ಧನ್ವಂತರಿ: ವಯಸ್ಸಿನ ದರ್ಪಣ ಚರ್ಮ

21531b0d-f807-4acb-949b-1c149e82a10f
Published on
ಜಗತ್ತಿನಲ್ಲಿ ಕಾಣಸಿಗುವ ವಿಶೇಷಗಳನ್ನು ಗಮನಿಸಿದರೆ ಮೈ ಪುಳಕಗೊಳ್ಳುತ್ತದೆ. ಬದುಕಿನ ಕೊನೆಯ ಘಟ್ಟದಲ್ಲಿರುವ ಎಪ್ಪತ್ತು ವರ್ಷ ವಯಸ್ಸಾದ ಕೆಲವರು ಐವತ್ತರ ಹರೆಯದಲ್ಲಿದ್ದಂತೆ ಕಾಣುತ್ತಾರೆ! ಇನ್ನು ಕೆಲವು ಮೂವತ್ತು ವರ್ಷ ಪ್ರಾಯದ ಯುವಜನರು ಐವತ್ತರ ಗಡಿಯನ್ನು ದಾಟಿ ತೀರ ಬಳಲಿದವರಂತೆ ಅನಿಸಿಬಿಡುತ್ತದೆ! ಅವರ ದೇಹದ ಒಳಹೊಕ್ಕು ವಿಭಿನ್ನ ಅಂಗಗಳು ಹಾಗೂ ಅವಯವಗಳ ವಯಸ್ಸು ಎಷ್ಟಾಗಿದೆಯೆಂದು ಪರಾಮಶಿಸಿ ಕೈಗೊಳ್ಳುವ ನಿರ್ಣಯ ಇದಲ್ಲ. ಹೊರಗಿನಿಂದ ಕಾಣುವಾಗ ಹೇಗನಿಸುತ್ತದೆ ಎಂಬುದೇ ಇಲ್ಲಿ ಪ್ರಮುಖ ಅಂಶವಾಗಿದೆ.

ಚರ್ಮ ಹೇಗಿದೆ, ತ್ವಚೆಯ ಕಾಂತಿ, ಬಣ್ಣ, ಪ್ರಭೆ, ತೇಜಸ್ಸು, ಲಾವಣ್ಯಗಳೆಲ್ಲವೂ ಸೇರಿ ವಯಸ್ಸಿನ ಪ್ರತಿಫಲನವಾಗುತ್ತದೆ. ಇದಕ್ಕಾಗಿಯೇ ಚರ್ಮವು ವಯಸ್ಸಿನ ಕನ್ನಡಿ ಎನ್ನುವುದು. ನಮ್ಮ ಶರೀರದ ಇಂದ್ರಿಯಗಳಲ್ಲಿ ಅತ್ಯಂತ ದೊಡ್ಡದೆಂಬ ಹಿರಿಮೆ ಚರ್ಮಕ್ಕಿದೆ. ದೇಹದಿಂದ ಚರ್ಮವನ್ನು ಸುಲಿದು ಹರವಿಟ್ಟರೆ ಸುಮಾರು ಎರಡು ಚದರ ಮೀಟರ್​ನಷ್ಟು ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ. ನಾಲ್ಕು ಕಿಲೋಗ್ರಾಂನಷ್ಟು ತೂಕವನ್ನು ಹೊಂದಿದೆ. ಅರ್ಧದಿಂದ ಆರು ಮಿಲಿಮೀಟರ್​ನಷ್ಟು ದಪ್ಪವಾಗಿರುವ ತ್ವಚೆಯನ್ನು ನಾವೆಲ್ಲ ಹೊಂದಿದ್ದೇವೆ. ಇದಿಷ್ಟೇ ಆಗಿದ್ದರೆ ಇದರಲ್ಲೇನೂ ವಿಶೇಷ ಇರುತ್ತಿರಲಿಲ್ಲ. ಪ್ರತಿಯೊಬ್ಬ ವ್ಯಕ್ತಿಯ ದೇಹದ ಸೊಬಗೇ ಚರ್ಮದ ಸೌಂದರ್ಯವನ್ನು ಅವಲಂಬಿಸಿದೆ. ಇದನ್ನೂ ಓದಿ: ಧನ್ವಂತರಿ| ಕರೊನಾ ನಿರ್ಮೂಲನ ಎಂದು?

