ನಿಸರ್ಗ ನಿಯಮ ಬದಲಿಸಲು ಸಾಧ್ಯವಿಲ್ಲ

edit 3
Published on

ನಾವು ನಂಬಿಕೊಂಡ ಒಂದಷ್ಟು ಅವಾಸ್ತವ ಸಂಗತಿಗಳು ಬದುಕನ್ನು ಸುತ್ತುವರಿದು ಅವುಗಳೇ ಬದುಕನ್ನು ನಿಯಂತ್ರಿಸುತ್ತವೆ. ನೋವು-ನಲಿವುಗಳನ್ನು ನಿರ್ಧರಿಸುತ್ತವೆ. ಇವುಗಳು ಬಹಳಷ್ಟು ಬಾರಿ ಬದುಕಿನಲ್ಲಿ ನೋವು, ನಿರಾಸೆಗಳನ್ನೇ ತಂದೊಡ್ಡುತ್ತವೆ. ಬಯಕೆಗಳ ಅಣತಿಯಂತೆಯೇ ನಡೆಯುವುದರಿಂದ ಅವುಗಳಲ್ಲಿಯೇ ಕೊಚ್ಚಿಕೊಂಡು ಹೋಗುತ್ತೇವೆ. ಸಣ್ಣಪುಟ್ಟ ಸಂಗತಿಗಳ ಮೇಲಿನ ಭಾವನಾತ್ಮಕ ಸಂಬಂಧಗಳು ಇನ್ನಿಲ್ಲದಂತೆ ಕಂಗೆಡಿಸುತ್ತವೆ. ಇಲ್ಲದ ಅರ್ಥಗಳನ್ನು ಸೃಜಿಸಿಕೊಂಡು ಮನಸ್ಸು ವ್ಯಾಖ್ಯಾನ ಕೊಡಲು ಮುಂದಾಗುತ್ತದೆ.

ಝೆನ್ ಗುರುಗಳ ಬಳಿ ಸುಂದರವಾದ ಚಹಾ ಕಪ್ ಇತ್ತು. ಅದು ತುಂಬ ಬೆಲೆ ಬಾಳುವುದು ಮಾತ್ರವಲ್ಲದೆ ವಿಶೇಷ ಕೌಶಲದ ಕುಸುರಿ ಮಾಡಿದ ಕಪ್ ಆಗಿತ್ತು. ಅದು ಶಿಷ್ಯನೊಬ್ಬ ಪ್ರೀತಿಯಿಂದ ಅವರಿಗೆ ಕೊಟ್ಟ ಕಾಣಿಕೆಯಾಗಿತ್ತು. ಶಿಷ್ಯನ ಬಗೆಗೆ ವಿಶೇಷ ಪ್ರೀತಿ ಇದ್ದ ಕಾರಣ ಗುರುಗಳು ನಿತ್ಯವೂ ಅದರಲ್ಲಿಯೇ ಚಹಾ ಕುಡಿಯುತ್ತಿದ್ದರು. ಆಶ್ರಮಕ್ಕೆ ಬಂದ ಅತಿಥಿಗಳಿಗೆಲ್ಲ ಆ ಕಪ್ ತೋರಿಸಿ, ‘ಇದು ನನ್ನ ಪ್ರೀತಿಯ ಶಿಷ್ಯನೊಬ್ಬ ಕೊಟ್ಟಿದ್ದು’ ಎಂದು ಹೆಮ್ಮೆಯಿಂದ ಹೇಳುತ್ತಿದ್ದರು. ಆದರೆ ಪ್ರತಿದಿನ ಬೆಳಗ್ಗೆ ಪ್ರಾರ್ಥನೆಯ ಕೊನೆಯಲ್ಲಿ ಆ ಕಪ್ ಕೈಯಲ್ಲಿ ಹಿಡಿದುಕೊಂಡು ‘ಈ ಕಪ್ ಅದಾಗಲೇ ಒಡೆದು ಹೋಗಿದೆ’ ಎಂದು ಹೇಳುತ್ತಿದ್ದರು.

