

ಕುರುಕ್ಷೇತ್ರದ ಸಮರ ನಡೆದಿದೆ. ಅದಾಗಲೇ ಎಂಟು ದಿನಗಳು ಕಳೆದಿವೆ. ಆದರೆ ಪಾಂಡವರಲ್ಲಿ ಒಬ್ಬರನ್ನೂ ಕೊಲ್ಲಲಾಗಿಲ್ಲ ಎಂಬ ಅಸಮಾಧಾನ ದುರ್ಯೋಧನನಿಗೆ. ಕೋಪದಿಂದ ಭೀಷ್ಮರ ಬಳಿಗೆ ಬಂದ. ‘ನಿಮ್ಮಂತಹ ಮಹಾಬಲಶಾಲಿಗಳು ನನ್ನೊಂದಿಗೆ ಇದ್ದರೂ ಇಂದಿಗೂ ಒಬ್ಬನೇ ಒಬ್ಬ ಪಾಂಡವನನ್ನು ಕೊಲ್ಲಲು ಸಾಧ್ಯವಾಗಿಲ್ಲ. ನೀವು ದೈಹಿಕವಾಗಿ ನನ್ನವರು. ಮಾನಸಿಕವಾಗಿ ಪಾಂಡವರ ಪಕ್ಷದವರು. ನಿಮ್ಮ ಮೇಲೆ ವಿಶ್ವಾಸವೇ ಇಲ್ಲ ನನಗೆ’ ಎಂದೆಲ್ಲ ಅವಮಾನಿಸಿಬಿಟ್ಟ.
ಭೀಷ್ಮರ ಮನಸ್ಸು ನೋವು-ಅಪಮಾನದಿಂದ ಬೆಂದಿತು. ತಕ್ಷಣವೇ ‘ನಾಳೆಯ ಯುದ್ಧದಲ್ಲಿ ಅರ್ಜುನನನ್ನು ಸಂಹರಿಸಿಬಿಡುವೆ’ ಎಂದು ಪ್ರತಿಜ್ಞೆ ಮಾಡಿಬಿಟ್ಟರು. ದುರ್ಯೋಧನನಿಗೆ ಅಮೃತಪಾನದಷ್ಟು ಸಂತಸ. ಸುದ್ದಿ ಹರಡಿತು. ಪಾಂಡವರ ಪಕ್ಷದವರೆಲ್ಲ ಗಾಬರಿಗೊಂಡರು. ಶ್ರೀಕೃಷ್ಣ ಎಲ್ಲರಿಗೂ ಸಮಾಧಾನ ಪಡಿಸಿದ. ಇಷ್ಟರಲ್ಲಿ ಅರ್ಜುನ ಎಲ್ಲಿ, ಕಾಣುತ್ತಿಲ್ಲ, ಗಾಬರಿಯಿಂದ ಎಲ್ಲಾದರೂ ಮರೆಯಾದನೆ? ಎಂದು ಎಲ್ಲರೂ ಯೋಚಿಸತೊಡಗಿದರು.
ಶ್ರೀಕೃಷ್ಣ ಅರ್ಜುನನ ಬಿಡಾರಕ್ಕೆ ಬಂದು ನೋಡಿದರೆ, ಅವನು ನಿಶ್ಚಿಂತೆಯಿಂದ ನಿದ್ರಿಸುತ್ತಿದ್ದ. ಶ್ರೀಕೃಷ್ಣ ಮುಗುಳ್ನಗುತ್ತ ಕೇಳಿದ, ‘ಪಾರ್ಥ...! ನಿದ್ರೆಯಲ್ಲಿರುವೆಯಾ? ನಿನಗೆ ಭೀಷ್ಮರ ಪ್ರತಿಜ್ಞೆ ಬಗ್ಗೆ ತಿಳಿದಿಲ್ಲವೇ? ಭೀಷ್ಮರು ನಿನ್ನನ್ನು ನಾಳೆ ಕೊಲ್ಲಲು ತೊಡೆ ತಟ್ಟಿ ನಿಂತಿರುವರು. ನಿನ್ನಲ್ಲಿ ಗಾಬರಿ, ಉದ್ವೇಗ, ಮರಣಭಯ ಯಾವುವೂ ಕಾಣುತ್ತಿಲ್ಲವಲ್ಲ...’ ಎಂದ. ಅದಕ್ಕೆ ಅರ್ಜುನನು, ‘ನೀನು ಎಚ್ಚರದಿಂದಿರುವಾಗ ನನಗೇಕೆ ಭಯ? ನಾನು ನಿಶ್ಚಿಂತನಾಗಿರುವೆ. ನನ್ನ ಭಯಕ್ಕಿಂತ ನಿನ್ನ ಮೇಲಿನ ವಿಶ್ವಾಸ ಬಹಳ ಅಚಲವಾಗಿದೆ. ನಂಬಿ ಕೆಟ್ಟವರಿಲ್ಲವೋ ನಿನ್ನ’ ಎಂದು ಕೈ ಮುಗಿದ.
