ಹಲೋ ಡಾಕ್ಟರ್​: ಹೃದಯಾಘಾತದ ಮುನ್ಸೂಚನೆ ಅಂಜೈನಾ

sudina 2
Published on

ಅಂಜೈನಾ(Angina): ಇದು ಒಂದು ತರಹದ ಎದೆನೋವು. ಇದು ಹೃದಯಾಘಾತದ ಮುನ್ಸೂಚನೆಯಾಗಿದ್ದು, ಇದರ ಲಕ್ಷಣಗಳು ನಿಖರವಾಗಿದ್ದು (definitive), ಪ್ರತಿಯೊಬ್ಬರೂ ನೆನಪಿಡಬೇಕಾದುದು ಅವಶ್ಯ. ಈ ಲಕ್ಷಣಗಳನ್ನು ಅಲಕ್ಷಿಸಿದಲ್ಲಿ ಪೂರ್ಣಪ್ರಮಾಣದ ಹೃದಯಾಘಾತ, ಹೃದಯ ವಿಫಲತೆ (Heart failure) ಉಂಟಾಗುವ ಸಂಭವವು ತೀವ್ರ ಹೆಚ್ಚು. ಬಹಳ ಸಮಯದ ವರೆಗೆ ನಿರ್ಲಕ್ಷಿಸಿದ ಅಂಜೈನಾ ನೋವು ಮಾರಣಾಂತಿಕವಾಗುವ ಸಾಧ್ಯತೆ ಕೂಡ ಹೆಚ್ಚು.

ಅಂಜೈನಾ ಲಕ್ಷಣಗಳು: ಎದೆಯ ಮಧ್ಯಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹೃದಯಾಘಾತದ ನೋವಿನಂತೆ ಇದು ಕೂಡ, ಎದೆಯಲ್ಲಿ ಹಿಚುಕಿದಂತೆ (squeaging), ಎದೆಯ ಮೇಲೆ ದೊಡ್ಡ ಕಲ್ಲು ಇಟ್ಟಂತೆ, ಗಂಟಲಿನಲ್ಲಿ ಏನೋ ಸಿಕ್ಕಿ ಹಾಕಿಕೊಂಡಂತೆ, ಉರಿದಂತೆ, ಎದೆ ತುಂಬಿ ಬಂದಂತೆ (fullness) ಭಾಸವಾಗುತ್ತದೆ. ಹಲವರಲ್ಲಿ ತಲೆ ಚಕ್ರ (dizziness), ದಣಿವು (fatigue), ವಾಂತಿ ಬರುವ ಲಕ್ಷಣ (nausea), ಮೇಲುಸಿರು (breathing difficulty) ಮತ್ತು ಬೆವರು ಕಾಣಿಸಿಕೊಳ್ಳಬಹುದು. ಈ ನೋವು ಎಡಗೈ, ಬಲಗೈ, ಕುತ್ತಿಗೆ, ಬೆನ್ನು, ಹೊಟ್ಟೆಯ ಮೇಲ್ಭಾಗ, ಕೆಳದವಡೆ (lower jaw) ಸ್ಥಳಗಳಿಗೆ ಪ್ರಸರಿಸಬಹುದು (Radiation). ದೈಹಿಕ ಶ್ರಮವಾದಾಗ ಈ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಉದಾ: ಅಟ್ಟದ ಮೇಲೆ ಹತ್ತುವಾಗ, ಗುಡ್ಡದ ಪ್ರದೇಶ ಹತ್ತುವಾಗ, ಭಾರದ ವಸ್ತು ಎತ್ತುವಾಗ, ರೂಢಿ ಇಲ್ಲದ ಹೆಚ್ಚಿನ ದೈಹಿಕ ಶ್ರಮ ಮಾಡುವಾಗ (unaccustomed exercise) ಕಂಡುಬರುತ್ತದೆ.

