

ದೊಣ್ಣೆ ಮೆಣಸಿನಕಾಯಿ ಎಂದರೆ ಯಾರಿಗೆ ಗೊತ್ತಿಲ್ಲ? ಸ್ಥಳೀಯವಾಗಿ ಕ್ಯಾಪ್ಸಿಕಂ ಎಂದು ಕರೆಯಲ್ಪಡುವ ಅಮೆರಿಕ ಮೂಲದ ಈ ತರಕಾರಿ ಭಾರತೀಯರ ಅಡುಗೆಮನೆಗಳಿಗೂ ಲಗ್ಗೆ ಇಟ್ಟಿದೆ. ಇದನ್ನು ಪ್ರಪಂಚದಾದ್ಯಂತ ಬೆಳೆಯಲಾಗುತ್ತಿದೆ. ಇದರ ಕೆಲವು ಪ್ರಭೇದಗಳನ್ನು ಸಂಬಾರಪದಾರ್ಥಗಳಾಗಿ, ತರಕಾರಿಗಳಾಗಿ ಮತ್ತು ಔಷಧಿಗಳಾಗಿ ಬಳಸಲಾಗುತ್ತಿದೆ. ಔಷಧೀಯ ಗುಣಗಳಿಂದಾಗಿ ಮೊದಲು ಇದನ್ನು ಔಷಧೀಯ ರೂಪದಲ್ಲಿಯೇ ಬಳಸಲಾಗುತ್ತಿತ್ತು.
ಸಾಮಾನ್ಯವಾಗಿ ಇದರಲ್ಲಿ ಹಸಿರು, ಹಳದಿ ಹಾಗೂ ಕೆಂಪು ಬಣ್ಣಗಳಿರುತ್ತವೆ. ಕ್ಯಾಪ್ಸಿಕಂಗಳನ್ನು ಅವುಗಳ ವಿಧ ಮತ್ತು ಸ್ಥಳವನ್ನು ಆಧರಿಸಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಭಾರತೀಯ ಇಂಗ್ಲಿಷ್ನಲ್ಲಿ ಸಾಂಕೇತಿಕವಾಗಿ ಕೇವಲ ಕ್ಯಾಪ್ಸಿಕಂ ಎಂದು ಕರೆಯಲಾಗುತ್ತದೆ. ಕ್ಯಾಪ್ಸಿಕಂ ಮಧುಮೇಹವನ್ನು ನಿಯಂತ್ರಿಸುತ್ತದೆ ಎಂಬ ಅಂಶವು ಕೆಮಿಕಲ್ ಟೆಕ್ನಾಲಜಿ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ನ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ತಿಳಿದುಬಂದಿದೆ.
ವಿಟಮಿನ್ ಎ, ವಿಟಮಿನ್ ಸಿ, ಫೈಬರ್ ಅಂಶ, ಕ್ಯಾರೊಟೆನಾಯ್ಡಸ್ ಅಂಶಗಳು ಇದರಲ್ಲಿದ್ದು; ಹಲವು ಕಾಯಿಲೆಗಳನ್ನು ಗುಣಪಡಿಸಲು ನೆರವಾಗುತ್ತವೆ. ಹೃದಯದ ಆರೋಗ್ಯಕ್ಕೆ ಪೂರಕವಾಗಿರುವ ಲೈಕೋಪಿನ್ ಎಂಬ ಪೋಷಕಾಂಶ ಕೆಂಪು ಕ್ಯಾಪ್ಸಿಕಂನಲ್ಲಿದೆ. ಇದರಲ್ಲಿರುವ ಲೈಕೋಪಿನ್ ಎಂಬ ಕ್ಯಾರೋಟಿನಾಯ್್ಡ ಗರ್ಭಕೋಶ, ಪ್ರಾಸ್ಟೇಟ್, ಮೇದೋಜೀರಕ ಗ್ರಂಥಿ ಹಾಗೂ ಮೂತ್ರಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ತಗ್ಗಿಸುತ್ತವೆ. ಅಲ್ಲದೇ ಇದರಲ್ಲಿರುವ ಕಿಣ್ವಗಳು ಅನ್ನನಾಳ ಮತ್ತು ಕರುಳಿನ ಕ್ಯಾನ್ಸರ್ ನಿಂದಲೂ ರಕ್ಷಣೆ ಒದಗಿಸುತ್ತವೆ.
ಜೀವರಾಸಾಯನಿಕ ಕ್ರಿಯೆಯನ್ನು ಕ್ಯಾಪ್ಸಿಕಂ ಉತ್ತಮಗೊಳಿಸುತ್ತದೆ. ಅಲ್ಲದೆ ದೇಹದ ತೂಕವನ್ನು ಕಡಿಮೆಗೊಳಿಸುವಲ್ಲಿ ಸಹಕಾರಿಯಾಗಿದೆ. ಇದರಲ್ಲಿ ಕಡಿಮೆ ಕ್ಯಾಲೋರಿಗಳಿದ್ದು, ಪೋಷಕಾಂಶಗಳು ಟ್ರೈಗ್ಲಿಸರೈಡುಗಳನ್ನು ತಗ್ಗಿಸುವ ಮೂಲಕ ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತವೆ. ಕ್ಯಾಪ್ಸಿಕಂ ಜ್ಯೂಸ್ ವಸೇವಿಸಿದರೆ ತ್ವಚೆಗೆ ಒಳ್ಳೆಯದು. ಇದರ ಜೊತೆ ಕ್ಯಾರೆಟ್ ಸೇರಿಸಿ ಜ್ಯೂಸ್ ಮಾಡಿ ಕುಡಿಯುವುದರಿಂದ ಮುಖದ ಮೇಲಿರುವ ಕಲೆಗಳು ಕಡಿಮೆಯಾಗುತ್ತವೆ. ಪ್ರತಿನಿತ್ಯ ಇದನ್ನು ಸೇವಿಸಿದರೆ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಹೀಗಾಗಿ ಡಯಟ್ನಲ್ಲಿ ಇದನ್ನು ಸೇವಿಸುವುದು ಉಪಯುಕ್ತ.