ಬೆಂಗಳೂರಿನಲ್ಲಿರುವ ಬ್ಯಾಚುಲರ್ಸ್​ಗೆ ಗುಡ್‌ನ್ಯೂಸ್‌: ಕನೆಕ್ಷನ್ ಇಲ್ಲದೆಯೇ HP ಗ್ಯಾಸ್ ಸಿಲಿಂಡರ್ ಬುಕ್​ ಮಾಡ್ಬೋದು, ಇಲ್ಲಿದೆ ಡಿಟೇಲ್ಸ್​​..Bengaluru

order HPCL cylinders on Instamart in bengaluru
order HPCL cylinders on Instamart in bengaluru
Published on

ಪ್ರಮುಖ ಮುಖ್ಯಾಂಶಗಳು

  • ಭಾರತದಲ್ಲೇ ಮೊದಲ ಬಾರಿಗೆ ಆ್ಯಪ್ ಮೂಲಕ 'ಗ್ಯಾಸ್ ಸಿಲಿಂಡರ್' ಡೆಲಿವರಿ ಮಾಡುವ ಕ್ರಾಂತಿಕಾರಿ ಸೇವೆ
  • 'ಎಚ್‌ಪಿ ನವ್ಯ'ವನ್ನು ಇನ್‌ಸ್ಟಾಮಾರ್ಟ್ ಮೂಲಕ ಮಾರುಕಟ್ಟೆಗೆ ಪರಿಚಯ
  • 10 ಕೆಜಿ ಸಾಮರ್ಥ್ಯದ ಕಾಂಪೋಸಿಟ್ ಸಿಲಿಂಡರ್ ಆನ್​ಲೈನ್​ನಲ್ಲಿ ಖರೀದಿ ಮಾಡಬಹುದು
ಬೆಂಗಳೂರು:  ಗ್ಯಾಸ್​ ಕನೆಕ್ಷನ್​, ಕುಡಿಯುವ ನೀರಿನ ಕನೆಕ್ಷನ್​ ಕೊಡಿಸಿಕೊಳ್ಳೋದು ಭಾರಿ ಕಷ್ಟ. ಗ್ಯಾಸ್​ ಖಾಲಿಯಾದ ಕೂಡಲೇ ಬುಕ್​ ಆಗಿರುವ ಸಿಲಿಂಡರ್​ ಡೆಲಿವರಿಯಾಗೋಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಇದರಿಂದ ಗ್ರಾಹಕರು ಈಗಾಗಲೇ ಬೇಸತ್ತು ಹೋಗಿದ್ದಾರೆ. ಆದರೆ ಇನ್ಮುಂದೆ ಸಿಲಿಕಾನ್​ ಸಿಟಿ ಜನರಿಗೆ ಈ ಸಮಸ್ಯೆ ಇರೋದಿಲ್ಲ.
ಹೌದು, ಭಾರತದಲ್ಲೇ ಮೊದಲ ಬಾರಿಗೆ ಆ್ಯಪ್ ಮೂಲಕ 'ಗ್ಯಾಸ್ ಸಿಲಿಂಡರ್' ಡೆಲಿವರಿ ಮಾಡುವ ಕ್ರಾಂತಿಕಾರಿ ಸೇವೆಗೆ ಇನ್‌ಸ್ಟಾಮಾರ್ಟ್ ಮುನ್ನುಡಿ ಬರೆದಿದೆ.ಕೇಂದ್ರ ಸರ್ಕಾರದ ಮಹಾರತ್ನ ಕಂಪನಿಯಾದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. (ಎಚ್‌ಪಿಸಿಎಲ್‌) ಜೊತೆ ಒಪ್ಪಂದ ಮಾಡಿಕೊಂಡಿರುವ ಇನ್‌ಸ್ಟಾಮಾರ್ಟ್, ಬೇಡಿಕೆಯ ಮೇರೆಗೆ ಗ್ಯಾಸ್ ಸಿಲಿಂಡರ್ ಡೆಲಿವರಿ ಸೇವೆಯನ್ನು ಆರಂಭಿಸಿದೆ.

