

ಹಣ್ಣಿರಲಿ, ತರಕಾರಿಯಿರಲಿ, ಬೇಳೆಕಾಳುಗಳಿರಲಿ, ಧವಸ ಧಾನ್ಯಗಳಿರಲಿ ಅವುಗಳ ಗುಣಧರ್ಮವು ಪರಿಪೂರ್ಣವಾಗಿ ತಿಳಿದಿದ್ದರೆ ಮಾತ್ರ ಬದುಕಿನಲ್ಲಿ ಅವಶ್ಯಕತೆಗಳಿಗೆ ಅನುಸಾರವಾಗಿ ಸೇವನೆಯನ್ನು ಯೋಜಿಸಬಹುದು. ಒಂದು ತರಕಾರಿಯಲ್ಲಿ ಯಾವುದೋ ಒಂದು ಘಟಕದ್ರವ್ಯ ಹೆಚ್ಚಿನ ಪ್ರಮಾಣದಲ್ಲಿ ಇದೆಯೆಂದಾಕ್ಷಣ ಅದರ ಅಂತಿಮ ಫಲವನ್ನು ಲೆಕ್ಕಾಚಾರ ಮಾಡಿ ಹೇಳಿದರೆ ಪರಿಣಾಮ ಹಾಗೆಯೇ ಇರುವುದಿಲ್ಲ ಎಂಬುದು ವಾಸ್ತವ.
ಹಾಗಿದ್ದರೆ ಯಾವ ಆಹಾರ ವಸ್ತು ಯಾವ ರೀತಿ ಕಾರ್ಯವೆಸಗುತ್ತದೆ ಎಂದು ತಿಳಿಯುವುದಾದರೂ ಹೇಗೆಂಬ ಚಿಂತೆ ಮಾಡಬೇಕಾಗಿಲ್ಲ. ಕಾಲಮಾನ, ಋತುವಿನ ಗುಣ, ದೇಹದ ಪ್ರಕೃತಿ, ಶರೀರದ ಅಂಗಗಳ ಮೇಲೆ ಅದರ ಪರಿಣಾಮ, ಶರೀರದಲ್ಲಾದ ರೋಗದ ಸ್ಥಿತಿಗತಿ, ಆಹಾರ ದ್ರವ್ಯದ ಬೆಳವಣಿಗೆಯ ಹಂತ, ಬೆಳೆದ ಪ್ರದೇಶ, ಉಪಯೋಗದ ಸ್ವರೂಪ ಮುಂತಾದ ಅನೇಕ ಅಂಶಗಳನ್ನು ಅವಲಂಬಿಸಿ ಪ್ರಕ್ರಿಯೆಗಳು ನಡೆಯುತ್ತವೆ ಎಂಬುದಾಗಿ ಆಯುರ್ವೆದ ಹೇಳಿದ್ದು ಇವೆಲ್ಲವನ್ನೂ ಎಳೆಎಳೆಯಾಗಿ ಬಿಡಿಸಿ ಸ್ಪಷ್ಟವಾಕ್ಯಗಳಲ್ಲಿ ಬಿತ್ತರಿಸಿದೆ. ಸಾಂಕ್ರಾಮಿಕ ರೋಗ ಹರಡುತ್ತಿರುವ ಸಂದರ್ಭದಲ್ಲಿ ಆಹಾರ ಪದ್ಧತಿಯ ಸಮಗ್ರ ಪರಿಷ್ಕರಣೆ ಹಾಗೂ ಅನುಷ್ಠಾನದಿಂದ ರೋಗವನ್ನು ತಡೆಯುವುದು, ನಿಯಂತ್ರಿಸುವುದು, ಪರಿಹರಿಸುವುದು ಮೂರೂ ಸಾಧ್ಯವಾಗುತ್ತದೆ.
