

ತಂತ್ರಜ್ಞಾನ ಹೆಚ್ಚಿದಂತೆ ಸೈಬರ್ ಅಪರಾಧಗಳ ಸಂಖ್ಯೆಯೂ ಅದೇ ವೇಗದಲ್ಲಿ ಹೆಚ್ಚುತ್ತಿದೆ. ಈ ಮೋಸದ ಜಾಲದ ಆಯಾಮಗಳು ಹಲವಾರು. ಆದರೆ ಈ ರೀತಿ ಮೋಸ ಹೋಗುವುದನ್ನು ತಡೆಗಟ್ಟುವಂಥ ಕೌಶಲವುಳ್ಳ ಯುವಕ- ಯುವತಿಯರಿಗಾಗಿ ಹಲವಾರು ಉದ್ಯೋಗಾವಕಾಶಗಳು ಲಭ್ಯವಿದ್ದು, ಅವುಗಳ ಮಾಹಿತಿ ಕೊರತೆ ಇದೆ. ಅಂಥ ಕೆಲವು ಅವಕಾಶಗಳ ಕುರಿತು ಇಲ್ಲಿ ವಿವರಿಸಲಾಗಿದೆ.
2018ರಲ್ಲಿ ಇಂಟರ್ನೆಟ್ ಸೌಲಭ್ಯವನ್ನು 39 ಕೋಟಿಗೂ ಹೆಚ್ಚು ಭಾರತೀಯರು ಬಳಸುತ್ತಿದ್ದರು. 2023ರಲ್ಲಿ ಇಂಟರ್ನೆಟ್ ಸೌಲಭ್ಯವನ್ನು 90 ಕೋಟಿಗೂ ಹೆಚ್ಚು ಭಾರತೀಯರು ಬಳಸಲಿದ್ದಾರೆ ಎಂದು ಅಂತಾರಾಷ್ಟ್ರೀಯ ಸಮೀಕ್ಷೆಯೊಂದರ ವರದಿಯಲ್ಲಿ ತಿಳಿಸಲಾಗಿದೆ. 2023ರಲ್ಲಿ 96 ಕೋಟಿಗೂ ಹೆಚ್ಚು ಭಾರತೀಯರು ಮೊಬೈಲ್ ಸೇವೆಗಳನ್ನು ಬಳಸಲಿದ್ದಾರೆ. ಒಟ್ಟಾಗಿ 2023ರಲ್ಲಿ ಸ್ಮಾರ್ಟ್ಫೋನ್, ಸ್ಮಾರ್ಟ್ ಟಿವಿ, ಕಂಪ್ಯೂಟರ್, ಸ್ಮಾರ್ಟ್ ವಿದ್ಯುತ್ ಮೀಟರ್, ಐಓಟಿ ತಂತ್ರಜ್ಞಾನ ಆಧಾರಿತ ಯಂತ್ರೋಪಕರಣಗಳು ಹೀಗೆ ಇಂಟರ್ನೆಟ್ ಸಂಪರ್ಕ ಹೊಂದಿರುವ 210 ಕೋಟಿಗೂ ಹೆಚ್ಚು ಯಂತ್ರೋಪಕರಣಗಳು ಭಾರತದಲ್ಲಿ ಕೆಲಸ ಮಾಡುತ್ತಿರುತ್ತವೆ. ವಿವಿಧ ಉದ್ದೇಶಗಳಿಗಾಗಿ ಇಂಟರ್ನೆಟ್ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಮಾಹಿತಿ ಸುರಕ್ಷತೆ ಮತ್ತು ಸೈಬರ್ ಸುರಕ್ಷತೆ ಕುರಿತು ಅನೇಕ ಭಾರತೀಯರಿಗೆ ತಿಳಿದಿಲ್ಲದಿರುವುದು ಆತಂಕದ ವಿಷಯವಾಗಿದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಾಮಾನ್ಯವಾಗಿ ಸೈಬರ್ ಅಪರಾಧಗಳು ಎಂದರೆ ಜಾಲತಾಣ ವಿರೂಪಗೊಳಿಸುವುದು, ಇ-ಮೇಲ್ ಮತ್ತು ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಅಕ್ರಮವಾಗಿ ಸ್ವಾಧೀನಕ್ಕೆ ತಗೆದುಕೊಂಡು ದುರ್ಬಳಕೆ ಮಾಡುವುದು, ನಿಮಗೆ ಲಕ್ಷಾಂತರ ರೂಪಾಯಿ ಲಾಟರಿ ಬಂದಿದೆ ಇತ್ಯಾದಿ ಆಮಿಷಗಳನ್ನು ಒಡ್ಡಿ ಅಮಾಯಕರನ್ನು ನಂಬಿಸಿ, ಕೆಲವು ಖರ್ಚುಗಳಿಗೆ ನೀವು ಐದಾರು ಲಕ್ಷ ಹಣ ನೀಡಿದರೆ, 24 ಗಂಟೆಯೊಳಗೆ ಈ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸುತ್ತೇವೆ ಎಂದು ಹಣ ಪಡೆದು ವಂಚಿಸುವುದು, ಚಲನಚಿತ್ರಗಳನ್ನು ಅನಧಿಕೃತವಾಗಿ ಇಂಟರ್ನೆಟ್ನಲ್ಲಿ ಬಿಡುಗಡೆ ಮಾಡಿ ನಿರ್ವಪಕರಿಗೆ ಕೋಟ್ಯಂತರ ರೂಪಾಯಿ ನಷ್ಟವುಂಟು ಮಾಡುವುದು, ಇತ್ಯಾದಿ ಕೃತ್ಯಗಳು ಎನ್ನುವ ಭಾವನೆ ಇದೆ.
ಆದರೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ನೋಡಿದಾಗ, ಬ್ಯಾಂಕ್ಗಳಿಂದ ಕೋಟ್ಯಂತರ ಹಣ ಕದಿಯುವುದು, ಸರ್ಕಾರ, ವಾಣಿಜ್ಯ, ಸೇನಾಪಡೆಗಳು, ಸಂಶೋಧನೆ, ಉದ್ಯಮ, ಶಿಕ್ಷಣ ಹೀಗೆ ವಿವಿಧ ಕಡೆಯಿಂದ ಮಹತ್ವದ ದಾಖಲೆಗಳನ್ನು ಕದ್ದು ದುರ್ಬಳಕೆ ಮಾಡಿಕೊಳ್ಳುವುದು, ಮಾದಕ ವಸ್ತು, ಭಯೋತ್ಪಾದನೆ ಮೊದಲಾದ ಗಂಭೀರ ಅಪರಾಧಗಳಿಗೆ ಪ್ರೋತ್ಸಾಹ ನೀಡುವುದು, ಹೀಗೆ ಹಲವು ರೀತಿಯ ಅಪರಾಧಗಳು ನಡೆಯುತ್ತಿವೆ. ವಿಶ್ವಾದ್ಯಂತ 130 ದೇಶಗಳಲ್ಲಿ ಪ್ರತಿದಿನ ಸರಾಸರಿ 7 ಸಾವಿರ ಕೋಟಿ ಸೈಬರ್ ಅಪರಾಧ ಯತ್ನಗಳು ನಡೆೆಯುತ್ತಿವೆ ಎಂದರೆ, ಸೈಬರ್ ಅಪರಾಧದ ಕರಾಳ ಮುಖದ ಅರಿವಾಗುತ್ತದೆ. ಕೆಲವು ದೇಶಗಳು ಭಯೋತ್ಪಾದಕ ಸಂಘಟನೆಗಳಿಗೆ ತರಬೇತಿ, ಹಣ ಮತ್ತು ರಕ್ಷಣೆ ನೀಡಿ ಬೇರೆ ದೇಶಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುವಂತೆ, ಸೈಬರ್ ಲೋಕದಲ್ಲಿ ಕೂಡ ಕೆಲವು ದೇಶಗಳು ಸೈಬರ್ ಭಯೋತ್ಪಾಕರಿಗೆ ಅಪಾರ ಮೊತ್ತದ ಹಣ, ರಕ್ಷಣೆಯನ್ನು ನೀಡುತ್ತಿವೆ. ಈ ಸೈಬರ್ ಭಯೋತ್ಪಾದಕರು ವಿಶ್ವದಾದಂತ್ಯ ನಡೆೆಸಿರುವ ಕೆಲವು ಅಪರಾಧಗಳು ಹೀಗಿವೆ: ಯುರೋಪಿನ ದೇಶವೊಂದರ ರಾಜಧಾನಿಯ ಮೇಲೆ ದಾಳಿ ನಡೆೆಸಿ ಅಲ್ಲಿಯ ವಿದ್ಯುತ್ ವಿತರಣೆ ವ್ಯವಸ್ಥೆ, ಬ್ಯಾಂಕುಗಳು, ಎಟಿಎಮ್ ನೀರು ಸರಬರಾಜು ವ್ಯವಸ್ಥೆ, ಮೆಟ್ರೋದಂತಹ ಸಮೂಹ ಸಾರಿಗೆ, ಹೀಗೆ ವಿವಿಧ ಸೌಲಭ್ಯಗಳನ್ನು ನಿಷ್ಕಿ›ಯಗೊಳಿಸಿದ್ದರು. ಸರ್ಕಾರದ ಕಚೇರಿಗಳು, ಪೊಲೀಸ್, ದೂರವಾಣಿ, ಟಿವಿ, ರೇಡಿಯೋ ಹೀಗೆ ವಿವಿಧ ಸೇವೆಗಳನ್ನು ಸುಮಾರು 12 ಗಂಟೆಗಳ ಕಾಲ ನಿಷ್ಕಿ›ಯಗೊಳಿಸಿದ್ದರು. ಈ ದಾಳಿಯಿಂದ ಜನಸಾಮಾನ್ಯರಲ್ಲಿ ಉಂಟಾದ ಆತಂಕ ಮತ್ತು ಸಾವಿರಾರು ಕೋಟಿ ನಷ್ಟದಿಂದ ಈ ದೇಶವಿನ್ನೂ ಚೇತರಿಸಿಕೊಳ್ಳಬೇಕಾಗಿದೆ.
ವಿದ್ಯುತ್ ಉತ್ಪಾದನೆ ಮತ್ತು ವಿತರಣೆ ವ್ಯವಸ್ಥೆ ನಿಷ್ಕೀಯಗೊಳಿಸುವುದು, ಬೃಹತ್ ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ ಸಂಕೀರ್ಣದಲ್ಲಿ ಸ್ಪೋಟಗಳು ಉಂಟಾಗುವಂತೆ ಮಾಡಿ ಅಪಾರ ಪ್ರಮಾಣದ ನಷ್ಟವುಂಟು ಮಾಡುವುದು, ದೊಡ್ಡ ಆಸ್ಪತ್ರೆಗಳ ಮೇಲೆ ದಾಳಿ ಮಾಡಿ ರೋಗಿಗಳಿಗೆ ನೀಡುವ ಚಿಕಿತ್ಸೆಯಲ್ಲಿ ಏರುಪೇರುಂಟು ಮಾಡುವುದು, ಸಿಟಿ ಸ್ಕಾ್ಯನ್, ಎಂಆರ್ಐ ಇತ್ಯಾದಿ ಪರೀಕ್ಷೆಗಳಲ್ಲಿ ತಪ್ಪು ಮಾಹಿತಿ ಬರುವಂತೆ ಮಾಡುವುದು, ಹೀಗೆ ಹಲವಾರು ರೀತಿ ಅಪರಾಧ ಕೃತ್ಯಗಳನ್ನು ಸೈಬರ್ ಅಪರಾಧಿಗಳು ಮತ್ತು ಭಯೋತ್ಪಾದಕರು ಮಾಡುತ್ತಿದ್ದಾರೆ. ವರ್ಷಕ್ಕೆ ಸರಾಸರಿ 6 ಲಕ್ಷ ಕೋಟಿ ಡಾಲರ್ಗಳಷ್ಟು ಆದಾಯಗಳಿಸುತ್ತಿರುವ ಸೈಬರ್ ಅಪರಾಧಿಗಳು, ವಿಶ್ವ ಎದುರಿಸುತ್ತಿರುವ ಅತ್ಯಂತ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿದ್ದಾರೆ.
