

ವಿವಿಧ ಕಾರಣಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುವ ಕನಸು ನನಸಾಗದೇ ಉಳಿದು ಬಿಡುತ್ತದೆ. ಕೃಷಿ, ಸರ್ಕಾರಿ, ಅರೆ ಸರ್ಕಾರಿ, ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಲ್ಲಿ ನೌಕರಿಯಲ್ಲಿರುವವರಿಗೆ ತಮ್ಮ ನೌಕರಿಯ ಜತೆಯಲ್ಲೇ ವರ್ಷದಲ್ಲಿ ಸೀಮಿತ ಅವಧಿಗೆ ಸೇನೆಯಲ್ಲಿ ಸೇವೆ ಸಲ್ಲಿಸುವ ಅಪೂರ್ವ ಅವಕಾಶವನ್ನು ನೀಡುವುದೇ ‘ಪ್ರಾದೇಶಿಕ ಸೇನೆ’. ಏನಿದು ಹುದ್ದೆ? ನೇಮಕಾತಿ ಹೇಗೆ? ಇಲ್ಲಿದೆ ವಿವರ.
ಶಿಸ್ತು, ವೃತ್ತಿಪರತೆ, ಗೌರವಪೂರ್ಣ ಇತಿಹಾಸ ಹಾಗೂ ಸಾಹಸಗಳಿಂದಾಗಿ ಭಾರತೀಯ ಸೇನೆ ವಿಶ್ವದಲ್ಲೇ ಸವೋತ್ತಮ ಸೈನ್ಯಗಳಲ್ಲೊಂದೆನಿಸಿದೆ. ಏಳು ದಶಕಗಳ ಸ್ವಾತಂತ್ರೊ್ಯೕತ್ತರದಲ್ಲಿ ರಾಜಕೀಯದಿಂದ ದೂರವಿದ್ದು ನಾಗರಿಕ ನಾಯಕತ್ವಕ್ಕೆ ನಿಷ್ಠವಾಗಿ ಒಳ-ಹೊರಗಿನ ದುಷ್ಟಶಕ್ತಿಗಳಿಂದಲೂ ಮತ್ತು ನೈಸರ್ಗಿಕ ವಿಕೋಪದಿಂದಲೂ ದೇಶವನ್ನು ರಕ್ಷಿಸುತ್ತಾ ಬಂದಿರುವ ನಮ್ಮ ಸೇನೆಯ ಕುರಿತು ಜನಮಾನಸದಲ್ಲಿ ಅಪಾರ ಹೆಮ್ಮೆ, ಗೌರವ ಇದೆ.
ಇಂಥ ಸೇನೆಗೆ ಸೇರಬೇಕು ಎನ್ನುವ ಆಸೆ ಯುವಸಮೂಹದ್ದು. ಆದರೆ ವರ್ಷವಿಡೀ ಮನೆಯಿಂದ ದೂರವಿರಬೇಕಾಗುವ ಕಾರಣ ಅಥವಾ ಬೇರೆ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಸೇನೆಗೆ ಸೇರಲು ಅವಕಾಶ ಸಿಗುವುದಿಲ್ಲ. ಅಂಥವರಿಗೆಲ್ಲ ವರದಾನವಾಗಿರುವುದು ಪ್ರಾದೇಶಿಕ ಸೇನೆ
(Territorial Army). ಕೃಷಿ, ಸರ್ಕಾರಿ- ಅರೆ ಸರ್ಕಾರಿ, ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಲ್ಲಿ ನೌಕರಿಯಲ್ಲಿರುವವರು ಕೂಡ ತಮ್ಮ ನೌಕರಿಯ ಜತೆಯಲ್ಲೇ ವರ್ಷದಲ್ಲಿ ಸೀಮಿತ ಅವಧಿಗೆ ಸೇನೆಯಲ್ಲಿ ಸೇವೆ ಸಲ್ಲಿಸುವ ಅಪೂರ್ವ ಅವಕಾಶವನ್ನು ನೀಡುತ್ತದೆ ಪ್ರಾದೇಶಿಕ ಸೇನೆಯ ಸೇವೆ.
