ಮಿದುಳು ಗಡ್ಡೆ, ಬೇಡ ಅಸಡ್ಡೆ

ವಿಜಯವಾಣಿ (3)
Published on

| ಕೆ.ಎಂ. ಪಂಕಜ ಬೆಂಗಳೂರು

ಮನುಷ್ಯನನ್ನು ಅತ್ಯಂತ ದುರ್ಬಲಗೊಳಿಸುವ ಕಾಯಿಲೆಗಳಲ್ಲಿ ‘ಮಿದುಳಿನ ಗಡ್ಡೆ’ (ಬ್ರೖೆನ್ ಟ್ಯೂಮರ್) ಸಹ ಒಂದು. ಇದು ಮಿದುಳಿನ ಕಾರ್ಯಕ್ಕೆ ಅಡ್ಡಿಪಡಿಸುವ ಮೂಲಕ ಮನುಷ್ಯ ನಡೆಯಲು, ಮಾತನಾಡಲು, ಗಮನ ಕೇಂದ್ರೀಕರಿಸಲು ತೊಂದರೆ ಉಂಟು ಮಾಡುತ್ತದೆ. ಸ್ಮರಣಶಕ್ತಿಯನ್ನೂ ಕಸಿಯುತ್ತದೆ. ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ಪಡೆಯದಿದ್ದರೆ ಸಾವಿಗೂ ಕಾರಣವಾಗುತ್ತದೆ.

ಮಿದುಳಿನ ಕಡಿಮೆ ಸಕ್ರಿಯ ಭಾಗಗಳಲ್ಲಿ ಗಡ್ಡೆ ಬೆಳೆದರೆ, ಗಡ್ಡೆ ತುಂಬ ದೊಡ್ಡದಾಗಿ ಬೆಳೆಯುವವರೆಗೆ ಲಕ್ಷಣಗಳೇ ಗೋಚರಿಸುವುದಿಲ್ಲ. ಈ ಗಡ್ಡೆಗಳು ಮಿದುಳಿನ ಅಂಗಾಂಶದಲ್ಲಿ ಹುಟ್ಟಿಕೊಳ್ಳಬಹುದು, ಇಲ್ಲವೇ ದೇಹದ ಇತರ ಭಾಗಗಳಿಂದ ಮಿದುಳಿಗೆ ಹರಡಬಹುದು. ಇವು ಕೆಲವರಲ್ಲಿ ಕೈ ಅಥವಾ ಕಾಲುಗಳಲ್ಲಿ ದೌರ್ಬಲ್ಯ ಉಂಟು ಮಾಡಿದರೆ, ಇನ್ನು ಕೆಲವರಲ್ಲಿ ನಡೆಯುವಾಗ ಅಸಮತೋಲನ, ಶ್ರವಣ ನಷ್ಟ, ನಡವಳಿಕೆಯಲ್ಲಿ ಬದಲಾವಣೆ, ಸ್ಮರಣಶಕ್ತಿ ನಷ್ಟ, ತಲೆನೋವು ಇತ್ಯಾದಿ ಸಮಸ್ಯೆಯ ಲಕ್ಷಣಗಳನ್ನು ತೋರಿಸುತ್ತವೆ.

ತಲೆನೋವು ನಿರ್ಲಕ್ಷ್ಯ ಬೇಡ: ಯಾವುದೇ ರೀತಿಯ ತಲೆನೋವು ಇರಲಿ, ಅದು ದೀರ್ಘ ಕಾಲ ಇದ್ದರೆ ನಿರ್ಲಕ್ಷ್ಯ ಮಾಡದೆ ಚಿಕಿತ್ಸೆ ಪಡೆಯಬೇಕು. ಏಕೆಂದರೆ ಬ್ರೖೆನ್ ಟ್ಯೂಮರ್ ಸಮಸ್ಯೆ ಹೊಂದಿರುವವರಲ್ಲಿ ನಿತ್ಯವೂ ತಲೆನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಇದು ಮೈಗ್ರೇನ್​ಗಿಂತಲೂ ತೀವ್ರ ನೋವಿನಿಂದ ಕೂಡಿರುತ್ತದೆ. ಬಹಳಷ್ಟು ಮಂದಿ ಇದನ್ನು ಒತ್ತಡ, ಬಿಸಿಲಿನಿಂದ ಬಂದಿರಬಹುದು ಎಂದು ಭಾವಿಸಿ ನೋವು ನಿವಾರಕ ಮಾತ್ರೆ ಸೇವಿಸುತ್ತಾರೆ. ಆದರೆ, ಅದು ತಪು್ಪ, ದೀರ್ಘ ಕಾಲ ಕಾಡುವ ತಲೆ ನೋವು ನಿರ್ಲಕ್ಷ್ಯ ಮಾಡಬಾರದು ಎನ್ನುತ್ತಾರೆ ನರರೋಗ ತಜ್ಞರು.

