ನಿಮ್ಮ ಮನೆಯ ಪೀಠೋಪಕರಣಗಳನ್ನು ಗೆದ್ದಲು ತಿನ್ನುತ್ತಿದೆಯೇ? ಈ ಸರಳ ಮನೆಮದ್ದುಗಳಿಂದ ಶಾಶ್ವತ ಮುಕ್ತಿ ಪಡೆಯಿರಿ! Termite Control

 Termite Control ಸಾಂದರ್ಭಿಕ ಚಿತ್ರ
Termite Control ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಮಳೆಗಾಲದ ತಂಪಾದ ವಾತಾವರಣ, ಮಣ್ಣಿನ ಆಹ್ಲಾದಕರ ಪರಿಮಳ, ಸುರಿಯುವ ಮಳೆ ಎಲ್ಲರಿಗೂ ಇಷ್ಟವಾಗುತ್ತದೆ
  • ನಿರಂತರವಾಗಿ ಸುರಿಯುವ ಮಳೆ ಮತ್ತು ವಾತಾವರಣದಲ್ಲಿ ಹಠಾತ್ ಹೆಚ್ಚಾಗುವ ಆರ್ದ್ರತೆಯು ಗೆದ್ದಲು ಹಿಡಿಯುವಂತೆ ಮಾಡುತ್ತೆ
  • ಅಡುಗೆಮನೆಯ ಡ್ರಾಯರ್‌ಗಳು, ಬಾಗಿಲುಗಳು ಮತ್ತು ಬೆಲೆಬಾಳುವ ಮರದ ವಸ್ತುಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ
Termite Control: ಮಳೆಗಾಲದ ತಂಪಾದ ವಾತಾವರಣ, ಮಣ್ಣಿನ ಆಹ್ಲಾದಕರ ಪರಿಮಳ ಮತ್ತು ಸುರಿಯುವ ಮಳೆ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ, ಇದೇ ಮಳೆಗಾಲವು ನಮ್ಮ ಸುಂದರ ಮನೆಗೆ ಹಲವಾರು ಸವಾಲುಗಳನ್ನು ತರುತ್ತದೆ. ಗೋಡೆಗಳಲ್ಲಿ ನೀರು ಜಿನುಗುವುದು, ತೇವಾಂಶದಿಂದ ಬಟ್ಟೆಗಳು ಒಣಗದೆ ದುರ್ವಾಸನೆ ಬರುವುದು ಒಂದೆಡೆಯಾದರೆ, ಮನೆಯ ಅಂದವನ್ನು ಹೆಚ್ಚಿಸುವ ಮರದ ಪೀಠೋಪಕರಣಗಳು ಹಾನಿಗೊಳಗಾಗುವುದು ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ.
ನಿರಂತರವಾಗಿ ಸುರಿಯುವ ಮಳೆ ಮತ್ತು ವಾತಾವರಣದಲ್ಲಿ ಹಠಾತ್ ಹೆಚ್ಚಾಗುವ ಆರ್ದ್ರತೆಯು  ಕಪಾಟುಗಳು, ಅಡುಗೆಮನೆಯ ಡ್ರಾಯರ್‌ಗಳು, ಬಾಗಿಲುಗಳು ಮತ್ತು ಬೆಲೆಬಾಳುವ ಮರದ ವಸ್ತುಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಈ ದಿನಗಳಲ್ಲಿ ತೇವಾಂಶವನ್ನು ಹೀರಿಕೊಳ್ಳುವ ಮರವು ಉಬ್ಬಿಕೊಳ್ಳಲು, ಶಿಲೀಂಧ್ರ ಹಿಡಿಯಲು ಮತ್ತು ಕೆಟ್ಟ ವಾಸನೆ ಸೂಸಲು ಪ್ರಾರಂಭಿಸುತ್ತದೆ.
ಈ ತೇವಾಂಶವು ಅಚ್ಚು ಮತ್ತು ಗೆದ್ದಲುಗಳ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ . ಸಮಯಕ್ಕೆ ಸರಿಯಾಗಿ ಕಾಳಜಿ ವಹಿಸದಿದ್ದರೆ, ಗೆದ್ದಲುಗಳು ನಿಮ್ಮ ಅಮೂಲ್ಯವಾದ ಮರದ ಪೀಠೋಪಕರಣಗಳನ್ನು ಸಂಪೂರ್ಣವಾಗಿ ನಾಶಮಾಡಬಹುದು.
ಈ ಸಂದರ್ಭಗಳಲ್ಲಿ, ಜನರು ಮಾರುಕಟ್ಟೆಯಿಂದ ಗೆದ್ದಲು ಎಣ್ಣೆಯನ್ನು ಖರೀದಿಸುತ್ತಾರೆ, ಇದು ತುಂಬಾ ದುಬಾರಿಯಾಗಿದೆ. ಆದಾಗ್ಯೂ, ಈ ಸಮಸ್ಯೆಯಿಂದ ನೀವೇನಾದರೂ ಹೊರ ಬರಲು ಪ್ರಯತ್ನಿಸುತ್ತಿದ್ದರೆ ಈ ಸಲಹೆಗಳನ್ನು ಪಾಲಿಸಿ. 