ಇದುವರೆಗೆ ಅನೇಕ ರಾಜಕಾರಣಿಗಳು, ಉನ್ನತ ಅಧಿಕಾರಿಗಳು, ಗಣ್ಯರು ಪ್ರಾದೇಶಿಕ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸಿದ್ಧ ಸಿನಿಮಾ ತಾರೆಯರು, ರಾಜಸ್ಥಾನದ ಉಪ ಮುಖ್ಯ ಮಂತ್ರಿ ಸಚಿನ್ ಪೈಲಟ್, ವಿಜ್ಞಾನಿ ದೀಪಕ್ ರಾವ್ರಂತಹ ಗಣ್ಯರು ಪ್ರಾದೇಶಿಕ ಸೇನೆಯಲ್ಲಿ ಸೇವೆ ಸಲ್ಲಿಸಿ ದೇಶದ ಯುವಕರ ಗಮನ ಸೆಳೆದಿದ್ದಾರೆ. ವೃತ್ತಿಪರ ಚಟುವಟಿಕೆಗಳ ಏಕತಾನತೆಯಿಂದ ಹೊರಬಂದು ದೇಶಸೇವೆಗೈಯ್ಯುವ ಅವಕಾಶ ನೀಡುವ ಪ್ರಾದೇಶಿಕ ಸೇನೆ ದೇಶದ ವೈವಿಧ್ಯವನ್ನು ನೋಡುವ, ಶಿಸ್ತಿಗೆ ಹೆಸರಾದ ಸೈನ್ಯ ಸೇವೆಯ ಅನುಭವ ನೀಡುತ್ತದೆ. ವಯೋಮಿತಿಯಲ್ಲಿ ರಿಯಾಯಿತಿ, ವರ್ಷದಲ್ಲಿ ಸೀಮಿತ ಅವಧಿಯ ಸೇವಾವಧಿ, ನಿಯಮಿತ ಸೈನ್ಯ ಸೇವೆಯ ಎಲ್ಲಾ ಸೌಕರ್ಯ-ಸೌಲಭ್ಯದಿಂದಾಗಿ ಸಂಖ್ಯೆಯಲ್ಲಿ ಸುಮಾರು ಎರಡು ಲಕ್ಷದಷ್ಟಿರುವ ಪ್ರಾದೇಶಿಕ ಸೇನೆ ಕೃಷಿ-ಸ್ವಂತ ವ್ಯವಹಾರಗಳನ್ನು ಹೊಂದಿದ ಸಾಮಾನ್ಯರನ್ನು ಹಾಗೂ ಉನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳನ್ನು, ಗಣ್ಯರನ್ನು ಸೆಳೆಯುತ್ತಿದೆ.
ಪ್ರಾದೇಶಿಕ ಸೇನೆಯಲ್ಲಿಯೂ ವಿಭಿನ್ನ ವಿಭಾಗಗಳಿದ್ದು, ಇಲ್ಲಿಗೆ ಸೇರುವವರ ಅರ್ಹತೆಯ ಆಧಾರದ ಮೇಲೆ ಆ ವಿಭಾಗಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಸಾಮಾನ್ಯ ಸೈನಿಕರಿಗೆ ಇರುವ ಜವಾಬ್ದಾರಿಯೇ ಪ್ರಾದೇಶಿಕ ಸೈನಿಕರ ಮೇಲೆಯೂ ಇರುತ್ತದೆ. ಯುದ್ಧ ಮುಂತಾದ ತುರ್ತು ಸಂದರ್ಭಗಳಲ್ಲಿಯೂ ಇವರನ್ನು ಬಳಸಿಕೊಳ್ಳಲಾಗುತ್ತದೆ.
