ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ಹೀಗೆ ಮಾಡಬೇಕು

ಅಮಲಅ
Published on
ಯಾವುದೇ ಮನುಷ್ಯ ರೋಗಗಳಿಗೆ ಸುಲಭವಾಗಿ ತುತ್ತಾಗದಂತೆ ಇರಲು ಭಾರತೀಯ ಚಿಕಿತ್ಸಾಪದ್ಧತಿಯು ಅನೇಕ ಮಾರ್ಗಗಳನ್ನು ತಿಳಿಸುತ್ತ ಹೋಗುತ್ತದೆ. ಕಾಲಕಾಲಕ್ಕೆ ಪಂಚಕರ್ಮ ಚಿಕಿತ್ಸೆಗಳನ್ನು ತೆಗೆದುಕೊಳ್ಳುವುದು ಬಹಳ ಪರಿಣಾಮಕಾರಿ.

ದೇಹದ ನೈಸರ್ಗಿಕ ಪ್ರಕ್ರಿಯೆಗಳನ್ನು (ಹಸಿವೆ, ನಿದ್ರೆ, ಬಾಯಾರಿಕೆ, ಮಲ, ಮೂತ್ರ ಇತ್ಯಾದಿ) ತಡೆಹಿಡಿಯುವುದರಿಂದ ಅದು ದುರ್ಬಲವಾಗುತ್ತದೆ. ನಾವು ಯಾವ ರೀತಿಯ ಆಹಾರ ಸೇವಿಸುತ್ತೇವೆ, ಯಾವ ರೀತಿ ಬದುಕುತ್ತೇವೆ, ಎಷ್ಟು ನಿದ್ದೆ ಮಾಡುತ್ತೇವೆ, ಯಾವ ಮನಃಸ್ಥಿತಿಯಲ್ಲಿರುತ್ತೇವೆ ಎಂಬುದು ರೋಗನಿರೋಧಕ ಶಕ್ತಿಯನ್ನು ನಿರ್ಧರಿಸುತ್ತದೆ. ಜೀವನಶೈಲಿ ಸರಿಯಿಲ್ಲವಾದರೆ ಅದು ಅನೇಕ ರೋಗಗಳು ಬರಲು ಕಾರಣವಾಗುತ್ತದೆ. ನಿತ್ಯವೂ ರೋಗನಿರೋಧಕ ಶಕ್ತಿ ಹೆಚ್ಚು ಮಾಡುವ ನೆಲ್ಲಿಕಾಯಿ, ಶುಂಠಿ, ಅರಿಶಿಣ ಮುಂತಾದ ಸಾಂಬಾರ ಪದಾರ್ಥಗಳನ್ನು ಬಳಸಬೇಕು. ವೈರಸ್​ಗಳ ವಿರುದ್ಧ ಹೋರಾಡಲು ಅಥವಾ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗಲು ದೇಹಕ್ಕೆ ವಿಟಮಿನ್ ಸಿ ಅಗತ್ಯ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ಇಂದಿನ ವೈದ್ಯವಿಜ್ಞಾನವೂ ನೆಲ್ಲಿಕಾಯಿ ಸೇವನೆ ಉತ್ತಮವೆನ್ನುತ್ತದೆ.

ಇತ್ತೀಚೆಗೆ ನಾವು ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತ ಹೋಗುತ್ತಿದ್ದೇವೆ. ಇದರಿಂದಾಗಿ ನಮ್ಮ ರೋಗನಿರೋಧಕ ಶಕ್ತಿಯೂ ಕಡಿಮೆಯಾಗುತ್ತಿದೆ. ಉದಾ: ಬೇಸಿಗೆಯಲ್ಲಿ ಹೆಚ್ಚು ಸೆಕೆಯಾಗುತ್ತದೆಂದು ಹೆಚ್ಚಿನ ಪ್ರಮಾಣದಲ್ಲಿ ಎ.ಸಿ. ಬಳಸುವುದು, ಪ್ರಿಡ್ಜ್​ನಲ್ಲಿಟ್ಟ ಆಹಾರವನ್ನು ಹೆಚ್ಚು ಸೇವಿಸುವುದು, ಅತೀ ಹೆಚ್ಚು ಸೆಕೆ ಇರುವಾಗ ಅತ್ಯಂತ ತಣ್ಣಗಾಗಿನ ನೀರನ್ನು ಕುಡಿಯುವುದು, ಮಧ್ಯರಾತ್ರಿ ತನಕವೂ ಎಚ್ಚರವಾಗಿದ್ದು ಬೆಳಗ್ಗೆ ತಡವಾಗಿ ಏಳುವುದು - ಇವೆಲ್ಲ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತವೆ.

ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕಲು ಪೂರ್ವಜರು ಅನೇಕ ಮಾರ್ಗಗಳನ್ನು ಅನುಸರಿಸುತ್ತಿದ್ದರು. ಅಪರೂಪಕ್ಕೊಮ್ಮೆ ಔಡಲ ಎಣ್ಣೆಯನ್ನು ಕುಡಿದು ಭೇದಿ ಮಾಡುವುದು, ಅಪರೂಪಕ್ಕೊಮ್ಮೆ ಕಹಿ ಕುಡಿಯುವುದು, ತುಳಸಿಯನ್ನು ಸೇವಿಸುವುದು - ಈ ರೀತಿಯ ಕ್ರಮಗಳನ್ನು ಅನುಸರಿಸುತ್ತಿದ್ದರು. ಇದು ಈಗ ಅಳಿಸಿಹೋಗಿರುವುದೂ ರೋಗನಿರೋಧಕ ಶಕ್ತಿ ಕಡಿಮೆ ಆಗಿರುವುದಕ್ಕೆ ಕಾರಣ. ನಾವೀಗ ಏನು ಮಾಡಬಹುದೆಂದರೆ ತಿಂಗಳಿಗೆ ಒಮ್ಮೆ ರಜೆ ಇರುವಾಗ ಖಾಲಿ ಹೊಟ್ಟೆಯಲ್ಲಿ 20 ಮಿ.ಲೀ.ನಷ್ಟು ಔಡಲ ಎಣ್ಣೆಯನ್ನು ಕುಡಿದು ಬಿಸಿನೀರು ಕುಡಿಯುತ್ತಿದ್ದರೆ ಬೇಧಿಯಾಗುತ್ತದೆ. ದೇಹದಲ್ಲಿನ ಕಲ್ಮಶಗಳೆಲ್ಲ ಹೊರಹೋಗುತ್ತವೆ. ತನ್ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಬೆಯಲ್ಲಿ ಬೇಯಿಸಿದ ನೆಲ್ಲಿಕಾಯಿಯನ್ನು ಜರಡಿಯಲ್ಲಿ ಹಾಕಿ ತಿಕ್ಕಬೇಕು. ಆಗ ಬೀಜ ಹಾಗೂ ನೆಲ್ಲಿಯ ತಿರುಳು ಬೇರೆಬೇರೆಯಾಗುತ್ತದೆ. ಅದರಿಂದ ಪೇಸ್ಟ್​ನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು. ನೆಲ್ಲಿಕಾಯಿಯನ್ನು ಬೇಯಿಸಿದ ನೀರಿಗೆ ಜೋನಿಬೆಲ್ಲ ಹಾಕಿ ಪಾಕ ಬರಿಸಿಕೊಳ್ಳಬೇಕು. ಪಾಕ ಬಂದ ನಂತರ ಅದಕ್ಕೆ ತುಪ್ಪದಲ್ಲಿ ಹುರಿದ ಪೇಸ್ಟ್ ಹಾಕಿ ಹಿಪ್ಪಲಿ, ದಾಲ್ಚಿನ್ನಿ, ಏಲಕ್ಕಿ, ನಾಗಕೇಸರ ಪುಡಿಯನ್ನು ಹಾಕಿ ಒಲೆಯಿಂದ ಇಳಿಸಬೇಕು. ತಣಿದ ನಂತರ ತುಪ್ಪದ ಅರ್ಧದಷ್ಟು ಜೇನುತುಪ್ಪ ಹಾಕಿ ಇರಿಸಿಕೊಳ್ಳುವುದು. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net