

| ರಾಜೇಶ್ವರಿ ಹಿರೇಮಠ
ಸಂಕಷ್ಟ, ಬಿಕ್ಕಟ್ಟು, ದುಃಖ ಬಂದೆರಗಿದಾಗ ಮನುಷ್ಯನಿಗೆ ಗೋಚರಿಸುವ ಪರಿಹಾರ ಮಾರ್ಗವಾದರೂ ಯಾವುದು? ಒಂದೋ ಅಧ್ಯಾತ್ಮದ ತತ್ತ್ವಗಳತ್ತ ಹೊರಳಿ ಉತ್ತರ ಕಂಡುಕೊಳ್ಳುವುದು ಇಲ್ಲವೆ ಆತ್ಮಾವಲೋಕನ ಮಾಡಿಕೊಂಡು, ಸಮಾಧಾನ ಪಟ್ಟುಕೊಳ್ಳುವುದು. ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭಗಳು ಆಗಾಗ ಒದಗಿ ಬರುತ್ತವೆಯಾದರೂ, ನಾವೇ ಏನಾದರೂ ನೆಪ ಮಾಡಿಕೊಂಡು ಅಂಥ ಸನ್ನಿವೇಶಗಳಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತೇವೆ. ಎಷ್ಟೋ ಬಾರಿ ದಿನನಿತ್ಯದ ಪ್ರಸಂಗಗಳು ಅಥವಾ ಕೆಲ ಘಟನೆಗಳೇ ಮರೆಯಲಾರದ ಜೀವನಪಾಠ ಕಲಿಸಿ ಬಿಡುತ್ತವೆ. ಮುಖ್ಯವಾಗಿ, ಮಕ್ಕಳ ಲಾಲನೆಪಾಲನೆ ವಿಷಯದಲ್ಲಿ ಎಷ್ಟು ಜಾಗ್ರತೆ ವಹಿಸಿದರೂ ಕಡಿಮೆಯೇ. ಅದರಲ್ಲೂ, ಮಕ್ಕಳು ಪಾಲಕರ ನಡವಳಿಕೆಯನ್ನು ಗಮನಿಸುತ್ತ ಹಾಗೇ ಬೆಳೆಯುತ್ತಾರೆ ಎಂಬ ಮಾತು ಅಕ್ಷರಶಃ ನಿಜ. ಪಾಲಕರ ಜೀವನ ಮತ್ತು ಅವರ ಜೀವನದಲ್ಲಿನ ಘಟನೆಗಳು ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ. ಆದರ್ಶ, ಮೌಲ್ಯ, ಪ್ರಾಮಾಣಿಕತೆ ಬಗ್ಗೆ ಹೇಳುತ್ತಲೇ ಮಕ್ಕಳ ವ್ಯಕ್ತಿತ್ವ ವಿಕಸನವಾಗುವಂತೆ ನೋಡಿಕೊಳ್ಳಬೇಕು.
ಈಚೆಗೆ ನನ್ನ ಜೀವನದಲ್ಲಿ ಆದ ಅನುಭವವೊಂದನ್ನು ಹಂಚಿಕೊಳ್ಳ ಬಯಸುತ್ತೇನೆ. ಕೋವಿಡ್ ಲಾಕ್ಡೌನ್ ಪರಿಣಾಮ ಶಾಲೆ-ಕಾಲೇಜುಗಳು ಇನ್ನೂ ಆರಂಭಗೊಂಡಿಲ್ಲ. ನನ್ನ ಮಗನ ಕಾಲೇಜು ಕೂಡ ಇದಕ್ಕೆ ಹೊರತಾಗಿಲ್ಲ. ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹಾಗಾಗಿ, ಪೂರ್ವಭಾವಿ ಪರೀಕ್ಷೆಗಳನ್ನು ಆನ್ಲೈನ್ ಮುಖಾಂತರವೇ ಆಯೋಜಿಸಲಾಗಿತ್ತು. ಹಾಗೆ, ಆನ್ಲೈನ್ ಪರೀಕ್ಷೆ ಬರೆಯುತ್ತಿರುವಾಗ ಒಂದು ಉತ್ತರಕ್ಕಾಗಿ ಆತ ಕಷ್ಟಪಡುತ್ತಿರುವುದನ್ನು ಗಮನಿಸಿದೆ. ನಾನು ಸುಮ್ಮನಿರಲಾರದೆ ‘ಗೂಗಲ್ ಸರ್ಚ್ ಮಾಡುವ ಮೂಲಕ ಉತ್ತರ ಹುಡುಕಲು ಯತ್ನಿಸಲೇ?’ ಎಂದು ಕೇಳಿಬಿಟ್ಟೆ. ಮಗ ಮುಗುಳ್ನಗೆ ಬೀರುತ್ತ, ‘ನಾನು ಪ್ರಾಮಾಣಿಕವಾಗಿ ಇರಬೇಕು ಎಂದು ನೀನು ಸದಾ ಹೇಳುತ್ತಲೇ ಇರುತ್ತೀ ಮತ್ತು ಪ್ರಾಮಾಣಿಕತೆಯೇ ಅತ್ಯುತ್ತಮ ನೀತಿ ಎಂದು ಹೇಳುತ್ತಿ, ಆದರೆ ಇಂದು ಏನಾಯಿತು?’ ಎಂದು ಪ್ರಶ್ನಿಸಿದ.