ಸಂಪೂರ್ಣ ಶರೀರಕ್ಕೆ ಹೊದಿಕೆಯಾಗಿದ್ದು ನಿಜಾರ್ಥದಲ್ಲಿ ತ್ವಚೆಯು ಶರೀರದ ರಕ್ಷಾಕವಚ! ರೋಗಕಾರಕ ಸೂಕ್ಷ್ಮ ಕ್ರಿಮಿಗಳು ದೇಹದೊಳಗೆ ಬಾರದಂತೆ ತಡೆಯುವ ಶರೀರದ ಅಂಗರಕ್ಷಕ! ದೇಹದಲ್ಲಿರುವ ದ್ರವಾಂಶಗಳನ್ನು ಹೊರಹೋಗದಂತೆ ಹಿಡಿದಿಟ್ಟು ಜೀವಕೋಶಗಳು ಒಣಗಿ ಸೊರಗದಂತೆ ಸದಾ ನೋಡಿಕೊಳ್ಳುವ ಅಣೆಕಟ್ಟಿದು! ಸೂರ್ಯಕಿರಣಗಳ ತಾಪದಿಂದ ರಕ್ಷಿಸುವುದಷ್ಟೇ ಅಲ್ಲದೆ ಅದರಿಂದಲೇ ಶಕ್ತಿಯನ್ನು ಪಡೆದುಕೊಂಡು ಚಯಾಪಚಯ ಕ್ರಿಯೆಗಳಲ್ಲಿ, ದೇಹದೊಳಗಿನ ಚಟುವಟಿಕೆಗಳಲ್ಲಿ ಸಹಕರಿಸುವ ತ್ವಚೆಯು ಶರೀರ ಪೋಷಕ! ಬೆವರಿನ ಮೂಲಕ ಶರೀರದ ಉಷ್ಣತೆಯನ್ನು ಕಾಪಾಡುವ ಉಷ್ಣ ನಿಯಂತ್ರಕ! ಆಹಾರ ಹಾಗೂ ನೀರಿನ ಅವಶ್ಯ ಶೇಖರಣೆ ಮಾಡುವ ಆಪದ್ಬಾಂಧವ! ವಾತಾವರಣದಲ್ಲಿರುವ ಹಾನಿಕಾರಕ ಕಲ್ಮಶ ಹಾಗೂ ವಿಷಪದಾರ್ಥಗಳು ದೇಹದೊಳಗೆ ಪ್ರವೇಶಿಸದಂತೆ ತಡೆಯುವ ಹವಾನಿಯಂತ್ರಕ! ಅನೇಕ ರೋಗಗಳ ನಿರ್ಣಯಕ್ಕೆ ವೈದ್ಯರಿಗೂ ಅನುಕೂಲ ಮಾಡಿಕೊಡುವ ಪುಟ್ಟ ಡಾಕ್ಟರ್! ಸ್ಪರ್ಶಜ್ಞಾನ, ಸ್ಪರ್ಶಸುಖಗಳ ಮೂಲಕ ಜೀವನೋತ್ಸಾಹ ತುಂಬುವ ಸ್ಪೂರ್ತಿಯ ಚಿಲುಮೆ! ಇದನ್ನೂ ಓದಿ: ಧನ್ವಂತರಿ: ಆತ್ಮಬಲವೊಂದಿದ್ದರೆ ಸಾಕು ನೋಡಿ..

ಸ್ಪರ್ಶದ ಅನುಭವವೇ ಇಲ್ಲದಿದ್ದರೆ ಬದುಕು ಹೇಗೆ ಬರಡಾಗುತ್ತಿತ್ತು ಎಂಬುದನ್ನು ಒಂದುಕ್ಷಣ ಯೋಚಿಸಿದರೆ ನಮಗೆ ಚರ್ಮದ ಮಹತ್ವ ಏನೆಂಬುದರ ಅರಿವಾಗುತ್ತದೆ. ನಲವತ್ತು ವರ್ಷ ಪ್ರಾಯವಾಗುವ ತನಕ ಎಲ್ಲವೂ ಬೆಳವಣಿಗೆಗಳೇ. ನಲವತ್ತರಿಂದ ಐವತ್ತು ವರ್ಷ ವಯಸ್ಸಿನ ದಶಕದಲ್ಲಿ ಚರ್ಮವು ಕಳೆಗುಂದಲು ಪ್ರಾರಂಭವಾಗುತ್ತದೆ. ದೇಹಕ್ಕೆ ಮುಪ್ಪು ಆವರಿಸುವುದು ಗೋಚರಿಸಲು ಆರಂಭವಾಗುವುದೇ ಚರ್ಮದಿಂದ ಎಂದು ಆಯುರ್ವೆದ ಹೇಳಿದ್ದು ಇಲ್ಲಿ ಗಮನಾರ್ಹ ಸಂಗತಿ. ಅಂದದ ಬದುಕಿಗೆ ಅನೇಕ ರೀತಿಯಲ್ಲಿ ಉಪಕರಿಸುವ ಸುಂದರ ಚರ್ಮದ ಲಾಲನೆ-ಪಾಲನೆಯೂ ಅಷ್ಟೇ ಚೆನ್ನಾಗಿ ಬಹುವಿಧಾನಗಳಿಂದ ನಡೆಯಬೇಕು ಎಂಬುದು ಆಯುರ್ವೆದದ ಹಾರೈಕೆ ಮಾತ್ರವಲ್ಲ, ವಿಶಿಷ್ಟವಾದ ಆರೈಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net