ಒಂದು ದಿನ ಆಶ್ರಮದಲ್ಲಿದ್ದ ಮತ್ತೊಬ್ಬ ಶಿಷ್ಯ ಅದರಲ್ಲಿ ಚಹಾ ತಂದು ಕೊಡುವಾಗ ಆಕಸ್ಮಿಕವಾಗಿ ಕೈ ಜಾರಿ ಒಡೆದು ಹೋಯಿತು. ಶಿಷ್ಯನಿಗೆ ಹೆದರಿಕೆಯಾಯಿತು. ‘ಗುರುಗಳೇ ನನ್ನಿಂದ ಪ್ರಮಾದವಾಯಿತು. ಯಾವುದೇ ಶಿಕ್ಷೆ ಕೊಟ್ಟರೂ, ಅನುಭವಿಸಲು ಸಿದ್ಧ’ ಎಂದು ಬಿನ್ನವಿಸಿದ. ಗುರುಗಳಿಗೆ ಏನೂ ತೋಚದೆ ‘ಏನಾಯಿತು’ ಎಂದು ಕೇಳಿದರು. ‘ನಾನು ತಮಗೆ ಚಹಾ ತರುವ ಸಮಯದಲ್ಲಿ ಆಕಸ್ಮಿಕವಾಗಿ ಕೈ ಜಾರಿ ತಮ್ಮ ಪ್ರೀತಿಯ ಕಪ್ ಒಡೆದುಹೋಯಿತು’ ಎಂದು ಕಣ್ಣಂಚಿನಲ್ಲಿ ನೀರು ತಂದುಕೊಂಡು ಹೇಳಿದ. ಗುರುಗಳು ಒಂದುಕ್ಷಣ ಶಿಷ್ಯನತ್ತ ಅಸಮಾಧಾನದ ನೋಟ ಬೀರಿದರೂ ಅವರ ಮುಖದಲ್ಲಿ ಕೋಪ ಇರಲಿಲ್ಲ. ಎಂದಿನಂತೆ ಮುಖದಲ್ಲಿ ಪ್ರಶಾಂತತೆ ಇತ್ತು. ಸುಮ್ಮನೆ ಎದ್ದು, ‘ಎಲ್ಲಿ ಒಡೆಯಿತು ತೋರಿಸು’ ಎಂದರು. ಶಿಷ್ಯ ತೋರಿಸಿದಾಗ ಪೊರಕೆ ತಗೆದುಕೊಂಡು ಕಪ್​ನ ಚೂರುಗಳನ್ನು ಗುಡಿಸಲಾರಂಭಿಸಿದರು. ಶಿಷ್ಯ ಆಶ್ಚರ್ಯದಿಂದ, ‘ಗುರುಗಳೇ ನನ್ನನ್ನು ಶಿಕ್ಷಿಸುವುದಿಲ್ಲವೇ?’ ಎಂದು ಕೇಳಿದ. ಗುರುಗಳು, ‘ಇಲ್ಲ, ನಾವು ಇಷ್ಟಪಡುವ ವಸ್ತು ನಮ್ಮ ಬಳಿ ಶಾಶ್ವತವಾಗಿ ಉಳಿಯುವುದಿಲ್ಲ ಎಂಬ ಸತ್ಯವನ್ನು ನನ್ನ ಮನಸ್ಸಿಗೆ ಮನವರಿಕೆ ಮಾಡಿಸಿದ್ದೇನೆ’ ಎಂದರು.

ಕೆಲವು ಮಿತಿಗಳನ್ನು ಮತ್ತು ತಪ್ಪಿಸಲಾಗದ ಸಂಗತಿಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ ರೂಪಿಸಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು. ಒಳ್ಳೆಯದೋ ಕೆಟ್ಟದ್ದೋ ಬಹಳಷ್ಟು ಬಾರಿ ನಿಸರ್ಗದ ನಿಯಮಗಳನ್ನು ನಾವು ಬದಲಿಸಲಾಗುವುದಿಲ್ಲ. ನಮ್ಮೊಂದಿಗೆ ಇರುವ ಪ್ರೀತಿಪಾತ್ರ ವಸ್ತುಗಳೆಲ್ಲ ನಮ್ಮಿಂದ ದೂರಾಗುತ್ತವೆ. ಇಲ್ಲವೆ ಬದಲಾವಣೆಗೆ ಒಳಪಡುತ್ತವೆ ಎಂಬ ಅನುಭವಿಗಳ ಮಾತನ್ನು ನಮ್ಮ ಗಮನಕ್ಕೆ ತಂದುಕೊಳ್ಳಬೇಕು. ನಮ್ಮ ಅಧೀನದಾಚೆ ಇರುವ ಸಂಗತಿಗಳನ್ನು ನಿರ್ಲಕ್ಷಿಸುವತ್ತ ಮನಸ್ಸನ್ನು ತರಬೇತುಗೊಳಿಸಬೇಕು. ಅಶಾಶ್ವತದ ನಿಯಮಗಳನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡು ಸ್ಥಿತಪ್ರಜ್ಞೆಯನ್ನು ಹೊಂದುವುದರಿಂದ ನಮ್ಮ ಬದುಕನ್ನು ಬಹಳಷ್ಟು ಸಂಕಟಗಳಿಂದ ಪಾರು ಮಾಡಬಹುದು.

| ಮಹಾದೇವ ಬಸರಕೋಡ (ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net