ಸೈಬರ್ ಅಪರಾಧ ನಡೆೆಯುವ ಮೊದಲು ಅದನ್ನು ಗುರುತಿಸಲು ಫೈರ್ಐ ಮೊದಲಾದ ತಂತ್ರಾಂಶಗಳನ್ನು ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೊದಲಾದ ತಂತ್ರಜ್ಞಾನಗಳನ್ನು ಬಳಸುತ್ತೇವೆ. ಇಂತಹ ತಂತ್ರಾಂಶಗಳ ಬಳಕೆಯನ್ನು ಇಂಜಿನಿಯರಿಂಗ್ ಪದವಿ ಪಡೆದವರು ಮಾತ್ರವಲ್ಲದೆ, ಆಸಕ್ತಿ ಇರುವ ಇತರ ಪದವೀಧರರು ಕೂಡ ಕಲಿಯಬಹುದು. ಉದಾಹರಣೆಗೆ, ಹಲವು ದೇಶಗಳಲ್ಲಿ ವೈದ್ಯರು ಕೂಡ ಈ ತಂತ್ರಾಂಶಗಳ ಬಳಕೆಯನ್ನು ಕಲಿಯುತ್ತಿದ್ದು, ಸೈಬರ್ ಅಪರಾಧಿಗಳಿಂದ ಆಸ್ಪತ್ರೆ ಮತ್ತು ಆರೋಗ್ಯ ಸೇವೆಗಳನ್ನು ರಕ್ಷಿಸಲು ನೆರವಾಗುತ್ತಿದ್ದಾರೆ.
ಸ್ಮಾರ್ಟ್ಫೋನ್, ಇ-ಕಾಮರ್ಸ್, ಇ-ಆಡಳಿತ, ನಗದುರಹಿತ ವಾಣಿಜ್ಯ, ಇ-ಮಾಧ್ಯಮ ಮತ್ತು ಐಓಟಿ ಬಳಕೆ ನಮ್ಮ ದೇಶದಲ್ಲಿ ಹೆಚ್ಚಾಗುತ್ತಿದೆ. ಆದರೆ ಬಳಕೆದಾರರಲ್ಲಿ ಸೈಬರ್ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಕೆಲಸ ದೊಡ್ಡ ಪ್ರಮಾಣದಲ್ಲಿ ನಡೆೆಯಬೇಕಾಗಿದೆ. ಸ್ಥಳೀಯವಾಗಿ ಇಂತಹ ಶಿಕ್ಷಣ ನೀಡುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದರೆ ಇದರಲ್ಲಿ ಆಸಕ್ತ ಪದವಿಧರರಿಗೆ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ.
ಸೈಬರ್ ಸುರಕ್ಷತೆಯ ಆಡಿಟ್ ಮಾಡುವುದು, ಸೈಬರ್ ಸುರಕ್ಷತೆ ಎಷ್ಟು ಪರಿಣಾಮಕಾರಿಯಾಗಿದೆ ಎಂದು ಎಥಿಕಲ್ ಹ್ಯಾಕಿಂಗ್ ಮೊದಲಾದ ವಿಧಾನಗಳ ಮೂಲಕ ಪರೀಕ್ಷೆ ಮಾಡುವುದು, ಸೈಬರ್ ಸುರಕ್ಷತೆಯಲ್ಲಿ ಕೊರತೆ ಇರುವಲ್ಲಿ ಅಗತ್ಯ ತಾಂತ್ರಿಕ ನೆರವು ಮತ್ತು ಮಾರ್ಗದರ್ಶನ ನೀಡುವುದು, ಹೀಗೆ ವಿವಿಧ ರೀತಿಯ ಸೇವೆಗಳನ್ನು ನೀಡುವ ವೃತ್ತಿಪರರು ಮತ್ತು ನವೋದ್ಯಮಗಳು ಕೆಲಸ ಮಾಡುತ್ತಿವೆ. ಆದರೆ ಇವರ ಸಂಖ್ಯೆ ಹಲವು ಪಟ್ಟು ಹೆಚ್ಚಾಗಬೇಕಾಗಿದೆ.
ಬೆಂಗಳೂರಿನಲ್ಲಿ ಶಿಕ್ಷಣ
ಜರ್ಮನಿಯ ಪ್ರತಿಷ್ಠಿತ ಎಫ್ಓಎಮ್ ವಿಶ್ವವಿದ್ಯಾಲಯ ಮೊದಲಾಗಿ ವಿವಿಧ ದೇಶಗಳ ಹೆಸರಾಂತ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಬೆಂಗಳೂರಿನಲ್ಲಿರುವ ಡಾನ್ ಬಾಸ್ಕೋ ಸ್ಕೂಲ್ ಆಫ್ ಮ್ಯಾನೇಜ್ವೆುಂಟ್ ಸೈಬರ್ ಶಿಕ್ಷಣವನ್ನು ನೀಡುತ್ತಿದೆ. ಆಸಕ್ತಿ ಇದ್ದವರು ಈ ಸಂಸ್ಥೆಯನ್ನು ನೇರವಾಗಿ ಸಂರ್ಪಸಬಹುದು.