1. ನೀರಿನ ಸೋರಿಕೆಯನ್ನು ತಕ್ಷಣ ಸರಿಪಡಿಸಿ

ಅಡುಗೆಮನೆಯ ಸಿಂಕ್, ಪೈಪ್‌ಗಳು ಅಥವಾ ಗೋಡೆಗಳಿಂದ ನೀರು ಸೋರಿಕೆಯಾಗುತ್ತಿದ್ದರೆ, ಅದನ್ನು ಎಂದಿಗೂ ನಿರ್ಲಕ್ಷಿಸಬೇಡಿ. ನಿರಂತರ ಸೋರಿಕೆಯಿಂದ ಕಪಾಟುಗಳು ಮತ್ತು ಡ್ರಾಯರ್​ಗಳಲ್ಲಿ ತೇವಾಂಶವನ್ನು ಹೆಚ್ಚಿಸಬಹುದು. ಇದು ಗೆದ್ದಲುಗಳ ಸಂತಾನೋತ್ಪತ್ತಿಗೆ ಸ್ಥಳವಾಗಬಹುದು. 

2. ಬೀರು ಮತ್ತು ಡ್ರಾಯರ್‌ಗಳನ್ನು ಗಾಳಿ ಇರುವಂತೆ ನೋಡಿಕೊಳ್ಳಿ

ಬೀರುಗಳು ಮತ್ತು ಅಡುಗೆಮನೆಯ ಡ್ರಾಯರ್‌ಗಳನ್ನು ಯಾವಾಗಲೂ ಮುಚ್ಚಿ ಇಡುವುದರಿಂದ ಒಳಗೆ ತೇವಾಂಶ ಸಂಗ್ರಹವಾಗಬಹುದು. ಆದಾಗ್ಯೂ, ತಾಜಾ ಗಾಳಿ ಒಳಗೆ ಹರಿಯುವಂತೆ ಪ್ರತಿದಿನ ಕೆಲವು ನಿಮಿಷಗಳ ಕಾಲ ಅವುಗಳನ್ನು ತೆರೆದಿಡಿ. ಕೋಣೆಯಲ್ಲಿ ಎಕ್ಸಾಸ್ಟ್​ ಫ್ಯಾನ್​ ಆರ್ದ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

3. ತೇವಾಂಶ ಹೀರಿಕೊಳ್ಳುವ ವಸ್ತುಗಳನ್ನು ಸಂಗ್ರಹಿಸಿ

ಸಿಲಿಕಾ ಜೆಲ್ ಪ್ಯಾಕೆಟ್‌ಗಳು, ಸಕ್ರಿಯ ಇದ್ದಿಲು ಮತ್ತು ಕ್ಯಾಲ್ಸಿಯಂ ಕ್ಲೋರೈಡ್‌ನಂತಹ ತೇವಾಂಶ ಹೀರಿಕೊಳ್ಳುವಂತಹ ವಸ್ತುಗಳನ್ನು ಕಪಾಟುಗಳು ಅಥವಾ ಡ್ರಾಯರ್​ಗಳಲ್ಲಿ ಸಂಗ್ರಹಿಸಿ. ಇವು ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳುತ್ತವೆ ಜೊತೆಗೆ ತೇವಾಂಶವು ಸಂಗ್ರಹವಾಗುವುದನ್ನು ತಡೆಯುತ್ತವೆ.

