

ಬಹುತೇಕ ಯಾವುದೇ ಆಯುರ್ವೆದದ ಕೆಮ್ಮಿನ ಸಿರಪ್ ಅನ್ನು ತೆಗೆದು ನೋಡಿದರೂ ಅದರಲ್ಲಿ ವಾಸಕ ಅಥವಾ ವಾಸ ಎಂಬ ಘಟಕ ಹೆಚ್ಚಿನ ಪ್ರಮಾಣದಲ್ಲಿ ಮತ್ತು ಘಟಕಗಳ ಪಟ್ಟಿಯಲ್ಲಿ ಮೊದಲಿಗೆ ಇರುವುದನ್ನು ನಾವು ಕಾಣುತ್ತೇವೆ. ಏಕೆ ಹೀಗೆಂದರೆ ಇದು ಕಫ, ಕೆಮ್ಮು, ದಮ್ಮುಗಳನ್ನು ನಿವಾರಣೆ ಮಾಡುವಲ್ಲಿ ಅತ್ಯಂತ ಶ್ರೇಷ್ಠವಾದ ಔಷಧಿ ದ್ರವ್ಯ. ಇದಕ್ಕೆ ಕನ್ನಡದಲ್ಲಿ ಆಡುಸೋಗೆ ಸೊಪ್ಪು ಅಥವಾ ಆಡುಮುಟ್ಟದ ಸೊಪ್ಪು ಎಂದು ಕರೆಯುತ್ತಾರೆ. ಕೆಲವು ಹಳ್ಳಿಗಳಲ್ಲಿ ಬೇಲಿಸಾಲಿನ ಸೊಪ್ಪು ಎಂಬ ಅರ್ಥ ಬರುವ ಬೇರೆ ಬೇರೆ ಹೆಸರುಗಳನ್ನು ಹೇಳುತ್ತಾರೆ.
ಏಕೆಂದರೆ ಇದನ್ನು ಬೇಲಿಗೆ ಸಾಲಾಗಿ ನೆಡುತ್ತಾರೆ. ದನ, ಕುರಿ ಮುಂತಾದ ಯಾವ ಪ್ರಾಣಿಯೂ ಇದನ್ನು ಸೇವಿಸದೇ ಇರುವುದು ಇದಕ್ಕೆ ಕಾರಣವಿರಬಹುದು. ಆಯುರ್ವೆದದ ಗ್ರಂಥಕಾರರು ಇದು ವಾಂತಿ, ಚರ್ಮದ ಕಾಯಿಲೆಗಳು, ಅತಿಯಾದ ಬಾಯಾರಿಕೆ, ರಕ್ತಸ್ರಾವ, ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು, ಕಫ, ಕೆಮ್ಮು, ಅಸ್ತಮಾ, ಅಲರ್ಜಿ ಮುಂತಾದ ಶ್ವಾಸಕ್ಕೆ ಸಂಬಂಧಪಟ್ಟ ಸಮಸ್ಯೆಗಳು, ಜೊತೆಗೆ ಮಧುಮೇಹ ಮತ್ತು ಕಾಮಾಲೆಯಂತಹ ಸಮಸ್ಯೆಗಳಲ್ಲಿ ಕೂಡ ಅನುಕೂಲಕರ ಎಂದು ಹೇಳಿದ್ದಾರೆ. ಇದರ ಸೇವನೆಯಿಂದ ಮೂತ್ರಪ್ರವೃತ್ತಿ ಚೆನ್ನಾಗಿ ಆಗುತ್ತದೆ. ಇಂದು ನಾವು ಮುಖ್ಯವಾಗಿ ಕಫ, ಕೆಮ್ಮು, ಅಸ್ತಮಾದ ಸಮಸ್ಯೆಗಳಲ್ಲಿ ಇದರ ಬಳಕೆಯನ್ನು ಹೇಗೆ ಮಾಡಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ. ನಿರಂತರವಾಗಿ ಅಥವಾ ಪದೇ ಪದೇ ಕಫ, ಕೆಮ್ಮು ಮುಂತಾದ ಸಮಸ್ಯೆಗಳನ್ನು ಅನುಭವಿಸುತ್ತಿರುವವರು ಆಡುಸೋಗೆ ಸೊಪ್ಪಿನ ಒಂದಷ್ಟು ಎಲೆಗಳನ್ನು ತಂದು ಉಗಿಯಲ್ಲಿ ಬೇಯಿಸಿ ನಂತರ ಜಜ್ಜಿ ರಸವನ್ನು ಹಿಂಡಬೇಕು. ಎರಡು ಚಮಚ ಹಿಂಡಿದ ರಸಕ್ಕೆ ಒಂದು ಚಮಚ ಜೇನುತುಪ್ಪ, ಎರಡ್ಮೂರು ಚಿಟಿಕೆ ಹಿಪ್ಪಲಿ ಪುಡಿಯನ್ನು ಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ನಿಧಾನವಾಗಿ ಕಫಕ್ಕೆ ಸಂಬಂಧಪಟ್ಟ ತೊಂದರೆಗಳು ನಿವಾರಣೆಯಾಗುತ್ತವೆ. ಅಸ್ತಮಾ ಕೂಡಾ ಚೆನ್ನಾಗಿ ಹತೋಟಿಯಲ್ಲಿರಲು ಸಾಧ್ಯವಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ವಾಂತಿಯಾಗುವ ಸಾಧ್ಯತೆ ಹೆಚ್ಚು; ಹಾಗೆ ವಾಂತಿಯಾದಾಗ ಕಫ ಹೋದರೆ ಸಮಸ್ಯೆಗಳಲ್ಲಿ ಎಷ್ಟೋ ನಿರಾಳವಾಗುತ್ತದೆ. ಆದರೆ ಹಾಗೆ ಅಷ್ಟೊಂದು ಪ್ರಮಾಣದಲ್ಲಿ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳುವುದು ಅನಿವಾರ್ಯ. ಉಗಿಯಲ್ಲಿ ಬೇಯಿಸುವುದು ಕಷ್ಟವಾದರೆ ಸ್ವಲ್ಪ ನೀರು ಹಾಕಿ ಜಜ್ಜಿ ಕೂಡಾ ರಸವನ್ನು ತೆಗೆಯಬಹುದು. ಆದರೆ ಉಗಿಯಲ್ಲಿ ಬೇಯಿಸಿಯೇ ತೆಗೆಯುವುದು ಹೆಚ್ಚು ಒಳ್ಳೆಯದು.