ಕೆಲಸಕ್ಕೆ ಅರ್ಹರ ಕೊರತೆ
ವಿಶ್ವದಾದಂತ್ಯಅಪರಾಧ ಮತ್ತು ಭಯೋತ್ಪಾದನೆ ನಡೆೆಸುತ್ತಿರುವ ಸೈಬರ್ ಅಪರಾಧಿಗಳನ್ನು ತಡೆಯಲು ಮತ್ತು ಅವರ ಪ್ರಯತ್ನಗಳನ್ನು ವಿಫಲಗೊಳಿಸಲು ಸೈಬರ್ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಸೈಬರ್ ಅಪರಾಧ ನಡೆೆದಾಗ, ಅದರ ತನಿಖೆ ಮಾಡಿ, ಅಪರಾಧಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಅವರಿಗೆ ಶಿಕ್ಷೆಯಾಗುವಂತೆ ಮಾಡಲು ಸೈಬರ್ ವಿಧಿವಿಜ್ಞಾನ ತಜ್ಞರು ಮತ್ತು ಸೈಬರ್ ಅಪರಾಧ ಕುರಿತು ದೇಶ-ವಿದೇಶಗಳಲ್ಲಿರುವ ಕಾನೂನುಗಳಲ್ಲಿ ಪರಿಣತಿ ಹೊಂದಿರುವ ವಕೀಲರು ಕೆಲಸ ಮಾಡುತ್ತಿದ್ದಾರೆ. ಆದರೆ ಈ ಉದ್ಯೋಗಗಳನ್ನು ಕುರಿತು ಮಾಹಿತಿ ಕೊರತೆ ಇರಬಹುದು, ಜಗತ್ತಿನಾದ್ಯಂತ 30 ಲಕ್ಷಕ್ಕೂ ಹೆಚ್ಚು ಉದ್ಯೋಗಗಳಿಗೆ ಸೂಕ್ತ ಅಭ್ಯರ್ಥಿಗಳು ದೊರೆಯುತ್ತಿಲ್ಲ. ಕಾನೂನು ಪದವಿಯ ಜತೆ ಸೈಬರ್ ಅಪರಾಧ ಕುರಿತ ಕಾನೂನುಗಳಲ್ಲಿ ಪರಿಣತಿ ಹೊಂದಿರುವ ವಕೀಲರಿಗೆ ದೇಶ ವಿದೇಶಗಳಲ್ಲಿ ಉದ್ಯಮಗಳು, ವಾಣಿಜ್ಯ ಸಂಸ್ಥೆಗಳು, ಬ್ಯಾಂಕ್ ಮತ್ತು ವಿಮಾ ಸಂಸ್ಥೆಗಳು, ಹೀಗೆ ಹಲವು ಕಡೆ ಬೇಡಿಕೆ ಇದೆ. ಭಾರತದಲ್ಲಿ ವೈಯಕ್ತಿಕ ಮಾಹಿತಿ ಸುರಕ್ಷತೆ ಕಾನೂನು ಜಾರಿಗೆ ಬರುವ ಸಾಧ್ಯತೆ ಇದ್ದು, ಇದರಲ್ಲಿ ಪರಿಣತಿ ಹೊಂದಿರುವ ನ್ಯಾಯವಾದಿಗಳಿಗೆ ಬೇಡಿಕೆ ಸೃಷ್ಟಿಯಾಗಲಿದೆ.
