

| ಚಿದಂಬರ ಗಣೇಶ ಮುನವಳ್ಳಿ
ಮಹಾರಾಷ್ಟ್ರದ ಪೈಠಣ ಎಂಬ ಊರಿನ ಹನ್ನೆರಡು ವರ್ಷದ ಬಾಲಕ ಏಕನಾಥನಿಗೆ ಜ್ಞಾನಾರ್ಜನೆಯ ಹಸಿವು. ಅದಕ್ಕಾಗಿ ಗುರುವನ್ನು ಅರಸುತ್ತ ದೇವಗಿರಿಯಲ್ಲಿರುವ ಮಹಾನ್ ಸಾಧಕ ಜನಾರ್ದನ ಗುರುಗಳ ಹತ್ತಿರ ಬಂದು ಸಮರ್ಪಿಸಿಕೊಂಡ. ಆಶ್ರಮದಲ್ಲಿ ಗುರುಗಳು ಏಳುವುದಕ್ಕೆ ಮೊದಲೇ ಎದ್ದು ಅವರ ಪೂಜೆ, ಅನುಷ್ಠಾನಗಳಿಗೆ ತಯಾರಿ ಮಾಡುವುದರ ಜತೆಗೆ ಕಸ ಗುಡಿಸುವ, ಶೌಚಗೃಹ ತೊಳೆಯುವ ಕೆಲಸಗಳನ್ನು ಶ್ರದ್ಧೆಯಿಂದ ತನ್ಮಯನಾಗಿ ಮಾಡುತ್ತಿದ್ದ. ಒಂದು ದಿನ ಬೆಳಗ್ಗೆ ಗುರುಗಳು ಮುಖಮಾರ್ಜನ ಮಾಡಿಕೊಳ್ಳುತ್ತ ‘ನಮ್ಮ ಆಶ್ರಮದ ಕೈತೋಟದಲ್ಲಿರುವ ಕೆಲವು ಹೂವಿನ ಗಿಡಗಳು ಒಣಗಿ ಹೋಗುತ್ತಿವೆ. ಮುಖ ತೊಳೆದುಕೊಂಡ ಈ ನೀರನ್ನು ವ್ಯರ್ಥಗೊಳಿಸುವುದಕ್ಕಿಂತ ಆ ಗಿಡಗಳಿಗೆ ಹಾಕಿದರೆ ಅವು ಚಿಗಿಯುತ್ತವೆ ಅಲ್ಲವೇ?’ ಎಂದರು. ಏಕನಾಥನು ಕೂಡಲೇ ಅಗಲವಾದ ಪಾತ್ರೆಯೊಂದನ್ನು ತಂದು ಗುರುಗಳ ಮುಂದೆ ಇಟ್ಟು ಪ್ರತಿದಿನ ಅದರಲ್ಲಿಯೇ ಮುಖ ತೊಳೆಯಲು ವಿನಂತಿಸಿಕೊಂಡ.
