ಜಿಲೇಬಿ, ಮೈಸೂರ್​ ಪಾಕ್​ ಪ್ರಿಯರೇ ಎಚ್ಚರ; ಕ್ಯಾನ್ಸರ್, ಡಯಾಬಿಟಿಸ್​ಗೆ ತುತ್ತಾಗೋ ಸಾಧ್ಯತೆ!

sweet1
Published on

Bangalore: ಸಿಹಿ ತಿಂಡಿ ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ಸಿಹಿ ಅಂದಾಕ್ಷಣ ಎಲ್ಲರ ಗಮನ ಮೊದಲು ಮೈಸೂರ್​ ಪಾಕ್​ ಹಾಗೂ ಜಿಲೇಬಿ ಅತ್ತ ಹೋಗುವುದೇ ಹೆಚ್ಚು. ಆದರೆ ಇದೀಗ ಈ ಸಿಹಿ ವಸ್ತುಗಳು ವಿಷಕಾರಿಯಾಗಿ ಬದಲಾಗ್ತಾ ಇವೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನ ನಿತ್ಯ ಅಸುರಕ್ಷಿತವಾಗಿ ಆಹಾರವನ್ನು ಮಾರಾಟ ಮಾಡಲಾಗುತ್ತಿದೆ.

ಈ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಸಂಗ್ರಹಿಸಿದ ಮಾದರಿಯ ಪರೀಕ್ಷಾ ವರದಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಸ್ಯಾಂಪಲ್ ಪರಿಶೀಲನೆ ವೇಳೆ ನಗರದಲ್ಲಿ ಮಾರಾಟವಾಗುವ ವಿವಿಧ ಆಹಾರದಲ್ಲಿ ಕ್ಯಾನ್ಸರ್ ಅಂಶ ಪತ್ತೆಯಾಗಿರೋದಾಗಿ ತಿಳಿದು ಬಂದಿದೆ. ಸಿಹಿ ತಿಂಡಿಗಳಲ್ಲೂ ಕ್ಯಾನ್ಸರ್​ ಕಾರಕ ಅಂಶ ಇರೋದು ಪತ್ತೆಯಾಗುತ್ತಿದ್ದಂತೆ ಸಿಟಿ ಮಂದಿ ಆತಂಕಕ್ಕೆ ಒಳಗಾಗಿದ್ದಾರೆ.

ಸಿಟಿ ಜನರನ್ನು ಆಕರ್ಷಿಸಲು ಬೇಕರಿ ಹಾಗೂ ಹೋಟೆಲ್‌ಗಳಲ್ಲಿ ರಾಸಾಯನಿಕ ಬಣ್ಣವನ್ನು ಬಳಸಿ ಸಿಹಿ ತಿಂಡಿಗಳನ್ನು ತಯಾರಿಸಲಾಗುತ್ತದೆ. ಈ ಬಣ್ಣ ಆರೋಗ್ಯಕ್ಕೆ ಹಾನಿಕಾರಕ ಎಂದು ಅಧಿಕಾರಿಗಳು ನಡೆಸಿದ ಪರಿಶೀಲನೆಯಿಂದ ತಿಳಿದು ಬಂದಿದೆ. ವಿಶೇಷವಾಗಿ ಬೇಕರಿಗಳಲ್ಲಿ ಸಿಗುವ ಸಿಹಿ ತಿಂಡಿಗಳಲ್ಲಿ ಬಳಸುವ ರಾಸಾಯನಿಕ ಬಣ್ಣದಲ್ಲಿ ಕ್ಯಾನರ್ ಅಂಶ ಇರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಈ ಸಿಹಿ ತಿಂಡಿಗಳಲ್ಲಿ ಸಕ್ಕರೆ ಅಂಶ ಹೆಚ್ಚಾಗಿದ್ದು ಇದರಿಂದ ಡಯಾಬಿಟಿಸ್ ಬರುವ ಸಾಧ್ಯತೆ ಇದೆ. ಹೀಗಾಗಿ ತಿನ್ನಲು ಯೋಗ್ಯವಲ್ಲದ ಸಿಹಿ ತಿಂಡಿಗಳ ಮಾರಾಟ ಮಳಿಗೆಗಳಿಗೆ ಆಹಾರ ಇಲಾಖೆ ಈಗಾಗಲೇ ನೋಟೀಸ್ ನೀಡಿದೆ. ಅಲ್ಲದೆ ಸ್ವಚ್ಚತೆ ಇಲ್ಲದ ಕಲಬೆರೆಕೆ ಮಾಡುವ, ಸೂಕ್ತ ಪರವಾನಿಗೆ ಪಡೆಯದ ಬೇಕರಿ ಹಾಗೂ ಅಂಗಡಿಗಳಿಗೆ ಆಹಾರ ಇಲಾಖೆ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ.

