

ದೇಶವ್ಯಾಪಿ ಈಗ ಕರೊನಾ ವೈರಸ್ದ್ದೇ ಚರ್ಚೆ. ಚೀನಾದಲ್ಲಿ ಆತಂಕ ಸೃಷ್ಟಿಸಿರುವ ಈ ವೈರಸ್ ಇದಾಗಲೇ ನಮ್ಮ ದೇಶಕ್ಕೂ ಕಾಲಿಟ್ಟಾಗಿದೆ. ಏನಿದು ವೈರಸ್? ಕರೊನಾ ವೈರಸ್ಗೆ ಔಷಧಗಳನ್ನು ಕಂಡುಹಿಡಿಲಾಗುತ್ತಿದ್ದರೂ, ಆಯುರ್ವೆದದಲ್ಲಿ ಏನೆಲ್ಲಾ ಚಿಕಿತ್ಸೆಗಳಿವೆ ಎಂಬುದನ್ನು ತಿಳಿಯೋಣ.
ಡಾ. ಮಹೇಶ್ ಶರ್ಮಾ ಎಂ. ಆಯುರ್ವೆದ ತಜ್ಞರು
ಚಿಕಿತ್ಸೆಯ ಬಗ್ಗೆ ತಿಳಿಯುವ ಮುನ್ನ ಕರೊನಾ ವೈರಸ್ ಬಗ್ಗೆ ನೀವು ಒಂದಿಷ್ಟು ತಿಳಿಯಬೇಕು. ಕರೊನಾ ವೈರಸ್ ಒಂದು ವೈರಸ್ನ ಸಮೂಹ. ಇದರ ಮೇಲಿನ ಆಕಾರ ಕ್ವೌನ್ ಅಥವಾ ಕಿರೀಟದ ಆಕೃತಿಯಿಂದಾಗಿ ಕರೊನಾ ವೈರಸ್ ಎಂಬ ಹೆಸರಿದೆ. ಇದು ಮನುಷ್ಯರಲ್ಲಿ ಮಾತ್ರವಲ್ಲದೆ ಪ್ರಾಣಿಗಳಲ್ಲಿಯೂ ಸೋಂಕನ್ನು ಉತ್ಪತ್ತಿಮಾಡುತ್ತದೆ. ಸಾಮಾನ್ಯ ತೊಂದರೆಗಳಾದ ಶೀತ, ನೆಗಡಿ, ಕೆಮ್ಮು, ಗಂಟಲು ನೋವಿನಿಂದ ಹಿಡಿದು ನಿಮೋನಿಯದಂತಹ ಲಕ್ಷಣಗಳನ್ನು ಕೊರೊನ ವೈರಸ್ ಉತ್ಪತ್ತಿಮಾಡಬಹುದು. ಪ್ರಾಣಿಗಳಿಗೆ ಸೋಂಕು ತಗುಲಿ ಅದರಿಂದ ಮನುಷ್ಯರಿಗೆ ಹರಡುತ್ತಿದೆ ಎನ್ನಲಾಗಿದೆ. ಚೀನಾದ ವುಹಾನ್ ನಗರದ ಸೀ ಫುಡ್ ಮಾರುಕಟ್ಟೆಯಲ್ಲಿ ವ್ಯಾಪಾರವಾಗುವ ಸಜೀವ ಪ್ರಾಣಿಗಳಿಗೆ ಸೋಂಕು ತಗುಲಿ ಮನುಷ್ಯರಿಗೆ ಆ ಮೂಲಕ ಈ ರೋಗ ಬಂದಿರುವುದಾಗಿ ಹೇಳಲಾಗುತ್ತಿದೆ.
ಸೋಂಕು ಹರಡುವ ವಿಧಾನ ಹೀಗೆ: ಸೋಂಕಿಗೆ ಒಳಗಾದ ವ್ಯಕ್ತಿಯು ಸೀನಿದಾಗ, ಕೆಮ್ಮಿದಾಗ ವೈರಾಣು ಗಾಳಿಯಲ್ಲಿ ಸೇರಿ ಮತ್ತೆ ಆ ಗಾಳಿಯನ್ನು ಉಸಿರಿನ ಮುಂಖಾತರ ಇನ್ನೊಬ್ಬರ ದೇಹ ಸೇರುತ್ತದೆ.
ವೈರಾಣುವಿನಿಂದ ಕಲುಷಿತಗೊಂಡ ವಸ್ತುಗಳನ್ನು ಮುಟ್ಟುವುದರಿಂದ ರೋಗಿಯ ಸಮೀಪ ಅಥವಾ ಆತ್ಮೀಯವಾಗಿ ಇರುವುದರಿಂದ ಇದು ತಗಲುವ ಸಾಧ್ಯತೆಗಳಿವೆ. ಏನೇ ಆಗಲಿ, ಒಂದು ವಿಷಯ ನೆನಪಿಡಿ. ಸೋಂಕು ತಾಗಿದ ಕೂಡಲೆ ಸಾಯುವುದಿಲ್ಲ. ಆದ್ದರಿಂದ ಹೆದರಿಕೊಳ್ಳುವ ಬದಲು, ಲಕ್ಷಣಗಳು ಕಂಡುಬಂದ ಕೂಡಲೆ ತಜ್ಞ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆಯನ್ನು ಪಡಿಯುವುದು ಒಳಿತು.