ಏನಿದು 'ಎಚ್‌ಪಿ ನವ್ಯ' ಸಿಲಿಂಡರ್?

ಈ ಒಪ್ಪಂದದ ಭಾಗವಾಗಿ ಎಚ್‌ಪಿಸಿಎಲ್‌ ತನ್ನ ಹೊಸ ಪೀಳಿಗೆಯ ಸಿಲಿಂಡರ್ ಆದ 'ಎಚ್‌ಪಿ ನವ್ಯ'ವನ್ನು (HP Navya) ಇನ್‌ಸ್ಟಾಮಾರ್ಟ್ ಮೂಲಕ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದು 10 ಕೆಜಿ ಸಾಮರ್ಥ್ಯದ ಕಾಂಪೋಸಿಟ್ ಸಿಲಿಂಡರ್ ಆಗಿದ್ದು, ಸಾಮಾನ್ಯ ಸಿಲಿಂಡರ್‌ಗಿಂತ ಅತಿ ಹಗುರವಾಗಿದೆ. ತುಕ್ಕು ಹಿಡಿಯದಂತೆ ವಿನ್ಯಾಸಗೊಳಿಸಲಾಗಿರುವ ಈ ಸಿಲಿಂಡರ್, ಅರೆ-ಪಾರದರ್ಶಕ ಬಾಡಿಯನ್ನು ಹೊಂದಿದೆ. ಇದರಿಂದ ಒಳಗಡೆ ಎಷ್ಟು ಗ್ಯಾಸ್ ಉಳಿದಿದೆ ಎಂಬುದನ್ನೂ ಗ್ರಾಹಕರು ಹೊರಗಿನಿಂದಲೇ ಸುಲಭವಾಗಿ ನೋಡಬಹುದು. ಇದರ ಜೊತೆಗೆ 5 ಕೆಜಿ ಸಾಮರ್ಥ್ಯದ ಸಾಮಾನ್ಯ ಮೆಟಲ್ ಸಿಲಿಂಡರ್ ಕೂಡ ಆ್ಯಪ್‌ನಲ್ಲಿ ಲಭ್ಯವಿರಲಿದೆ.

ಬ್ಯಾಚುಲರ್ಸ್, ವಿದ್ಯಾರ್ಥಿಗಳಿಗೆ ಹೇಳಿಮಾಡಿಸಿದ ಸೇವೆ!

ಬೆಂಗಳೂರಿನಂತಹ ನಗರಗಳಲ್ಲಿ ಪಿಜಿ, ರೂಮ್ ಮಾಡಿಕೊಂಡು ಇರುವ ವಿದ್ಯಾರ್ಥಿಗಳು ಮತ್ತು ಬ್ಯಾಚುಲರ್‌ಗಳಿಗೆ ಗ್ಯಾಸ್ ಕನೆಕ್ಷನ್ ಪಡೆಯುವುದು ದೊಡ್ಡ ತಲೆನೋವಿನ ಕೆಲಸ. ಆದರೆ ಇನ್‌ಸ್ಟಾಮಾರ್ಟ್‌ನಲ್ಲಿ ಸಿಲಿಂಡರ್ ಖರೀದಿಸಲು ಯಾವುದೇ ಕನೆಕ್ಷನ್, ದಾಖಲೆಗಳ ಗೋಜಲಿಲ್ಲ. ಎಮರ್ಜೆನ್ಸಿಗೆ ಎರಡನೇ ಸಿಲಿಂಡರ್ ಬೇಕು ಎನ್ನುವವರಿಗೂ, ಫ್ಲ್ಯಾಟ್‌ಗಳಲ್ಲಿ ವಾಸಿಸುವವರಿಗೂ ಇದು ಅತ್ಯುತ್ತಮ ಆಯ್ಕೆಯಾಗಿದೆ. ಮೊದಲ ಹಂತದಲ್ಲಿ ಈ ಸೇವೆ 'ಬೆಂಗಳೂರಿನ' ಜನತೆಗೆ ಮಾತ್ರ ಲಭ್ಯವಿರಲಿದೆ.

