ಮನೋಲ್ಲಾಸ: ಲೋಕಮೈತ್ರಿಯ ಭಾವ ಇರಲಿ

manollasa mar 20
Published on

ಟಿ.ಎಂ.ಜಗದೀಶ್

ಒಬ್ಬ ರಾಜನಿದ್ದ. ಆತ ತನ್ನ ಮಗನನ್ನು ವಿದ್ಯಾರ್ಜನೆಗಾಗಿ ಗುರುಗಳೊಬ್ಬರ ಬಳಿ ಕಳುಹಿಸಿದ. ಗುರು ಶಿಷ್ಯನನ್ನು ಬರಮಾಡಿಕೊಂಡು, ‘ಮಗೂ.. ನೀನು ಬಲಶಾಲಿ ಆಗಬಯಸುವೆಯೋ, ವೀರನಾಗಬಯಸುವೆಯೋ? ಬಲಶಾಲಿ ಆಗಬೇಕಾದರೆ ಕುದುರೆ ಸವಾರಿ ಮತ್ತು ಶಸ್ತ್ರಾಭ್ಯಾಸದಲ್ಲಿ ಪ್ರಾವೀಣ್ಯ ಗಳಿಸು. ವೀರನಾಗಬೇಕಾದರೆ ಅಹಿಂಸೆ, ಮೈತ್ರಿ, ಕರುಣೆ ಹಾಗೂ ನಮ್ರತೆಗಳನ್ನು ಸಾಧಿಸು. ಸೇವಾ ಪರಾಯಣನಾಗು’ ಎಂದರು. ಶಿಷ್ಯ ತನ್ನ ಮನೋವಾಂಛಿತ ವಿದ್ಯೆ ಕಲಿಯತೊಡಗಿದ. ಒಮ್ಮೆ ಗುರುಗಳ ಆಶ್ರಮಕ್ಕೆ ಅತಿಥಿಗಳೊಬ್ಬರು ಬಂದರು. ಅವರು ರಾಜವಂಶದ ಶತ್ರುವಾಗಿದ್ದರು. ಪರಮ ಸೇವಾ ಪರಾಯಣನಾದರೂ ರಾಜಪುತ್ರನು ಅತಿಥಿಗಳ ಸೇವೆಯನ್ನು ಪೂರ್ಣ ತತ್ಪರತೆಯಿಂದ ಮಾಡಲು ಅಸಮರ್ಥನಾದ. ಇದನ್ನು ಗಮನಿಸಿದ ಗುರುಗಳು, ‘ವತ್ಸಾ.. ನಿನ್ನ ಸಾಧನೆ ಸಾರ್ಥಕವಾಗಬೇಕಾದರೆ ಅತಿಥಿಯ ಸೇವೆಯನ್ನು ನಿರ್ಲಿಪ್ತ ಭಾವದಿಂದ ಮಾಡು’ ಎಂದು ಆದೇಶಿಸಿದರು. ಆದರೆ, ಶಿಷ್ಯ ಅದಕ್ಕೊಪ್ಪದೆ ಆವೇಶದಿಂದ ತಂದೆ ಬಳಿಗೆ ಬಂದು, ‘ಎಂಥ ಗುರುವಿನ ಬಳಿ ನನ್ನನ್ನು ಕಳಿಸಿದೆಯಪ್ಪಾ.. ಶತ್ರು-ಮಿತ್ರ ಬೇಧವಿಲ್ಲದೆ ಎಲ್ಲರೊಡನೆ ಸ್ನೇಹ ಬೆಳೆಸುವ, ಅವರ ಸೇವೆ ಮಾಡುವ ಆದೇಶ ನೀಡಬಹುದೆ?’ ಎಂದ. ರಾಜ ವಿಷಯವನ್ನು ಊಹಿಸಿ ಹೇಳಿದ-‘ಈ ಮಾತಿಗುತ್ತರವನ್ನು ಈಗಲೇ ನೀಡಲಾರೆ. ಸಮಯ ಬಂದಾಗ ನಿನಗೇ ತಿಳಿಯುತ್ತದೆ’.