ವಿಶ್ವಾಸದ ಪ್ರಭಾವ ಉನ್ನತಿಗೆ ಕಾರಣವಾದರೆ, ಅಭಾವ ಅವನತಿಗೆ ಕಾರಣವಾಗುತ್ತದೆ ಎಂಬುದು ಎಲ್ಲರ ಅನುಭವ. ವಿಶ್ವಾಸ ನಮ್ಮ ಸ್ನೇಹಿತರ ಮೇಲಿರಬಹುದು, ಗಂಡ-ಹೆಂಡತಿಯರ ಮಧ್ಯೆ ಇರಬಹುದು, ಒಡಹುಟ್ಟಿದವರ ಮಧ್ಯೆ ಇರಬಹುದು. ಒಮ್ಮೆ ಮನುಷ್ಯನಲ್ಲಿ ಖಿನ್ನತೆ ಮನೆಮಾಡಿದರೆ ಅವನಲ್ಲಿ ವಿಶ್ವಾಸ ತುಂಬುವುದು ಬಹಳ ಕಷ್ಟ. ವಿಶ್ವಾಸ ಗಳಿಸುವುದು ಹಾಗೂ ಉಳಿಸುವುದು ಎರಡೂ ಮಹತ್ವದ್ದು.
ಪಾಂಡವರು ಶ್ರೀಕೃಷ್ಣ ಪರಮಾತ್ಮನ ಮೇಲಿಟ್ಟ ವಿಶ್ವಾಸದಿಂದಲೇ ಎಂದಿಗೂ ಕಂಗೆಡದೆ ಕೊನೆಗೆ ಜಯಶಾಲಿಗಳಾದರು. ಜಗತ್ತು ನಿಂತಿರುವುದೇ ವಿಶ್ವಾಸದಡಿಯಲ್ಲಿ ಎಂಬುದು ಸುಳ್ಳಲ್ಲ. ಇದರರ್ಥ ಜಗತ್ತಿನಲ್ಲಿ ಎಲ್ಲರೊಂದಿಗೂ ಅಂಧವಿಶ್ವಾಸದಿಂದ ವ್ಯವಹರಿಸಬೇಕೆಂದಲ್ಲ. ನಮ್ಮ ಮೇಲೆ ನಮಗೆ ಆತ್ಮವಿಶ್ವಾಸವಿರಲಿ. ಹೆತ್ತವರ ಬಗ್ಗೆ ವಿಶ್ವಾಸವಿರಲಿ. ಕೈಹಿಡಿದವರ ಬಗ್ಗೆ ವಿಶ್ವಾಸವಿರಲಿ. ಅದೇ ಸಂಬಂಧಗಳನ್ನು ಸುಸೂತ್ರವಾಗಿ ಮುನ್ನಡೆಸುತ್ತದೆ.
ಅಷ್ಟೇ ಅಲ್ಲ, ಒಂದು ರಾತ್ರಿ ಪ್ರಯಾಣಿಸುವ ರೈಲಿನಲ್ಲಿ ಸಹ ಜೊತೆಗಾರನಿಗೆ, ‘ನಾನು ಬರುವವರೆಗೂ ಸ್ವಲ್ಪ ನನ್ನ ಚೀಲವನ್ನು ಕಾಯುವಿರಾ?’ ಎಂದರೆ ಅಪರಿಚಿತ ವ್ಯಕ್ತಿಯೂ ‘ಆಗಲಿ’ ಎನ್ನುವ. ಹೀಗೆ ವಿಶ್ವಾಸ ಎಂಬುದು ಬಹಳ ದೊಡ್ಡ ಶಕ್ತಿ. ಆದರೆ ಅದು ಸರಿಯಾದ ವ್ಯಕ್ತಿಯಲ್ಲಿ ಮಾಡಿದಾಗ ಮಾತ್ರ. ದುರ್ಯೋಧನನು ಭೀಷ್ಮ, ದ್ರೋಣ, ಕರ್ಣಾದಿಗಳ ಮೇಲೆ ಮಾಡಿದ ವಿಶ್ವಾಸ ನಮಗೆ ಬೇಡ. ಅರ್ಜುನನಿಗೆ ಕೃಷ್ಣನ ಬಗ್ಗೆ ಇದ್ದ ವಿಶ್ವಾಸ ನಮ್ಮಲ್ಲಿ ಬರಲಿ. ಏಕೆಂದರೆ ನಂಬಿ ಕೆಟ್ಟವರಿಲ್ಲವೋ.
(ಲೇಖಕರು ಹವ್ಯಾಸಿ ಬರಹಗಾರರು)