ಅಂಜೈನಾ ನೋವು ಸಾವಕಾಶವಾಗಿ ಪ್ರಾರಂಭವಾಗಿ ಐದು ನಿಮಿಷಗಳಲ್ಲಿ ತೀವ್ರತೆಯನ್ನು ಹೊಂದುತ್ತದೆ. ಇಪ್ಪತ್ತು ನಿಮಿಷಗಳಲ್ಲಿ ಪೂರ್ತಿ ಮಾಯವಾಗುತ್ತದೆ. ಇಪ್ಪತ್ತು ನಿಮಿಷಕ್ಕಿಂತ ಹೆಚ್ಚು ಸಮಯ ನೋವು ಇರುವುದಿಲ್ಲ. ಅದನ್ನು ಹೃದಯಾಘಾತದ ನೋವು ಎಂದೇ ಪರಿಗಣಿಸಲಾಗುವುದು. ಈ ನೋವು ವಿಶ್ರಾಂತಿಯಿಂದ ಕಡಿಮೆಯಾಗುತ್ತದೆ. ನೈಟ್ರೋಗ್ಲಿಸರಿನ್(Nitroglycerin) ಎಂಬ ಗುಳಿಗೆಯನ್ನು ನಾಲಿಗೆ ಮೇಲೆ ಇಟ್ಟುಕೊಂಡಲ್ಲಿ ಬೇಗನೆ ನೋವು ಕಡಿಮೆಯಾಗುತ್ತದೆ. ಹೃದಯಾಘಾತದಿಂದ ಹೊರಬಂದ ಸಾಕಷ್ಟು ರೋಗಿಗಳು ಕೂಡ ಅಂಜೈನಾ ಬಂದಾಗ ಈ ಔಷಧಿಯನ್ನು ಉಪಯೋಗಿಸುವುದುಂಟು. ಕೆಳಗಿನ ದವಡೆಗೆ ನೋವು ಕಾಣಿಸಿಕೊಂಡಾಗ, ಹಲ್ಲಿನಿಂದ ಉಂಟಾದ ನೋವೆಂದು ತಿಳಿದು, ಹಲ್ಲಿನ ವೈದ್ಯರ ಕಡೆಗೆ ಹೋಗಿ ಹಲ್ಲು ತೆಗೆಯಿಸಿಕೊಂಡ ಉದಾಹರಣೆಗಳೂ ಉಂಟು! ನೋವು ಕಡಿಮೆ ಆಗದಿದ್ದಾಗ ಹೃದಯತಜ್ಞರು ಹೃದಯಾಘಾತದ ನೋವು, ಅಂಜೈನಾ ಎಂದು ಕಂಡುಕೊಳ್ಳುವರು. ಪ್ರತಿ ಸಾರಿಯೂ ಅಂಜೈನಾ ನೋವು ಅದೇ ತರಹದ ಲಕ್ಷಣ ಹೊಂದಿರುತ್ತದೆ ಎಂಬ ಅಂಶ ಗಮನಾರ್ಹ. ಉದಾ: ಈ ನೋವು ಎದೆಯಲ್ಲಿ ಉರಿಯಂತೆ ಕಂಡು(Burning) ಎಡಗೈ ಹರಿಯುತ್ತಿದ್ದರೆ(Radiation), ಪ್ರತಿ ಸಾರಿ ಅದೇ ಲಕ್ಷಣಗಳನ್ನು (Character) ಹೊಂದಿರುತ್ತದೆ! ಬೇರೆ ಲಕ್ಷಣಗಳನ್ನು ಹೊಂದಿದಲ್ಲಿ ಬೇನೆ ಉಲ್ಬಣವಾಗುತ್ತದೆ! ಅಂಜೈನಾ ನೋವು ಹೃದಯದ ರಕ್ತನಾಳಗಳಲ್ಲಿ (Coronary artery) ಎಲ್.ಡಿ.ಎಲ್. ಕೊಲೆಸ್ಟ್ರಾಲ್ (LDL-C) ಶೇಖರಣೆಯಾದಾಗ ಮತ್ತು ರಕ್ತನಾಳಗಳು ಸಂಕುಚಿತಗೊಂಡಾಗ ಬರುತ್ತದೆ. ದೈಹಿಕ ಶ್ರಮದಿಂದ ದೇಹವು ಹೆಚ್ಚು ರಕ್ತಬೇಡುತ್ತದೆ. ಆದರೆ, ಗಡುಸಾದ ರಕ್ತನಾಳಗಳು ಹೆಚ್ಚು ರಕ್ತ ಪೂರೈಸಲು ಅಸಮರ್ಥ ವಾಗುತ್ತವೆ. ಆಗ ಅಂಜೈನಾ ನೋವು ಕಾಣಿಸಿಕೊಳ್ಳುತ್ತದೆ. (Lack of Oxygen).

ಇದುವರೆಗೆ ವಿವರಿಸಿದ ಅಂಜೈನಾಗೆ ‘ಸ್ಥಿರ ಅಂಜೈನಾ’ ಎಂಬ ಹೆಸರುಂಟು(Stable Angina). ಇನ್ನೊಂದು ನಮೂನೆಯ ಅಂಜೈನಾ ‘ಅಸ್ಥಿರ ಅಂಜೈನಾ’ (Unstable Angina) ಎನ್ನುತ್ತಾರೆ. ಈ ನೋವು ದೈಹಿಕ ಶ್ರಮವಿಲ್ಲದೆ ಕಾಣಿಸಿಕೊಳ್ಳತ್ತದೆ (Pain in rest); ಯಾವಾಗಲಾದರೂ ಕಂಡುಬರಬಹುದು. ಮೂವತ್ತು ನಿಮಿಷಕ್ಕಿಂತಲೂ ಹೆಚ್ಚು ಸಮಯದವರೆಗೆ ಇರುವ ಈ ನೋವು ವಿಶ್ರಾಂತಿಯಿಂದ ಶಮನವಾಗುವುದಿಲ್ಲ. ಇದು ತುರ್ತು ಸ್ಥಿತಿ (Emergency) ಆಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕಾಗುವುದು. ರಕ್ತನಾಳದಲ್ಲಿಯ ಕೊಲೆಸ್ಟ್ರಾಲ್ ಪ್ಲಾಕ್ (Atherosclerotic Plaque) ಹರಿದು ಅಲ್ಲಿ ರಕ್ತ ಹೆಪ್ಪು ಗಟ್ಟಿ, ಹೃದಯದ ಸ್ನಾಯುವಿಗೆ ಗಣನೀಯ ಪ್ರಮಾಣದಲ್ಲಿ ಪ್ರಾಣವಾಯು ಪೂರೈಕೆ ಕಡಿಮೆಯಾಗುವುದು ಅಸ್ಥಿರ ಅಂಜೈನಾದಲ್ಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net