ಕೆಲವು ದಿನಗಳ ನಂತರ, ಒಂದು ಸಂಜೆ ರಾಜ ಮಗನೊಂದಿಗೆ ವಾಯುವಿಹಾರಕ್ಕೆ ಹೊರಟ. ಮಾತ ನಾಡುತ್ತ ಅವರು ಬಹುದೂರ ನಡೆದು ಬಿಟ್ಟರು. ಸಂಜೆ ಕಳೆದು ರಾತ್ರಿಯಾಗಿಬಿಟ್ಟಿತ್ತು. ಅವಸರದಿಂದ ಅರಮನೆಗೆ ಹಿಂದಿರುಗುತ್ತಿರುವಾಗ ರಾಜನ ಕುದುರೆ ಕಲ್ಲೊಂದನ್ನು ಎಡವಿ ಮುಗ್ಗರಿಸಿತು. ರಾಜ ಕೆಳಕ್ಕೆ ಜಿಗಿದ. ಆಗ ಅವನ ಕೊರಳಲ್ಲಿದ್ದ ಅಮೂಲ್ಯ ಮಣಿಯೊಂದು ನೆಲದಲ್ಲಿ ಬಿದ್ದು ಕತ್ತಲಲ್ಲಿ ಉರುಳಿ ಹೋಯಿತು. ರಾಜಕುಮಾರ ಕುದುರೆಯಿಂದಿಳಿದು ಮಣಿಗಾಗಿ ಹುಡುಕಾಡಿದ. ಅದು ಸಿಗಲಿಲ್ಲ. ಬೇರೆ ದಾರಿ ಕಾಣದೆ ರಾಜಕುಮಾರ ನೆಲದ ಸುತ್ತಲೂ ಇದ್ದ ಕಲ್ಲು-ಮಣ್ಣು ಗುಡಿಸಿ ಗಂಟು ಕಟ್ಟಿದ. ರಾಜ ಮಗನಿಗೆ ಹೇಳಿದ-‘ಕಳೆದದ್ದು ಒಂದೇ ಮಣಿ. ನೀನು ವೃಥಾ ಕಲ್ಲು ಮಣ್ಣುಗಳನ್ನೆಲ್ಲ ಗಂಟು ಕಟ್ಟಿರುವೆ. ಬಿಸಾಡಿಬಿಡು ಅದನ್ನೆಲ’. ರಾಜಕುಮಾರ ಉತ್ತರಿಸಿದ-‘ಅಪ್ಪಾ.. ಈಗ ಕತ್ತಲಾಗಿರುವುದರಿಂದ ಮಣಿ ಯಾವುದೆಂದು ಗೊತ್ತಾಗುತ್ತಿಲ್ಲ. ಹಾಗಾಗಿ ನೆಲದ ಮೇಲಿದ್ದುದನ್ನೆಲ್ಲ ಗುಡಿಸಿ ಗಂಟು ಕಟ್ಟಿದ್ದೇನೆ. ಬೆಳಕಿನಲ್ಲಿ ಮಣಿಯನ್ನು ಆರಿಸಿಕೊಂಡು ಉಳಿದದ್ದನ್ನು ಎಸೆದರಾಯ್ತು’.

ರಾಜ ಮುಗುಳ್ನಕ್ಕು -‘ಕೆಲವು ದಿನಗಳ ಹಿಂದೆ ನೀನು ಕೇಳಿದ ಪ್ರಶ್ನೆಗೆ ಇದೇ ಉತ್ತರ. ಜ್ಞಾನಪ್ರಾಪ್ತಿಯ ನಂತರವೇ ಇದು ಅಪ್ಪಟ, ಇದು ಕೃತ್ರಿಮ- ಇದು ಕೆಟ್ಟದು, ಇದು ಒಳ್ಳೆಯದು ಎಂದು ನಿರ್ಧರಿಸಲು ಸಾಧ್ಯ. ಆದ್ದರಿಂದ ಸಮಸ್ತ ಜೀವರಾಶಿಗಳ ಬಗೆಗೆ ನಿರ್ವಿಕಾರ ಭಾವನೆಯಿಂದ ಆತ್ಮೀಯತೆ ತೋರಬೇಕು. ವಿಶ್ವಮೈತ್ರಿ ಹಾಗೂ ವಸುದೈವ ಕುಟುಂಬಕಂನ ಸಿದ್ಧಿಗಿದುವೆ ದಾರಿ’ ಎಂದು ವಿವರಿಸಿದ. ಇಂಥ ಲೋಕಮೈತ್ರಿಯ, ಎಲ್ಲರ ಹಿತ ಬಯಸುವ ವಿಶಾಲ ಮನಸ್ಸು ನಮ್ಮದಾಗಲಿ. ಆಗಲೇ, ನಿಜವಾದ ಅರ್ಥದಲ್ಲಿ ಜೀವನದರ್ಶನ ಸಾಧ್ಯವಾಗಬಲ್ಲದು.

(ಲೇಖಕರು ಕಥೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net