

ಭಾರತೀಯ ಸಂಪ್ರದಾಯದಲ್ಲಿ ಬಾಳೆ ಎಲೆಗೆ ವಿಶೇಷ ಪ್ರಾಮುಖ್ಯತೆ ಇದೆ. ಪೂಜೆ ಪುನಸ್ಕಾರಗಳಲ್ಲಿ ಬಾಳೆಲೆಯನ್ನು ಬಳಸಲಾಗುತ್ತದೆ. ಶುಭ ಸಮಾರಂಭಗಳಲ್ಲಿ ಬಾಳೆಲೆಗೆ ತುಂಬ ಮಹತ್ವವಿದೆ. ಬಹಳ ಹಿಂದಿನಿಂದಲೂ ಬಾಳೆಲೆಯಲ್ಲಿ ಊಟ ಮಾಡುವ ಸಂಪ್ರದಾಯವಿದೆ. ಕೆಲವು ಅಡುಗೆ ಪದಾರ್ಥಗಳ ತಯಾರಿಯಲ್ಲಿಯೂ ಬಾಳೆಲೆಯನ್ನು ಬಳಸಲಾಗುತ್ತದೆ. ಬಾಳೆಲೆಯ ಕಡುಬು ತುಂಬ ಪ್ರಸಿದ್ಧ. ಹೆಚ್ಚು ತೇವಾಂಶವಿರುವ ಕಡೆ ಮಾತ್ರ ಬಾಳೆ ಚೆನ್ನಾಗಿ ಬೆಳೆಯುವುದರಿಂದ ತೋಟ ಗದ್ದೆಗಳಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದು. ಅಲ್ಲದೆ ಮನೆಯ ಸುತ್ತಮುತ್ತ ಕೂಡ ಸುಲಭವಾಗಿ ಬೆಳೆಯಬಹುದು. ಇದರ ವೈಜ್ಞಾನಿಕ ಹೆಸರು ಮ್ಯೂಸ ಅಕ್ಯುಮಿನಿಟ(Musa Acuminata). ಹೀಗೆ ನಾನಾ ರೀತಿಯಲ್ಲಿ ಬಳಕೆಯಾಗುತ್ತಿರುವ ಬಾಳೆಲೆಗೆ ಬ್ಯಾಕ್ಟೀರಿಯಾವನ್ನು ಹೊಡೆದೋಡಿಸುವ ಗುಣವಿದೆ. ಬಾಳೆ ಮರದ ಎಲ್ಲ ಭಾಗಗಳೂ ಔಷಧೀಯ ಗುಣಗಳನ್ನು ಹೊಂದಿವೆ. ರಾಸಾಯನಿಕ ಗೊಬ್ಬರ ಹಾಕದ, ಹೈಬ್ರಿಡ್ ಅಲ್ಲದ ದೇಸಿ ಪದ್ಧತಿಯಲ್ಲಿ ಬೆಳೆಸಿದ ತಳಿಯ ಬಾಳೆ ಹೆಚ್ಚು ಪರಿಣಾಮಕಾರಿ.