ನಾನು ದಿಗ್ಭ್ರಮೆಗೊಂಡೆ, ಮುಜುಗರಕ್ಕೆ ಒಳಗಾದೆ ಮತ್ತು ಆ ಕ್ಷಣದಲ್ಲಿ ನನ್ನ ದೃಷ್ಟಿಯಲ್ಲೇ ನಾನು ತುಂಬ ಚಿಕ್ಕವಳಾಗಿಬಿಟ್ಟೆ. ಅಪರಾಧಿಭಾವದಿಂದಾಗಿ ಅವನ ಮಾತಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದೇ ತಿಳಿಯಲಿಲ್ಲ. ಆದರೆ, ಮಗನ ಆಂತರಿಕ ಶಕ್ತಿ, ಪ್ರಾಮಾಣಿಕತೆ ಬಗ್ಗೆ ಹೆಮ್ಮೆಪಟ್ಟೆ. ಯುವಸಮುದಾಯವನ್ನು ಪಾಲಕರು ಎಷ್ಟೋ ಬಾರಿ ಸುಖಾಸುಮ್ಮನೆ ದೂಷಿಸುತ್ತಾರೆ. ಅವರಿಗೆ ‘ಒಳ್ಳೆತನ’ ಗೊತ್ತಿಲ್ಲ ಎಂಬ ನಿರ್ಣಯ ಕೊಟ್ಟುಬಿಡುತ್ತಾರೆ. ಆದರೆ, ಒಳ್ಳೆಯ ನೀತಿ, ಸಂಸ್ಕಾರ, ಜೀವನಾದರ್ಶ, ಮೌಲ್ಯಗಳನ್ನು ಕೊಟ್ಟರೆ ಅವರು ಖಂಡಿತವಾಗಿಯೂ ಜೀವನದಲ್ಲಿ ಅದನ್ನು ಪಾಲಿಸುತ್ತಾರೆ ಎಂಬುದರಲ್ಲಿ ಅನುಮಾನ ಇಲ್ಲ.
ಪಾಲಕರಾದ ನಾವು ಏನು ಮಾಡುತ್ತೇವೆ ಮತ್ತು ಕೆಲವು ಸಂದರ್ಭಗಳಲ್ಲಿ ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದು ಮಕ್ಕಳ ಅಭಿಪ್ರಾಯಗಳನ್ನು ರೂಪಿಸುತ್ತವೆ. ಯುವ ಸಮುದಾಯದಲ್ಲಿ ಅನೇಕ ಉತ್ತಮ ಗುಣಗಳಿವೆ ಎಂಬುದನ್ನು ಗಮನಿಸಬೇಕು. ಅಲ್ಲದೆ, ಪಾಲಕರಾಗಿ ನಾವು ಏನು ಹೇಳುತ್ತೇವೆ ಮತ್ತು ಮುಖ್ಯವಾಗಿ ಮಕ್ಕಳ ಉಪಸ್ಥಿತಿಯಲ್ಲಿ ನಾವು ಏನು ಮಾಡುತ್ತೇವೆ ಎಂಬುದರ ಬಗ್ಗೆ ಜಾಗರೂಕರಾಗಿ ಇರಬೇಕು. ಭವಿಷ್ಯದಲ್ಲಿ ಅವರು ಉತ್ತಮ ಪ್ರಜೆಗಳಾಗಬೇಕೆಂದು ಬಯಸಿದರೆ, ನಾವು ವರ್ತಮಾನದಲ್ಲಿ ಒಳ್ಳೆಯ ನಡವಳಿಕೆ, ಮೌಲ್ಯಗಳ ಉದಾಹರಣೆಯ ಮೂಲಕ ಅವರನ್ನು ಮುನ್ನಡೆಸಬೇಕಾಗಿದೆ.
(ಲೇಖಕರು ಕಾಪೋರೇಟ್ ವೃತ್ತಿಪರರು, ಹವ್ಯಾಸಿ ಬರಹಗಾರರು)