸಬೇಕಾದ ವಿಷಯ.
ಇದಕ್ಕೆಲ್ಲ ಪರಿಹಾರ ರೂಪವಾಗಿ ಬರಿಯ ತಪಾಸಣೆಗಳನ್ನು ಮಾಡಿದರೆ ದೇಹದಲ್ಲೇನೂ ಬದಲಾವಣೆಗಳು ಸಂಭವಿಸುವುದಿಲ್ಲ. ಅದಕ್ಕಾಗಿ ಆಯುರ್ವೆದ ತೆರೆದಿಟ್ಟ ಉಪಾಯಗಳು ಮನೋಜ್ಞವಾಗಿವೆ. ವಯಃಸ್ಥಾಪನ ಚಿಕಿತ್ಸೆ, ಜೀವನೀಯ ಚಿಕಿತ್ಸೆ, ಬೃಂಹಣ ಚಿಕಿತ್ಸೆ, ರಸಾಯನ ಚಿಕಿತ್ಸೆ, ವಾಜೀಕರಣ ಚಿಕಿತ್ಸೆ, ಬಲ್ಯಚಿಕಿತ್ಸೆ, ಸತ್ವಾವಜಯ ಚಿಕಿತ್ಸೆಗಳೆಂಬ ಅನುಪಮ ವಿಧಾನಗಳನ್ನೆಲ್ಲ ಹೇಳಿದ್ದು ಮಾನವ ಸಂಕುಲಕ್ಕೆ ಆಯುರ್ವೆದ ನೀಡಿದ ಸಾರ್ವಕಾಲಿಕ ಕೊಡುಗೆಗಳ ಸಾಲಿನಲ್ಲಿ ನಿಲ್ಲುತ್ತದೆ. ರಸಾಯನಾದಿ ಕ್ರಮಗಳಿಂದ ಆಯಸ್ಸನ್ನು ವರ್ಧಿಸಬೇಕೇ ಹೊರತು ಕೇವಲ ವರ್ಷಗಳಿಂದಲ್ಲ. ಅನಾರೋಗ್ಯದಿಂದ ಹೆಚ್ಚು ಕಾಲ ಬಾಳಿದರೆ ಅನ್ಯರಿಗೆ ಹೊರೆಯಾಗುತ್ತೇವೆಯೇ ಹೊರತು ಅದೇನೂ ಸಾಧನೆಯಾಗುವುದಿಲ್ಲ. ಜೀವನಕ್ಕೆ ಹಿತವಾದುದೇ ಜೀವನೀಯ ಎಂಬ ಮಾತು ಚರಕಸಂಹಿತೆಯಲ್ಲಿದೆ. ಶರೀಯ, ಇಂದ್ರಿಯ, ಸತ್ವ, ಆತ್ಮಗಳಿಗೆ ಯೋಗ್ಯವಾದ ಜೀವಿತಾವಧಿ ಹೆಚ್ಚಿಸಿದರೆ ಮಾತ್ರ ಆಯಸ್ಸಿಗೆ ಅರ್ಥವಿದೆ, ಬಾಳಿಗೆ ಬಲವಿದೆ, ಬದುಕಿಗೆ ಬೆಂಬಲವಿದೆ.