ರೋಗದ ಲಕ್ಷಣಗಳು: ರೋಗದ ಪ್ರಾರಂಭದಲ್ಲಿ ಸಾಮಾನ್ಯ ಲಕ್ಷಣಗಳಾದ ಶೀತ, ನೆಗಡಿ, ಕೆಮ್ಮು, ತಲೆನೋವು, ಗಂಟಲು ಕೆರೆತ, ಜ್ವರ, ಮೈಕೈನೋವು ಪ್ರಾರಂಭವಾಗುತ್ತದೆ. ಜ್ವರವು ಕೆಲವೊಮ್ಮೆ 104 ಡಿಗ್ರಿಯವರೆಗೂ ತಾಪಮಾನವಿರುತ್ತದೆ. ಕೆಲವೊಮ್ಮೆ ಬೇಧಿ, ಮೂತ್ರಪಿಂಡ ವೈಫಲ್ಯ ಆಗಬಹುದು.
ಆಯುರ್ವೆದ ಚಿಕಿತ್ಸೆ: ವೈರಾಣುಗಳಿಂದ ಬರುವ ಹಲವು ಸಾಂಕ್ರಾಮಿಕ ಜ್ವರಗಳಿಗೆ ಆಯುರ್ವೆದದಲ್ಲಿ ವಿಷಮ ಜ್ವರ ಎನ್ನಲಾಗುವುದು ಮತ್ತು ಇದಕ್ಕೆ ವಿಸ್ತಾರವಾಗಿ ವಿಶೇಷ ಚಿಕಿತ್ಸೆಯನ್ನು ವಿವರಿಸಲಾಗಿದೆ. ರೋಗವನ್ನು ತಡೆಗಟ್ಟಲು, ವ್ಯಾಧಿನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪೌಷ್ಠಿಕ ಆಹಾರದ ಸೇವನೆ ಅತೀ ಅವಶ್ಯ. ತುಳಸಿ, ಅಮೃತಬಳ್ಳಿ, ಕಾಳುಮೆಣಸು, ಬೇವಿನ ಸೊಪ್ಪು ಉಪಯುಕ್ತ. ಬಿಸಿನೀರು, ಅಕ್ಕಿ ಮತ್ತು ಮೆಂತ್ಯೆ ಗಂಜಿ, ಅರಿಶಿಣ ಜೀರಿಗೆ ಮತ್ತು ಹಾಲು ಮಿಶ್ರಿತ ಕಷಾಯ ಸೇವಿಸಬೇಕು.
ಇನ್ನು ಈ ಸೋಂಕು ತಡೆಗಟ್ಟಲು ಮನೆಮದ್ದು ಎಂದರೆ: 1-2 ಚಮಚ ತುಳಸಿ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಸೇವಿಸುವುದು. ಬಿಸಿನೀರಿಗೆ ಶುದ್ಧವಾದ ತುಳಸಿ ಎಲೆಯನ್ನು ಹಾಕಿ, ಒಂದು ಗಂಟೆಯ ನಂತರ ಸೇವಿಸುವುದು. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ 3-4 ಬೇವಿನ ಎಲೆಯನ್ನು ಜಗಿದು ತಿನ್ನುವುದು. ಅಮೃತಬಳ್ಳಿಯ ಬಳ್ಳಿಗೆ 4 ಪಟ್ಟು ನೀರು ಹಾಕಿ, ಸ್ವಲ್ಪ ಜೀರಿಗೆ ಕಾಳುಮೆಣಸು ಹಾಕಿ ಚೆನ್ನಗಿ ಕುದಿಸಿ ಒಂದು ನಾಲ್ಕಾಂಶಕ್ಕೆ ತರಿಸಿ ತಯಾರಿಸಿದ ಕಷಾಯವನ್ನು ಬೆಳಿಗ್ಗೆ ಸೇವಿಸುವುದು. ನೆಲ್ಲಿಕಾಯಿ, ಕೆಂಪಕ್ಕಿ, ಶುಂಠಿ, ಅರಿಶಿಣವನ್ನು ಅಡುಗೆ ಬಳಸುವುದು.
ಯಾರಿಗೆ ಈ ಸೋಂಕು ಬರಬಹುದು
ವ್ಯಾಧಿ ನಿರೋಧಕ ಶಕ್ತಿ ಕಮ್ಮಿ ಇರುವ ವ್ಯಕ್ತಿಗಳು, ಚಿಕ್ಕಮಕ್ಕಳು, ವಯಸ್ಸಾದವರಿಗೆ, ದೇಹದ ಬಲ ಕಡಿಮೆ ಇದ್ದವರಿಗೆ, ನಿಮೋನಿಯ, ಬ್ರಾಂಕೈಟಿಸ್ ರೋಗದಿಂದ ಬಳಲುತ್ತಿರುವವರಿಗೆ, ಮಧುಮೇಹಿಗಳಿಗೆ ಈ ಸೋಂಕು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸೋಂಕನ್ನು ತಡೆಗಟ್ಟುವುದು ಹೇಗೆ?: ಕೈ ಗಳನ್ನು ಊಟ ಮಾಡುವ ಮೊದಲು ಸಾಬೂನಿನಿಂದ ಚೆನ್ನಾಗಿ ತೊಳೆಯಬೇಕು, ಕೈಗಳನ್ನು ತೊಳೆಯದೆ ಕೈ, ಬಾಯಿ, ಮೂಗು, ಕಣ್ಣುಗಳನ್ನು ಮುಟ್ಟಿಕೊಳ್ಳಬಾರದು. ಸೋಂಕಿನಿಂದ ಬಳಲುತ್ತಿರುವ ರೋಗಿಯ ಸಂಪರ್ಕದಲ್ಲಿರಬಾರದು. ಬಹಳ ಕಾಲ ಶೀತ ನೆಗಡಿ ಜ್ವರ ಇದ್ದರೆ ಔಷಧಿಗಳನ್ನು ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುವುದು ಉತ್ತಮ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೌಷ್ಠಿಕ ಆಹಾರವನ್ನು, ಔಷಧಿಯನ್ನು ಸೇವಿಸಬೇಕು.