

ರಕ್ತಸ್ರಾವವಿದ್ದಾಗ ಅದೇದಿನ ಕಡೆದ ಮಜ್ಜಿಗೆಯು ರಕ್ತಸ್ರಾವವನ್ನು ನಿಲ್ಲಿಸುವ ಗುಣ ಹೊಂದಿದೆ. ಹಿಂದಿನ ದಿನದ ಹುಳಿ ಮಜ್ಜಿಗೆಯನ್ನು ಮೊಳೆರೋಗ ಇರುವ ವ್ಯಕ್ತಿ ಕುಡಿದರೆ ಮರುದಿನ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ! ತಾಜಾ ಮಜ್ಜಿಗೆ, ಹಳೆಯ ಹುಳಿ ಮಜ್ಜಿಗೆಗಳಲ್ಲಿ ಎಷ್ಟೊಂದು ವ್ಯತ್ಯಾಸ! ಇನ್ನು ಮೊಸರಿನ ಗುಣ ಬೇರೆಯೇ ಇದೆ.
ಆಯುರ್ವೆದವು ಅಗ್ರೌಷಧ ಎಂಬ ವಿಚಾರವನ್ನು ಪ್ರಸ್ತಾಪಿಸಿದೆ. ಪ್ರಥಮ ಪ್ರಾಶಸ್ತ್ಯ ನೀಡುವುದಕ್ಕೆ ಇಲ್ಲಿ ಅಗ್ರ ಎನ್ನಲಾಗಿದೆ. ಅಗ್ರ ಔಷಧ ಎಂದಾಗ ಅದು ಔಷಧವೇ ಆಗಬೇಕೆಂದೇನಿಲ್ಲ. ಅದು ಆಹಾರವೂ ಇರಬಹುದು, ಆಚಾರ-ಅಭ್ಯಾಸಗಳೂ ಆಗಿರಬಹುದು, ಔಷಧಿಯೂ ಸೇರಿರಬಹುದು, ಉಪಚಾರ-ಉಪಕ್ರಮಗಳೂ ಒಳಗೊಂಡಿರಬಹುದು. ಇಂತಹ ನೂರ ಐವತ್ತೆರಡು ವಿಚಾರಗಳನ್ನು ಆಯುರ್ವೆದದ ಆದಿಗ್ರಂಥ ಚರಕಸಂಹಿತೆಯಲ್ಲಿ ಅಗ್ರೌಷಧಗಳಾಗಿ ಹೇಳಲಾಗಿದೆ. ಇದು ಪ್ರತಿವ್ಯಕ್ತಿಯಲ್ಲೂ ಆಯ್ಕೆಯ ಔಷಧವೆಂದಲ್ಲ. ಪ್ರತಿವ್ಯಕ್ತಿಯಲ್ಲೂ ಹಲವಾರು ಭಿನ್ನತೆಗಳಿರುವುದರಿಂದ ಸಹಜವಾಗಿ ಔಷಧವೂ ಒಬ್ಬರಿಂದ ಒಬ್ಬರಿಗೆ ಬೇರೆಯದೇ ಬೇಕಾಗುತ್ತದೆ ಎಂಬುದು ಆಯುರ್ವೆದದ ನಿಲುವು. ಹಾಗಿದ್ದರೆ ಮಾತ್ರ ಚಿಕಿತ್ಸೆಗಳು ಸಮಗ್ರವಾಗಿ ಯಶಸ್ಸನ್ನು ಹೊಂದಲು ಸಾಧ್ಯ. ಎಲ್ಲರಿಗೂ ಒಂದೇ ಔಷಧ ಎಂಬ ಪರಿಕಲ್ಪನೆ ಹಲವಾರು ರೋಗಿಗಳಲ್ಲಿ ವಿಫಲವಾಗಲೂ ಇದುವೇ ಕಾರಣವಾಗಿದೆ. ಆಯ್ಕೆಯ ಔಷಧ ಅಥವಾ ಡ್ರಗ್ ಆಫ್ ಚಾಯ್್ಸ ಎಂಬ ಚಿಂತನೆಯಲ್ಲಿ ಹಲವಾರು ಮಿತಿಗಳು, ನ್ಯೂನತೆಗಳು ಇರುವುದರಿಂದ ಪ್ರತಿವ್ಯಕ್ತಿಗೂ ಪ್ರತ್ಯೇಕವಾಗಿ ಬೇಕಾಗುವ ಚಿಕಿತ್ಸೆಯನ್ನು ರೂಪಿಸಿ ನೀಡುವುದು ಶ್ರೇಷ್ಠವೆನಿಸುತ್ತದೆ. ಅಗ್ರೌಷಧವನ್ನು ಹೇಳಿದ ಮುಖ್ಯ ಉದ್ದೇಶವೆಂದರೆ ಕೆಲವೊಂದು ರೋಗ ಹಾಗೂ ಅವುಗಳಿಗೆ ಪರಿಹಾರದ ಮೊದಲ ಪ್ರಾಶಸ್ತ್ಯವನ್ನು ಬೊಟ್ಟುಮಾಡಿ ವೈದ್ಯರ ಚಿಂತನೆಯು ತಕ್ಷಣವೇ ಯಾವ ದಿಕ್ಕಿನಲ್ಲಿ ಹೇಗೆ ಸಾಗಬೇಕೆಂಬುದರ ಸಾಂಕೇತಿಕ ದಿಕ್ಸೂಚಿ.