ರೋಗ ಪಸರಿಸುವಿಕೆ ತಡೆಯುವ ನಿಟ್ಟಿನಲ್ಲಿ ಆಯುರ್ವೆದ ಹೇಳಿದ ಚಿಕಿತ್ಸಾಕ್ರಮದ ಮೊದಲ ಹೆಜ್ಜೆಯಾದ ‘ನಿದಾನಸ್ಯಂ ಪರಿವರ್ಜನಂ’ ಅತ್ಯಂತ ಮಹತ್ವ ಪಡೆದಿದೆ. ‘ನಿದಾನ’ವೆಂದರೆ ಕಾರಣ. ಕರೊನಾ ವೈರಾಣು ಭಾರತಕ್ಕೆ ಪ್ರವೇಶ ಪಡೆಯಲು ಇರುವ ಒಂದೇ ಮಾರ್ಗವೆಂದರೆ ವಿದೇಶದಿಂದ ಸೋಂಕಿತರ ಆಗಮನ. ವಿಮಾನಗಳ ಹಾರಾಟ ನಿಲ್ಲಿಸುವ ಮೂಲಕ ಕದವನ್ನು ಹಾಕಿದಂತಾಗಿದೆ. ಆಗಮಿಸುತ್ತಲೇ ರೋಗದ ಹಣೆಪಟ್ಟಿ ಹೊತ್ತು ಬಂದವರು ಒಂದೆಡೆಯಾದರೆ ಬರುತ್ತಾ ರೋಗವಾಹಕರಾಗಿ ಬಂದು ಕೆಲವೇ ದಿನಗಳಲ್ಲಿ ರೋಗಲಕ್ಷಣ ಕಂಡ ಬಹುಮಂದಿ ಇದ್ದಾರೆ. ಕಾಯಿಲೆಯ ಚಿಹ್ನೆಗಳು ಅಗೋಚರವಾಗಿರುವ ಸಂದರ್ಭದಲ್ಲಿ ಇವರಿಂದ ರೋಗ ವ್ಯಾಪಿಸುತ್ತಿರುವುದೂ ದಿಟವಾಗಿದ್ದು ರೋಗಬರಲು ಕಾರಣವೆಂದು ಆಯುರ್ವೆದ ಬೊಟ್ಟು ಮಾಡಿದ ಪ್ರಜ್ಞಾಪರಾಧವೇ ಎದ್ದು ಕಾಣುತ್ತಿದೆ.
ಗೊತ್ತಿದ್ದೂ ಮಾಡುವ ತಪ್ಪುಗಳು ರೋಗಬರಲು ಕಾರಣವಾಗಿದ್ದರೆ ಅದಕ್ಕೆ ಪ್ರಜ್ಞಾಪರಾಧ ಎಂದಿದೆ ಆಯುರ್ವೆದ. ಅದು ಕೇವಲ ಸಣ್ಣ ತಪ್ಪಲ್ಲ, ಅದು ಅಪರಾಧ. ಈಗ ನಡೆಯುತ್ತಿರುವುದೂ ಅದೇ. ಹೊರದೇಶಗಳಿಂದ ಬಂದವರು ಅತ್ಯಂತ ಜವಾಬ್ದಾರಿಯಿಂದ ವರ್ತಿಸಬೇಕು. ಅವರ ಸಂಪರ್ಕದಲ್ಲಿ ಇದ್ದವರಿಗೂ ಸಾಮಾಜಿಕ ಕಳಕಳಿ ಇರಬೇಕು. ರೋಗವನ್ನು ಬೇರೆಯವರಿಗೆ ಹರಡುವ ಉದ್ದೇಶವಿಟ್ಟುಕೊಂಡು ಅಡ್ಡಾಡುವುದಂತೂ ಪ್ರಜ್ಞಾಪರಾಧದ ಪರಮಾವಧಿ. ಅಷ್ಟಕ್ಕೂ 21 ದಿನ ಮನೆಯಲ್ಲೇ ಇರುವುದೆಂದರೆ ಅದು ನಿಜಾರ್ಥದಲ್ಲಿ ಜನರಿಗೆ ಹಾಕಿದ ನಿರ್ಬಂಧವಲ್ಲ, ಮನೆಬಿಟ್ಟು ಹೊರಡದಂತೆ ಕರೊನಾ ವೈರಾಣುವಿಗೆ ಹಾಕಿದ ದಿಗ್ಬಂಧನ! ಬುದ್ಧಿವಂತಿಕೆ ಇದ್ದರೆ ಸಾಲದು, ಅದು ಸನ್ಮಾರ್ಗದಲ್ಲಿರಲಿ.