ಆರ್ಡರ್ ಮಾಡುವುದು ಹೇಗೆ? ಡೆಲಿವರಿ ಯಾರು ಮಾಡ್ತಾರೆ?

ಗ್ರಾಹಕರು ಇನ್‌ಸ್ಟಾಮಾರ್ಟ್ ಆ್ಯಪ್ ತೆರೆದು ತಮಗೆ ಬೇಕಾದ 10 ಕೆಜಿ ಅಥವಾ 5 ಕೆಜಿ ಸಿಲಿಂಡರ್ ಅನ್ನು ಕಾರ್ಟ್‌ಗೆ ಸೇರಿಸಿ ಆರ್ಡರ್ ಮಾಡಬಹುದು. ಮೊದಲ ಬಾರಿಗೆ ಆರ್ಡರ್ ಮಾಡುತ್ತಿದ್ದರೆ, ಹೊಸ ಸಿಲಿಂಡರ್‌ನ ಪೂರ್ಣ ಹಣವನ್ನು ಪಾವತಿಸಬೇಕು. ಈ ವೇಳೆ ಗುರುತಿನ ಚೀಟಿ ಪರಿಶೀಲನೆ ಇರುತ್ತದೆ. 
ಒಮ್ಮೆ ಗ್ಯಾಸ್ ಖಾಲಿಯಾದ ನಂತರ, ಮತ್ತೆ ಆ್ಯಪ್‌ನಲ್ಲಿ ರಿಫಿಲ್ ಆರ್ಡರ್ ಮಾಡಬಹುದು. ಆಗ ಸಾಮಾನ್ಯ ಗ್ಯಾಸ್‌ನಂತೆಯೇ ಹೊಸ ಸಿಲಿಂಡರ್‌ ತಂದು ಕೊಡುವಾಗ, ಹಳೆಯ ಖಾಲಿ ಸಿಲಿಂಡರ್ ಅನ್ನು ವಾಪಸ್ ನೀಡಬೇಕಾಗುತ್ತದೆ.

ಈ ವಿಚಾರ ನೆನಪಿರಲಿ

ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈ ಗ್ಯಾಸ್ ಸಿಲಿಂಡರ್‌ಗಳನ್ನು ಸಾಮಾನ್ಯ ದಿನಸಿ ತರುವ ಡೆಲಿವರಿ ಬಾಯ್ಸ್ ತರುವುದಿಲ್ಲ. ಬದಲಾಗಿ, ಆಯಾ ಏರಿಯಾದಲ್ಲಿರುವ ಎಚ್‌ಪಿಸಿಲ್‌ನ ಅಧಿಕೃತ ವಿತರಕರೇ, ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳನ್ನು ಪಾಲಿಸಿ, ತರಬೇತಿ ಪಡೆದ ಸಿಬ್ಬಂದಿಯ ಮೂಲಕವೇ ಸಿಲಿಂಡರ್‌ನ್ನು ನಿಮ್ಮ ಮನೆಗೆ ಸುರಕ್ಷಿತವಾಗಿ ತಲುಪಿಸಲಿದ್ದಾರೆ.
ಈ ಬಗ್ಗೆ ವಿವರ ನೀಡಿರುವ ಇನ್‌ಸ್ಟಾಮಾರ್ಟ್ ಸಿಇಒ ಅಮಿತೇಶ್ ಝಾ, "ಇನ್‌ಸ್ಟಾಮಾರ್ಟ್ ಕೇವಲ ದಿನಸಿಗೆ ಸೀಮಿತವಾಗಿಲ್ಲ; ಜನರ ದೈನಂದಿನ ಬದುಕಿನ ಭಾಗವೇ ಆಗಿ ಹೋಗಿದೆ. ಎಚ್‌ಪಿಸಿಎಲ್ ಜೊತೆಗಿನ ಈ ಪಾಲುದಾರಿಕೆಯ ಮೂಲಕ ನಾವು ಅಗತ್ಯ ಗೃಹೋಪಯೋಗಿ ಸೇವೆಯನ್ನು ಒದಗಿಸುತ್ತಿದ್ದು, ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳಲಿದ್ದೇವೆ," ಎಂದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net