Wonders of Space: ನಮ್ಮಿಂದ ಅಂದಾಜು 12 ಸಾವಿರ ಬೆಳಕಿನ ವರ್ಷಗಳ ಆಚೆಗಿನ ಬಾಹ್ಯಾಕಾಶದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ತನಗೆ ತಾನೇ ತಾಯಿಯಂತಿದ್ದ ನಕ್ಷತ್ರವೊಂದು, ತನ್ನನ್ನೇ ಸುತ್ತುತ್ತಿದ್ದ ಮಗು ಸಮಾನ ಗ್ರಹವನ್ನು ಹೊಟ್ಟೆಗೆ ಹಾಕಿಕೊಂಡ ವಿದ್ಯಮಾನವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಆದರೆ, ಕಥೆ ಇಲ್ಲೇ ಮುಗಿಯುವುದಿಲ್ಲ! ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ ನೀಡಿದ ಇತ್ತೀಚಿನ ಕ್ರಾಂತಿಕಾರಿ ದತ್ತಾಂಶಗಳು, ಈ ವಿದ್ಯಮಾನದ ಬಗ್ಗೆ ಖಗೋಳಶಾಸ್ತ್ರಜ್ಞರು ಹೊಂದಿದ್ದ ಮೂಲ ಕಲ್ಪನೆಯನ್ನೇ ಸಂಪೂರ್ಣವಾಗಿ ಬದಲಿಸಿ ಹೊಸ ದಿಕ್ಕು ನೀಡಿದೆ.
ZTF SLRN-2020 ಎಂದು ಹೆಸರಿಸಲಾದ ಈ ಘಟನೆ 2020ರ ಮೇ ತಿಂಗಳಲ್ಲಿ ವಿಜ್ಞಾನಿಗಳ ಗಮನಕ್ಕೆ ಬಂದಿತ್ತು. ಭೂಮಿಯಿಂದ ಸುಮಾರು 12 ಸಾವಿರ ಬೆಳಕಿನ ವರ್ಷಗಳಷ್ಟು ದೂರದಲ್ಲಿರುವ ಈ ನಕ್ಷತ್ರವು ಆಕಾಶದ ಅಕ್ವಿಲಾ (ಹದ್ದು) ನಕ್ಷತ್ರಪುಂಜದ ದಿಕ್ಕಿನಲ್ಲಿದೆ. ನಕ್ಷತ್ರವು ಇದ್ದಕ್ಕಿದ್ದಂತೆ ಹೆಚ್ಚು ಪ್ರಕಾಶಮಾನವಾಗಿ ಕಾಣಿಸಿಕೊಂಡು ನಂತರ ನಿಧಾನವಾಗಿ ಮಂಕಾಗತೊಡಗಿತ್ತು.
ಆರಂಭದಲ್ಲಿ ಇದೊಂದು ಸಾಮಾನ್ಯ ನಕ್ಷತ್ರ ಸ್ಫೋಟವಿರಬಹುದು ಎಂದು ಸಂಶೋಧಕರು ಭಾವಿಸಿದ್ದರು. ಆದರೆ ನಂತರದ ಅವಲೋಕನಗಳಲ್ಲಿ ನಕ್ಷತ್ರದ ಸುತ್ತ ಧೂಳಿನ ಮೋಡಗಳು ಮತ್ತು ಅತಿಗೆಂಪು ಬೆಳಕಿನ ಹೆಚ್ಚಳ ಕಂಡುಬಂದಿತ್ತು. ಈ ಸುಳಿವುಗಳನ್ನು ಪರಿಶೀಲಿಸಿದ ವಿಜ್ಞಾನಿಗಳು, ನಕ್ಷತ್ರವೊಂದು ತನ್ನ ಸುತ್ತ ಸುತ್ತುತ್ತಿದ್ದ ಬೃಹತ್ ಅನಿಲ ಗ್ರಹವನ್ನು ನುಂಗಿರುವ ಸಾಧ್ಯತೆಯನ್ನು ಗುರುತಿಸಿದರು. ಆ ಗ್ರಹವು ಗುರುಗ್ರಹದ ಗಾತ್ರಕ್ಕೆ ಹೋಲಿಕೆಯಾಗಿತ್ತು ಎಂದು ಅಂದಾಜಿಸಲಾಗಿದೆ.
