

ನವದೆಹಲಿ: ಭಾರತದ ಪಶುವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯಲ್ಲಿ, ಏಳೂವರೆ ವರ್ಷದ ಕುಕರ್ ಸಸ್ಪೇನಿಯಲ್ ತಳಿಯ ನಾಯಿಗೆ ಪೇಸ್ಮೇಕರ್ ಇಂಪ್ಲಾಂಟ್ ಸರ್ಜರಿಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ಭಾರತದಲ್ಲಿ ಪಶುವೈದ್ಯಕೀಯ ಕ್ಷೇತ್ರದಲ್ಲಿ ಇಂಥದ್ದೊಂದು ಸರ್ಜರಿ ಇದೇ ಮೊದಲು ಎಂದು ಪಶುವೈದ್ಯಕೀಯ ಪರಿಣತರು ಹೇಳಿದ್ದಾರೆ.
ಗುರುಗ್ರಾಮದ ಬುಲ್ಬುಲ್ ಕುಮಾರ್ ಮತ್ತು ಆಕೆಯ ಮಗ ಮನು ಅವರು ಸಾಕಿದ ನಸು ಚಿನ್ನದ ಬಣ್ಣದ ಹೆಣ್ನು ನಾಯಿ ಖುಷಿ.ಇದಕ್ಕೇ ಹೃದಯದ ಸಮಸ್ಯೆ ಕಾಣಿಸಿಕೊಂಡದ್ದು.ಗ್ರೇಟರ್ ಕೈಲಾಶ್ 1ರ ಮ್ಯಾಕ್ಸ್ ವೆಟ್ಸ್ ಹಾಸ್ಪಿಟಲ್ಗೆ ಖುಷಿಯನ್ನು ಕರೆತಂದಿದ್ದ ಅವರು, ವೈದ್ಯರ ಸಲಹೆಯಂತೆ ಪೇಸ್ಮೇಕರ್ ಸರ್ಜರಿಗೆ ಒಳಪಡಿಸಿದರು. ಒಂದೂವರೆ ಗಂಟೆ ಕಾಲ ಸರ್ಜರಿ ನಡೆಯಿತು. ಇದಕ್ಕಾಗಿ ಪೀಡಿಯಾಟ್ರಿಕ್ ಪೇಸ್ಮೇಕರನ್ನು ವಿದೇಶದಿಂದ ತರಿಸಲಾಗಿತ್ತು. ಡಾ.ಭಾನುದೇವ್ ಶರ್ಮಾ, ಡಾ.ಕುನಾಲ್ ದೇವ್ ಶರ್ಮಾ ಅವರನ್ನು ಒಳಗೊಂಡ ತಂಡ ಈ ಸರ್ಜರಿಯನ್ನು ನೆರವೇರಿಸಿತ್ತು.ಸರ್ಜರಿ ಯಶಸ್ವಿಯಾಗಿದ್ದು, ಖುಷಿ ಕ್ಷೇಮವಾಗಿದೆ ಎಂದು ಮನು ಹೇಳಿಕೊಂಡಿದ್ದಾರೆ.
ಸರ್ಜರಿಗೆ ಒಳಗಾಗುವ ಮೊದಲು ಅದರ ಹೃದಯ ಬಡಿತ ನಾರ್ಮಲ್ ಆಗಿ ಇರಬೇಕಾಗಿದ್ದ 60-120ರಿಂದ ಪ್ರತಿ ನಿಮಿಷಕ್ಕೆ 20 ಬಡಿತ ಕಡಿಮೆ ಆಗುತ್ತಿತ್ತು.ಕಳೆದ ವರ್ಷ ಇದೇ ನಾಯಿಗೆ ಕಿವಿಗೆ ಸಂಬಂಧಿಸಿದ ಸರ್ಜರಿಯನ್ನೂ ನೆರವೇರಿಸಲಾಗಿತ್ತು. ಆ ಸಂದರ್ಭದಲ್ಲಿ ಅದು ಅರಿವು ತಪ್ಪಿ ಬಿದ್ದಿತ್ತು.ಆಗ ಹೇಗೋ ಅದರ ಆರೋಗ್ಯವನ್ನು ಸುಧಾರಿಸಲಾಗಿತ್ತು. ತರುವಾಯ ಅದರ ಆರೋಗ್ಯ ತಪಾಸಣೆ ನಡೆಸಿದ ವೇಳೆ ಹೃದಯ ಸಮಸ್ಯೆ ಬಹಿರಂಗವಾಗಿತ್ತು.ಕೂಡಲೇ ಅಗತ್ಯಕ್ರಮಗಳನ್ನು ತೆಗೆದುಕೊಂಡು ಡಿಸೆಂಬರ್ 15ರಂದು ಈ ಪೇಸ್ಮೇಕರ್ ಇಂಪ್ಲಾಂಟ್ ಸರ್ಜರಿ ನೆರವೇರಿಸಲಾಯಿತು ಎಂದು ಸರ್ಜನ್ ಹೇಳಿದ್ದಾರೆ.(ಏಜೆನ್ಸೀಸ್)