ಸರ್ವೆಂದ್ರಿಯದ ಆರೋಗ್ಯಕ್ಕೆ ಆಯುರ್ವೆದದಲ್ಲಿದೆ ಮದ್ದು

Ayurved
Published on

ಜಗತ್ತಿನಲ್ಲಿ ನಡೆಯುವ ಎಲ್ಲ ವಿದ್ಯಮಾನಗಳನ್ನು ಗ್ರಹಿಸಲು ಐದು ಜ್ಞಾನೇಂದ್ರಿಯಗಳು ಬೇಕು, ಅವು ಸಮರ್ಪಕವಾಗಿರಬೇಕು. ಅಷ್ಟೇ ಸಾಲದು, ಅವು ಕ್ಷಮತೆಯೊಂದಿಗೆ ಕಾರ್ಯಪ್ರವೃತ್ತವಾಗಬೇಕು. ಹತ್ತಿರದಿಂದ ಕೇಳುವ ದೊಡ್ಡ ಸದ್ದೂ ಕಿವಿಗೊಡದಿದ್ದರೆ ಕೇಳುವುದೇ ಇಲ್ಲವಲ್ಲ! ಇಂದ್ರಿಯ, ಇಂದ್ರಿಯಾರ್ಥ, ಇಂದ್ರಿಯ ಅಧಿಷ್ಠಾನ, ಜ್ಞಾನದ ಪ್ರಕ್ರಿಯೆಗಳೆಲ್ಲವನ್ನೂ ಸಹಸ್ರಾರು ವರ್ಷಗಳ ಹಿಂದೆಯೇ ವೈಜ್ಞಾನಿಕವಾಗಿ

ವಿವರಿಸಿದ ಗರಿಮೆ ಆಯುರ್ವೆದದ್ದು. ಇಂದ್ರಿಯಗಳಲ್ಲಿ ನಯನಗಳು ಪ್ರಧಾನವೆಂದು ಆಯುರ್ವೆದದ ವೈದ್ಯವಿಜ್ಞಾನಿಋಷಿಗಳು ಅಂದೇ ಅರುಹಿದ್ದರ ಹಿಂದೆ ಜೀವನಾನುಭವದ ಮಹತ್ವಪೂರ್ಣ ಗ್ರಹಿಕೆಯಿದೆ. ಹುಟ್ಟಿನಿಂದ ಜಗತ್ತನ್ನೇ ಕಂಡಿರದ ವ್ಯಕ್ತಿಗೆ ಬದುಕೆಷ್ಟು ಕಷ್ಟ ಎಂಬುದನ್ನು ಒಂದುಕ್ಷಣ ಕಲ್ಪಿಸಿಕೊಂಡರೆ ನಮಗರಿವಿಲ್ಲದೆ ಕಂಬನಿ ಜಾರುತ್ತದೆ. ಒಮ್ಮೆಯೂ ಪ್ರಪಂಚವನ್ನು ಕಂಡಿರದೆ ಇದ್ದಾಗ ಊಹಿಸಿಕೊಳ್ಳುವುದು ಏನನ್ನು? ಕನಸು, ನನಸು ಎಲ್ಲ ಒಂದೇ. ನೇತ್ರಗಳೇ ಇಲ್ಲದೆ ಲವಲವಿಕೆಯಿಂದ ಜೀವನ ಸಾಗಿಸುವ ಅವರಿಂದ ನಾವೆಲ್ಲ ಕಲಿಯಬೇಕಾದುದು ಬಹಳಷ್ಟಿದೆ.

ಕಿವಿ ಕೇಳದಿದ್ದರೂ ಬದುಕಲು ಇಷ್ಟೊಂದು ಕಷ್ಟವಾಗದು. ವಾಸನೆಯ ಜಾಡು ಹಿಡಿಯಲಾಗದಿದ್ದರೂ ಎಲ್ಲ ಕಳೆದುಕೊಂಡಂತೆ ಅನಿಸುವುದಿಲ್ಲ. ರುಚಿ ಗೊತ್ತಾಗದಿದ್ದರೂ ಆಕಾಶ ಕಳಚಿಬೀಳದು. ಸ್ಪರ್ಶಜ್ಞಾನದ ಸುಖವಿಲ್ಲದಿದ್ದರೂ ಜೀವನದ ಹಾದಿಗೇನೂ ಅಡ್ಡವಾಗದು. ಹಾಗಾಗಿ ಎಲ್ಲ ಇಂದ್ರಿಯಗಳಲ್ಲಿ ನಯನವೇ ಪ್ರಧಾನ. ನಮಗೆ ಭಾಗ್ಯರೂಪದಲ್ಲಿ ಪ್ರಾಪ್ತವಾಗಿರುವ ಕಣ್ಣುಗಳು ಶಕ್ತಿ ಕಳೆದುಕೊಂಡರೆ ಅದು ಜೀವನದ ದುರಂತ. ಸರ್ವ ಪ್ರಯತ್ನಗಳ ಮೂಲಕ, ಅತ್ಯುತ್ತಮ ಆರೈಕೆಯೊಂದಿಗೆ ನೇತ್ರಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಅದಕ್ಕಾಗಿ ಆಹಾರ-ವಿಹಾರ, ಆಚಾರಗಳಲ್ಲಿ ನೀಡಬೇಕಾದ ಗಮನವನ್ನು ಆಯುರ್ವೆದ ಸೊಗಸಾಗಿ ವಿವರಿಸಿದೆ. ಅನೇಕ ವಿಧದ ಉಪಚಾರಗಳನ್ನು ವಿಮಶಿಸಿ ಹೇಳಿದ್ದು ಗಣನೀಯವಾಗಿದೆ.

