

ಬ್ರಹ್ಮನ ಆದೇಶದಂತೆ ಸ್ವಾಯಂಭುವಮನು ಕರ್ದಮರ ಆಶ್ರಮಕ್ಕೆ ಬಂದು ತನ್ನ ಮಗಳಾದ ದೇವಹೂತಿಯನ್ನು ಕೊಟ್ಟು ಮದುವೆ ಮಾಡಿಕೊಡುತ್ತಾನೆ. ಕರ್ದಮ-ದೇವಹೂತಿಯರಲ್ಲಿ ಸಾಕ್ಷಾತ್ ಭಗವಂತನೇ ಕಪಿಲ ರೂಪದಿಂದ ಅವತರಿಸುತ್ತಾನೆ. ಕಪಿಲ ಅವನು ಯೋಗಶಾಸ್ತ್ರದ ಪ್ರಣೇತಾ. ಯೋಗಶಾಸ್ತ್ರದ ಮೂಲಕ ಎಲ್ಲರಿಗೆ ಪರಮಪುರುಷಾರ್ಥದ ದಾರಿ ತೋರಿದ ಸರ್ವಜ್ಞ. ತಮ್ಮ ಕರ್ತವ್ಯವನ್ನೆಲ್ಲ ಪೂರೈಸಿದ ಕರ್ದಮರಿಗೆ ಸಂಸಾರ ತೊರೆದು ಕಾಂತಾರ ಸೇರುವ ತವಕ. ಸಾಧನೆ ಮಾಡುವ ಹಂಬಲ. ಅದಕ್ಕಾಗಿ ಕಪಿಲನಿಗೆ ಅಪ್ಪಣೆ ಕೇಳುತ್ತಾರೆ. ವನದ ತಪೋಭೂಮಿಯಲ್ಲಿ ತಪವಗೈದು ಉದ್ಧಾರ ಹೊಂದುವಂತೆ ಕಪಿಲ ಅನುಮತಿಸುತ್ತಾನೆ.
ಭಾಗವತ ಹೇಳಿದ ಈ ಕಥೆಯನ್ನು ಕೇಳಿದಾಗ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡುವುದು ಸಹಜ. ಕಪಿಲ ಅವನು ಸಾಕ್ಷಾತ್ ಪರಮಾತ್ಮ. ಮುಮುಕ್ಷುಗಳಿಗೆ ಮೋಕ್ಷ ನೀಡುವ ಸವೋತ್ತಮ. ಅವನೇ ಮನೆಯಲ್ಲಿ ಮಗನಾಗಿ ಹುಟ್ಟಿರುವಾಗ ಕರ್ದ ಮರಿಗೆ ಇನ್ನೇನು ಸಾಧನೆ ಉಂಟು? ಅದಕ್ಕೆ ಸಮಾಧಾನವೂ ಸೂಕ್ಷ್ಮವಾಗಿಯೇ ಇದೆ.
ಪರಮಾತ್ಮನೇ ಕಪಿಲನಾಗಿ ಮನೆಯಲ್ಲಿ ಇದ್ದರೂ ಅದರಿಂದ ಮೋಕ್ಷ ಲಭಿಸುವುದಿಲ್ಲ. ಪರಮಪುರುಷಾರ್ಥವಾದ ಮೋಕ್ಷ ಅದು ಶಾಸ್ತ್ರವಿಹಿತವಾದ ಧರ್ವಚರಣೆಯಿಂದ ಮಾತ್ರ ಸಾಧ್ಯ. ಕರ್ದಮರು ಋಷಿಗಳು. ತಮ್ಮ ಹೃದಯದಲ್ಲಿ ಭಗವದಾರಾಧನೆ ಮಾಡಿ ಸಾಕ್ಷಾತ್ಕಾರ ಮಾಡಿಕೊಳ್ಳಬೇಕು. ಅದೇ ಅವರ ಸಾಧನೆ. ಅದೇ ಅವರ ಧರ್ಮ. ಹಾಗಾಗಿ ಸರ್ವಧರ್ವಧ್ಯಕ್ಷನಾದ ಸ್ವತಃ ಭಗವಂತನೇ ಕರ್ದಮರಿಗೆ ಧರ್ಮಸಾಧನೆ ಮಾಡಲು ಕಳಿಸಿಕೊಟ್ಟ.
ಪರಮಪುರುಷಾರ್ಥವಾದ ಮೋಕ್ಷ ಎಲ್ಲರಿಗೂ ಅಪೇಕ್ಷಿತವೇ. ಅದಕ್ಕಾಗಿಯೇ ಎಲ್ಲರೂ ಕಷ್ಟಪಡುವುದುಂಟು. ‘ಸ್ವಧರ್ವಚರಣಂ ಶ್ರೇಯಃ’ ಎಂದು ಹೇಳಿದಂತೆ ಎಲ್ಲರಿಗೂ ತಮ್ಮ ಧರ್ವಚರಣೆ ಮಾಡುವುದರಿಂದಲೇ ಶ್ರೇಯಸ್ಸು. ಎಲ್ಲರಿಗೂ ಅವರವರದೇ ಆದ ಧರ್ವಚರಣೆ ವಿಹಿತವಾಗಿದೆ. ಧರ್ಮವನ್ನು ಶ್ರದ್ಧೆಯಿಂದ ಆಚರಿಸಬೇಕು. ನಾವು ದೊಡ್ಡ ಸ್ಥಾನದಲ್ಲಿರಬಹುದು. ದೊಡ್ಡ ಅಧಿಕಾರದಲ್ಲಿ ಇರಬಹುದು. ಏನೇ ಇದ್ದರೂ ನಮಗೆ ವಿಹಿತವಾದ ಧರ್ವಚರಣೆಯನ್ನು ಬಿಡುವಂತಿಲ್ಲ. ಈ ಸಂದೇಶವನ್ನು ಕರ್ದಮರು ನಮಗೆ ನೀಡುತ್ತಿದ್ದಾರೆ. ಸಾಕ್ಷಾತ್ ಭಗವಂತನೇ ತಮ್ಮ ಮಗನಾಗಿ ಮನೆಯಲ್ಲಿ ಅವತರಿಸಿ ಬಂದಿದ್ದರೂ ಕರ್ದಮರು ತಪಸ್ಸು, ಕರ್ವಚರಣೆ ಇವುಗಳನ್ನು ಬಿಡಲಿಲ್ಲ. ಹಾಗಾಗಿ, ಮೋಕ್ಷಪ್ರಾಪ್ತಿಗಾಗಿ, ಧರ್ಮಸಾಧನೆಗಾಗಿ ನಮ್ಮ ಪ್ರಯತ್ನ ಮಾಡೋಣ.
(ಲೇಖಕರು ಸಂಸ್ಕೃತ ವಿದ್ವಾಂಸರು)