ಹಲವು ಉದ್ಯೋಗಾವಕಾಶ
ಸೈಬರ್ ಅಪರಾಧ ಕುರಿತು ತನಿಖೆ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಈ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಪ್ರಮಾಣ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರುವುದು ಅಗತ್ಯವಿದೆ. ಸೈಬರ್ ವಿಧಿವಿಜ್ಞಾನ ತಂತ್ರಜ್ಞಾನ, ನೆಟ್ವರ್ಕ್ ಸುರಕ್ಷತೆ, ಸೈಬರ್ ಕ್ಷೇತ್ರದಲ್ಲಿ ಬಳಕೆಯಾಗುವ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಾಂಶಗಳು, ಹೀಗೆ ವಿವಿಧ ಕೌಶಲಗಳನ್ನು ಹೊಂದಿರುವ ಇಂಜಿನಿಯರಿಂಗ್ ಮತ್ತು ಇತರೆ ಪದವಿಧರರಿಗೆ ಉದ್ಯೋಗಾವಕಾಶಗಳು ದೊರೆಯುತ್ತವೆ. ಮಹಿಳೆಯರು ಮತ್ತು ಮಕ್ಕಳನ್ನು ಗುರಿಯಾಗಿಟ್ಟು ಕೊಂಡು ಸೈಬರ್ ಅಪರಾಧ ನಡೆೆಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಅಪರಾಧ ಕೃತ್ಯಗಳಿಗೆ ಗುರಿಯಾದ ಮಹಿಳೆಯರು ಮತ್ತು ಮಕ್ಕಳಿಗೆ ಮೊದಲು ಸಾಂತ್ವನ ಹೇಳಿ, ಧೈರ್ಯ ತುಂಬುವ ಕೆಲಸ ಅಗತ್ಯವಾಗುತ್ತದೆ. ಇಂತಹ ಕೆಲಸದಲ್ಲಿ ಅಗತ್ಯ ಸಂವಹನ ಮತ್ತು ಸಮಾಲೋಚನೆ ಕೌಶಲಗಳನ್ನು ಹೊಂದಿರುವವರಿಗೆ ಉದ್ಯೋಗಾವಕಾಶಗಳು ದೊರೆಯುತ್ತಿವೆ. ಮ್ಯಾನೇಜ್ವೆುಂಟ್ ಮಟ್ಟದಲ್ಲಿ ಸೈಬರ್ ಅಪರಾಧಗಳನ್ನು ತಡೆಯಲು ಮತ್ತು ಸೈಬರ್ ಅಪರಾಧ ನಡೆೆದರೆ ಆ ಸಂಸ್ಥೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂದು ನಿರ್ಧರಿಸುವ, ಅಗತ್ಯ ನಿಯಮಗಳು ರೂಪಿಸಿ ಅನುಷ್ಠಾನ ಗೊಳಿಸುವ ಕೌಶಲ ಹೊಂದಿರುವ ಸ್ನಾತಕೋತ್ತರ ಪದವೀಧರರಿಗೆ ಬೇಡಿಕೆ ಇದೆ.
ಮೋಸ ಹೋಗಬೇಡಿ
ಸೈಬರ್ ಸುರಕ್ಷತೆ ಕುರಿತು ತರಬೇತಿ ನೀಡುತ್ತೇವೆ ಎಂದು ಹಲವು ತರಬೇತಿ ಸಂಸ್ಥೆಗಳು ಜಾಹಿರಾತು ನೀಡುತ್ತವೆ. ಸೈಬರ್ ಸುರಕ್ಷತೆ ಕುರಿತು ಕಲಿಸಲು ಅಗತ್ಯ ಸೌಕರ್ಯಗಳು ಮತ್ತು ಶಿಕ್ಷಕರು ಇಲ್ಲದಿದ್ದರೂ ಜಾಹಿರಾತು ನೀಡುವ ಕೆಲವು ಸಂಸ್ಥೆಗಳಿಂದ ವಿದ್ಯಾರ್ಥಿಗಳು ಮೋಸಹೋಗಿರುವ ಪ್ರಕರಣಗಳಿವೆ. ಆದ್ದರಿಂದ ಸೈಬರ್ ಸುರಕ್ಷತೆ ಕುರಿತು ತರಬೇತಿ ಪಡೆಯು ಮೊದಲು ಆ ಸಂಸ್ಥೆಯಲ್ಲಿರುವ ಸೌಲಭ್ಯಗಳು ಮತ್ತು ಶಿಕ್ಷಕರ ಅನುಭವ ಹಾಗೂ ಸೈಬರ್ ಸುರಕ್ಷತೆ ಕುರಿತ ಅಂತಾರಾಷ್ಟ್ರೀಯ ಪ್ರಮಾಣ ಪರೀಕ್ಷೆಗಳಿಗೆ ಅಗತ್ಯವಾದ ತರಬೇತಿ ಇಲ್ಲಿ ನೀಡಲಾಗುತ್ತದೆ ಎಂದು ಖಚಿತ ಪಡಿಸಿಕೊಳ್ಳವುದು ಸೂಕ್ತವಾಗಿದೆ.
ಡಾ. ಉದಯ ಶಂಕರ ಪುರಾಣಿಕ