ಪ್ರಾದೇಶಿಕ ಸೇನೆ ಹುಟ್ಟಿದ್ದು ಹೇಗೆ?: ಯುದ್ಧ ಮತ್ತು ನೈಸರ್ಗಿಕ ವಿಪತ್ತಿನಂತಹ ಆಪತ್ಕಾಲದ ಸಮಯದಲ್ಲಿ ಸೇನೆಯನ್ನು ಅದರ ಶಾಂತಿ ಕಾಲದ ಸ್ಥಿರ ಕರ್ತವ್ಯಗಳಿಂದ ಮುಕ್ತಗೊಳಿಸುವ ಹಾಗೂ ನಾಗರಿಕ ಆಡಳಿತಕ್ಕೆ ಸಹಾಯ ಮಾಡುವ ಎರಡನೆಯ ಶ್ರೇಣಿಯ ರಕ್ಷಣಾ ಪಡೆಯೆನಿಸಿರುವ ಪ್ರಾದೇಶಿಕ ಸೇನೆ ದೀರ್ಘ ಇತಿಹಾಸ ಹೊಂದಿದೆ. 1920ರಲ್ಲಿ ಬ್ರಿಟಿಷರಿಂದ ‘ಇಂಡಿಯನ್ ಟೆರಿಟೋರಿಯಲ್ ಆಕ್ಟ್’ ಮೂಲಕ ಸ್ಥಾಪಿಸಲಾಗಿದ್ದ ಪ್ರಾದೇಶಿಕ ಸೇನೆ ಸ್ವಾತಂತ್ರಾ್ಯನಂತರ ‘ಆರ್ವಿು ಆಕ್ಟ್ 1948’ರ ಮೂಲಕ ಅಸ್ತಿತ್ವಕ್ಕೆ ಬಂತು.
ಕೇಂದ್ರದ ಹಾಲಿ ಸಚಿವ ಅನುರಾಗ್ ಠಾಕೂರ್, ಕ್ರಿಕೆಟ್ ತಾರೆಗಳಾದ ಎಮ್ಎಸ್.ಧೋನಿ, ಸಚಿನ್ ತೆಂಡೂಲ್ಕರ್, ಕಪಿಲ್ ದೇವ್ರಂಥ ಗಣ್ಯರು ಸೇವೆ ಸಲ್ಲಿಸಿದ ಪ್ರಾದೇಶಿಕ ಸೇನೆಯ ಧ್ಯೇಯ ‘ಸಾವಧಾನಿ ವ ಶೂರತಾ’ (ಸಮಾಧಾನ ಮತ್ತು ಶೌರ್ಯ) ಆಗಿರುತ್ತದೆ. 1962ರ ಭಾರತ-ಚೀನಾ ಯುದ್ಧ,1965 ರ ಭಾರತ-ಪಾಕಿಸ್ತಾನ ಯುದ್ಧ, 1971ರ ಬಾಂಗ್ಲಾ ಯುದ್ಧ ಅಷ್ಟೇ ಅಲ್ಲದೇ ಶ್ರೀಲಂಕಾದಲ್ಲಿ ಆಪರೇಶನ್ ಪವನ್,ಪಂಜಾಬಿನಲ್ಲಿ ಆಪರೇಶನ್ ರಕ್ಷಕ್, ಉತ್ತರ ಪೂರ್ವದಲ್ಲಿ ಆಪರೇಷನ್ ರೈನೋ, ಆಪರೇಷನ್ ಬಜರಂಗ್ನಲ್ಲಿ ಸಕ್ರಿಯವಾಗಿ ಭಾಗವಹಿಸಿದ ಹೆಮ್ಮೆಗೆ ಪ್ರಾದೇಶಿಕ ಸೇನೆ ಪಾತ್ರವಾಗಿದೆ.
ಶೌರ್ಯಗಾಥೆ
2 ಅತಿ ವಿಶಿಷ್ಟ ಸೇವಾ ಮೆಡಲ್,15 ವಿಶಿಷ್ಟ ಸೇವಾ ಮೆಡಲ್, 5 ವೀರ ಚಕ್ರ, 13 ಸೇನಾ ಮೆಡಲ್, 2 ಮೆನ್ಷನ್ ಇನ್ ಡಿಸ್ಪೇಚ್,43 ಸಿಓಎ ಎಸ್ ಕಮೆಂಡೇಷನ್ ಕಾರ್ಡ್ಗಳೇ ಮೊದಲಾದ ಶೌರ್ಯ ಪದಕಗಳಿಂದ ಅಲಂಕೃತವಾಗಿರುವ ಪ್ರಾದೇಶಿಕ ಸೇನೆ ಇನ್ಫೆಂಟ್ರಿಯಲ್ಲದೇ ರೈಲ್ವೆ ಇಂಜಿನಿಯರ್, ಜನರಲ್ ಹಾಸ್ಪಿಟಲ್. ಎಎಸ್ಸಿ ಬಟಾಲಿಯನ್, ಪರಿಸರ ರಕ್ಷಣೆಯ ಕಾರ್ಯಪಡೆಗೆ ಸಂಬಂಧಿಸಿದ ಯುನಿಟ್ಗಳನ್ನು ಹೊಂದಿದೆ. 