ಆರೋಗ್ಯದ ಹಿತಕ್ಕೆ ಕನಿಷ್ಠ ಏಳು ತಾಸು ನಿದ್ದೆ ಅಗತ್ಯ

Sleeping
Published on

ದಿನ ಎಂದರೆ ಒಳ್ಳೆಯ ಫಲಗಳನ್ನು ನೀಡುವ ಸಮೃದ್ಧವಾದ ಮರವಿ ದ್ದಂತೆ. ರಾತ್ರಿಯು ಅಂತಹ ವಿಶಾಲವಾದ ಮರದ ಗಟ್ಟಿಯಾದ ಬೇರುಗಳಿದ್ದಂತೆ. ಎಷ್ಟೇ ಒಳ್ಳೆಯ ಹಣ್ಣುಗಳನ್ನು ನೀಡುವ ಮರವಾದರೂ ಬೇರು ಸರಿಯಾಗಿಲ್ಲದೇ ಹೋದರೆ ಕೆಲವೇ ದಿನಗಳಲ್ಲಿ ಒಣಗಿ ಹೋಗುತ್ತದೆ. ಹಾಗೆಯೇ ನಮ್ಮ ದಿನ ಉತ್ಸಾಹ, ಸಾಧನೆಗಳಿಂದ ತುಂಬಿರಬೇಕೆಂದರೆ ರಾತ್ರಿ ಅದಕ್ಕೆ ಸಂಪೂರ್ಣವಾದ, ಆಳವಾದ ವಿಶ್ರಾಂತಿ ಆಗಿರಬೇಕು. ಈ ಎರಡು ವೈರುಧ್ಯಗಳ ಮಧ್ಯೆಯೇ ಮನುಷ್ಯನ ಸುಖ ಅಡಗಿರುವುದು. ರಾತ್ರಿಯ ನಿದ್ದೆ ಆಳವಾದಷ್ಟೂ ಹಗಲಿನ ಉತ್ಸಾಹ ಹೆಚ್ಚಾಗುತ್ತದೆ.

ಸೂರ್ಯ ಮುಳುಗಿ ಕತ್ತಲು ಆವರಿಸುತ್ತಿದ್ದಂತೆಯೇ ನಮ್ಮ ದೇಹದಲ್ಲಿ ಮೆಲೊಟೋನಿನ್ ಎಂಬ ಅಂಶದ ಬಿಡುಗಡೆ ಹೆಚ್ಚುತ್ತಾ ಹೋಗುತ್ತದೆ. ಇದರಿಂದ ಸುಖವಾದ, ಆಳವಾದ ನಿದ್ರೆ ಬರಲು ಸಾಧ್ಯ ವಾಗುತ್ತದೆ. ಇದು ಸಾಧ್ಯವಾಗಲು ಕತ್ತಲು ಚೆನ್ನಾಗಿರಬೇಕು. ಈಗೀಗ ಪಟ್ಟಣಗಳಲ್ಲಿ ರಾತ್ರಿಯಲ್ಲಿ ಕೂಡ ಹಗಲಿನಂತೆ ಬೆಳಕಿರುವ ಕಾರಣ ಸಮಸ್ಯೆಯಾಗುತ್ತಿದೆ. ಹಾಗಾಗಿ ನಾವು ನಿದ್ದೆಗೆ ಹೋಗುವ ಒಂದೆರಡು ತಾಸುಗಳ ಮೊದಲಾದರೂ ಪ್ರಖರವಾದ ಬೆಳಕನ್ನು ನೋಡುವುದನ್ನು ಬಿಡಬೇಕು. ಮೊಬೈಲ್, ಟಿವಿ ಮುಂತಾದವುಗಳಲ್ಲಿ ಮುಳುಗಿದ್ದರೆ ಸಹಜವಾಗಿ ನಿದ್ದೆಯ ಗುಣಮಟ್ಟ ನಿಧಾನವಾಗಿಯಾದರೂ ಕಡಿಮೆಯಾಗುತ್ತಾ ಹೋಗುತ್ತದೆ ಮತ್ತು ಮುಂದೆ ಸರಿಪಡಿಸಿಕೊಳ್ಳುವುದು ತುಂಬಾ ಕಷ್ಟವಾಗಿಬಿಡುತ್ತದೆ. ಬೇಕಿದ್ದರೆ ರಾತ್ರಿ ಮಲಗುವ ಸಮಯದಲ್ಲಿ ಮಧುರವಾದ ಸಂಗೀತವನ್ನು ಕೇಳಬಹುದು. ಚಿನ್ಮುದ್ರೆಯನ್ನು ಹಾಕಿ ಕನಿಷ್ಠ ಹತ್ತರಿಂದ ಹದಿನೈದು ನಿಮಿಷ ಧ್ಯಾನದ ರೀತಿಯಲ್ಲಿ ಕುಳಿತುಕೊಳ್ಳುವುದರಿಂದಲೂ ದೊಡ್ಡ ಪ್ರಯೋಜನ ಆಗುತ್ತದೆ. ರಾತ್ರಿ ಮಲಗುವ ಮೊದಲು ನೆತ್ತಿಗೆ ಮತ್ತು ಪಾದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ (ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆ) ಮಸಾಜ್ ಮಾಡಿಕೊಳ್ಳುವುದರಿಂದ ನಿಧಾನವಾಗಿ ನಿದ್ದೆ ಆಳವಾಗುತ್ತಾ ಹೋಗುತ್ತದೆ. ಊಟ ಮಾಡಿದ ತಕ್ಷಣ ಮಲಗುವುದಕ್ಕಿಂತ ಒಂದೆರಡು ತಾಸು ಅಂತರ ಬಿಟ್ಟು ಮಲಗುವುದು ಹೆಚ್ಚು ಒಳ್ಳೆಯದು.