ಅರ್ಶೆ ತಕ್ರಮ್ ಅರ್ಥಾತ್ ಮೂಲವ್ಯಾಧಿ ಇದ್ದಾಗ ಮಜ್ಜಿಗೆಯ ಬಳಕೆಗೆ ಅಗ್ರ ಪ್ರಾಶಸ್ತ್ಯವನ್ನು ಆಯುರ್ವೆದ ನೀಡಿದೆ. ಚಿತ್ರಕದ ಚೂರ್ಣವನ್ನು ಹಾಲಿನೊಂದಿಗೆ ಕುದಿಸಿ ಮೊಸರು ಮಾಡಿ ಕಡೆದು ಮಜ್ಜಿಗೆ ತಯಾರಿಸಿ ಅದರೊಂದಿಗೆ ಊಟಮಾಡುವುದು ಬಲು ಪ್ರಯೋಜನಕಾರಿ. ಕರಿಗೊನಿ/ಪೀಲುಹಣ್ಣನ್ನು ಮಜ್ಜಿಗೆಯ ಜೊತೆ ಒಂದು ತಿಂಗಳ ಪರ್ಯಂತ ಮುಖ್ಯಆಹಾರ ಬಿಟ್ಟು ಬೇರೆ ಸಮಯದಲ್ಲಿ ಸೇವಿಸಿದರೂ ಮೂಲವ್ಯಾಧಿ ಮೂಲದಿಂದಲೇ ಗುಣವಾಗುತ್ತದೆ. ಪಾತ್ರೆಯ ಒಳಬದಿಗೆ ಕಾಡುಬದನೆ ಅಥವಾ ಪಂಚಕೋಲ, ಅಮೃತಬಳ್ಳಿ ಪಿಷ್ಟ ಅಥವಾ ಚಿತ್ರಮೂಲ ತೊಗಟೆಯ ಲೇಪನಮಾಡಬೇಕು. ಮಜ್ಜಿಗೆಯನ್ನು ರಾತ್ರಿಯಿಡೀ ಅದರಲ್ಲಿಟ್ಟು ಬೆಳಗ್ಗೆ ಮತ್ತೆ ಮಥನ ಮಾಡಿ ಪ್ರಯೋಗಿಸುವ ವಿಧಾನವನ್ನೂ ಹೇಳಲಾಗಿದೆ. ಚಿತ್ರಕದ ಬದಲು ಮಂದಾರಗಿಡದ ಬೇರಿನ ಚೂರ್ಣವನ್ನು ಉಪಯೋಗಿಸುವುದೂ ಮೂಲವ್ಯಾಧಿ ಗುಣಮಾಡುವಲ್ಲಿ ಪರಿಣಾಮಕಾರಿ. ಇದೇರೀತಿ ಮಜ್ಜಿಗೆಯನ್ನು ಹಿಂಗ್ವಾದಿ ಚೂರ್ಣದ ಜೊತೆ ಅಥವಾ ಬೆಲ್ಲ,
ಅಳಲೆಕಾಯಿ, ಕೊಡಸಿಗೆ ತೊಗಟೆ, ಚಿತ್ರಕದ ಮಿಶ್ರಣದೊಂದಿಗೆ ಅಥವಾ ಉಪ್ಪು, ಹಿಪ್ಪಲಿ, ಶುಂಠಿ, ಕಾಳುಮೆಣಸು, ಹಿಂಗು ಹುಣಸೆಹಣ್ಣುಗಳೊಡನೆ ಸೇವಿಸುವುದರಿಂದ ಮಲದ್ವಾರ ಭಾಗದ ಊತ, ನೋವುಗಳನ್ನು ಶಮನಗೊಳಿಸಬಹುದು ಎಂಬ ವಿವರಣೆ ಅಷ್ಟಾಂಗಹೃದಯ ಗ್ರಂಥದಲ್ಲಿದೆ.
ತಕ್ರಕ್ಕೆ ದಾಳಿಂಬೆರಸ, ಓಮ, ಬೆಲ್ಲ, ಜೀರಿಗೆ, ಶುಂಠಿಯ ಮಿಶ್ರಣಮಾಡಿ ಸೇವಿಸಿದರೆ ಮೂಲವ್ಯಾಧಿ ರೋಗಿಗಳ ಮಲಪ್ರವೃತ್ತಿ ಸುಲಭವಾಗಲು ಪ್ರಶಸ್ತವಾಗಿದೆ. ಬಾರ್ಲಿಯೊಂದಿಗೆ ಮಜ್ಜಿಗೆ ಸೇವಿಸಿದರೆ ಅದಕ್ಕೆ ತಕ್ರ ತರ್ಪಣ ಎಂದು ಹೆಸರು. ಬಿಲ್ವಹಣ್ಣು, ಬೇಲದಹಣ್ಣುಗಳ ರಸಕ್ಕೆ ಮಜ್ಜಿಗೆ ಸೇರಿಸಿ ಕುಡಿದರೂ ಮೊಳೆರೋಗದಲ್ಲಿ ಪ್ರಯೋಜನವಾಗುತ್ತದೆ. ಶುಂಠಿ ಹಾಗೂ ಬಿಡಲವಣವನ್ನು ಮಜ್ಜಿಗೆಗೆ ಹಾಕಿ ಕುಡಿಯುವುದೂ ಅನುಕೂಲಕಾರಿ. ತಾತ್ಪರ್ಯವೇನೆಂದರೆ ಆಹಾರದಲ್ಲಿ ತಾಜಾಮಜ್ಜಿಗೆಗೆ ಪ್ರಾಶಸ್ತ್ಯ ನೀಡಿದರೆ ಮೂಲವ್ಯಾಧಿಯನ್ನು ಮೂಲದಿಂದಲೇ ಕಿತ್ತೊಗೆಯಬಹುದು.