2008ರಲ್ಲಿ ಇಂಡಿಯನ್ ರೆವಿನ್ಯೂ ಸರ್ವಿಸ್ನ ಮೇಜರ್ ಪ್ರದೀಪ್ ಆರ್ಯ ಅವರು ಜಮ್ಮು ಕಾಶ್ಮೀರದಲ್ಲಿ ಉಗ್ರವಾದಿಗಳೊಂದಿಗೆ ಸೆಣಸಾಡಿ ಶೌರ್ಯ ಚಕ್ರವನ್ನು ಪಡೆದಿದ್ದರು. ಅವರ ಸಾಹಸ ಮತ್ತು ಶೌರ್ಯವನ್ನು ದೇಶವೇ ಕೊಂಡಾಡಿತ್ತು. ಇತ್ತೀಚೆಗೆ ಕ್ರಿಕೆಟ್ ತಾರೆ ಲೆಫ್ಟಿನೆಂಟ್ ಕರ್ನಲ್ ಮಹೇಂದರ್ ಸಿಂಗ್ ಧೋನಿ ವಿದೇಶ ಕ್ರಿಕೆಟ್ ಪ್ರವಾಸದಿಂದ ಹೊರಗುಳಿದು ಪ್ರಾದೇಶಿಕ ಸೇನೆಯಲ್ಲಿ ಒಂದು ತಿಂಗಳಿಗೂ ಅಧಿಕ ಸಮಯ ಸೇವೆ ಸಲ್ಲಿಸಿದ್ದರು.
ತಾತ್ಕಾಲಿಕ ಗೈರಿಗೆ ಅವಕಾಶ
ಬ್ಯಾಂಕ್, ಜೀವವಿಮಾ ನಿಗಮ, ಸಾರ್ವಜನಿಕ ವಲಯದ ಸಂಸ್ಥೆಗಳ ಹಾಗೂ ಸರ್ಕಾರಿ ನೌಕರರು ಪ್ರಾದೇಶಿಕ ಸೇನೆಯಲ್ಲಿ ಸೇವೆ ಸಲ್ಲಿಸಲು ಪ್ರೋತ್ಸಾಹಿಸುವ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ. ಪ್ರಾದೇಶಿಕ ಸೈನ್ಯ ಸೇವೆಗೆ ಅನುವು ಮಾಡಿಕೊಡಲು ತಾತ್ಕಾಲಿಕವಾಗಿ ತಾವಿರುವ ಹುದ್ದೆಯಿಂದ ಗೈರಾಗಲು ಅವಕಾಶ ನೀಡುವ ಸ್ಪಷ್ಟ ನಿಯಮಗಳನ್ನು ಸರ್ಕಾರ ರೂಪಿಸಿದೆ. ಪ್ರಾದೇಶಿಕ ಸೇನಾ ಪಡೆಗಳು ಹಾಗೂ ಸೇನೆಯ ಯೋಧರು ಹಾಗೂ ಅಧಿಕಾರಿಗಳು ವೇತನ, ಗ್ರಾಚ್ಯುಟಿ ಮತ್ತು ಪೆನ್ಷನ್ಗಳಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ.
ನೇಮಕಾತಿ ಹೇಗೆ?
18ರಿಂದ 42 ವರ್ಷ ವಯಸ್ಸಿನೊಳಗಿನ ರಾಜ್ಯ-ಕೇಂದ್ರ ಹಾಗೂ ಖಾಸಗಿ ಸಂಸ್ಥೆಯ ಉದ್ಯೋಗಿಗಳು, ಸ್ವತಂತ್ರ ಉದ್ಯಮ ನಡೆಸುತ್ತಿರುವವರು, ಕೃಷಿ ಇನ್ನಿತರ ವ್ಯವಹಾರಗಳನ್ನು ನಡೆಸುತ್ತಿರುವವರು ಪ್ರಾದೇಶಿಕ ಸೇನೆಯಲ್ಲಿ ಸೇವೆ ಸಲ್ಲಿಸಬಹುದಾಗಿದೆ. ಕನಿಷ್ಠ ಮೆಟ್ರಿಕ್ಯುಲೇಷನ್ ಪಾಸಾಗಿರುವವರು ಜೋನಲ್ ಮಟ್ಟದಲ್ಲಿ ನಡೆಯುವ ಪ್ರಾದೇಶಿಕ ಸೇನೆಯ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಸೇರಬಹುದಾಗಿದೆ. ಸೇನೆಯ ವೆಬ್ಸೈಟ್ ಹಾಗೂ ದಿನಪತ್ರಿಕೆಗಳಲ್ಲಿ ನೇಮಕಾತಿ ಕುರಿತು ಜಾಹೀರಾತು ನೀಡಲಾಗುತ್ತದೆ. ಸಮೀಪದ ಸೇನಾ ಭರ್ತಿ ಕೇಂದ್ರಗಳೂ ಈ ಕುರಿತು ಮಾಹಿತಿ ನೀಡುತ್ತವೆ. ಆಯ್ಕೆಯಾದ ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆ ಹಾಗೂ ಪೊಲೀಸ್ ವೆರಿಫಿಕೇಷನ್ಗೆ ಒಳಗಾಗಬೇಕಾಗುತ್ತದೆ.
