

ಮೆಂತ್ಯಕಾಳಿನ ಇನ್ನಷ್ಟು ಪ್ರಯೋಜನಗಳನ್ನು ತಿಳಿದುಕೊಳ್ಳೋಣ. ಹುರಿದ ಮೆಂತ್ಯದ ಗಂಜಿಗೆ ಹಾಲು ಸಕ್ಕರೆ ಬೆರೆಸಿ ಸೇವಿಸುವುದರಿಂದ ಬಾಣಂತಿಯರಲ್ಲಿ ಹಾಲಿನ ಉತ್ಪತ್ತಿ ಹೆಚ್ಚುತ್ತದೆ. ಆದರೆ ಮೆಂತ್ಯದ ಅತಿಬಳಕೆಯಿಂದ ಅವರಿಗೆ ಬೇಧಿಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅವರು ಹಾಲುಣಿಸಿದಾಗ ಮಗುವಿಗೂ ಈ ಸಮಸ್ಯೆ ಬರುತ್ತದೆ. ಇಂತಹ ಸಂದರ್ಭದಲ್ಲಿ ಕಡ್ಡಾಯವಾಗಿ ವೈದ್ಯರ ಸಲಹೆಯನ್ನು ಪಡೆದುಕೊಳ್ಳಬೇಕು. ಬೇಳೆಗಳೊಡನೆ ಬೆರೆಸಿ ಮಾಡುವ ‘ಮೆಂತ್ಯದ ಹಿಟ್ಟು’ ಅತಿ ಹೆಚ್ಚು ಪ್ರೊಟೀನ್ ಕೊಡುವಂಥದ್ದು. ಪ್ರತಿದಿನ ಬೆಳಗ್ಗೆ ಮೆಂತ್ಯದ ಪುಡಿಯನ್ನು ಮಜ್ಜಿಗೆಗೆ ಮಿತವಾಗಿ ಸೇರಿಸಿ ಸೇವಿಸುವುದು ಮಧುಮೇಹ ರೋಗಕ್ಕೆ ಒಳ್ಳೆಯದು. ಇದು ದೇಹದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ.
ಬರೀ ಅಡುಗೆಗಷ್ಟೇ ಅಲ್ಲದೆ ಸೌಂದರ್ಯಸಾಧನಗಳಲ್ಲೂ ಮೆಂತ್ಯಕಾಳನ್ನು ಬಳಸಲಾಗುತ್ತದೆ. ಮೆಂತ್ಯಕಾಳಿನ ಪೇಸ್ಟ್ನ್ನು ತಲೆಗೂದಲಿಗೆ ಹಚ್ಚಿ ಅರ್ಧಗಂಟೆಯ ನಂತರ ಬಿಸಿನೀರಿನಲ್ಲಿ ತೊಳೆದರೆ ಕೂದಲು ನುಣುಪಾಗುವುದಲ್ಲದೆ ಹೊಳಪುಂಟಾತ್ತದೆ. ನೆನೆಸಿದ ಮೆಂತ್ಯಕಾಳನ್ನು ತೆಂಗಿನಹಾಲಿನಲ್ಲಿ ನುಣ್ಣಗೆ ಅರೆದು ಸ್ವಲ್ಪ ನಿಂಬೆರಸ ಸೇರಿಸಿ ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲು ಉದುರುವುದಿಲ್ಲ. ತಲೆಯಲ್ಲಿ ಹೊಟ್ಟು ಉಂಟಾಗುವುದಿಲ್ಲ ಹಾಗೂ ಕೂದಲಿನ ಬೆಳವಣಿಗೆಗೂ ಬಹಳ ಸಹಕಾರಿಯಾಗಿದೆ. ಕೊಬ್ಬರಿ ಎಣ್ಣೆಗೆ ಮೆಂತ್ಯಕಾಳನ್ನು ಹಾಕಿ ತಲೆಗೆ ಹಚ್ಚಿಕೊಂಡರೆ ಅಕಾಲದಲ್ಲಿ ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಬಹುದು. ಈ ಅವಧಿಯಲ್ಲಿ ಪ್ರತಿದಿನ ಬಿಸಿನೀರಿನ ಬದಲು ತಣ್ಣೀರಿನಲ್ಲಿ ತಲೆಸ್ನಾನ ಮಾಡಬೇಕು. ಮೆಂತ್ಯಕಾಳನ್ನು ನೀರಿನಲ್ಲಿ ನೆನೆಸಿ ನುಣ್ಣಗೆ ಅರೆದು ಹಾಲಿನೊಂದಿಗೆ ಬೆರೆಸಿ ರಾತ್ರಿ ಮಲಗುವ ಮುನ್ನ ಮುಖಕ್ಕೆ ಲೇಪಿಸಿ ಮರುದಿನ ಬೆಳಗ್ಗೆ ಬಿಸಿನೀರಿನಿಂದ ಮುಖ ತೊಳೆದುಕೊಳ್ಳಬೇಕು. ಇದು ಮುಖದ ಚರ್ಮ ಸುಕ್ಕುಗಟ್ಟುವುದನ್ನು ನಿವಾರಿಸುತ್ತದೆ. ಮೆಂತ್ಯಕಾಳನ್ನು ನೀರಿನಲ್ಲಿ ನೆನೆಸಿ ನುಣ್ಣಗೆ ಅರೆದು ಅಂಗೈ ಅಂಗಾಲುಗಳಿಗೆ ಲೇಪಿಸಿದರೆ ಉರಿ ಶಮನವಾಗುತ್ತದೆ.
ಮೆಂತ್ಯಕಾಳಿನ ಅತಿಬಳಕೆ ಒಳ್ಳೆಯದಲ್ಲ. ಸಕ್ಕರೆ ಕಾಯಿಲೆ ಇರುವವರು ಅತ್ಯಂತ ಎಚ್ಚರದಿಂದ ಮೆಂತ್ಯಕಾಳನ್ನು ಬಳಸಬೇಕಾಗುತ್ತದೆ. ಮೆಂತ್ಯಕಾಳನ್ನು ಔಷಧವಾಗಿ ಬಳಸುವ ಮುನ್ನ ವೈದ್ಯರ ಸಮ್ಮತಿ ಪಡೆಯುವುದು ಉತ್ತಮ.