ಹೀಗೆಯೇ ನಡೆದಿರಲು ಒಂದು ದಿನ ಜನಾರ್ದನ ಗುರುಗಳ ಲಕ್ಷ್ಯವು ಆ ಗಿಡಗಳ ಕಡೆಗೆ ಹೋಯಿತು. ಅವು ಹಾಗೆಯೇ ಒಣಗಿ ನಿಂತಿದ್ದವು. ಮರುದಿನ ಮುಖ ತೊಳೆದು ಸ್ವಲ್ಪ ಒಳಗೆ ಹೋಗಿ, ಏಕನಾಥನು ಗಿಡಗಳಿಗೆ ನೀರು ಹಾಕುತ್ತಾನೋ ಇಲ್ಲವೋ ನೋಡಬೇಕೆಂದು ಮರೆಗೆ ನಿಂತರು. ಅವರು ಮುಖ ತೊಳೆದು ಹೋಗುವುದೇ ತಡ, ಏಕನಾಥ ಆ ಪಾತ್ರೆಯಲ್ಲಿಯ ನೀರನ್ನು ಗಟಗಟನೇ ಕುಡಿದುಬಿಟ್ಟನು. ಆಗ ಗುರುಗಳು, ‘ನಾನು ಮುಖ, ಬಾಯಿ ತೊಳೆದ ನೀರನ್ನು ಏಕೆ ಕುಡಿಯುತ್ತಿರುವೆ’ ಎಂದರು. ‘ಗುರುಗಳೇ ನಿಮ್ಮ ಆಜ್ಞೆಯನ್ನು ಅಕ್ಷರಶಃ ಪಾಲಿಸದಿದ್ದಕ್ಕೆ ಕ್ಷಮೆ ಇರಲಿ. ಪವಿತ್ರವಾದ ಈ ನೀರಿನಿಂದ ಒಣ ಗಿಡಗಳೇ ಚಿಗುರಬೇಕಾದರೆ ಅದನ್ನು ಸೇವಿಸಿ ನನ್ನ ಮತಿಯು ದಿವ್ಯವಾಗಿ ನನ್ನ ಜ್ಞಾನವರ್ಧನೆ ಯಾಕಾಗಬಾರದು? ನಿಮ್ಮ ಗುರುವಾಕ್ಯವನ್ನು ಈ ರೀತಿ ಅರ್ಥೈಸಿಕೊಂಡು ಹೀಗೆ ಮಾಡುತ್ತಿದ್ದೇನೆ’ ಎಂದು ಅವರ ಪಾದವನ್ನು ಗಟ್ಟಿಯಾಗಿ ಹಿಡಿದು ಅಳತೊಡಗಿದನು. ಗುರುಗಳ ಕಂಠವು ತುಂಬಿ ಬಂತು. ಅವನನ್ನು ಅಪ್ಪಿಕೊಂಡು, ‘ನನ್ನ ಪರಮ ಶಿಷ್ಯನು ನೀನು’ ಎಂದು ತಮ್ಮ ಸಂಪೂರ್ಣ ತಪಃಶಕ್ತಿ, ಜ್ಞಾನವನ್ನು ಧಾರೆಯೆರೆದರು.
ಮುಂದೆ ಏಕನಾಥರು ಮಹಾನ್ ಸಂತರಾಗಿ ಶಾಂತಿಬ್ರಹ್ಮ ಎನಿಸಿಕೊಂಡರು. ಅವರು ಬರೆದ ಭಾವಾರ್ಥ ರಾಮಾಯಣ, ಏಕನಾಥಿ ಭಾಗವತ ಮುಂತಾದ ಗ್ರಂಥಗಳು ಮನೆಮನೆಯಲ್ಲಿ ಪೂಜಿಸಲ್ಪಡುತ್ತವೆ. ಏಕಾ ಜನಾರ್ದನಿ ಶರಣ ಎಂಬ ನಾಮದ ಅವರ ಅಭಂಗಗಳು ಪಂಡಿತ್ ಭೀಮಸೇನ ಜೋಶಿಯವರ ಕಂಠದ ಮೂಲಕ ಲಕ್ಷಾಂತರ ಜನರ ಹೃದಯ ತಲುಪಿವೆ. ಗುರುಸೇವೆಯಿಂದ ಏನು ಸಿಗುತ್ತದೆ? ದೇಹಭಾವ, ಅಹಂಕಾರ ನಾಶವಾಗಿ, ಭಕ್ತಿ ಜ್ಞಾನ ವೈರಾಗ್ಯ ಮೈಗೂಡಿ, ಚತುರ್ವಿಧ ಪುರುಷಾರ್ಥಗಳು ಅವನ ಮುಂದೆ ಕೈ ಜೋಡಿಸಿ ನಿಲ್ಲುತ್ತವೆ. ಜೀವನದಲ್ಲಿ ಇದಕ್ಕಿಂತ ಹೆಚ್ಚಿನದೇನಾದರೂ ಗಳಿಸಲು ಉಂಟೆ?
(ಲೇಖಕರು ಹವ್ಯಾಸಿ ಬರಹಗಾರರು)