ಮಲಗುವಾಗ ಎಡ ಮಗ್ಗುಲಿನಲ್ಲಿ ಮಲಗುವುದು ಹೆಚ್ಚು ಶ್ರೇಯಸ್ಕರ. ಅಥವಾ ಬೆನ್ನಿನ ಮೇಲೆ ಮಲಗಿ ನಿದ್ರಿಸಬಹುದು. ಅನಿವಾರ್ಯವಲ್ಲದೇ ಹೋದರೆ ಅಲಾರಾಂ ಇಟ್ಟುಕೊಳ್ಳದೇ ಮಲಗಿ ಬೆಳಿಗ್ಗೆ ನೈಸರ್ಗಿಕವಾಗಿ ಎಚ್ಚರವಾದ ಕೂಡಲೇ ಹಾಸಿಗೆಯಿಂದ ಎದ್ದೇಳುವುದು ಆರೋಗ್ಯದ ದೃಷ್ಟಿಯಿಂದ ಮತ್ತು ನಮ್ಮ ಮಿದುಳಿನ ಶಕ್ತಿಯನ್ನು ಚೆನ್ನಾಗಿ ಕಾಪಾಡಿಕೊಳ್ಳುವ ದೃಷ್ಟಿಯಿಂದ ಅತ್ಯಂತ ಸೂಕ್ತವಾದದ್ದು. ರಾತ್ರಿ 10 ಗಂಟೆಯ ಒಳಗೆ ಹಾಸಿಗೆಗೆ ಹೋಗುವುದು ಸೂಕ್ತ. ಏಕೆಂದರೆ 10 ಗಂಟೆಯ ನಂತರ ನಮ್ಮ ದೇಹದಲ್ಲಿ ಪಿತ್ತದೋಷದ ಪ್ರಾಧಾನ್ಯತೆ ಬರುತ್ತದೆ. ಆ ಸಮಯದಲ್ಲಿ ನಿದ್ರೆ ಬರುವುದು ನಿಧಾನವಾಗಿ ಕಷ್ಟವಾಗುತ್ತಾ ಹೋಗುತ್ತದೆ. ನಿದ್ದೆಗೆ ಹೋಗುವ ಅರ್ಧಗಂಟೆ ಮೊದಲು ಸುತ್ತಮುತ್ತಲಿನ ವಾತಾವರಣ ಅತಿ ಕಡಿಮೆ ಬೆಳಕಿನಿಂದ ಕೂಡಿರುವಂತೆ ನೋಡಿಕೊಂಡರೆ ಮೆಲೊಟೋನಿನ್ ಬಿಡುಗಡೆ ಚೆನ್ನಾಗಿ ಆಗಲು ಸಹಾಯವಾಗುತ್ತದೆ. ಇನ್ನು ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದರೆ ನೂರಾರು ರೀತಿಯ ಪ್ರಯೋಜನಗಳು ಆಗುತ್ತವೆ ಎಂಬುದು ನಮಗೆಲ್ಲ ಗೊತ್ತಿರುವ ವಿಷಯವೇ. ಹಾಗೆ ನಿತ್ಯವೂ ಏಳಬೇಕೆಂದರೆ ರಾತ್ರಿ ಬೇಗ ಮಲಗಿರಬೇಕು. ರಾತ್ರಿಯ ನಿದ್ದೆ ಆಳವಾಗಿ ಆಗಿರಬೇಕು. ಬ್ರಾಹ್ಮೀ ಮುಹೂರ್ತವೆಂದರೆ ಸೂರ್ಯೋದಯಕ್ಕಿಂತ ಒಂದುವರೆ ತಾಸು ಮೊದಲು ಎದ್ದು ಶೌಚವಿಧಿಯನ್ನು ಮುಗಿಸಿ ವ್ಯಾಯಾಮ ಮಾಡಿ ಸ್ವಲ್ಪ ಹೊತ್ತಾದರೂ ಬಿಸಿಲಿಗೆ ಮೈಯೊಡ್ಡುವುದು ಮತ್ತು ಬಿಸಿಲಿನಲ್ಲಿ ತಿರುಗಾಡುವುದನ್ನು ಮಾಡಿದರೆ ಸೆರಟೋನಿನ್ ಬಿಡುಗಡೆ ಚೆನ್ನಾಗಿ ಆಗಿ ಇಡೀ ದಿನ ನಮ್ಮಲ್ಲಿ ಉತ್ಸಾಹ, ಚೈತನ್ಯಕ್ಕೆ ಕೊರತೆ ಉಂಟಾ ಗುವುದಿಲ್ಲ. ಈ ಸೆರಟೋನಿನ್ ಬಳಸಿಕೊಂಡೇ ಮೆಲಟೋನಿನ್ ಉತ್ಪತ್ತಿಯಾಗುವುದು.