ಆತಂಕ ಬೇಡ, ಅರಿವಿರಲಿ: ಬ್ರೖೆನ್ ಟ್ಯೂಮರ್​ನ ಆರಂಭಿಕ ಚಿಹ್ನೆಗಳ ಬಗ್ಗೆ ಜಾಗರೂಕರಾಗಿ ಸಕಾಲಿಕ ಚಿಕಿತ್ಸೆ ಪಡೆಯುವುದರಿಂದ ತ್ವರಿತ ಚೇತರಿಕೆ ಹೊಂದಬಹುದಾಗಿದೆ. ಅಲ್ಲದೆ ಇಂದು ವೈದ್ಯಕೀಯ ವಿಜ್ಞಾನ ಸಹ ನರಶಸ್ತ್ರ ಚಿಕಿತ್ಸೆ ಹಾಗೂ ನ್ಯೂರೋ ಆಂಕಾಲಜಿ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆ ಹೊಂದಿದ್ದು ಗುಣಮಟ್ಟದ ಚಿಕಿತ್ಸೆ ಲಭ್ಯವಿದೆ. ಹಾಗಾಗಿ ಬ್ರೖೆನ್ ಟ್ಯೂಮರ್ ಎಂದಾಕ್ಷಣ ಹೆದರುವ ಬದಲು ಚಿಕಿತ್ಸೆಗೆ ಮುಂದಾಗಬೇಕು.

ಟ್ಯೂಮರ್ ಹೇಗೆ ಬರುತ್ತದೆ?: ಮಿದುಳಿನ ಅನಾರೋಗ್ಯಕರ ಜೀವಕೋಶಗಳು ಗಡ್ಡೆಯಾಕಾರದಲ್ಲಿ ಗುಂಪುಗೂಡುವುದೇ ಬ್ರೖೆನ್ ಟ್ಯೂಮರ್. ಇದನ್ನು ಮಿದುಳಿನ ಕ್ಯಾನ್ಸರ್ ಎಂದೂ ಹೇಳುತ್ತಾರೆ. ಗಡ್ಡೆಯ ರೂಪದಲ್ಲಿ ಉಂಟಾಗಿ ಮೆನಿಂಗ್ಸ್, ಕ್ರೇನಿಯಲ್ ನರ ಮಂಡಲ, ಪಿಟ್ಯುಯಿಟರಿ ಗ್ರಂಥಿ ಅಥವಾ ಪೀನಿಯಲ್ ಗ್ರಂಥಿಗಳನ್ನು ಒಳಗೊಂಡು ಮನುಷ್ಯನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

ಕಾರಣಗಳು

  • ಕುಟುಂಬದಲ್ಲಿ ಯಾರಿಗಾದರೂ ಮಿದುಳು ಕ್ಯಾನ್ಸರ್ ಇದ್ದರೆ
  • ದೀರ್ಘಕಾಲ ಧೂಮಪಾನದಿಂದ ಕಂಡು ಬರಬಹುದು
  • ರಸಗೊಬ್ಬರ/ಕೀಟನಾಶಕ ಬಳಕೆ ಮಾಡುವಾಗ ಎಚ್ಚರಿಕೆ ವಹಿಸದಿದ್ದರೆ ಅಪಾಯ ಹೆಚ್ಚು
  • ಸೀಸ, ಪ್ಲಾಸ್ಟಿಕ್, ರಬ್ಬರ್, ಪೆಟ್ರೋಲಿಯಂ ಮತ್ತು ಕೆಲವು ಬಟ್ಟೆಗಳಂತಹ ಕ್ಯಾನ್ಸರ್ ಉಂಟು ಮಾಡುವ ಪದಾರ್ಥಗಳೊಂದಿಗೆ ಕೆಲಸ ಮಾಡುವುದು.