ಆಹಾರದಲ್ಲಿ ದೇಸಿ ಗೋವಿನ ಹಾಲು, ಬೆಣ್ಣೆ, ತುಪ್ಪ, ಕ್ಷೀರೋತ್ಪನ್ನಗಳು, ಎಮ್ಮೆಯ ತುಪ್ಪ, ಸಾಸಿವೆಎಣ್ಣೆ, ತೆಂಗಿನೆಣ್ಣೆ, ಮಾಕ್ಷಿಕ, ಕ್ಷೌದ್ರವೆಂಬ ಜೇನುತುಪ್ಪಗಳು, ಸಾವಯವ ದ್ರಾಕ್ಷಿ, ಮಾವಿನಹಣ್ಣು, ಹೇರಳೆಕಾಯಿ, ಬಾಳೆಹಣ್ಣು, ಸಿಹಿಹಾಲೆ ಸೊಪ್ಪು, ನುಗ್ಗೆಸೊಪ್ಪು, ಹೊನಗೊನ್ನೆ ಸೊಪ್ಪು, ಕೊಮ್ಮೆಗಿಡದ ಸೊಪ್ಪು, ಹಾಗಲಕಾಯಿ, ಕೆಂಪಕ್ಕಿ, ಗೋಧಿ, ಹೆಸರುಕಾಳು, ಎಳ್ಳು, ಸೈಂಧವ ಲವಣಗಳೆಲ್ಲ ಕಣ್ಣುಗಳಿಗೆ ಬಲ ತುಂಬುವ ಹಿತಕರ ಆಹಾರದ್ರವ್ಯಗಳು. ಬಜೆ, ಲವಂಗ, ಅರಿಶಿಣ, ಹಿಂಗು, ಬೆಳ್ಳುಳ್ಳಿ, ಕಾಳುಮೆಣಸು, ಶುಂಠಿ, ಹಿಪ್ಪಲಿ, ಜಾಯಿಕಾಯಿ, ಪಚ್ಚೆಕರ್ಪರ, ಬೆಟ್ಟದ ನೆಲ್ಲಿಕಾಯಿ, ಲಾವಂಚ, ಭೃಂಗರಾಜ, ಅಮೃತಬಳ್ಳಿ, ಜಾಜಿಮಲ್ಲಿಗೆ, ಕಹಿಬೇವು, ಯಷ್ಟಿಮಧು, ತುಳಸಿ, ಪಾರಿಜಾತ, ಹೊಂಗೆಮರ, ನೆಕ್ಕಿಗಿಡ, ನಿರ್ಮಲೀಮರ, ಲೋದ್ರ, ನೆಲಗುಳ್ಳ, ಪಲಾಶ, ಗುಗ್ಗುಲು, ಪ್ರಿಯಂಗು, ಹರಳು, ಉತ್ತರಣೆ, ತಾವರೆ, ಅತ್ತಿ, ಬನ್ನಿಮರ, ಆಲದಮರ, ಗರಿಕೆ, ಬಿಲ್ವಪತ್ರೆ, ಎಕ್ಕೆಗಿಡ, ಶ್ರೀಗಂಧ ಹಾಗೂ ತ್ರಿಫಲಾಚೂರ್ಣಗಳೆಲ್ಲ ನೇತ್ರಗಳಿಗೆ ಶಕ್ತಿ ಕೊಡುವ ಔಷಧೀಯ ದ್ರವ್ಯಗಳು. ಯೋಗಾಸನಗಳಲ್ಲಿ ಮತ್ಸ್ಯಾಸನ, ಜ್ಯೋತಿ ತ್ರಾಟಕ, ಶೀರ್ಷಾಸನಗಳು ನೇತ್ರರಕ್ಷಣೆಗೆ ನೆರವಾಗುತ್ತವೆ. ಹೊನಗೊನ್ನೆ ಸೊಪ್ಪಿಗೆ ಮೀನುಸೊಪ್ಪು ಎಂದೂ ಹೆಸರಿದೆ. ನೀರಿನೊಳಗಿದ್ದೂ ಕಣ್ಣಿನಿಂದ ಚೆನ್ನಾಗಿ ನೋಡುವ ಸಾಮರ್ಥ್ಯವುಳ್ಳ ಮೀನಿಗೆ ಇರುವಂತಹ ಕಣ್ಣಿನ ಶಕ್ತಿ ನೀಡಬಲ್ಲ ಸಸ್ಯವೆಂಬ ಅರ್ಥದಲ್ಲಿ ಈ ಹೆಸರು ಬಂದಿರುವುದು ವಿಶೇಷ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net