2023ರಲ್ಲಿ ಪ್ರಕಟವಾದ ಅಧ್ಯಯನವು ವಯಸ್ಸಾಗುತ್ತಿದ್ದ ನಕ್ಷತ್ರವು ಗಾತ್ರದಲ್ಲಿ ವಿಸ್ತರಿಸಿ ತನ್ನ ಸಮೀಪದಲ್ಲಿದ್ದ ಗ್ರಹವನ್ನು ಆವರಿಸಿಕೊಂಡಿರಬಹುದು ಎಂದು ವಿವರಿಸಿತ್ತು. ಆದರೆ 2025ರಲ್ಲಿ ನಾಸಾದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ ನಡೆಸಿದ ಹೊಸ ಅವಲೋಕನಗಳು ಈ ವಿವರಣೆಗೆ ಹೊಸ ತಿರುವು ನೀಡಿದವು.
ನಕ್ಷತ್ರವು ಗ್ರಹವನ್ನು ನುಂಗುವಷ್ಟು ದೊಡ್ಡದಾಗಿ ವಿಸ್ತರಿಸಿರಲಿಲ್ಲ ಎಂಬ ಸುಳಿವು ವಿಜ್ಞಾನಿಗಳಿಗೆ ಸಿಕ್ಕಿತು. ಬದಲಾಗಿ, ನಕ್ಷತ್ರದ ಗುರುತ್ವಾಕರ್ಷಣೆಯ ಪ್ರಭಾವದಿಂದ ಗ್ರಹದ ಕಕ್ಷೆ ಕ್ರಮೇಣ ಕುಗ್ಗಿ, ಅದು ನಕ್ಷತ್ರದ ವಾತಾವರಣದೊಳಗೆ ಪ್ರವೇಶಿಸಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ. ನಕ್ಷತ್ರದ ವಾತಾವರಣದ ಮೂಲಕ ಚಲಿಸುವಾಗ ಗ್ರಹದ ಹೊರಪದರಗಳು ಕಳಚಿಕೊಂಡು, ಅನಿಲ ಮತ್ತು ಧೂಳಿನ ಮೋಡಗಳು ಸೃಷ್ಟಿಯಾಗಿರಬಹುದು. ಆದರೆ ಗ್ರಹದ ಅಂತಿಮ ಸ್ಥಿತಿಯ ಬಗ್ಗೆ ವಿಜ್ಞಾನಿಗಳಿಗೆ ಇನ್ನೂ ಸಂಪೂರ್ಣ ಖಚಿತತೆ ಇಲ್ಲ. ಈ ವಿದ್ಯಮಾನದ ಉಳಿದ ಗುರುತುಗಳನ್ನು ಅಧ್ಯಯನ ಮಾಡುವ ಮೂಲಕ ಅದರ ಹಿಂದಿನ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ.
ಖಗೋಳ ವಿಜ್ಞಾನಿಗಳ ಪ್ರಕಾರ, ಇನ್ನೂ ಸುಮಾರು ಐದು ಶತಕೋಟಿ ವರ್ಷಗಳ ಬಳಿಕ ನಮ್ಮ ಸೂರ್ಯ ಕೂಡ ತನ್ನ ಜೀವನದ ಕೊನೆಯ ಹಂತದಲ್ಲಿ ಕೆಂಪು ದೈತ್ಯ ನಕ್ಷತ್ರವಾಗಿ ವಿಸ್ತರಿಸಲಿದ್ದಾನೆ. ಆಗ ಬುಧ ಮತ್ತು ಶುಕ್ರ ಗ್ರಹಗಳನ್ನು ಆವರಿಸಿಕೊಳ್ಳುವ ಸಾಧ್ಯತೆಯಿದೆ. ಭೂಮಿಯ ಭವಿಷ್ಯದ ಬಗ್ಗೆ ಕೂಡ ಅನಿಶ್ಚಿತತೆ ಇದೆ.ಈ ಸಂಶೋಧನೆಯು ಗ್ರಹಗಳು ತಮ್ಮ ನಕ್ಷತ್ರಗಳ ಸುತ್ತ ಎಷ್ಟು ಕಾಲ ಉಳಿಯಬಲ್ಲವು ಮತ್ತು ಸೌರವ್ಯೂಹಗಳ ಅಂತಿಮ ಭವಿಷ್ಯ ಹೇಗಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳಿಗೆ ಹೊಸ ಸುಳಿವು ನೀಡಿದೆ.( ಏಜೇನ್ಸಿಸ್)