ಚಿಕಿತ್ಸಾ ವಿಧಾನ

ಬ್ರೖೆನ್ ಟ್ಯೂಮರ್ ಗುಣಪಡಿಸಲು ಸಾಕಷ್ಟು ಚಿಕಿತ್ಸಾ ವಿಧಾನಗಳು ಲಭ್ಯವಿದೆ. ಮೊದಲಿಗೆ ವೈದ್ಯರು ಅಗತ್ಯ ಪ್ರಯೋಗಾಲಯ ಪರೀಕ್ಷೆಗಳನ್ನು ನಡೆಸಿ ಗಡ್ಡೆ ಇರುವುದನ್ನು ಖಾತ್ರಿಪಡಿಸಿಕೊಂಡು ನಂತರ ಶಸ್ತ್ರಚಿಕಿತ್ಸೆ ನಡೆಸುತ್ತಾರೆ. ಗಡ್ಡೆಯನ್ನು ದೊಡ್ಡದಾಗಿ ತೆರೆಯುವ ಬದಲು ಚಿಕ್ಕ ಛೇದದ ಮೂಲಕ ಚಿಕಿತ್ಸೆ ನೀಡಬಹುದಾಗಿದೆ. ಈ ಶಸ್ತ್ರಚಿಕಿತ್ಸೆಯ ಅನುಕೂಲಗಳೆಂದರೆ ಚಿಕ್ಕ ಛೇಧನ, ನೋವು ಹಾಗೂ ಕಲೆ ರಹಿತವಾಗಿದ್ದು, ಕಡಿಮೆ ಪ್ರಮಾಣದಲ್ಲಿ ರಕ್ತ ಸ್ರವಿಸುವಿಕೆ ಹಾಗೂ ಕಡಿಮೆ ದಿನ ಆಸ್ಪತ್ರೆ ವಾಸ ಆಗಿರುತ್ತದೆ.

ಟ್ಯೂಮರ್​ನ ವಿಧಗಳು

  1. ಮ್ಯಾಲಿಜ್ಞೆನ್ಟ್ ಟ್ಯೂಮರ್ ಅಂದರೆ ಕ್ಯಾನ್ಸರ್​ಕಾರಕ ಗಡ್ಡೆ

2. ಬೆನಿಗ್ನ್ ಟ್ಯೂಮರ್ ಅಂದರೆ ಇದು ಕ್ಯಾನ್ಸರ್ ರಹಿತ ಗಡ್ಡೆ

3. ಪ್ರೖೆಮರಿ ಬ್ರೖೆನ್ ಟ್ಯೂಮರ್ ಇದು ಮೊದಲು ಮಿದುಳಿನಲ್ಲಿ ಆರಂಭವಾಗುವ ಗಡ್ಡೆ

4. ಮೆಟಾಸ್ಟಾಟಿಕ್ ಟ್ಯೂಮರ್ ಇದು ದೇಹದ ಇತರ ಭಾಗಗಳಲ್ಲಿ ಕ್ಯಾನ್ಸರ್ ಕಾಣಿಸಿಕೊಂಡು ನಂತರ ಮಿದುಳಿಗೆ ಹರಡುವ ಗಡ್ಡೆ.

ರೋಗ ಲಕ್ಷಣ

  • ನಿಧಾನವಾಗಿ ಆರಂಭಗೊಂಡ ತಲೆ ನೋವು ಇದ್ದಕ್ಕಿದ್ದಂತೆ ಹೆಚ್ಚಾಗುವುದು
  • ಕಣ್ಣು ಮಂಜಾಗಿ ಎಲ್ಲವೂ ಎರಡೆರಡು ಕಾಣಿಸುತ್ತದೆ, ಕೆಲವೊಮ್ಮೆ ಏನೂ ಕಾಣಿಸದಂತಾಗುವುದು
  • ಪದೇ ಪದೆ ವಾಕರಿಕೆ/ವಾಂತಿ, ಮೂರ್ಛೆ ಹೋಗುವುದು
  • ನಡೆದಾಡುವಾಗ ದೇಹದ ಸಮತೋಲನ ತಪು್ಪವುದು
  • ಮಾನಸಿಕ ಒತ್ತಡ ಹೆಚ್ಚಾಗುವುದು
  • ಕೈ ಅಥವಾ ಕಾಲಿನ ಭಾಗದಲ್ಲಿ ಸಂವೇದನೆ ಕಳೆದುಕೊಳ್ಳುವುದು
  • ಮಾತನಾಡಲು ಕಷ್ಟವಾಗುವುದು ಅಥವಾ ತೊದಲುವಿಕೆ
  • ಕಿವಿ ಕೇಳಿಸದಂತಾಗುವುದು, ದೃಷ್ಟಿ ಸಮಸ್ಯೆ

ಆಧುನಿಕ ಕಾರಣಗಳು, ಸಂಶೋಧನೆ

ಅಂಕಿಅಂಶಗಳ ಪ್ರಕಾರ ಜಾಗತಿಕ ಮಟ್ಟದಲ್ಲಿ ಪ್ರತಿ ಒಂದು ಲಕ್ಷ ಜನರಲ್ಲಿ 10 ಮಂದಿ ಈ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಪರಿಸರ ಮಾಲಿನ್ಯ, ಅತಿಯಾದ ಮೊಬೈಲ್ ಬಳಕೆ, ಅಹಾರದಲ್ಲಿ ರಸಾಯನಿಕ ಅಂಶಗಳ ಅತಿಯಾದ ಬಳಕೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಬ್ರೖೆನ್ ಟ್ಯೂಮರ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈ ಕಾರಣಗಳಿಂದಾಗಿ ಮನುಷ್ಯನ ದೇಹದಲ್ಲಿನ ಜೆನಿಟಿಕ್ಸ್ ಎರಡು ಬಗೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಒಂದು ಜೀನ್ ಮಿದುಳಿನಲ್ಲಿ ಗಡ್ಡೆ ಬೆಳವಣಿಗೆಯನ್ನು ನಿಯಂತ್ರಿಸಿದರೆ, ಮೊತ್ತೊಂದು ಪ್ರೋತ್ಸಾಹಿಸುತ್ತದೆ.