ಈಗಾಗಲೇ ಅಧಿಕಾರಿಗಳು ಹತ್ತಕ್ಕೂ ಅಧಿಕ ಸಿಹಿ ತಿಂಡಿಗಳ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದರು. ಅದರಲ್ಲಿ ಮೈಸೂರು ಪಾಕ್, ಮಿಕ್ಸ್ಚರ್, ಬರ್ಫಿ, ಜಿಲೇಬಿ ಹಾಗೂ ಜಹಂಗೀರ್‌ನಲ್ಲಿ ಕೃತಕ ಬಣ್ಣ ಬಳಕೆ ಮಾಡಿರುವುದು ತಿಳಿದು ಬಂದಿದೆ. ಅಲ್ಲದೆ ಈ ಸಿಹಿ ತಿಂಡಿಗಳಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿರುವುದು ಕೂಡ ಪರಿಶೀಲನೆಯಿಂದ ಗೊತ್ತಾಗಿದೆ. ಇದರ ಬೆನ್ನಲ್ಲೆ ನಗರದ ಹಲವೆಡೆ ದಾಳಿ ನಡೆಸಿ ಮಾದರಿ ಸಂಗ್ರಹಿಸಿ ಪರಿಶೀಲನೆಗೆ ಕಳುಹಿಸಲಾಗಿದೆ. ಈ ಪರೀಕ್ಷಾ ವರದಿಯಲ್ಲಿ ಕೆಲ ಸಿಹಿ ತಿಂಡಿಗಳು ತಿನ್ನಲು ಯೋಗ್ಯವಾಗಿಲ್ಲ. ಈ ಸ್ವೀಟ್‌ಗಳಲ್ಲಿ ಕಲಬೆರೆಕೆ, ಕಲರಿಂಗ್ ಬಳಕೆ ಮಾಡಲಾಗಿದೆ. ಇದರ ಸೇವನೆಯಿಂದ ಕ್ಯಾನ್ಸರ್ ಹಾಗೂ ಡಯಾಬಿಟಿಸ್‌ಗೆ ಕಾರಣವಾಗುವ ಅಂಶ ದೇಹ ಸೇರಲಿದೆ ಎಂದು ಎಚ್ಚರಿಸಲಾಗಿದೆ.

ಸ್ವೀಟ್ಸ್‌ಗಳಲ್ಲಿ ಬಳಕೆ ಮಾಡುವ ಕಲರ್ ಕ್ಯಾನ್ಸರ್ ಮಾತ್ರವಲ್ಲದೆ, ಹೆಪಟೈಟಿಸ್, ಡಯಾಬಿಟಿಸ್​ ನಂತಹ ರೋಗಗಳಿಗೆ ಕಾರಣವಾಗುತ್ತದೆ ಎಂದು ಆಹಾರ ತಜ್ಞರು ತಿಳಿಸಿದ್ದಾರೆ. ಮಿಕ್ಸ್ಚರ್ ಹಾಗೂ ಜಿಲೇಬಿ ತಯಾರಿಕೆಯಲ್ಲಿ ಬಳಕೆ ಮಾಡುವ ಹಳದಿ ಬಣ್ಣ ಕ್ಯಾನ್ಸರ್ ಕಾರಕ ಎಂದು ತಿಳಿದು ಬಂದಿದೆ. ಬೇಕರಿ ಅಥವಾ ಇನ್ನಿತರ ಅಂಗಡಿಗಳಲ್ಲಿ ಸಂಗ್ರಹಿಸಿದ ಸ್ವೀಟ್ಸ್‌ಗಳಲ್ಲಿ ರೋಡೋಮೆನ್ ಬಿ, ಕಾರ್ಸೋನೋಜೆನಿಕ್ ಎನ್ನುವ ಅಪಾಯಕಾರಿ ಅಂಶ ಪತ್ತೆಯಾಗಿದೆ. ಕೆಲ ಸ್ವೀಟ್ಸ್‌ಗಳಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿದೆ. ಅಲ್ಲದೆ ಇವುಗಳನ್ನು ತಯಾರಿಸುವ ಸ್ಥಳ ಹಾಗೂ ಎಣ್ಣೆ, ಪದಾರ್ಥಗಳು ಕೂಡ ಹೈಜಿನಿಕ್ ಇಲ್ಲದೇ ಇರುವುದು ಕಂಡು ಬಂದಿದೆ.

ಇನ್ನೂ ಯುಗಾದಿ ಹಬ್ಬ ಸಮೀಪ ಇರುವ ಕಾರಣ ಆಹಾರ ಇಲಾಖೆ ಅಧಿಕಾರಿಗಳು ಫುಲ್​ ಅಲರ್ಟ್​ ಆಗಿದ್ದಾರೆ. ಎಲ್ಲರೂ ತಮ್ಮ ನಿತ್ಯ ಚಟುವಟಿಕೆಗಳಲ್ಲಿ ಬ್ಯುಸಿ ಆಗಿರೋದ್ರಿಂದ ಮನೆಯಲ್ಲಿ ಹಬ್ಬಕ್ಕೆ ತಾವೇ ಸ್ವತಃ ತಿಂಡಿಗಳನ್ನು ತಯಾರಿಸಿಕೊಳ್ಳುವುದು ಕಡಿಮೆ. ಹಾಗಾಗಿ ಜನರು ಬೇಕರಿಗಳ ಮೊರೆ ಹೋಗಿ ಸಿಹಿ ತಿಂಡಿಗಳನ್ನ ಕೊಂಡು ಹಬ್ಬ ಆಚರಿಸೋದು ಸಾಮಾನ್ಯವಾಗುತ್ತದೆ. ಈ ಕಾರಣಗಳಿಂದ ಅಧಿಕಾರಿಗಳು ಬೇಕರಿ ಹಾಗೂ ಇನ್ನಿತರ ಸಿಹಿ ಪದಾರ್ಥಗಳನ್ನು ಮಾರುವ ಅಂಗಡಿಗಳ ಮೇಲೆ ಹೆಚ್ಚಿನ ನಿಗಾ ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net