4. ಮರವನ್ನು ರಕ್ಷಿಸಿ

ನೀವು ಹೊಸ ವಾರ್ಡ್ರೋಬ್‌ಗಳು ಅಥವಾ ಅಡುಗೆಮನೆ ಕ್ಯಾಬಿನೆಟ್‌ಗಳನ್ನು ನಿರ್ಮಿಸುತ್ತಿದ್ದರೆ, ನೀರಿನ ಹಾನಿಗೆ ನಿರೋಧಕವಾದ ಪ್ಲೈವುಡ್​ಗಳನ್ನು ಆರಿಸಿಕೊಳ್ಳಿ. ಮರಕ್ಕೆ ವಾರ್ನಿಷ್​ ಅಥವಾ ಗೆದ್ದಲು ವಿರೋಧಿ ಲೇಪನವನ್ನು ಅನ್ವಯಿಸುವುದರಿಂದ ಗೆದ್ದಲು ಬಾಧೆಯ ಅಪಾಯವನ್ನು ತಡೆಯಲು ಸಹಾಯ ಮಾಡುತ್ತದೆ.  

5. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ 

ಹೆಚ್ಚಿನ ಆರ್ದ್ರತೆಯಿಂದ ಕಪಾಟಿನಲ್ಲಿರುವ ಬಟ್ಟೆಗಳು ಮತ್ತು ವಸ್ತುಗಳು ಹಾಳಾಗದಂತೆ ತಡೆಯಲು, ಮಳೆ ನಿಂತು ಬಿಸಿಲು ಬಂದಾಗ ಅವುಗಳನ್ನು ಕಾಲಕಾಲಕ್ಕೆ ಸೂರ್ಯನ ಬೆಳಕಿನಲ್ಲಿ ಒಣಗಿಸುವುದು ಅತ್ಯಗತ್ಯ. ಬಿಸಿಲು ನೈಸರ್ಗಿಕವಾಗಿ ಬೂಸ್ಟು ಮತ್ತು ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ಇನ್ನು ಮನೆಯೊಳಗೆ ತೇವಾಂಶ ತೀರಾ ಹೆಚ್ಚಾಗಿದ್ದರೆ, ಎಲೆಕ್ಟ್ರಾನಿಕ್ ಡಿಹ್ಯೂಮಿಡಿಫೈಯರ್ ಬಳಸುವುದು ಉತ್ತಮ ಪರಿಹಾರ. ಇದು ಗಾಳಿಯಲ್ಲಿರುವ ಹೆಚ್ಚುವರಿ ಆರ್ದ್ರತೆಯನ್ನು ಹೀರಿಕೊಳ್ಳುವ ಮೂಲಕ ತೇವಾಂಶವನ್ನು ನಿಯಂತ್ರಿಸುತ್ತದೆ ಮತ್ತು ಕಪಾಟಿನಲ್ಲಿ ಬರುವ ಮುಖದ ವಾಸನೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ.

6. ನಿಯಮಿತವಾಗಿ ಪರೀಕ್ಷಿಸಿ

ನಿಮ್ಮ ಕ್ಯಾಬಿನೆಟ್‌ಗಳು ಮತ್ತು ಡ್ರಾಯರ್‌ಗಳಲ್ಲಿ ಮರದ ಕೊಳೆತ, ಸಣ್ಣ ರಂಧ್ರಗಳು, ಅಚ್ಚು ಅಥವಾ ವಿಚಿತ್ರ ವಾಸನೆಯನ್ನು ನೀವೇನಾದರೂ ಗಮನಿಸಿದರೆ ತಕ್ಷಣ ಅದನ್ನು ನೋಡಿಕೊಳ್ಳಿ. ಸಮಸ್ಯೆಯನ್ನು ಮೊದಲೇ ಪತ್ತೆ ಹಚ್ಚುವುದರಿಂದ ಗೆದ್ದಲು ಮತ್ತು ಅಚ್ಚು ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ. ಅಗತ್ಯವಿದ್ದರೆ, ವೃತ್ತಿಪರ ಕೀಟ ನಿಯಂತ್ರಣ ಸಹಾಯವನ್ನು ಪಡೆಯಿರಿ (ಏಜೆನ್ಸೀಸ್​). 
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net