ಈ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿದ್ದು, ಭವಿಷ್ಯದಲ್ಲಿ ಬ್ರೖೆನ್ ಟ್ಯೂಮರ್​ಗೆ ಆಧುನಿಕ ಪದ್ಧತಿಯ ಚಿಕಿತ್ಸಾ ವಿಧಾನಗಳ ಜತೆಗೆ ಜೀನ್ ಥೆರಪಿಯಂತಹ ಚಿಕಿತ್ಸೆಗಳನ್ನು ಒದಗಿಸುವ ನಿಟ್ಟಿನಲ್ಲಿ ಅಧ್ಯಯನ ಹಾಗೂ ಪ್ರಯೋಗಗಳು ನಡೆಯುತ್ತಿದ್ದು, ಅದರ ಸಾಧಕ ಬಾಧಕಗಳನ್ನು ಅರಿತ ನಂತರ ಚಿಕಿತ್ಸೆಯಲ್ಲಿ ಅಳವಡಿಸಿಕೊಳ್ಳುವ ಸಾಧ್ಯತೆಗಳಿವೆ ಎನ್ನುತ್ತಾರೆ ಬ್ರೖೆನ್ಸ್ ಆಸ್ಪತ್ರೆಯ ಸ್ಥಾಪಕ ಹಾಗೂ ನರರೋಗ ತಜ್ಞ ಡಾ. ಎನ್.ಕೆ.ವೆಂಕಟರಮಣ.

ಮಕ್ಕಳಲ್ಲಿ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಹಿಂದೆಲ್ಲಾ 30-40 ವರ್ಷ ಮೇಲ್ಪಟ್ಟವರಲ್ಲಿ ಬ್ರೖೆನ್ ಟ್ಯೂಮರ್ ಕಾಣಿಸಿಕೊಳ್ಳುತ್ತಿತ್ತು. ಆಧುನಿಕ ಜೀವನ ಶೈಲಿಯಿಂದಾಗಿ 5-6 ವಯೋಮಾನದ ಮಕ್ಕಳಲ್ಲಿ ಹಾಗೂ 70 ವರ್ಷ ಮೇಲ್ಪಟ್ಟರಲ್ಲೂ ಪ್ರಕರಣಗಳು ಹೆಚ್ಚಾಗಿದೆ. ಹಾಗಾಗಿ ಚಿಕ್ಕಮಕ್ಕಳಲ್ಲಿ ತಲೆ ನೋವು, ಕಣ್ಣಿನ ಸಮಸ್ಯೆ, ಸೋಮಾರಿತನ, ವರ್ತನೆಯಲ್ಲಿ ಬದಲಾವಣೆ, ಓದು ಹಾಗೂ ಚಟುವಟಿಕೆಗಳಲ್ಲಿ ಹಿನ್ನೆಡೆ ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂರ್ಪಸಿ.

ಬ್ರೖೆನ್ ಟ್ಯೂಮರ್​ಗೆ ಬಹಳಷ್ಟು ಮಂದಿ ಗಂಭೀರ ಹಂತದಲ್ಲಿ ಚಿಕಿತ್ಸೆಗೆ ಬರುತ್ತಾರೆ. ಇದರಿಂದ ಫಲಿತಾಂಶ ಅತೀ ವಿರಳವಾಗಿದೆ. ಹಾಗಾಗಿ ಕಾರಣ ಹಾಗೂ ರೋಗ ಲಕ್ಷಣದ ಬಗೆಗೆ ಜನರು ಅರಿವು ಹೊಂದಬೇಕು. ಇದಕ್ಕೆ ಆರಂಭದಲ್ಲೇ ವೈದ್ಯರಲ್ಲಿ ತಪಾಸಣೆ ಮಾಡಿಸಿದರೆ. ಸುಲಭವಾಗಿ ಚಿಕಿತ್ಸೆ ಪಡೆದು ಬೇಗ ಗುಣ ಹೊಂದಬಹುದು. | ಡಾ. ಎನ್.ಕೆ.ವೆಂಕಟರಮಣ ನರರೋಗ ತಜ್ಞ, ಬ್ರೖೆನ್ಸ್ ಆಸ್ಪತ್ರೆ ಸ್ಥಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net