ಹಾಗಾಗಿ ಸ್ವಲ್ಪ ಹೊತ್ತಾದರೂ ಬಿಸಿಲ ಸ್ನಾನ ಮಾಡಲೇಬೇಕು. ರಾತ್ರಿ ನಿದ್ದೆ ಬರುತ್ತಿಲ್ಲವೆಂದು ನಿದ್ರೆ ಮಾತ್ರೆಗಳನ್ನು ರೂಢಿಮಾಡಿಕೊಳ್ಳುವುದು ಒಳ್ಳೆಯದಲ್ಲ. ಬದಲಿಗೆ ಒಂದೆಲಗದ ರಸವನ್ನು ಸೇವಿಸಬಹುದು. ಚಿನ್ಮುದ್ರೆ ಹಾಕಿ ಧ್ಯಾನ ಮಾಡಬಹುದು. ಪ್ರತಿನಿತ್ಯ ಒಳ್ಳೆಯ ಅಭ್ಯಂಗವನ್ನು ಮಾಡಿಕೊಳ್ಳಬಹುದು. ಸಮಯ ಸಿಕ್ಕಾಗಲೆಲ್ಲಾ ಆರಾಮ ವಾಗಿ ಕುಳಿತು ನಮ್ಮ ಉಸಿರನ್ನೇ ಗಮನಿಸುವ ಧ್ಯಾನ ಮಾಡಬಹುದು. ಇಷ್ಟಕ್ಕೂ ಸರಿಯಾಗದಿದ್ದರೆ ಆಯುರ್ವೆದ ಔಷಧಗಳನ್ನು ಅಥವಾ ಚಿಕಿತ್ಸೆಗಳನ್ನು ತೆಗೆದುಕೊಳ್ಳಬಹುದು. ಆದರೆ ಆಗಲೇ ನಿದ್ರೆಮಾತ್ರೆಯ ರೂಢಿಯಾಗಿದ್ದರೆ ಅಂಥವರು ವೈದ್ಯರ ಸಲಹೆ ಯಿಲ್ಲದೇ ಯಾವುದೇ ಕಾರಣಕ್ಕೂ ಮಾತ್ರೆಗಳನ್ನು ಬಿಡಬಾರದು. ಸಾಮಾನ್ಯವಾಗಿ ಕನಿಷ್ಠ ಏಳು ಗಂಟೆ ನಿದ್ದೆ ಅನಿವಾರ್ಯ. ಕೆಲವು ಪ್ರಕೃತಿಯ ಜನರಿಗೆ ಎಂಟು ತಾಸು ನಿದ್ದೆ ಕೂಡಾ ಬೇಕಾಗಬಹುದು. ಅಪರೂಪದ ಪ್ರಕೃತಿಯವರಿಗೆ ಆರು ತಾಸು ನಿದ್ದೆ ಸಾಕಾಗುವುದಿದೆ. ಆದರೆ ಕನಿಷ್ಠ ಏಳು ತಾಸು ನಿದ್ದೆ ಮಾಡುವುದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದನ್ನು ನೆನಪಿಡಬೇಕು.

(ಪ್ರತಿಕ್ರಿಯಿಸಿ; vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net