ಯಾರೆಲ್ಲಾ ಅರ್ಹರು? ಅಧಿಕಾರಿಗಳ ನೇಮಕಾತಿ
ನಾಗರಿಕ ಹುದ್ದೆಯಲ್ಲಿರುವ ಅಥವಾ ಸ್ವತಂತ್ರ ಉದ್ಯೋಗ ಮಾಡಿಕೊಂಡಿರುವ 18 ರಿಂದ 42 ವಯಸ್ಸಿನೊಳಗಿನ ಪದವೀಧರ ಅಭ್ಯರ್ಥಿಗಳು ಪ್ರಾದೇಶಿಕ ಸೇನೆಯಲ್ಲಿ ಕಮಿಷನ್ಡ್ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಅವಕಾಶವಿದೆ. ಅಧಿಕಾರಿಯಾಗಿ ಆಯ್ಕೆಯಾದವರು ಹತ್ತು ವಾರಗಳ ತರಬೇತಿ ಪಡೆಯಬೇಕಾಗುತ್ತದೆ. ಪ್ರಾದೇಶಿಕ ಸೇನೆಯಲ್ಲಿ ವರ್ಷದಲ್ಲಿ 36ರಿಂದ 60 ದಿನ ಸೇವೆ ಸಲ್ಲಿಸಬಹುದಾಗಿದ್ದು, ಆ ಅವಧಿಯನ್ನು ಅವರ ನಾಗರಿಕ ಹುದ್ದೆಯ ಕರ್ತವ್ಯದಲ್ಲಿರುವ ಸಮಯವೆಂದೇ ಪರಿಗಣಿಸಲಾಗುತ್ತದೆ. ನಾಲ್ಕು ಗಂಟೆಗಳ ತರಬೇತಿಯ ಸಮಯವನ್ನು ಒಂದು ದಿನದ ಸೇವಾವಧಿಯಾಗಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಮಹಿಳೆಯರಿಗೂ ಅವಕಾಶ
ಪ್ರಾದೇಶಿಕ ಸೇನೆಯಲ್ಲಿ ಮಹಿಳೆಯರಿಗೂ ಅವಕಾಶ ನೀಡಬೇಕು ಎಂದು ದೆಹಲಿ ಹೈಕೋರ್ಟ್ 2018ರಲ್ಲಿ ತೀರ್ಪು ನೀಡಿದೆ. ಟೆರಿಟೋರಿಯಲ್ ಆಕ್ಟ್ 1948ನಲ್ಲಿ ಇರುವ ‘ಎನಿ ಪರ್ಸನ್’ (ಯಾವುದೇ ವ್ಯಕ್ತಿ) ಶಬ್ದವು ಮಹಿಳೆಯರಿಗೂ ಸಂಬಂಧಿಸಿದೆ ಎಂದು ತೀರ್ಪು ನೀಡಿದೆ. ಆದ್ದರಿಂದ ಬೇರೆ ಬೇರೆ ಉದ್ಯೋಗದಲ್ಲಿ ಇರುವ ಮಹಿಳೆಯರೂ ಸೇನೆಯಲ್ಲಿನ ತಮ್ಮ ಕನಸನ್ನು ನನಸು ಮಾಡಿಕೊಳ್ಳ ಬಹುದಾಗಿದೆ.
ಬೈಂದೂರು ಚಂದ್ರಶೇಖರ ನಾವಡ ಮಾಜಿ ಸೈನಿಕ