ಪುಟ್ಟ ಮಕ್ಕಳಿಗೆ ಇದರ ಎಲೆಯನ್ನು ಬಿಸಿ ಮಾಡಿ ಎಲೆಗೆ ಸಾಸಿವೆ ಎಣ್ಣೆಯನ್ನು ಹಚ್ಚಿ ಎದೆಯ ಮೇಲೆ, ತಲೆಯ ಮೇಲೆ ಇಟ್ಟು ಕಫವನ್ನು ಕಡಿಮೆಮಾಡುವ ಪದ್ಧತಿ ಕೂಡ ಇತ್ತು. ಇದರಿಂದ ಚಿಕ್ಕಪುಟ್ಟ ಕಫ-ಕೆಮ್ಮಿನ ಸಮಸ್ಯೆ ಶಿಶುಗಳಲ್ಲಿ ಸಂಪೂರ್ಣವಾಗಿ ಗುಣವಾಗುತ್ತಿತ್ತು. ಆಗಲೇ ಹೇಳಿದಂತೆ ಇದು ಚರ್ಮರೋಗಕ್ಕೆ ಕೂಡಾ ತುಂಬಾ ಅನುಕೂಲಕರ. ಸೂಕ್ಷ್ಮಾಣು ಜೀವಿಗಳ ನಾಶಕವಾಗಿ ತುಂಬಾ ಚೆನ್ನಾಗಿ ಕೆಲಸಮಾಡುತ್ತದೆ. ಹಾಗಾಗಿ ಬಾಣಂತಿಗೆ ಅಥವಾ ಕೆಲವು ರೋಗಿಗಳಿಗೆ ಸ್ನಾನ ಮಾಡಿಸುವ ಮೊದಲು ಸ್ನಾನದ ಹಂಡೆಗೆ ಈ ಎಲೆಗಳನ್ನು ಹಾಕಿ ನೀರು ಕಾಯಿಸಿ ಸ್ನಾನ ಮಾಡಿಸುತ್ತಿದ್ದರು. ಇದರಿಂದ ಸೋಂಕು ಆಗುವುದನ್ನು ತಡೆಯಲು ಸಾಧ್ಯವಾಗುತ್ತಿತ್ತು. ನಾವು ಕೂಡಾ ಇದರ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ ಆ ನೀರನ್ನು ಸ್ನಾನ ಮಾಡುವ ನೀರಿನ ಜೊತೆ ಬೆರೆಸಿ ಸ್ನಾನ ಮಾಡಿದರೆ ಚರ್ಮದ ಆರೋಗ್ಯಕ್ಕೆ ಅನುಕೂಲವಾಗುತ್ತದೆ. ಯಾರಿಗೆ ಇದರ ತಾಜಾ ಎಲೆಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲವೋ ಅಂಥವರು ಎಲೆಗಳು ಸಿಕ್ಕಾಗ ಚೆನ್ನಾಗಿ ಒಣಗಿಸಿ ಪುಡಿಮಾಡಿಟ್ಟುಕೊಂಡು ಮೂರ್ನಾಲ್ಕು ಚಿಟಿಕೆ ಪುಡಿಗೆ ಸ್ವಲ್ಪ ಜೇನು ತುಪ್ಪ ಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಕಫದ ಸಮಸ್ಯೆ ಕಡಿಮೆಯಾಗುತ್ತದೆ. ಯಾವುದೇ ಸಮಸ್ಯೆ ಇಲ್ಲದಿರುವವರು ಕೂಡಾ ತಿಂಗಳಿಗೆ ಒಂದೆರಡು ಬಾರಿ ಇದರ ಎಲೆಗಳ ರಸಕ್ಕೆ ಸ್ವಲ್ಪ ಜೇನುತುಪ್ಪ ಹಾಕಿ ಸೇವಿಸಿದರೆ ಶ್ವಾಸಕೋಶಗಳು, ಲಿವರ್, ಹೃದಯ, ಕಿಡ್ನಿಗಳ ಆರೋಗ್ಯವನ್ನು ತಕ್ಕಮಟ್ಟಿಗೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.